ದೇಶದಲ್ಲಿ ಕೋವಿಡ್-19 ಸೋಂಕು ಪ್ರಕರಣ ಶೇ. 4ರಷ್ಟು ಇಳಿಕೆ

Update: 2021-08-09 03:45 GMT

ಹೊಸದಿಲ್ಲಿ: ದೇಶದಲ್ಲಿ ಕಳೆದ ಒಂದು ವಾರಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಶೇಕಡ 4ರಷ್ಟು ಇಳಿಮುಖವಾಗಿದೆ. ಹಿಂದಿನ ವಾರ ಶೇಕಡ 7.5ರಷ್ಟು ಹೆಚ್ಚಳ ಕಂಡುಬಂದಿತ್ತು. ಆದರೆ ಹಲವು ಈಶಾನ್ಯ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾರುವುದು ಒಟ್ಟಾರೆ ಇಳಿಕೆಗೆ ಕಾರಣವಾಗಿದೆ.

ಭಾರತದಲ್ಲಿ ಆಗಸ್ಟ್ 2-8ರ ಅವಧಿಯಲ್ಲಿ ಒಟ್ಟು 2.74 ಲಕ್ಷ ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಹಿಂದಿನ ವಾರ ದಾಖಲಾದ ಪ್ರಕರಣಕ್ಕೆ ಹೋಲಿಸಿದರೆ ಶೇಕಡ 4.2ರಷ್ಟು ಕಡಿಮೆ. ಹಿಂದಿನ ವಾರ 2.86 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ಕೇರಳದಲ್ಲಿ ಶೇಕಡ 27ರಷ್ಟು ಪ್ರಕರಣಗಳು ಹೆಚ್ಚಿದ ಹಾಗೂ ಕರ್ನಾಟಕ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಿದ ಕಾರಣದಿಂದ 12 ವಾರಗಳ ಬಳಿಕ ಪ್ರಕರಣಗಳ ಒಟ್ಟು ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿತ್ತು.

ಪ್ರಸ್ತುತ ವಾರ ಕೇರಳದಲ್ಲಿ ಹಿಂದಿನ ವಾರಕ್ಕೆ ಹೋಲಿಸಿದರೆ ಶೇಕಡ 1ರಷ್ಟು ಮಾತ್ರ ಏರಿಕೆ ಕಂಡುಬಂದಿದೆ. ರಾಜ್ಯದಲ್ಲಿ ಒಂದು ವಾರದಲ್ಲಿ 1.41 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಇದು ಮೇ ತಿಂಗಳ ಕೊನೆಯ ವಾರ ದಾಖಲಾದ ಅತ್ಯಧಿಕ ಪ್ರಕರಣಳ ಪೈಕಿ ಗರಿಷ್ಠ ಸಂಖ್ಯೆಯಾಗಿದೆ. ದೇಶದ ಒಟ್ಟಾರೆ ಪ್ರಕರಣಗಳ ಪೈಕಿ ಶೇಕಡ 51ರಷ್ಟು ಪ್ರಕರಣಗಳು ಕೇರಳದಿಂದ ವರದಿಯಾಗಿವೆ.

ತಮಿಳುನಾಡಿನಲ್ಲಿ ಕಳೆದ 10 ದಿನಗಳಿಂದ ಅಲ್ಪಪ್ರಮಾಣದಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದು, ಶೇಕಡ 5ರಷ್ಟು ಏರಿಕೆ ಕಂಡುಬಂದಿದೆ. ಆಂಧ್ರಪ್ರದೇಶದಲ್ಲಿ ಶೇಕಡ 1ರಷ್ಟು ಪ್ರಕರಣಗಳು ಹೆಚ್ಚಿವೆ. ತೆಲಂಗಾಣ ಹೊರತುಪಡಿಸಿ ಉಳಿದೆಲ್ಲ ದಕ್ಷಿಣ ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಿವೆ.

ಏತನ್ಮಧ್ಯೆ ದೇಶದಲ್ಲಿ ಕಳೆದ ಒಂದು ವಾರದಲ್ಲಿ 3540 ಕೋವಿಡ್ ಸಂಬಂಧಿ ಸಾವುಗಳು ಸಂಭವಿಸಿದ್ದು, ಇದು ಏಪ್ರಿಲ್ ಆರಂಭದಲ್ಲಿ ದಾಖಲಾದ ಸಾವಿನ ಸಂಖ್ಯೆಯ ಬಳಿಕ ಕನಿಷ್ಠ ಸಂಖ್ಯೆಯಾಗಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಸಾವಿನ ಸಂಖ್ಯೆಯಲ್ಲಿ ಶೇಕಡ 7ರಷ್ಟು ಇಳಿಕೆ ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News