ಕಾರುಗಳಿಗೆ ಬೆಂಕಿ ಪ್ರಕರಣ: ಸೂತ್ರಧಾರನ ಸುಳಿವು ನೀಡಿದ ಶಾಸಕ ಸತೀಶ್ ರೆಡ್ಡಿ

Update: 2021-08-14 18:09 GMT

ಬೆಂಗಳೂರು, ಆ.14: ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣ ಸಂಬಂಧ ಬಂಧಿತರ ಹಿಂದೆ ಒಬ್ಬ ಸೂತ್ರಧಾರನಿದ್ದಾನೆ ಎಂದು ಶಾಸಕ ಸತೀಶ್ ರೆಡ್ಡಿ ಅವರು ತಿಳಿಸಿದ್ದಾರೆ.

ಶನಿವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧಿತರಾದ ಮೂವರಲ್ಲಿ ಒಬ್ಬ ಮದ್ಯ ಸೇವನೆ ಮಾಡಿದ್ದ, ಮತ್ತೋರ್ವ ಮಾದಕ ವ್ಯಸನಿ. ಇವರೆಲ್ಲ ಕೇಬಲ್ ಕೆಲಸಗಾರರಾಗಿದ್ದು, ಇದರ ಹಿಂದೆ ಒಬ್ಬ ಸೂತ್ರಧಾರನಿದ್ದಾನೆ ಎಂದು ಹೇಳಿದರು.

ಘಟನೆ ನಡೆದ 48 ಗಂಟೆಯಲ್ಲಿ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿ ತನಿಖೆ ನಡೆಸಿದ್ದಾರೆ. ನಾನು ಯಾರಿಗೂ ವೈಯಕ್ತಿಕವಾಗಿ ತೊಂದರೆ ಮಾಡಿಲ್ಲ. ಬಂಧಿಸಿರುವ ಮೂವರ ವಿರುದ್ಧ ಪೊಲೀಸ್ ಠಾಣೆಗೆ ಈ ಹಿಂದೆ ಯಾವತ್ತೂ ದೂರು ಕೊಟ್ಟಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಆರೋಪಿಗಳು ನನ್ನನ್ನು ಭೇಟಿಯಾಗಲು ರಾತ್ರಿ ಸುಮಾರು 9 ರಿಂದ 10 ಗಂಟೆ ಸಮಯದಲ್ಲಿ ಪ್ರಯತ್ನಿಸಿದ್ದಾರೆ. ಜನರು ಇರುವ ವೇಳೆ ಅವರು ಭೇಟಿಗೆ ಪ್ರಯತ್ನಿಸಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಪ್ರಕರಣ ಸಂಬಂಧಿಸಿದಂತೆ ಇನ್ನೂ ತನಿಖೆ ಮುಂದುವರೆದಿದೆ. ಬಂಧಿತರಲ್ಲಿ ಒಬ್ಬ ನೇಪಾಳಿ ಇದ್ದಾನೆ ಎಂದು ತಿಳಿಸಿದರು.

ಪ್ರಕರಣದಲ್ಲಿ ಬಂಧಿತರು ಕೇವಲ ಪಾತ್ರಧಾರಿಗಳು ಅಷ್ಟೇ ಸೂತ್ರಧಾರ ಬೇರೆ ಇದ್ದಾನೆ. ನನ್ನ ಬಳಿ ಸಾಕಷ್ಟು ಮಾಹಿತಿ ಇದ್ದು ಅದನ್ನು ಗೃಹ ಸಚಿವರಿಗೆ ತಿಳಿಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News