ಭೂಮಿ ಚಪ್ಪಟೆಯಾಗಿದ್ದರೆ...?

Update: 2021-08-07 19:30 GMT

ಲಕ್ಷ್ಮಿಗೆ ರಾತ್ರಿಯ ಆಗಸ ನೋಡುವುದೆಂದರೆ ಎಲ್ಲಿಲ್ಲದ ಸಡಗರ. ಪ್ರತಿರಾತ್ರಿ ತಪ್ಪದೆ ಚಂದ್ರ ಮತ್ತು ನಕ್ಷತ್ರಗಳನ್ನು ನೋಡದೇ ಮಲಗುವುದೇ ಇಲ್ಲ. ಮಳೆಗಾಲದ ದಿನಗಳಲ್ಲಿ ಚಂದ್ರ ಮತ್ತು ನಕ್ಷತ್ರಗಳನ್ನು ನೋಡಲು ಪರಿತಪಿಸುವಳು. ಸ್ವಚ್ಛ ಆಗಸವಿರುವ ರಾತ್ರಿಗಳೆಂದರೆ ಅವಳಿಗೆ ಪಂಚಪ್ರಾಣ. ಅಮಾವಾಸ್ಯೆಯ ನಂತರದ ದಿನದಿಂದ ಚಂದ್ರನ ಬೆಳವಣಿಗೆಯನ್ನು ಗಮನಿಸುವಳು. ಹುಣ್ಣಿಮೆಯ ನಂತರದ ದಿನಗಳಲ್ಲಿ ಚಂದ್ರನ ಬೆಳಕು ಕ್ಷೀಣವಾಗುತ್ತಿರುವುದನ್ನು ಗಮನಿಸುವಳು. ಚಂದ್ರನ ಕ್ಷೀಣ ಬೆಳಕಿನ ದಿನಗಳಲ್ಲಿ ನಕ್ಷತ್ರಗಳನ್ನು ಗುರುತಿಸುವಳು. ಅಲ್ಲದೇ ಕಣ್ಣಿಗೆ ಕಾಣುವ ನಕ್ಷತ್ರರಾಶಿಯನ್ನು ಗುರುತಿಸಲು ಪ್ರಯತ್ನಿಸುವಳು. ಅಮಾವಾಸ್ಯೆ ಸಮೀಪಿಸುತ್ತಿರುವ ಒಂದು ದಿನ ರಾತ್ರಿ ಆಗಸ ನೋಡುತ್ತಾ ತಂದೆಗೆ ದಿಢೀರೆಂದು ಪ್ರಶ್ನೆ ಹಾಕಿದಳು. ‘‘ಪಪ್ಪಾ, ಭೂಮಿ ದುಂಡಾಗಿರುವುದರಿಂದ ತಿರುಗುತ್ತಿದೆ. ಒಂದು ವೇಳೆ ಚಪ್ಪಟೆಯಾಗಿದ್ದರೆ ತಿರುಗುತ್ತಿತ್ತೇ? ತಿರುಗಲು ಆಗುತ್ತಿರಲಿಲ್ಲ ಎಂದಾದರೆ ಭೂಮಿ ಹೇಗಿರುತ್ತಿತ್ತು? ಭೂಮಿ ಚಪ್ಪಟೆಯಾಗಿದ್ದರೆ ಏನೆಲ್ಲಾ ಬದಲಾವಣೆಗಳು ಆಗುತ್ತಿದ್ದವು’’ ಎಂದು ಪ್ರಶ್ನೆಗಳ ಮಳೆ ಸುರಿಸಿದಳು. ಅವಳ ಈ ಪ್ರಶ್ನೆ ನಿರೀಕ್ಷಿಸಿದ್ದ ತಂದೆ ತಮ್ಮದೇ ಆದ ಸರಳ ಶೈಲಿಯಲ್ಲಿ ವಿವರಿಸಲು ಪ್ರಾರಂಭಿಸಿದರು.

