ಬೆಂಗಳೂರು: ನಾವಿನ್ಯತೆ-ಅಭಿವೃದ್ಧಿ ಕೇಂದ್ರಕ್ಕೆ ಉಪ ರಾಷ್ಟ್ರಪತಿಗಳಿಂದ ಚಾಲನೆ
ಬೆಂಗಳೂರು, ಆ. 16: `ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿದೆ. ದೇಶದ ಬೆನ್ನೆಲುಬಾಗಿರುವ ಕೃಷಿ ವಲಯಕ್ಕೆ ಆದ್ಯತೆ ನೀಡುವ ಮೂಲಕ ರೈತರ ಅಭಿವೃದ್ಧಿಗೆ ಪೂರಕವಾದ ಕೃಷಿ ಸಂಶೋಧನೆಯನ್ನು ವಿಜ್ಞಾನಿಗಳು ಕೈಗೊಳ್ಳಬೇಕು' ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಂದಿಲ್ಲಿ ಸಲಹೆ ನೀಡಿದ್ದಾರೆ.
ಸೋಮವಾರ ಇಲ್ಲಿನ ಜಕ್ಕೂರಿನಲ್ಲಿರುವ ಜವಾಹರಲಾಲ್ ನೆಹರೂ ಅನ್ವಯಿಕ ವೈಜ್ಞಾನಿಕ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿ, ನಾವಿನ್ಯತೆ ಮತ್ತು ಅಭಿವೃದ್ಧಿ ಕೇಂದ್ರ ನಿರ್ಮಾಣಕ್ಕೆ ಶಿಲನ್ಯಾಸ ನೇರವೇರಿಸಿ ಮಾತನಾಡಿದ ಅವರು, ಇಂದು ಸಂಶೋಧಕರೊಂದಿಗೆ ಸಂವಹನ ನಡೆಸುತ್ತಿರುವುದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ ಎಂದು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮೊದಲಿಗೆ ಕನ್ನಡ ಭಾಷೆಯಲ್ಲಿ ಪ್ರಾರಂಭಿಕ ನುಡಿಗಳನ್ನಾಡಿದ ಉಪರಾಷ್ಟ್ರಪತಿಗಳು, ತನ್ನದೇ ಗುರುತರ ಕೆಲಸಗಳ ಮೂಲಕ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸೆಂಟರ್ ಜಾಗತಿಕವಾಗಿ ಗುರುತಿಸಿಕೊಂಡಿದೆ. ಈ ಸಂಸ್ಥೆಯು 300 ಪೇಟೆಂಟ್‍ಗಳನ್ನು ತನ್ನದಾಗಿಸಿಕೊಂಡಿದೆಯಲ್ಲದೇ ಗಮನಾರ್ಹ ವೈಜ್ಞಾನಿಕ ಸಂಶೋಧನೆಗಳಿಂದ ಹೆಸರು ಮಾಡಿದೆ. ಕೃಷಿ ಕ್ಷೇತ್ರಕ್ಕೂ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದು ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸೆಂಟರ್‍ನ ಸಾಧನೆಗಳನ್ನು ಕೊಂಡಾಡಿದರು.
ಭಾರತದ ಕೃಷಿ ವಿಶ್ವಾದ್ಯಂತ ಹೆಸರುವಾಸಿ, ಅಂತಹ ಕೃಷಿ ವಲಯವನ್ನು ಅಭಿವೃದ್ಧಿ ಪಡಿಸುವುದು ಎಲ್ಲರ ಜವಾಬ್ದಾರಿಯಾಗಿರುತ್ತದೆ. ಕೃಷಿಯಲ್ಲಿ ವಿವಿಧ ಸಂಶೋಧನೆಗಳನ್ನು ನಡೆಸಿ ರೈತರಿಗೆ ನೆರವಾಗಬೇಕು. ಕೃಷಿ ಆಧಾರಿತ ತಂತ್ರಜ್ಞಾನದ ಅಭಿವೃದ್ಧಿ, ಯುವಪೀಳಿಗೆಗೆ ವೈಜ್ಞಾನಿಕ ಮನೋಭಾವ ಬಿತ್ತುವ ಜೊತೆಗೆ ಸಮಾಜದ ಒಳಿತಿಗಾಗಿ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಬೇಕು ಎಂದು ವೆಂಕಯ್ಯ ನಾಯ್ಡು ಅವರು ಸಲಹೆ ನೀಡಿದರು.
ಬೆಂಗಳೂರು ಅನೇಕ ಕೆರೆ ಕುಂಟೆಗಳ ತಾಣವಾಗಿದ್ದು, ಸರಕಾರ ಕೆರೆಗಳ ಶುಚಿತ್ವ ಮತ್ತು ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಬೇಕು ಎಂದ ಅವರು, ಭಾರತದ ಅಭಿವೃದ್ಧಿ ಭವಿಷ್ಯದ ಪೀಳಿಗೆಯ ಮೇಲಿದೆ. ಕಠಿಣ ಪರಿಶ್ರಮ ಹಾಗೂ ಶಿಸ್ತಿನಿಂದ ಏನನ್ನಾದರೂ ಸಾಧನೆ ಮಾಡಬಹುದು ಎಂಬುದನ್ನು ಅರಿತು ಯುವಪೀಳಿಗೆ ಮುನ್ನಡೆಯಬೇಕು ಎಂದು ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ಕರ್ನಾಟಕ ಅನೇಕ ವಿಚಾರಗಳಲ್ಲಿ ದೇಶಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ, ಕರ್ನಾಟಕ ರಾಜ್ಯವೂ ಪ್ರಗತಿಶೀಲ, ತಂತ್ರಜ್ಞಾನ ಹಾಗೂ ಪವಿತ್ರತೆಯ ನೆಲೆಯಾಗಿರುವುದರ ಜೊತೆಗೆ ಸಮಾನತೆ ಸಾರಿದ ಬಸವಣ್ಣ, ಸಾಧು ಸಂತರು ಸೇರಿದಂತೆ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರು ಜನಿಸಿದಂತಹ ತಾಯ್ನಾಡಾಗಿದೆ. ಈ ನಮ್ಮ ಧೀನ ಮಹನೀಯರು ಕಟ್ಟಿದಂತಹ ಕನಸನ್ನು ನನಸು ಮಾಡಲು ಮುಂದಾಗಿರುವ ಯುವ ವಿಜ್ಞಾನಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಸಮಾರಂಭದಲ್ಲಿ ಭಾರತ ರತ್ನ ಸಿಎನ್‍ಆರ್ ರಾವ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಜವಾಹರಲಾಲ್ ನೆಹರು ಅನ್ವಯಿಕ ವೈಜ್ಞಾನಿಕ ಸಂಶೋಧನ ಸಂಸ್ಥೆಯ ಕುಲಪತಿ ಜಿ.ಯು.ಕುಲಕರ್ಣಿ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ದಿಲ್ಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರಿನ ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವ ಡಾ.ಅಶ್ವಥ್ ನಾರಾಯಣ್, ಸಂಸದ ಪಿ.ಸಿ.ಮೋಹನ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.