ಬಿಬಿಎಂಪಿ: ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಆ.16ರಿಂದ ಮನೆ ಮನೆ ಆರೋಗ್ಯ ಸಮೀಕ್ಷೆ

Update: 2021-08-14 13:19 GMT

ಬೆಂಗಳೂರು, ಆ.14: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ 3ನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಆ.16ರಿಂದ ಪ್ರತಿ ಮನೆಗೂ ತೆರಳಿ ಆರೋಗ್ಯ ಸಮೀಕ್ಷೆ ನಡೆಸುವಂತೆ ಬಿಬಿಎಂಪಿ ಆದೇಶಿಸಿದೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಬಿಬಿಎಂಪಿ, ವೈದ್ಯರ ನಡೆ ನಿಮ್ಮ ಮನೆ ಬಾಗಿಲಿಗೆ ಎಂಬ ಘೋಷ ವಾಕ್ಯದಡಿ ಸೋಂಕು ತಡೆಗೆ ಪಾಲಿಕೆಯ ವೈದ್ಯರ ತಂಡ ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸಬೇಕು ಎಂದು ಸೂಚಿಸಲಾಗಿದೆ.
ವೈದ್ಯರ ತಂಡದಲ್ಲಿ ಒಬ್ಬ ವೈದ್ಯರು, ಒಬ್ಬ ಅರೆ ವೈದ್ಯ, ಸಿಬ್ಬಂದಿಗಳು ಇರಲಿದ್ದು, ಕೋವಿಡ್ ಗುಣಲಕ್ಷಣಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಮೊದಲ ಹಂತದಲ್ಲಿ ಬಿಬಿಎಂಪಿಯ 54 ವಾರ್ಡ್‍ಗಳಲ್ಲಿ ಈ ಸಮೀಕ್ಷೆ ನಡೆಯಲಿದ್ದು, ಪ್ರಮುಖವಾಗಿ ಪ್ರತಿ ವಿಧಾನಸಭಾ ಕ್ಷೇತ್ರವಾರು 2 ವಾರ್ಡ್‍ಗಳನ್ನು ಗುರುತಿಸಿ, ಅಭಿಯಾನಕ್ಕೆ ಚಾಲನೆ ನೀಡಬೇಕು. ಪ್ರತೀ ತಂಡ ಪ್ರತೀ ನಿತ್ಯ ಕನಿಷ್ಠ 50 ಮನೆಗಳ ಸಮೀಕ್ಷೆ ನಡೆಸಬೇಕೆಂದು ತಿಳಿಸಲಾಗಿದೆ.
ಪ್ರತಿ ವಾರ್ಡ್‍ಗೆ 5 ತಂಡ ಅಥವಾ 5ಕ್ಕಿಂತ ಹೆಚ್ಚಿನ ತಂಡಗಳನ್ನು ಅಗತ್ಯಕ್ಕನುಗುಣವಾಗಿ ನಿಯೋಜಿಸಬೇಕು. ಪ್ರತಿ ತಂಡದಲ್ಲಿ ಒಬ್ಬ ವೈದ್ಯಾಧಿಕಾರಿ (ಎಂಬಿಬಿಎಸ್, ಬಿಡಿಎಸ್, ಆಯುಷ್) ಮತ್ತು ಒಬ್ಬ ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಬಿಬಿಎಂಪಿ ತಿಳಿಸಿದೆ. 

ಸುತ್ತೋಲೆಯ ಮುಖ್ಯಾಂಶಗಳು
►ಕೋವಿಡ್-19 ಸೋಂಕು ನಿಯಂತ್ರಣ ಸಲುವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಹೆಚ್ಚುವರಿ ವೈದ್ಯಾಧಿಕಾರಿಗಳನ್ನು ನಿಯೋಜಿಸಬೇಕು.
►ಹೆಚ್ಚಿನ ವೈದ್ಯಾಧಿಕಾರಿಗಳ ಅವಶ್ಯವಿದ್ದಲ್ಲಿ ಕೋವಿಡ್-19 ಮಾನವ ಸಂಪನ್ಮೂಲ ವೇತನ ಮಾರ್ಗಸೂಚಿಯನ್ವಯ ಸಮೀಕ್ಷೆ ಅವಧಿಗೆ ಅನ್ವಯವಾಗುವಂತೆ ನೇರವಾಗಿ ನೇಮಕ ಮಾಡಿಕೊಳ್ಳುವುದು.
►ಪ್ರತಿ ತಂಡದ ವೈದ್ಯಾಧಿಕಾರಿಗಳು ''ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ'', ''ನಿಮ್ಮ ಆರೋಗ್ಯವೇ ನಮ್ಮ ಧ್ಯೇಯ'’ ಎಂಬ ಘೋಷಣೆಯನ್ನು ಮುದ್ರಿಸಿರುವ ಬಿಳಿ ಬಣ್ಣದ ಏಪ್ರಾನ್ ಕಡ್ಡಾಯವಾಗಿ ಧರಿಸಬೇಕು.
►ಪ್ರತಿ ವೈದ್ಯರ ತಂಡಕ್ಕೆ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಸ್ಟೆಥಾಸ್ಕೋಪ್, ಪಲ್ಸ್ ಆಕ್ಸಿಮೀಟರ್, ಎನ್-95 ಮಾಸ್ಕ್, ಸರ್ಜಿಕಲ್ ಗ್ಲೌಸ್, ಸ್ಯಾನಿಟೈಸರ್ 500 ಎಂ.ಎಲ್ ಲಭ್ಯವಿರುವಂತೆ ಕ್ರಮವಹಿಸುವುದು ಕಡ್ಡಾಯವಾಗಿದೆ.
►ಮನೆ ಭೇಟಿಯ ಸಮಯದಲ್ಲಿ ಕೋವಿಡ್ 19 ಸೋಂಕಿತರು ಪತ್ತೆಯಾದಲ್ಲಿ, ಸೋಂಕಿತರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಹೋಂ ಐಸೋಲೇಷನ್ ಕಿಟ್‍ನ್ನು ನೀಡುವುದು. ಸಮೀಕ್ಷೆಯನ್ನು ಸಮರ್ಪಕವಾಗಿ ನಡೆಸಿ, 2 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕು.
►ಸಮೀಕ್ಷೆಯ ಮಾಹಿತಿಯನ್ನು ಸಭೆಯಲ್ಲಿ ತರಬೇತಿ ನೀಡಿರುವಂತೆ ಪ್ರತೀ ದಿನ ನಿಗದಿತ ತಂತ್ರಾಂಶದಲ್ಲಿ ನಮೂದಿಸಬೇಕು ಎಂದು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News