ಕೊಳೆತ ವ್ಯವಸ್ಥೆಗೆ ‘ಯೋಧ’ರ ಬಲಿ

Update: 2021-08-06 13:13 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊರೋನ ಮತ್ತು ಲಾಕ್‌ಡೌನ್ ಕಾಲದ ಸಾವು ನೋವುಗಳು ನಮ್ಮ ಸಮಾಜದ ವಿರೂಪ ಮುಖಗಳನ್ನು ಒಂದೊಂದಾಗಿ ಬಹಿರಂಗ ಪಡಿಸುತ್ತಿವೆ. ಇದೀಗ ನಂಜನಗೂಡಿನಲ್ಲಿ ಪೌರ ಕಾರ್ಮಿಕನೊಬ್ಬನ ಆತ್ಮಹತ್ಯೆ ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಆತ್ಮಗೌರವವನ್ನು ಘಾಸಿಗೊಳಿಸಿದೆ. ಕಳೆದ ಎಂಟು ತಿಂಗಳಿಂದ ವೇತನ ನೀಡದಿರುವುದರಿಂದ ಬೇಸತ್ತ ಪೌರಕಾರ್ಮಿಕನೊಬ್ಬ ಗ್ರಾಪಂ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ವರದಿಯಾಗಿದೆ. ಕಳಲೆ ಗ್ರಾಮಪಂಚಾಯತ್‌ನಲ್ಲಿ 13 ವರ್ಷಗಳಿಂದ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ರಂಗ ಎಂಬವರಿಗೆ ಕಳೆದ ಎಂಟು ತಿಂಗಳಿಂದ ವೇತನವನ್ನೇ ನೀಡಿರಲಿಲ್ಲ. ಈ ವಿಚಾರವಾಗಿ ಗ್ರಾಮಪಂಚಾಯತ್ ಅಧ್ಯಕ್ಷರ ಬಳಿ ಈತ ಜಗಳ ಮಾಡಿಕೊಂಡಿದ್ದಾನೆ. ಆದರೂ ವೇತನ ಸಿಕ್ಕಿಲ್ಲ. ಕೊನೆಗೆ ಹತಾಶೆಯಿಂದ ಗ್ರಾಪಂ ಕಚೇರಿಯಲ್ಲೇ ನೇಣು ಹಾಕಿಕೊಂಡಿದ್ದಾನೆ. ಈ ದೇಶದಲ್ಲಿ ಉದ್ಯಮಿಗಳು, ರೈತರು, ಶಾಲಾ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಪದೇ ಪದೇ ಸುದ್ದಿಯಾಗುತ್ತವೆ. ಆದರೆ ಪೌರ ಕಾರ್ಮಿಕರ ಆತ್ಮಹತ್ಯೆಗಳು ಸುದ್ದಿಯಾಗುವುದೇ ಇಲ್ಲ. ಅನೇಕ ಸಂದರ್ಭದಲ್ಲಿ ‘ಮದ್ಯ ಸೇವಿಸಿ ಆತ್ಮಹತ್ಯೆ’ ಎಂಬ ಮೂರು ಪದಗಳಲ್ಲಿ ಆ ಸಾವು ಮುಚ್ಚಿ ಹೋಗುತ್ತದೆ. ‘ಶುಚಿತ್ವ ಆಂದೋಲನ’ದ ಹೆಸರಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಕೋಟಿ ಕೋಟಿ ಹಣವನ್ನು ವ್ಯಯ ಮಾಡುತ್ತಿದ್ದಾರಾದರೂ ಆ ಶುಚಿತ್ವ ಆಂದೋಲನದ ನಿಜವಾದ ಯೋಧರಾಗಿರುವ ಪೌರಕಾರ್ಮಿಕರಿಗೆ ಈ ಹಣ ಯಾವ ರೂಪದಲ್ಲೂ ತಲುಪುತ್ತಿಲ್ಲ. ಇತ್ತ, ಲಾಕ್‌ಡೌನ್‌ನಿಂದ ಈ ನಾಡನ್ನು ಅಲ್ಪಸ್ವಲ್ಪವಾದರೂ ಶುಚಿಯಾಗಿಡುತ್ತಿರುವ ಪೌರಕಾರ್ಮಿಕರ ಬದುಕೂ ಮೂರಾಬಟ್ಟೆಯಾಗಿದೆ. ಒಬ್ಬ ಪೌರ ಕಾರ್ಮಿಕನಿಗೆ ನ್ಯಾಯವಾಗಿ ಸಿಗಬೇಕಾಗಿದ್ದ ವೇತನವನ್ನೇ ಪಾವತಿಸಲು ವ್ಯವಸ್ಥೆ ವಿಫಲವಾಗುತ್ತದೆಯಾದರೆ, ಆ ವ್ಯವಸ್ಥೆ ಅದೆಷ್ಟು ಕೊಳೆತು ನಾರುತ್ತಿರಬೇಕು?

