ಗಡಿ ವಿವಾದ ಕುರಿತು ಅಸ್ಸಾಂ-ಮಿಝೋರಾಂ ಮಾತುಕತೆ: ಸೌಹಾರ್ದಯುತ ಪರಿಹಾರಕ್ಕೆ ಉಭಯ ರಾಜ್ಯಗಳು ಒಪ್ಪಿಗೆ

Update: 2021-08-05 15:16 GMT

ಐಜ್ವಾಲ್, ಆ. 5: ಅಸ್ಸಾಂ ಹಾಗೂ ಮಿಝೋರಾಂನ ಪ್ರತಿನಿಧಿಗಳು ಇಲ್ಲಿ ಗುರುವಾರ ಮಾತುಕತೆ ನಡೆಸಿದರು ಹಾಗೂ ಅಂತರ ರಾಜ್ಯ ಗಡಿ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಲು ಒಪ್ಪಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಿಝೋರಾಂ ಪ್ರಯಾಣದ ವಿರುದ್ಧ ಈ ಹಿಂದೆ ಹೊರಡಿಸಲಾದ ಸಲಹೆಯನ್ನು ಹಿಂದೆಗೆಯಲು ಕೂಡ ಅಸ್ಸಾಂ ಸರಕಾರ ನಿರ್ಧರಿಸಿದೆ.

‘‘ಅಂತರ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ಉಭಯ ರಾಜ್ಯ ಸರಕಾರಗಳು ಒಪ್ಪಿಕೊಂಡಿವೆ. ಈ ಸಂಬಂಧ ಕೇಂದ್ರ ಸರಕಾರದಿಂದ ತಟಸ್ಥ ಪಡೆ ನಿಯೋಜನೆಯನ್ನು ಉಭಯ ರಾಜ್ಯಗಳನ್ನು ಸ್ವಾಗತಿಸಿವೆ.’’ ಎಂದು ಅವರು ತಿಳಿಸಿದ್ದಾರೆ. ‘‘‘ಇತ್ತೀಚೆಗೆ ಉಭಯ ರಾಜ್ಯಗಳ ಪೊಲೀಸ್ ಪಡೆಗಳ ನಡುವೆ ಮುಖಾಮುಖಿ ನಡೆದ ಪ್ರದೇಶಗಳಲ್ಲಿ ಹೊಸ ನಿಯೋಜನೆ ಅಥವಾ ಗಸ್ತು, ಪ್ರಾಬಲ್ಯ, ಜಾರಿಗಾಗಿ ತಮ್ಮ ತಮ್ಮ ಅರಣ್ಯ ಹಾಗೂ ಪೊಲೀಸ್ ಪಡೆಗಳನ್ನು ಉಭಯ ರಾಜ್ಯಗಳು ಕಳುಹಿಸಬಾರದು. ಇದರಲ್ಲಿ ಮಿಝೋರಾಂನ ಮಾಮಿತ್ ಹಾಗೂ ಕೊಲಾಸಿಬ್ ಜಿಲ್ಲೆಗಳ, ಅಸ್ಸಾಂನಲ್ಲಿರುವ ಕರೀಮ್‌ಗಂಜ್, ಹೈಲಕಂಡಿಯಲ್ಲಿರುವ ಕ್ಯಾಚರ್ ಜಿಲ್ಲೆಗಳ ಅಸ್ಸಾಂ-ಮಿಝೋರಾಂ ಗಡಿಯೊಂದಿಗೆ ಎಲ್ಲ ಇಂತಹ ಪ್ರದೇಶಗಳು ಸೇರುತ್ತವೆ ಎಂದು ಉಭಯ ರಾಜ್ಯಗಳು ಹೊರಡಿಸಿದ ಜಂಟಿ ಹೇಳಿಕೆ ತಿಳಿಸಿದೆ.

ಈ ಜಂಟಿ ಹೇಳಿಕೆಗೆ ಅಸ್ಸಾಂ ಗಡಿ ಭದ್ರತೆ ಹಾಗೂ ಅಭಿವೃದ್ಧಿ ಸಚಿವ ಅತುಲ್ ಬೋರಾ ಹಾಗೂ ಇಲಾಖೆಯ ಆಯುಕ್ತ ಹಾಗೂ ಕಾರ್ಯದರ್ಶಿ ಜಿ.ಡಿ. ತ್ರಿಪಾಠಿ, ಮಿಝೋರಾಂನ ಗೃಹ ಸಚಿವ ಲಾಲ್‌ಚಮಲಿಯಾನ ಹಾಗೂ ಗೃಹ ಕಾರ್ಯದರ್ಶಿ ವನಲಾಲಂಗತ್ಸಕಾ ಅವರು ಸಹಿ ಹಾಕಿದ್ದಾರೆ. ಅಸ್ಸಾಂ ಹಾಗೂ ಮಿಝೋರಾಂನಲ್ಲಿ ಮುಖ್ಯವಾಗಿ ಗಡಿ ಪ್ರದೇಶಗಳ ಜನರಲ್ಲಿ ಶಾಂತಿ ಹಾಗೂ ಸೌಹಾರ್ದತೆ ಪ್ರೇರೇಪಿಸಲು, ಕಾಪಿರಿಸಲು ಹಾಗೂ ಕಾಯ್ದುಕೊಳ್ಳಲು ಎಲ್ಲ ಅಗತ್ಯದ ಕ್ರಮಗಳನ್ನು ಕೈಗೊಳ್ಳಲು ಅಸ್ಸಾಂ ಹಾಗೂ ಮಿಝೋರಾಂ ಸರಕಾರದ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News