ಮಾಹಿತಿ ತಂತ್ರಜ್ಞಾನ ಅಗಾಧವಾಗಿ ಬೆಳೆದ ಇಂದಿನ ಕಾಲದಲ್ಲಿ ಭೂಮಿ ದುಂಡಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ಸಾಕಷ್ಟು ಪುರಾವೆಗಳಿವೆ. ಆದಾಗ್ಯೂ ಭೂಮಿಯ ಆಕಾರದ ಕುರಿತು ಇಂದಿಗೂ ಅನೇಕ ಚರ್ಚೆಗಳು, ಸಂಶೋಧನೆಗಳು, ವಾದ ವಿವಾದಗಳು ನಡೆಯುತ್ತಲೇ ಇವೆ. ಭೂಮಿಯು ಗೋಳಾಕಾರವಾಗಿದೆ ಎಂಬುದನ್ನು ಅನೇಕ ಮಹನೀಯರು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಚಂದ್ರನ ಆಕಾರ ಮತ್ತು ಗ್ರಹಣಗಳ ಆಧಾರದ ಮೇಲೆ ಭೂಮಿಯೂ ದುಂಡಾಗಿರಲೇಬೇಕು ಎಂದು ಪೈಥಾಗೋರಸ್ ಪ್ರತಿಪಾದಿಸಿದ. ನಂತರ ಅರಿಸ್ಟಾಟಲ್ ಮತ್ತು ಎರಟೋಸ್ತನಿಸ್ ಅವರೂ ಭೂಮಿ ದುಂಡಾಗಿದೆ ಎಂಬ ವಾದವನ್ನು ಬಲವಾಗಿ ಸಮರ್ಥಿಸಿಕೊಂಡರು. ವ್ಯೋಮ ನೌಕೆಗಳ ಛಾಯಾಚಿತ್ರಗಳು ಹಾಗೂ ಗಗನ ಯಾನಿಗಳು ತಮ್ಮ ಅಂತರಿಕ್ಷ ಯಾನದ ವೀಕ್ಷಣೆಯ ಆಧಾರದ ಮೇಲೆ ಭೂಮಿಯು ವಾಸ್ತವವಾಗಿ ಸಂಪೂರ್ಣವಾಗಿ ದುಂಡಾಗಿಲ್ಲ ಎಂಬ ಮಾಹಿತಿಯನ್ನು ಖಗೋಳ ವಿಜ್ಞಾನಿಗಳು ನೀಡಿದ್ದಾರೆ. ಧ್ರುವ ಪ್ರದೇಶಗಳ ಬಳಿ ಆಕಾರವು ನಿರಂತರವಾಗಿ ಬದಲಾಗುತ್ತಲೇ ಇದೆ ಎಂದು ಈ ವಿಜ್ಞಾನಿಗಳು ಹೇಳಿದ್ದಾರೆ. ಭೂಮಿಯು ಸಂಪೂರ್ಣವಾಗಿ ಗೋಳಾಕಾರವಾಗಿಲ್ಲ, ಅದು ಕಿತ್ತಳೆ ಹಣ್ಣಿನಂತೆ ಧ್ರುವಗಳಲ್ಲಿ ಚಪ್ಪಟೆಯಾಗಿದೆ ಎಂಬುದನ್ನು ಐಸಾಕ್ ನ್ಯೂಟನ್ ಸಹ ಪ್ರತಿಪಾದಿಸಿದ್ದರು.

ಭೂಮಿ ದುಂಡಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ಅನೇಕ ಶತಮಾನಗಳೇ ಬೇಕಾದವು. ಕೆಲ ಪಟ್ಟಭದ್ರ ಹಿತಾಸಕ್ತಿಯ ಜನರು ಭೂಮಿ ದುಂಡಾಗಿಲ್ಲ ಚಪ್ಪಟೆಯಾಗಿದೆ ಎಂಬ ತಮ್ಮ ವಾದವನ್ನೇ ಪುರಸ್ಕರಿಸುತ್ತಾ ಬಂದಿದ್ದರು. ಆದರೆ ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ಬಲವಾದ ಸಾಕ್ಷಿಗಳು ಹಾಗೂ ಸಿದ್ಧಾಂತಗಳಿಂದ ಭೂಮಿ ದುಂಡಾಗಿದೆ ಎಂಬುದನ್ನು ಅವರೆಲ್ಲ ಆಂತರಿಕವಾಗಿ ಒಪ್ಪದಿದ್ದರೂ ಬಾಹ್ಯವಾಗಿ ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಭೂಮಿ ಚಪ್ಪಟೆಯಾಗಿದ್ದರೆ ಏನಾಗುತ್ತಿತ್ತು? ಎಂಬುದನ್ನು ತಾರ್ಕಿಕ ಅಂಶಗಳಿಂದ ಚರ್ಚಿಸೋಣ.

ಭೂಮಿಯಿಂದ ಮೇಲಕ್ಕೆಸೆದ ಚೆಂಡು, ಮರದಿಂದ ಉದುರಿದ ಕಾಯಿ ಮರಳಿ ಭೂಮಿಗೆ ಬರುತ್ತವೆ. ಇದನ್ನೇ ನಾವು ಗುರುತ್ವಬಲ ಎನ್ನುತ್ತೇವೆ. ಗುರುತ್ವಬಲ ಇರುವುದರಿಂದಲೇ ಭೂಮಿ ಮತ್ತು ಇನ್ನಿತರ ಗ್ರಹಗಳು ಗೋಳಾಕಾರವಾಗಿವೆ. ಭೂಮಿಯು ಗುಂಡಾಗಿರುವುದರಿಂದ ಗುರುತ್ವಬಲದ ಪರಿಣಾಮವಾಗಿ ಪ್ರತಿಯೊಂದು ವಸ್ತುಗಳು ಭೂಮಿಯ ಕೇಂದ್ರದ ಕಡೆಗೆ ಸೆಳೆಯಲ್ಪಡುತ್ತವೆ. ಒಂದು ವೇಳೆ ಭೂಮಿ ಚಪ್ಪಟೆಯಾಗಿದ್ದರೆ ಗುರುತ್ವಬಲವು ವಿಫಲವಾಗಿರುತ್ತಿತ್ತು. ಎಲ್ಲವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಸಾಮರ್ಥ್ಯ ಭೂಮಿಗೆ ಇರುತ್ತಿರಲಿಲ್ಲ. ಆಗ ವಾಲಿಬಾಲ್ ಹಾಗೂ ಬಾಸ್ಕೆಟ್‌ಬಾಲ್‌ನಂತಹ ಆಟಗಳನ್ನು ಆಡಲಾಗುತ್ತಿರಲಿಲ್ಲ. ಈ ಆಟಗಳಲ್ಲಿ ಆಟಗಾರರು ನೆಲ ಬಿಟ್ಟು ಮೇಲೆಕ್ಕೆ ಜಿಗಿಯುವುದು ಮತ್ತು ಪುನಃ ನೆಲಕ್ಕೆ ಇಳಿಯುವುದು ಸಹಜ. ಭೂಮಿ ಚಪ್ಪಟೆಯಾಗಿದ್ದು, ಗುರುತ್ವ ರಹಿತವಾಗಿದ್ದರೆ ನೆಲ ಬಿಟ್ಟು ಮೇಲೆ ಹಾರಿದವರು ಪುನಃ ನೆಲ ಮುಟ್ಟದೆ ಅಲ್ಲಿಯೇ ನೇತಾಡಬೇಕಾಗುತ್ತಿತ್ತು. ವಿಮಾನ ಅಪಘಾತಗಳು ನಡೆದಾಗ ಅವಶೇಷಗಳು ಭೂಮಿಗೆ ಬರುತ್ತಲೇ ಇರಲಿಲ್ಲ. ಭೂಮಿ ದುಂಡಾಕಾರದಲ್ಲಿದ್ದು ಸೂರ್ಯನ ಸುತ್ತ ಸುತ್ತುವುದರಿಂದ ಸೂರ್ಯೋದಯ ಮತ್ತು ಸೂರ್ಯಾಸ್ತಗಳು ಸಂಭವಿಸುತ್ತವೆ. ಭೂಮಿ ಚಪ್ಪಟೆಯಾಗಿದ್ದರೆ ಸೂರ್ಯೋದಯ ಮತ್ತು ಸೂರ್ಯಾಸ್ತ ಆಗುತ್ತಿರಲಿಲ್ಲ. ಸೂರ್ಯೋದಯ ಮತ್ತು ಸೂರ್ಯಾಸ್ತ ಆಗದ ಹೊರತು ಬಹುತೇಕ ಜೀವಿಗಳ ಜೀವನ ಅಯೋಮಯವಾಗುತ್ತಿತ್ತು. ದ್ಯುತಿಸಂಶ್ಲೇಷಣೆಗೆ ಸೂರ್ಯನ ಬೆಳಕು ಅಗತ್ಯವಾಗಿದೆ. ದ್ಯುತಿ ಸಂಶ್ಲೇಷಣೆ ನಡೆದರೆ ಮಾತ್ರ ಜೀವಿಗಳಿಗೆ ಆಹಾರ ಮತ್ತು ಉಸಿರಾಡಲು ಅಗತ್ಯವಾದ ಆಮ್ಲಜನಕ ಉತ್ಪತ್ತಿಯಾಗುತ್ತದೆ. ಸೂರ್ಯೋದಯ ಆಗದ ಹೊರತು ಜೀವಿಗಳಿಗೆ ಆಹಾರ ಮತ್ತು ಆಮ್ಲಜನಕ ದೊರೆಯಲಾರದು. ಸೂರ್ಯಾಸ್ತವಾಗದ ಹೊರತು ಗಿಡಮರಗಳು ಉಸಿರಾಡಲಾರವು. ಏಕೆಂದರೆ ಹಗಲಿನ ವೇಳೆ ಆಹಾರ ಮತ್ತು ಆಮ್ಲಜನಕ ಉತ್ಪತ್ತಿಯಲ್ಲಿ ಬ್ಯುಸಿಯಾದ ಗಿಡಮರಗಳು ರಾತ್ರಿ ವೇಳೆ ಮಾತ್ರ ಉಸಿರಾಡುತ್ತವೆ. ಗಿಡಮರಗಳು ಉಸಿರಾಡದ ಹೊರತು ನಮಗೆ ಅಗತ್ಯವಿರುವ ಆಹಾರ ಮತ್ತು ಆಮ್ಲಜನಕ ತಯಾರಿಸಲಾರವು. ಭೂಮಿ ಚಪ್ಪಟೆಯಾಗಿದ್ದರೆ ಬಹುತೇಕ ಜೀವಿಗಳ ಆಹಾರ ಮತ್ತು ಉಸಿರಾಡಲು ಅಗತ್ಯವಾದ ಆಮ್ಲಜನಕ ಲಭ್ಯವಾಗದೆ ಸಾಯುತ್ತಿದ್ದವು.