ಇಡೀ ದೇಶ ಕೊರೋನಕ್ಕೆ ಹೆದರಿ ಬಾಗಿಲು ಹಾಕಿ ಕುಳಿತಾಗ, ತಮ್ಮ ಕರ್ತವ್ಯಕ್ಕೆ ಚ್ಯುತಿ ತಾರದೆ, ನಿರ್ವಹಿಸಿಕೊಂಡು ಬಂದವರು ಪೌರಕಾರ್ಮಿಕರು. ಹೇಗೆ ಗಡಿಯಲ್ಲಿ ಅಪಾಯಗಳಿಗೆ ಎದೆಗೊಟ್ಟು ಯೋಧರು ಕೆಲಸ ನಿರ್ವಹಿಸುತ್ತಾರೆಯೋ, ಹಾಗೆಯೇ ಪೌರಕಾರ್ಮಿಕರೂ ಕೆಲಸ ನಿರ್ವಹಿಸುತ್ತಿದ್ದಾರೆ. ಕೊರೋನ ಅವಧಿಯಲ್ಲಿ ಪೌರ ಕಾರ್ಮಿಕರು ಎಲ್ಲರಂತೆ ಪ್ರಾಣಕ್ಕೆ ಹೆದರಿ ಮನೆಯಲ್ಲಿ ಕುಳಿತುಕೊಂಡಿದ್ದರೆ, ಇಂದು ದೇಶದ ಆರೋಗ್ಯ ಸ್ಥಿತಿ ಅತ್ಯಂತ ಭೀಕರವಾಗಿ ಬಿಡುತ್ತಿತ್ತು. ಒಂದೆಡೆ ಕೊರೋನ ದೇಶವನ್ನು ವ್ಯಾಪಿಸುತ್ತಿದ್ದ ಹಾಗೆಯೇ, ವಿಲೇವಾರಿಯಾಗದ ರಾಶಿ ರಾಶಿ ಕಸಗಳು ನಗರಗಳನ್ನು ಕಸದ ತೊಟ್ಟಿಯಾಗಿ ಪರಿವರ್ತಿಸಿ ಬಿಡುತ್ತಿತ್ತು. ಕೊರೋನ ಜೊತೆಗೆ ಇನ್ನಿತರ ಭೀಕರ ರೋಗಗಳು ಹರಡಲು ಇದು ಕಾರಣವಾಗುತ್ತಿತ್ತು. ಹಲವೆಡೆ ಕರ್ತವ್ಯ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕರಿಗೆ ಬಾಲ್ಕನಿಯಿಂದ ಹೂವುಗಳನ್ನು ಸುರಿಯುವ ಪ್ರಹಸನವನ್ನೂ ನಡೆಸಲಾಯಿತಾದರೂ, ಕರ್ತವ್ಯಾವಧಿಯಲ್ಲಿ ಮೃತಪಟ್ಟರೆ ಸಿಗುವ ಯಾವ ಸವಲತ್ತುಗಳನ್ನೂ ಅವರಿಗೆ ಸರಕಾರ ನೀಡಿರಲಿಲ್ಲ. ಅತ್ತ ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರಾದಿಯಾಗಿ ರೋಗಿಗಳನ್ನು ಚಿಕಿತ್ಸೆ ಮಾಡುವಾಗ ಮೈತುಂಬಾ ಕವಚಗಳನ್ನು ಧರಿಸುತ್ತಿದ್ದರೆ, ಇತ್ತ ಬೀದಿಯಲ್ಲಿ ಕೊಳಚೆಗಳ ನಡುವೆ ಕೆಲಸ ನಿರ್ವಹಿಸುತ್ತ್ತಿದ್ದ ಪೌರಕಾರ್ಮಿಕರಿಗೆ ಕನಿಷ್ಠ ಕೈಕವಚಗಳೂ ಇದ್ದಿರಲಿಲ್ಲ. ಲೆಕ್ಕಪತ್ರಗಳಲ್ಲಿ ಕಾರ್ಮಿಕರಿಗೆ ನೀಡುವ ಕೈಕವಚ, ಬೂಟು ಇನ್ನಿತರ ರಕ್ಷಣಾ ಸಲಕರಣೆಗಳು ದಾಖಲಾಗುತ್ತಿದ್ದವಾದರೂ ಅವುಗಳು ಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ತಲುಪುತ್ತಿರಲೇ ಇಲ್ಲ. ವಿಶೇಷವೆಂದರೆ, ಇಷ್ಟಾದರೂ ಈ ಪೌರಕಾರ್ಮಿಕರ ಆತಂಕ ಕೊರೋನ ಆಗಿರಲಿಲ್ಲ. ಅವರ ಆತಂಕ ಹಸಿವಿನದಾಗಿತ್ತು. ಕೊರೋನಕ್ಕೆ ಮೊದಲು, ಆ ಬಳಿಕವೂ ಅವರ ಬೇಡಿಕೆ ಹಸಿವಿಗೆ ಸಂಬಂಧಿಸಿದ್ದೇ. ಆರೋಗ್ಯದ ಬಗ್ಗೆ ಅವರು ಈ ಹಿಂದೆಯೂ ಚಿಂತಿಸಿರಲಿಲ್ಲ. ಒಂದು ವೇಳೆ ಚಿಂತಿಸಿದ್ದಿದ್ದರೆ ಈ ಕೆಲಸಕ್ಕೆ ಇಳಿಯುತ್ತಲೇ ಇರಲಿಲ್ಲ.

ಪೌರ ಕಾರ್ಮಿಕರ ಸರಾಸರಿ ಆಯುಷ್ಯ 40 ಎಂದು ಅಂಕಿಅಂಶ ಹೇಳುತ್ತದೆ. ತಮ್ಮ ಯೌವನದಲ್ಲೇ ಅವರು ಕ್ಷಯ, ಅಸ್ತಮಾದಂತಹ ಕಾಯಿಲೆಗೀಡಾಗುತ್ತಾರೆ. ಪೌರ ಕಾರ್ಮಿಕರು ದುರ್ವಾಸನೆಯ ಜೊತೆಗೆ ಬದುಕಬೇಕಾಗಿರುವುದರಿಂದ, ಅನಿವಾರ್ಯವಾಗಿ ಮದ್ಯ ಸೇವನೆಗೆ ಬಲಿಯಾಗುತ್ತಾರೆ. ಈ ಮದ್ಯ ಕ್ರಮೇಣ ಅವರ ಪಾಲಿಗೆ ಚಟವಾಗಿ ಬಿಡುತ್ತದೆ. ಅವರ ಆರೋಗ್ಯದ ಮೇಲೆ ಮಾತ್ರವಲ್ಲ, ಆರ್ಥಿಕತೆಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಮಲಹೊರುವ ಪದ್ಧತಿಗೂ ಪೌರಕಾರ್ಮಿಕರನ್ನು ವ್ಯವಸ್ಥೆ ಸದ್ದಿಲ್ಲದೆ ಬಳಸುತ್ತಿದೆ. ಈ ಸಂದರ್ಭದಲ್ಲಿ ಸಂಭವಿಸುವ ಸಾವು ನೋವುಗಳನ್ನೂ ಅಷ್ಟೇ ವ್ಯವಸ್ಥಿತವಾಗಿ ಮುಚ್ಚಿಡಲಾಗುತ್ತದೆ. ಮಾಧ್ಯಮಗಳ ಕಣ್ಣಿಗೆ ಬಿದ್ದ ಪ್ರಕರಣಗಳಷ್ಟೇ ಅಧಿಕೃತವಾಗಿ ದಾಖಲಾಗುತ್ತವೆ. ದೇಶಾದ್ಯಂತ ಮಲಹೊರುವ ಪದ್ಧತಿ ಜೀವಂತವಿದೆ ಎನ್ನುವುದು ಮಾಧ್ಯಮಗಳ ವರದಿಯಿಂದ ಪದೇ ಪದೇ ಬಹಿರಂಗವಾಗುತ್ತಿದ್ದರೂ, ಮ್ಯಾನುವೆಲ್ ಸ್ಕಾವೆಂಜಿಂಗ್‌ನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಕೇಂದ್ರ ಸರಕಾರ ರಾಜ್ಯಸಭೆಯಲ್ಲಿ ತಿಳಿಸಿದೆ. ಆಮ್ಲಜನಕ ಕೊರತೆಯಿಂದ ಮೃತಪಟ್ಟ ಕೊರೋನ ಸೋಂಕಿತರ ಬಗ್ಗೆಯೇ ಯಾವುದೇ ಮಾಹಿತಿಯಿಲ್ಲ ಎಂದು ಹೇಳಿಕೆ ನೀಡಿದ ಸರಕಾರದಿಂದ, ಮಲದಗುಂಡಿ ಶುಚಿ ಮಾಡುವ ಸಂದರ್ಭದಲ್ಲಿ ಸಂಭವಿಸಿದ ಸಾವುನೋವುಗಳ ಬಗ್ಗೆ ಅಂಕಿಅಂಶ ನಿರೀಕ್ಷಿಸುವುದಕ್ಕೆ ಅರ್ಥವಿಲ್ಲ. ಇಷ್ಟಾದರೂ, ಒಳಚರಂಡಿ ಹಾಗೂ ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಒಟ್ಟು 941 ಮಂದಿ ಸಾವನ್ನಪ್ಪಿದ್ದಾರೆ ಎಂದು ಸರಕಾರ ತಿಳಿಸಿದೆ. ದೇಶದಲ್ಲಿ 2013ರಿಂದ 2018ರ ನಡುವಿನ ಅವಧಿಯಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ ಒಟ್ಟು 58,098 ಮಂದಿ ವ್ಯಕ್ತಿಗಳು ಮ್ಯಾನುವಲ್ ಸ್ಕಾವೆಂಜರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸರಕಾರ ಸಂಸತ್ತಿಗೆ ತಿಳಿಸಿದೆೆ. ಈ ಲಾಕ್‌ಡೌನ್ ಅವಧಿಯಲ್ಲಿ ಇವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಎಂದು ಸರಕಾರೇತರ ಸಂಸ್ಥೆಗಳು ಹೇಳುತ್ತಿವೆ.

