ಟೋಕಿಯೊ ಒಲಿಂಪಿಕ್ಸ್: ಚೀನಾವನ್ನು ಹಿಂದಿಕ್ಕಿ ಪದಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಅಮೆರಿಕ

Update: 2021-08-08 13:22 GMT
photo : twitter/@Tokyo2020hi

 ಟೋಕಿಯೊ, ಆ.8: ಟೋಕಿಯೊ ಒಲಿಂಪಿಕ್ಸ್ ಪದಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಚೀನಾವನ್ನು ಹಿಂದಿಕ್ಕಿದ ಅಮೆರಿಕ ಅಗ್ರ ಸ್ಥಾನಿಯಾಗಿ ಹೊರಹೊಮ್ಮಿದೆ.

ಭಾರತವು 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕ ಸಹಿತ ಒಟ್ಟು 7 ಪದಕಗಳನ್ನು ಜಯಿಸುವುದರೊಂದಿಗೆ ಪದಕಪಟ್ಟಿಯಲ್ಲಿ ಒಟ್ಟಾರೆ 48ನೇ ಸ್ಥಾನ ಪಡೆದಿದೆ.

ಒಲಿಂಪಿಕ್ಸ್‌ನ ಕೊನೆಯ ದಿನವಾದ ರವಿವಾರ ಕೀನ್ಯದ ಎಲಿಯುಡ್ ಕಿಪ್‌ಚೋಗೆ ಮ್ಯಾರಥಾನ್‌ನಲ್ಲಿ ಸತತ ಎರಡನೇ ಬಾರಿ ಚಾಂಪಿಯನ್ ಆದರು. ಅಮೆರಿಕವು ವಾಲಿಬಾಲ್, ಟ್ರಾಕ್ ಸೈಕ್ಲಿಂಗ್ ಹಾಗೂ ಬಾಸ್ಕೆಟ್‌ಬಾಲ್‌ನಲ್ಲಿ ಜಯಶಾಲಿಯಾಗಿ ಒಟ್ಟು 39 ಚಿನ್ನದ ಪದಕದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಿಯಾಯಿತು. ಅಮೆರಿಕವು ಚೀನಾಕ್ಕಿಂತ ಕೇವಲ ಒಂದು ಚಿನ್ನ ಹೆಚ್ಚು ಗಳಿಸಿದ ಕಾರಣ ಅಗ್ರಸ್ಥಾನಕ್ಕೆ ಜಿಗಿಯಿತು.

ಅಮೆರಿಕವು ಒಟ್ಟು 113 ಪದಕಗಳನ್ನು(39 ಚಿನ್ನ, 41 ಬೆಳ್ಳಿ, 33 ಕಂಚು)ಜಯಿಸಿದರೆ, 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ಚೀನಾವು ಒಟ್ಟು 88 ಪದಕಗಳನ್ನು(38 ಚಿನ್ನ, 32 ಬೆಳ್ಳಿ, 18 ಕಂಚು)ಜಯಿಸಿದೆ. ಆತಿಥೇಯ ಜಪಾನ್ ಒಟ್ಟು 58 ಪದಕಗಳೊಂದಿಗೆ(27 ಚಿನ್ನ, 14 ಬೆಳ್ಳಿ, 17 ಕಂಚು)3ನೇ ಸ್ಥಾನ ಅಲಂಕರಿಸಿದೆ. ಗ್ರೇಟ್ ಬ್ರಿಟನ್(65-22 ಚಿನ್ನ, 21 ಬೆಳ್ಳಿ, 22 ಕಂಚು) ಹಾಗೂ ರಶ್ಯ(71-20 ಚಿನ್ನ, 28 ಬೆಳ್ಳಿ, 23 ಕಂಚು)ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನ ಪಡೆದಿವೆ.

ಅಮೆರಿಕವು ಸತತ ಮೂರನೇ ಆವೃತ್ತಿಯ ಒಲಿಂಪಿಕ್ಸ್ ಹಾಗೂ ಕಳೆದ 7 ಆವೃತ್ತಿಗಳಲ್ಲಿ 6ನೇ ಬಾರಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಚೀನಾವು 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಅಗ್ರಸ್ಥಾನಕ್ಕೇರಿತ್ತು. ಕಳೆದ ಬಾರಿಯ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಅಮೆರಿಕದ ಬಳಿಕ ಗ್ರೇಟ್ ಬ್ರಿಟನ್ 2ನೇ ಸ್ಥಾನ ಪಡೆದಿದ್ದರೆ, ಚೀನಾ 3ನೇ ಸ್ಥಾನ ಪಡೆದಿತ್ತು.

ಆಸ್ಟ್ರೇಲಿಯದ ಸ್ವಿಮ್ಮರ ಎಮ್ಮಾ ಮೆಕೆಯೊನ್ 4 ಚಿನ್ನ ಹಾಗೂ 3 ಕಂಚು ಸಹಿತ ಒಟ್ಟು 7 ಪದಕಗಳನ್ನು ಜಯಿಸಿ ಟೋಕಿಯೊ 2020ರಲ್ಲ್ಲಿ ಅತ್ಯಂತ ಯಶಸ್ವಿ ಒಲಿಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News