ಶಾಸಕ ಸತೀಶ್ ರೆಡ್ಡಿ ಮನೆಗೆ ಭೇಟಿ ನೀಡಿದ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ
ಬೆಂಗಳೂರು, ಆ.12: ಶಾಸಕ ಸತೀಶ್ ರೆಡ್ಡಿ ಅವರ ಮನೆಗೆ ನುಗ್ಗಿ ದುಷ್ಕರ್ಮಿಗಳು ಕಾರುಗಳಿಗೆ ಬೆಂಕಿ ಹಚ್ಚಿರುವ ಘಟನೆ ಖಂಡನೀಯ. ಇದು ವ್ಯವಸ್ಥಿತವಾಗಿ ಶಾಸಕರನ್ನೇ ಗುರಿಯಾಗಿಸಿಕೊಂಡು ನಡೆಸಿರುವ ದಾಳಿಯಾಗಿದೆ. ಬೆಂಕಿಯನ್ನು ಮನೆಗೆ ಹಬ್ಬಿಸುವ ಪೂರ್ವಯೋಜಿತ ಷಡ್ಯಂತ್ರದಂತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಗುರುವಾರ ಬೊಮ್ಮಸಂದ್ರದ ಹೊಂಗಸಂದ್ರದಲ್ಲಿರುವ ಸತೀಶ್ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೃತ್ಯದ ಮೂಲವನ್ನು ಹಾಗೂ ಘಟನೆ ಹಿಂದೆ ಯಾರಿದ್ದಾರೆ ಎಂಬುದನ್ನು ಪೊಲೀಸರು ಬಯಲಿಗೆ ಎಳೆಯಲಿದ್ದಾರೆ. ಈಗಾಗಲೇ ತನಿಖೆ ನಡೆಯುತ್ತಿದೆ ಎಂದರು.
ವೈಯಕ್ತಿಕವಾಗಿ ಈ ಘಟನೆ ನನಗೆ ಆಘಾತ ಉಂಟು ಮಾಡಿದೆ. ಸತೀಶ್ ರೆಡ್ಡಿ ಅವರು ಕ್ಷೇತ್ರದಲ್ಲಿ ಬಹಳ ಉತ್ತಮವಾಗಿ ಕೆಲಸ ಮಾಡುತ್ತಾ ಜನಾನುರಾಗಿ ಆಗಿದ್ದಾರೆ. ಅಜಾತಶತ್ರುವೂ ಹೌದು. ಇಂಥ ವ್ಯಕ್ತಿಯ ಮೇಲೆ, ಅದರಲ್ಲೂ ಕುಟುಂಬ ಸದಸ್ಯರು ವಾಸ ಮಾಡುವ ಜಾಗದಲ್ಲಿ ಬೆಂಕಿ ಹಚ್ಚಿರುವುದು ಖಂಡನೀಯ. ಮನುಷ್ಯತ್ವ ಇಲ್ಲದ ಕೃತ್ಯ ಇದಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಸತೀಶ್ ರೆಡ್ಡಿ, ಸ್ಥಳೀಯ ಬಿಜೆಪಿ ಮುಖಂಡರು ಇದ್ದರು.