 ಕೊರೋನದ ಈ ದಿನಗಳಲ್ಲಿ ಪೌರಕಾರ್ಮಿಕರನ್ನು ನೋಡುವ ನಮ್ಮ ದೃಷ್ಟಿ ಸಂಪೂರ್ಣ ಬದಲಾಗಬೇಕಾಗಿದೆ. ‘ಕೊರೋನ ಯೋಧರು’ ಎಂದು ಬಾಯಿಯಲ್ಲಷ್ಟೇ ಕರೆದು ಅವರನ್ನು ವಂಚಿಸಿದ್ದು ಸಾಕು. ನಮ್ಮ ಯೋಧರಿಗೆ ಸಿಗುವ ಘನತೆ ಅವರ ಬದುಕಿಗೆ ಸಿಗಬೇಕಾಗಿದೆ. ತಾವು ವೃತ್ತಿ ನಿರ್ವಹಿಸುತ್ತಾ ಮೃತರಾದರೆ ಅವರನ್ನು ಯೋಧರ ಸ್ಥಾನದಲ್ಲಿಟ್ಟು ಸಿಗಬೇಕಾದ ಸವಲತ್ತುಗಳನ್ನು ಒದಗಿಸಬೇಕು. ಶೌಚಗುಂಡಿಯಲ್ಲಿ ಮೃತಪಟ್ಟರೆ ಅವರನ್ನು ಹುತಾತ್ಮರ ಸಾಲಿಗೆ ಸೇರಿಸಿ, ಪೊಲೀಸ್ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಬೇಕು. ಇದರಿಂದಾಗಿ ಸಮಾಜ, ಮೃತನ ಕುಟುಂಬವನ್ನು ನಿಕೃಷ್ಟವಾಗಿ ಕಾಣುವುದು ನಿಲ್ಲುವಂತಾಗಬೇಕು. ಹಾಗೆಯೇ ಯುದ್ಧದಲ್ಲಿ ಮೃತಪಟ್ಟ ಯೋಧನಿಗೆ ಸಿಗುವ ಪರಿಹಾರ, ಶೌಚಗುಂಡಿಯಲ್ಲಿ ಮೃತಪಟ್ಟ ಯೋಧನಿಗೂ ಸಿಗಬೇಕು. ಗಡಿಯಲ್ಲಿ ಯೋಧರು ಕಣ್ಣಿಗೆ ಕಾಣುವ ಶತ್ರುವಿನ ವಿರುದ್ಧ ಕಾವಲು ಕಾದರೆ, ಈ ಪೌರಕಾರ್ಮಿಕರು ಕಣ್ಣಿಗೆ ಕಾಣದ ವೈರಸ್‌ಗಳ ವಿರುದ್ಧ ತಮ್ಮ ಪ್ರಾಣವನ್ನು ಪಣವಾಗಿಟ್ಟು ಹೋರಾಡುತ್ತಾ ಬರುತ್ತಿದ್ದಾರೆ. ನಮ್ಮ ನಗರಗಳ ಸೌಂದರ್ಯ, ಶುಚಿತ್ವಗಳ ಹಿಂದೆ ಈ ಕಾರ್ಮಿಕರ ಬೆವರಿದೆ. ಅವರ ನೋವು, ಕಣ್ಣೀರುಗಳಿವೆ. ಇವರ ತ್ಯಾಗ, ಬಲಿದಾನಗಳನ್ನು ದೇಶ ಎಲ್ಲಿಯವರೆಗೆ ಗುರುತಿಸುವುದಿಲ್ಲವೋ ಅಲ್ಲಿಯವರೆಗೆ, ಶುಚಿತ್ವ ಆಂದೋಲನ ತನ್ನ ಗುರಿ ತಲುಪುವುದಿಲ್ಲ. ಹಾಗೆಯೇ, ಕೊರೋನದಂತಹ ಸಾಂಕ್ರಾಮಿಕ ವೈರಸ್‌ಗಳನ್ನು ಎದುರಿಸುವ ನಮ್ಮ ಹೋರಾಟವೂ ತಾರ್ಕಿಕ ಅಂತ್ಯ ಕಾಣಲಾರದು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News