ಹೆಬ್ಬಾಳ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಆ.17: ಹೆಬ್ಬಾಳ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರ ನಿಯೋಗವನ್ನು ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ರಾಜ್ಯದ ಪ್ರಗತಿಗೆ ಇನ್ನಷ್ಟು ವೇಗ ತರುವ ನಿಟ್ಟಿನಲ್ಲಿ ಸರಕಾರದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಕೈಗೊಳ್ಳುತ್ತಿದ್ದೇನೆ. ಉತ್ತಮ ಮೂಲಭೂತ ಸೌಕರ್ಯಗಳು ಆರ್ಥಿಕ ಚಟುವಟಿಕೆಗೆ ಇಂಬು ನೀಡುತ್ತದೆ. ಬಡವರ ಆರ್ಥಿಕ ಸಾಮಾಜಿಕ ಸ್ಥಿತಿ ಸುಧಾರಣೆಯಾಗಬೇಕಿದೆ. ಈ ನಿಟ್ಟಿನಲ್ಲಿ ನಾನು ಕೆಲಸ ಪ್ರಾರಂಭಿಸಿದ್ದೇನೆ ಎಂದು ಅವರು ಹೇಳಿದರು.
‘ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಮಾಡಿದ ಘೋಷಣೆಗಳ ಅನುಷ್ಠಾನಕ್ಕೆ ಮುಖ್ಯ ಕಾರ್ಯದರ್ಶಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಕೆಲವೇ ದಿನಗಳಲ್ಲಿ ನಮ್ಮ ಸರಕಾರ ಮಾಡುತ್ತಿರುವ ಕೆಲಸ ಜನರನ್ನು ತಲುಪುವ ರೀತಿಯಲ್ಲಿ ಅಧಿಕಾರಿ ವರ್ಗ ಕೆಲಸ ಮಾಡಬೇಕು ಎಂದು ಈಗಾಗಲೇ ಆದೇಶ ಕೊಟ್ಟಿದ್ದೇನೆ' ಎಂದು ಮುಖ್ಯಮಂತ್ರಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಮೊದಲಾದವರು ಉಪಸ್ಥಿತರಿದ್ದರು.