ಸೂರ್ಯ, ಚಂದ್ರ ಮತ್ತು ಭೂಮಿ-ಈ ಮೂರು ಆಕಾಶಕಾಯಗಳು ಸರಳ ರೇಖೆಯಲ್ಲಿದ್ದಾಗ ಮಾತ್ರ ಗ್ರಹಣಗಳು ಸಂಭವಿಸುತ್ತವೆ ಎಂಬುದು ನಮಗೆಲ್ಲಾ ಗೊತ್ತು. ಅಲ್ಲದೆ ಪ್ರತಿ ಗ್ರಹಣಗಳನ್ನು ಗಮನಿಸಿದಾಗ ಭೂಮಿ ಅಥವಾ ಚಂದ್ರನ ನೆರಳು ಪರಸ್ಪರ ಇನ್ನೊಂದು ಕಾಯದ ಮೇಲೆ ಬಿದ್ದಾಗ ಅದು ದುಂಡಾಗಿರುವುದನ್ನು ಗಮನಿಸಿದ್ದೇವೆ. ಗ್ರಹಣಗಳ ಆಧಾರದ ಮೇಲೆಯೇ ನಮ್ಮ ಪೂರ್ವಜರು ಭೂಮಿ ದುಂಡಾಗಿದೆ ಎಂಬುದನ್ನು ಲೆಕ್ಕಾಚಾರ ಹಾಕಿದ್ದರು. ಒಂದು ವೇಳೆ ಭೂಮಿ ಚಪ್ಪಟೆಯಾಗಿದ್ದರೆ ಗ್ರಹಣಗಳು ಸಂಭವಿಸುತ್ತಲೇ ಇರಲಿಲ್ಲ. ಏಕೆಂದರೆ ಒಂದರ ನೆರಳು ಇನ್ನೊಂದರ ಮೇಲೆ ವೃತ್ತಾಕಾರದಲ್ಲಿ ಬೀಳುತ್ತಲೇ ಇರಲಿಲ್ಲ. ಭೂಮಿಯು ಚಪ್ಪಟೆಯಾಗಿದ್ದರೆ ಸಮಯದ ವ್ಯತ್ಯಾಸ ಇರುತ್ತಿರಲಿಲ್ಲ. ಭೂಮಿ ಚಪ್ಪಟೆಯಾಗಿದ್ದರೆ ಪಶ್ಚಿಮದಿಂದ ಪೂರ್ವಕ್ಕೆ ತನ್ನ ಅಕ್ಷದಲ್ಲಿ ಸುತ್ತುತ್ತಿರಲಿಲ್ಲ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕಾಲದ ವ್ಯತ್ಯಾಸ ಆಗುತ್ತಿರಲಿಲ್ಲ. ಹಗಲು ರಾತ್ರಿಗಳ ಕಲ್ಪನೆಯೇ ಇರುತ್ತಿರಲಿಲ್ಲ. ಸೂರ್ಯನ ಶಾಖ ಪಡೆಯುವ ಪ್ರದೇಶಗಳು ಯಾವಾಗಲೂ ಹಗಲಿನಲ್ಲಿ ಮತ್ತು ಶಾಖ ಪಡೆಯದ ಪ್ರದೇಶಗಳು ಸದಾ ರಾತ್ರಿಯಲ್ಲಿಯೇ ಇರುತ್ತಿದ್ದವು. ಭೂಮಿ ಚಪ್ಪಟೆಯಾಗಿದ್ದರೆ ಸೂರ್ಯನ ಶಾಖ ಪಡೆಯದ ಭೂಪ್ರದೇಶದಲ್ಲಿ ನೆಪ್ಚೂನ್‌ನಂತೆ ತುಂಬಾ ಹಿಮ ತುಂಬಿರುತ್ತಿತ್ತು. ಸೂರ್ಯನ ಶಾಖ ಪಡೆಯುವ ಭೂಪ್ರದೇಶದಲ್ಲಿ ಬುಧನಂತೆ ಹಿಮವೇ ಇರುತ್ತಿರಲಿಲ್ಲ. ಭೂಮಿ ಚಪ್ಪಟೆಯಾಗಿದ್ದರೆ ನಕ್ಷತ್ರಗಳ ವಿವಿಧ ರಾಶಿಗಳನ್ನು ನೋಡಲು ಆಗುತ್ತಿರಲಿಲ್ಲ. ಖಗೋಳ ವಿಜ್ಞಾನಿಗಳು ವಿವಿಧ ನಕ್ಷತ್ರಗಳ ಅಧ್ಯಯನಕ್ಕಾಗಿ ವಿವಿಧ ಸ್ಥಳಗಳಿಗೆ ಹೋಗಬೇಕಾಗುತ್ತಿತ್ತು.

