ಕೇಂದ್ರ ಸಚಿವ ನಾರಾಯಣಸ್ವಾಮಿಯನ್ನು ಸ್ವಾಗತಿಸುವ ವೇಳೆ ಅವಘಡ: ಪೊಲೀಸ್ ಸಿಬ್ಬಂದಿ ಮೇಲೆ ಹರಿದ ಜೀಪ್
Update: 2021-08-16 21:22 IST
ಬೆಂಗಳೂರು, ಆ.16: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಸ್ವಾಗತಿಸುವ ಭರದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಜೀಪ್ ಹರಿದಿದೆ ಎಂದು ತಿಳಿದುಬಂದಿದೆ.
ಸೋಮವಾರ ದೇವನಹಳ್ಳಿ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಆಗಮಿಸಿದರು. ಆದರೆ, ಕೇಂದ್ರ ಸಚಿವರನ್ನು ಸ್ವಾಗತಿಸಲು ಅಪಾರ ಅಭಿಮಾನ ಬಳಗ ಜಮಾಯಿಸಿತ್ತು ಎನ್ನಲಾಗಿದೆ.
ತದನಂತರ, ಎ.ನಾರಾಯಣಸ್ವಾಮಿ ಅವರನ್ನು ಮೆರವಣಿಗೆ ಮೂಲಕ ಕರೆತರಲಾಗುತ್ತಿತ್ತು. ಈ ವೇಳೆ, ತೆರೆದ ಜೀಪ್ ಬಳಿ ಜನ ಮುತ್ತಿಕೊಳ್ಳಲು ಪ್ರಯತ್ನಿಸಿದ್ದರು. ಅವರನ್ನು ನಿಯಂತ್ರಣ ಮಾಡಲು ಮುಂದಾದ ಚಿಕ್ಕಜಾಲ ಪೊಲಿಸ್ ಠಾಣೆಯ ಸಿಬ್ಬಂದಿ ಶಿವಕುಮಾರ್ ಮೇಲೆ ಜೀಪ್ ಹರಿದಿದೆ ಎಂದು ಹೇಳಲಾಗುತ್ತಿದೆ.
ಘಟನೆಯಲ್ಲಿ ಅವರು ಗಾಯಗೊಂಡಿದ್ದು, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.