ಕೆಎಸ್‍ಆರ್ಪಿ ಸಿಬ್ಬಂದಿಗೆ ಸಿವಿಲ್‍ನಲ್ಲಿ ಅವಕಾಶ
ಬೆಂಗಳೂರು, ಆ.14: ಕೆಎಸ್‍ಆರ್ಪಿಯಲ್ಲಿ ಐದು ವರ್ಷಗಳ ಕಾಲ ಸೇವೆ ಪೂರ್ಣಗೊಳಿಸುವ ಸಿಬ್ಬಂದಿಗೆ ಸಿವಿಲ್ ವಿಭಾಗದಲ್ಲೂ ಕರ್ತವ್ಯ ನಿರ್ವಹಿಸುವ ಅವಕಾಶ ದೊರೆಯಲಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಶನಿವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಕೆಎಸ್‍ಆರ್ಪಿ ವತಿಯಿಂದ 75ನೆ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಐಕ್ಯತೆ ಮತ್ತು ದೈಹಿಕ ಸದೃಢತೆಗಾಗಿ ಸ್ವಾತಂತ್ರ್ಯ ಓಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೊಲೀಸ್ ಸಿಬ್ಬಂದಿಗಳ ಬಹುದಿನಗಳ ಬೇಡಿಕೆಯಂತೆ ಕೆಎಸ್‍ಆರ್ಪಿ, ಸಿಎಆರ್ ಹಾಗೂ ಡಿಎಆರ್ ವಿಭಾಗದಲ್ಲಿ 5 ವರ್ಷ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗಳು ಇನ್ನು ಮುಂದೆ ಸಿವಿಲ್ ವಿಭಾಗದಲ್ಲೂ ಕಾರ್ಯ ನಿರ್ವಹಿಸುವಂತೆ ಈಗಿರುವ ನಿಯಮಗಳಿಗೆ ತಿದ್ದುಪಡಿ ಮಾಡಲಾಗುವುದು ಎಂದು ಹೇಳಿದರು.
ಅಲ್ಲದೆ, ಸಿವಿಲ್ ವಿಭಾಗಕ್ಕೆ ತಮ್ಮನ್ನು ಪರಿಗಣಿಸುವಂತೆ ಸಿಬ್ಬಂದಿಗಳು ಹಲವಾರು ವರ್ಷಗಳಿಂದ ಮನವಿ ಮಾಡಿದ್ದರು. ಹೀಗಾಗಿ ಅವರ ಮನವಿಗೆ ಸ್ಪಂದಿಸಿ ಸರಕಾರ ಈ ತೀರ್ಮಾನವನ್ನು ಕೈಗೊಂಡಿದೆ ಎಂದ ಅವರು, ಇನ್ನು ಮುಂದೆ ಪೊಲೀಸರ ನೇಮಕಾತಿಯಲ್ಲಿ ಕ್ರೀಡಾ ವಿಭಾಗಕ್ಕೆ ಶೇ.2ರಷ್ಟು ಕೋಟಾವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಸಿವಿಲ್ ಪೊಲೀಸ್, ವೈರ್‍ಲೆಸ್ ಫಿಂಗರ್ ಪ್ರಿಂಟ್ ಸೇರಿ ಇತರೆ ಸಿಬ್ಬಂದಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ನೇಮಕ ಮಾಡಿಕೊಳ್ಳಲಾಗುವುದು. ಎಲ್ಲ ಪ್ರಕ್ರಿಯೆಗಳು ಕೆಎಸ್‍ಆರ್ಪಿ ಅಡಿಯಲ್ಲೇ ನಡೆಯಲಿವೆ ಎಂದು ಪ್ರವೀಣ್ ಸೂದ್ ತಿಳಿಸಿದರು.