ಒಂದೇ ಸ್ಥಳದಲ್ಲಿ ಕುಳಿತು ಎಲ್ಲಾ ನಕ್ಷತ್ರಗಳ ಅಧ್ಯಯನ ಮಾಡಲು ಆಗುತ್ತಿರಲಿಲ್ಲ. ಚಂದ್ರ ತನ್ನ ಅಕ್ಷದ ಸುತ್ತ ಸುತ್ತುವ ಅವಧಿ ಮತ್ತು ಭೂಮಿ ತನ್ನ ಅಕ್ಷದ ಸುತ್ತ ಸುತ್ತುವ ಅವಧಿ ಎರಡೂ ಒಂದೇ ಆಗಿರುವುದರಿಂದ ಈಗ ಚಂದ್ರನ ಒಂದೇ ಮುಖ ಮಾತ್ರ ನಮಗೆ ಕಾಣುತ್ತದೆ. ಒಂದು ವೇಳೆ ಭೂಮಿ ಚಪ್ಪಟೆಯಾಗಿದ್ದರೆ ಚಂದ್ರನ ಎರಡೂ ಮುಖಗಳನ್ನು ನೋಡುವ ಅವಕಾಶ ದೊರೆಯುತ್ತಿತ್ತು. ಭೂಮಿಯ ಬೇರೆ ಬೇರೆ ಸ್ಥಳಗಳಲ್ಲಿ ನಿಂತು ಚಂದ್ರನ ಇನ್ನೊಂದು ಮುಖವನ್ನು ನೋಡಬಹುದಿತ್ತು.

