ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅದ್ದೂರಿ ತೆರೆ, 2024ರ ಒಲಿಂಪಿಕ್ಸ್‌ಗೆ ಪ್ಯಾರಿಸ್ ಆತಿಥ್ಯ

Update: 2021-08-08 13:38 GMT
photo : PTI

ಟೋಕಿಯೊ, ಆ.8:  ಕೊರೋನ ಕಠಿಣ ಶಿಷ್ಟಾಚಾರದ ನಡುವೆ 16 ದಿನಗಳ ಕಾಲ ನಡೆದ ಟೋಕಿಯೊ ಒಲಿಂಪಿಕ್ ಗೇಮ್ಸ್- 2020 ಸಮಾರೋಪ ಸಮಾರಂಭವು ರವಿವಾರ ಖಾಲಿ ಒಲಿಂಪಿಕ್ಸ್ ಸ್ಟೇಡಿಯಂನಲ್ಲಿ ನೆರವೇರಿತು.
  
"32ನೇ ಆವೃತ್ತಿಯ ಒಲಿಂಪಿಯಾಡ್ ಮುಕ್ತಾಯವಾಗಿದೆ. 33ನೇ ಒಲಿಂಪಿಕ್ಸ್ ಇನ್ನು 3 ವರ್ಷಗಳಲ್ಲಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯಲಿದ್ದು, ವಿಶ್ವದ ಯುವಕರನ್ನು ಒಟ್ಟುಗೂಡಿಸುವಂತೆ ಕರೆ ನೀಡಲು ಬಯಸುವೆ" ಎಂದು ಅಂತರ್ ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಅಧ್ಯಕ್ಷ ಥಾಮಸ್ ಬಾಕ್ ಘೋಷಿಸಿದರು. 2024ರ ಒಲಿಂಪಿಕ್ಸ್ ಫ್ರಾನ್ಸ್‌ನಲ್ಲಿ ನಡೆಯಲಿದೆ.

ಐಒಎ ಅಧ್ಯಕ್ಷ ಬಾಕ್ ಅವರು ಒಲಿಂಪಿಕ್ಸ್ ಧ್ವಜವನ್ನು ಪ್ಯಾರಿಸ್ ಮೇಯರ್ ಅನ್ನೆ ಹಿಡಾಲ್ಗೊ ಅವರಿಗೆ ಹಸ್ತಾಂತರಿಸಿದರು. ಪ್ಯಾರಿಸ್ ಮೇಯರ್ ಒಲಿಂಪಿಕ್ಸ್ ಧ್ವಜವನ್ನು ಕೈಯಲ್ಲಿ ಹಿಡಿದು ಬೀಸಿದರು. ಆ ನಂತರ ಮುಂಬರುವ ಒಲಿಂಪಿಕ್ಸ್ ಆತಿಥ್ಯವಹಿಸಲಿರುವ ಫ್ರಾನ್ಸ್‌ನ ರಾಷ್ಟ್ರಗೀತೆಯನ್ನು ನುಡಿಸಲಾಯಿತು.

68,000 ಆಸನ ಸಾಮರ್ಥ್ಯದ ಕ್ರೀಡಾಂಗಣದಲ್ಲಿ ಜಪಾನ್‌ನ ಧ್ವಜಾರೋಹಣಗೈದ ಬಳಿಕ ಗಣ್ಯರ ಸಮ್ಮುಖದಲ್ಲಿ ಸಂಗೀತ, ನೃತ್ಯ ಕಾರ್ಯಕ್ರಮಗಳು ನಡೆದವು. ಆಕಾಶದಲ್ಲಿ ಸುಡುಮದ್ದುಗಳನ್ನು ಸಿಡಿಸುವ ಮೂಲಕ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ಕುಸ್ತಿಪಟು ಬಜರಂಗ್ ಪುನಿಯಾ ಅವರ ಸಮಾರೋಪ ಸಮಾರಂಭದಲ್ಲಿ ಅತ್ಲೀಟ್‌ಗಳ ಪಥ ಸಂಚಲನದ ವೇಳೆ ಭಾರತದ ತಂಡದ ನೇತೃತ್ವವಹಿಸಿದರು.
 ಭಾರತವು 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕ ಸಹಿತ ಒಟ್ಟು 7 ಪದಕಗಳನ್ನು ಜಯಿಸುವುದರೊಂದಿಗೆ ಪದಕಪಟ್ಟಿಯಲ್ಲಿ ಒಟ್ಟಾರೆ 48ನೇ ಸ್ಥಾನ ಪಡೆದಿದೆ.

ಚೀನಾಕ್ಕಿಂತ ಒಂದು ಚಿನ್ನದ ಪದಕ ಹೆಚ್ಚಿಗೆ ಗೆಲ್ಲುವ ಮೂಲಕ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಚೀನೀಯರನ್ನು ಹಿಂದಿಕ್ಕಿದ ಅಮೆರಿಕ ಮೊದಲ ಸ್ಥಾನಕ್ಕೇರಿದೆ. ಅಮೆರಿಕವು ಒಟ್ಟು 113 ಪದಕಗಳನ್ನು(39 ಚಿನ್ನ, 41 ಬೆಳ್ಳಿ, 33 ಕಂಚು)ಜಯಿಸಿದರೆ, 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ಚೀನಾವು ಒಟ್ಟು 88 ಪದಕಗಳನ್ನು(38 ಚಿನ್ನ, 32 ಬೆಳ್ಳಿ, 18 ಕಂಚು)ಜಯಿಸಿದೆ.

ಆತಿಥೇಯ ಜಪಾನ್ ಒಟ್ಟು 58 ಪದಕಗಳೊಂದಿಗೆ(27 ಚಿನ್ನ, 14 ಬೆಳ್ಳಿ, 17 ಕಂಚು)3ನೇ ಸ್ಥಾನ ಅಲಂಕರಿಸಿದೆ. ಗ್ರೇಟ್ ಬ್ರಿಟನ್(65-22ಚಿನ್ನ, 21 ಬೆಳ್ಳಿ, 22 ಕಂಚು) ಹಾಗೂ ರಶ್ಯ(71-20 ಚಿನ್ನ, 28 ಬೆಳ್ಳಿ, 23 ಕಂಚು)ಕ್ರಮವಾಗಿ 4ನೆ ಹಾಗೂ 5ನೇ ಸ್ಥಾನ ಪಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News