×
Ad

ರಾಜ್ಯದ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ

Update: 2021-08-11 20:38 IST

ಬೆಂಗಳೂರು, ಆ.11: ಜಲಸಂಪನ್ಮೂಲ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ನೀರಾವರಿ ಯೋಜನೆಗಳು, ಕೆರೆ ತುಂಬಿಸುವ ಯೋಜನೆಗಳು, ಆಧುನೀಕರಣ ಯೋಜನೆಗಳು, ಕೇಂದ್ರ ಧನಸಹಾಯ ಪಡೆಯುತ್ತಿರುವ ಯೋಜನೆಗಳ ವಸ್ತುಸ್ಥಿತಿ ಮತ್ತು ಪ್ರಗತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಸ್ತೃವಾಗಿ ಚರ್ಚಿಸಿ, ಯೋಜನೆಗಳನ್ನು ತ್ವರಿತ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. 

ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕೃಷ್ಣ ಮೇಲ್ದಂಡೆ ಯೋಜನೆ ಹಂತ-3 ರಡಿಯ ಭೂಸ್ವಾಧೀನ ಪ್ರಕ್ರಿಯೆ ಮತ್ತು ಪುನರ್ ನಿರ್ಮಾಣ ಮತ್ತು ಪುನರ್ವಸತಿ ಕುರಿತು ಕೈಗೊಳ್ಳಬೇಕಾಗಿರುವ ಕ್ರಮಗಳು, ಆರ್ಥಿಕ ಹೊಂದಾಣಿಕೆ ಮತ್ತು ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ರೂಪುರೇಷೆಗಳ ಕುರಿತು ಚರ್ಚಿಸಿದರು.

ಪ್ರಸ್ತುತ  ಅನುಷ್ಠಾನಕ್ಕೆ ಕೈಗೊಂಡಿರುವ ಸೂಕ್ಷ್ಮ ನೀರಾವರಿ ಪದ್ಧತಿಯಲ್ಲಿನ ರೂಪುರೇಷೆಗಳನ್ನು ಮರು ಪರಿಶೀಲಿಸುವ ಅವಶ್ಯಕತೆ, ನೀರಾವರಿ ಯೋಜನೆಗಳಿಗೆ ಖರ್ಚು ಮಾಡಲಾದ ವೆಚ್ಚಕ್ಕೆ ಪೂರಕವಾಗಿ ನಿರ್ಮಾಣಗೊಳಿಸಲಾದ ಯೋಜನೆಗಳ ಭೌತಿಕ ಪ್ರಗತಿ ಮತ್ತು ಕಲ್ಪಿಸಲಾದ ನೀರಾವರಿ ಸಾಮಥ್ರ್ಯ ಕುರಿತು ಮೌಲ್ಯಮಾಪನ ಕೈಗೊಳ್ಳುವ ಬಗ್ಗೆ ಅವರು ಚರ್ಚಿಸಿದರು.

ಕೃಷ್ಣ ಮೇಲ್ದಂಡೆ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆ, ನವಿಲೆ ಬಳಿ ಸಮತೋಲನಾ ಜಲಾಶಯ ನಿರ್ಮಾಣ ಹಾಗೂ ಯೋಜನೆಗಳಡಿ ಕಲ್ಪಿಸಲಾಗುತ್ತಿರುವ ನೀರಾವರಿ ಸಾಮಥ್ರ್ಯದ ಬಗ್ಗೆ ಮತ್ತು ಪ್ರಸಕ್ತ ಸಾಲಿನ ಆಯವ್ಯಯ ಅನುದಾನ, ವೆಚ್ಚಗಳ ಕುರಿತು ಮುಖ್ಯಮಂತ್ರಿ ಚರ್ಚಿಸಿದರು.

ನೀರಾವರಿ ಯೋಜನೆಗಳಡಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದೊಂದಿಗೆ ತ್ವರಿತವಾಗಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಗ್ರಾಮಗಳ ಸಮೀಪದಲ್ಲಿ ಹಾದುಹೋಗುವ ನದಿಗಳ ಪಾತ್ರಗಳ ಬಳಿ ತಡೆಗೋಡೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು.  ಕೃಷಿಹೊಂಡ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಂದ ಅಂತರ್ ಜಲ ವೃದ್ಧಿಯಾಗುವುದರ ಜೊತೆಗೆ ರೈತರಿಗೆ ಅನುಕೂಲವಾಗುತ್ತದೆ. ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುμÁ್ಠನಗೊಳಿಸಬೇಕು ಎಂದು ಸೂಚಿಸಿದರು.

ಕೃಷ್ಣ ಮೇಲ್ದಂಡೆ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಯುಕೆಪಿಗೆ ಪೂರ್ಣ ಪ್ರಮಾಣದಲ್ಲಿ ಆಯುಕ್ತರನ್ನು ನೇಮಕ ಮಾಡಬೇಕು. ವಿಶೇಷ ಭೂಸ್ವಾಧೀನ ಅಧಿಕಾರಿಗಳನ್ನು ನೇಮಕ ಮಾಡಿ, ಭೂಸ್ವಾಧೀನ ಪ್ರಕ್ರಿಯೆಯು ತ್ವರಿತವಾಗಿ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಗಮನ ನೀಡಬೇಕು ಎಂದು ಅವರು ಮುಖ್ಯಮಂತ್ರಿಗೆ ಕೋರಿದರು.

ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಎನ್. ಲಕ್ಷಣರಾವ್ ಪೇಶ್ವೆ, ಯುಕೆಪಿಯ ಪುನರ್ ವಸತಿ ಮತ್ತು ನಿರ್ಮಾಣ ಯೋಜನೆಯ ಆಯುಕ್ತ ಶಿವಯೋಗಿ ಕಳಸದ ಯೋಜನೆಗಳ ಬಗ್ಗೆ ವಿವರಿಸಿದರು.

ಸಭೆಯಲ್ಲಿ ಆರ್ಥಿಕ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಐಎಸ್‍ಎಸ್ ಪ್ರಸಾದ್, ಕೆಎನ್‍ಎನೆಲ್ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜೈಪ್ರಕಾಶ್, ಕೆಬಿಜೆಎನ್‍ಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ ಚಿಣಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಸಚಿವರ ಆಪ್ತಕಾರ್ಯದರ್ಶಿ ವಿ.ಶ್ರೀನಿವಾಸ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News