ಭೂಮಿಯು ಚಪ್ಪಟೆಯಾಗಿದ್ದರೆ ಕಾಂತಕ್ಷೇತ್ರವು ಇರುತ್ತಿರಲಿಲ್ಲ. ಕಾಂತಕ್ಷೇತ್ರ ಇಲ್ಲದೇ ಸಂವಹನ ತಂತ್ರಜ್ಞಾನ ನಿಖರವಾಗಿ ಕಾರ್ಯನಿರ್ವಹಿಸುವುದಿಲ್ಲ. ಕಾಂತಕ್ಷೇತ್ರವಿಲ್ಲದೆ ದಿಕ್ಕುಗಳನ್ನು ಗುರುತಿಸಲು ತೊಂದರೆಯಾಗಿ ಸಮುದ್ರಯಾನ ತೊಡಕಾಗುತ್ತಿತ್ತು. ಕಾಂತ ಕ್ಷೇತ್ರವಿಲ್ಲದೆ ಭೂಮಿಯ ಮೇಲೆ ಚಾರ್ಜ್ಡ್ ಕಣಗಳು ದುರ್ಬಲಗೊಳ್ಳುತ್ತವೆ. ಇದರಿಂದ ಭೂಗ್ರಹದ ಮೇಲೆ ವಿಪರೀತ ಮಳೆಯಾಗಲು ಕಾರಣವಾಗಬಹುದು. ತದನಂತರ ಗಾಳಿ, ನೀರು ಎಲ್ಲವೂ ಬಾಹ್ಯಾಕಾಶಕ್ಕೆ ಹಾರಿಹೋಗುತ್ತದೆ. ಇದರಿಂದ ಭೂಮಿಯ ಮೇಲೆ ನೀರು ಇಲ್ಲದಂತಾಗುತ್ತದೆ. ಜೊತೆಗೆ ಭೂಮಿಯ ಮೇಲೆ ಜೀವಿಗಳೂ ಇಲ್ಲದಂತಾಗುತ್ತದೆ. ಒಂದುವೇಳೆ ಭೂಮಿ ಚಪ್ಪಟೆಯಾಗಿದ್ದರೆ ಈಗಿನಂತೆ ಜೀವಿಗಳಿಂದ ಕೂಡಿದರೆ ಇನ್ನಿತರ ಗ್ರಹಗಳಂತೆ ಬರಡಾಗಿರುತ್ತಿತ್ತು ಎಂದು ಹೇಳುತ್ತ ಲಕ್ಷ್ಮಿಯ ತಂದೆ ತಮ್ಮ ವಿವರಣೆ ಮುಕ್ತಾಯಗೊಳಿಸಿದರು.

Writer - ಆರ್. ಬಿ. ಗುರುಬಸವರಾಜ

contributor

Editor - ಆರ್. ಬಿ. ಗುರುಬಸವರಾಜ

contributor

Similar News