ಇನ್ನೊಂದು ವಿಭಜನೆಯ ಬೀಜ ಬಿತ್ತದಂತೆ ನೋಡಿಕೊಳ್ಳಿ: ಪ್ರಧಾನಿಗೆ ಶಿವಸೇನೆ ಕರೆ

Update: 2021-08-16 11:05 GMT

ಮುಂಬೈ: ಇನ್ನು ಮುಂದೆ ಆಗಸ್ಟ್ 14ರಂದು ವಿಭಜನೆಯ ಕರಾಳ ನೆನಪಿನ ದಿನವೆಂದು ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನೀಡಿರುವ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಶಿವಸೇನೆ, ಕೇವಲ ಸಾಂಕೇತಿಕ ಆಚರಣೆಯಿಂದ ವಿಭಜನೆಯ ನೋವು ಮರೆಯಾಗುವುದಿಲ್ಲ ಎಂದು ಹೇಳಿದೆ.

"ಹಿಂದಿನ ನೋವಿನಿಂದ ಇನ್ನೊಂದು ವಿಭಜನೆಯ ಬೀಜಗಳನ್ನು ಬಿತ್ತದಂತೆ ಈಗಿನ ಆಡಳಿತಗಾರರು ನೋಡಿಕೊಳ್ಳಬೇಕು" ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿನ ಸಂಪಾದಕೀಯದಲ್ಲಿ ಬರೆದಿದೆ. "ದೇಶವಿಭಜನೆಯ ನೋವು ಈಗಲೂ 75 ವರ್ಷಗಳ ನಂತರವೂ ಉಳಿದಿದೆ ಹಾಗೂ ನಾಯಕರ ಪೈಕಿ ಬಿಜೆಪಿಯ ಎಲ್ ಕೆ ಅಡ್ವಾಣಿ ಅವರೊಬ್ಬರೇ ಅದಕ್ಕೆ ಸಾಕ್ಷಿಯಾಗಿದ್ದಾರೆ" ಎಂದು ಬರೆದಿದೆ.

"ದೇಶವಿಭಜನೆಯ ನೋವು ಕೇವಲ ಸಾಂಕೇತಿಕ ಆಚರಣೆಯಿಂದ ಹೋಗದು, ಬದಲು ನಿರ್ದಿಷ್ಟ ಕ್ರಮದ ಅಗತ್ಯವಿದೆ. ಎರಡು ದೇಶಗಳು ವಿಭಜನೆಯಾದಂತೆ ಹೃದಯಗಳೂ ಒಡೆದಿವೆ. ಮಾಜಿ ಪ್ರಧಾನಿ ವಾಜಪೇಯಿ ಅವರು ಮತ್ತೆ ಸ್ನೇಹ ಸೇತು ಮೂಡಿಸಲು ಲಾಹೋರ್ ತನಕ ಬಸ್ ಸೇವೆಯನ್ನು ಆರಂಭಿಸಿದ್ದರು. ನರೇಂದ್ರ ಮೋದಿ ಕೂಡ ಪಾಕಿಸ್ತಾನದ ಆಗಿನ ಪ್ರಧಾನಿ ನವಾಝ್ ಶರೀಫ್ ಅವರನ್ನು ದಿಢೀರ್ ಭೇಟಿಯಾಗಲು  ತೆರಳಿದ್ದರು. ಅವರು ಕೂಡ ಹಿಂದಿನದನ್ನು ಮರೆತು ಶಾಂತಿ ಬಯಸಿದ್ದರು. ಆದರೆ ಇದೀಗ ಹಳೆಯ ಗಾಯವನ್ನು ಅವರು  ಕೆದಕಿದ್ದಾರೆ" ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.

"ಹಿಂದಿನ ಕರಾಳ ನೆನಪುಗಳನ್ನು ಮತ್ತೆ ಮೆಲುಕು ಹಾಕುವ ಬದಲು  ಅವುಗಳನ್ನು ಖಾಯಂ ಆಗಿ ಹೂತು ಹಾಕಿ ಆ ಗಾಯಗಳನ್ನು ಮಾಡಿದವರಿಗೆ ಸೂಕ್ತ ಪಾಠ ಕಲಿಸಿದರೆ ಉತ್ತಮವಿತ್ತು" ಎಂದು ಸಂಪಾದಕೀಯದಲ್ಲಿ ಅಭಿಪ್ರಾಯ ಪಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News