×
Ad

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಮಕ್ಕಳಲ್ಲಿ ಏರಿಕೆಯಿಲ್ಲ: ರಂದೀಪ್

Update: 2021-08-17 22:00 IST

ಬೆಂಗಳೂರು, ಆ.17: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೊಂಕು ಪ್ರಮಾಣ ಮಕ್ಕಳಲ್ಲಿ ಯಾವುದೇ ಏರಿಕೆಯಿಲ್ಲ. ಬಹುತೇಕ ಮಕ್ಕಳಲ್ಲಿ ಸೌಮ್ಯ ಮತ್ತು ಮಧ್ಯಮ ಲಕ್ಷಣಗಳು ಮಾತ್ರ ಕಂಡುಬರುತ್ತಿದ್ದು, ಮನೆಯಲ್ಲೇ ಗುಣಮುಖರಾಗುತ್ತಿದ್ದಾರೆಂದು ಬಿಬಿಎಂಪಿ ವಿಶೇಷ ಆಯುಕ್ತ(ಆರೋಗ್ಯ)  ರಂದೀಪ್ ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ತಡೆಯುವ ಸಲುವಾಗಿ ಡಾ. ಬಾಬು ಜಗಜೀವನ್ ರಾಮ್ ಸಾರ್ವಜನಿಕ ಆಸ್ಪತ್ರೆಗೆ ಶಿಲ್ಪ ಸಿಂಗ್ ಮತ್ತು ಪಾರಿಸಾಸಿಂಗ್‍ರವರಿಂದ ವೈದ್ಯಕೀಯ ಉಪಕರಣ(ಮಕ್ಕಳ ಸೌಲಭ್ಯಗಳ ಉಪಯೋಗಕ್ಕಾಗಿ)ಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.

ಕೋವಿಡ್ ಪ್ರಕರಣದಲ್ಲಿ ಆಸ್ಪತ್ರೆಯಲ್ಲಿ ದಾಖಲಾದವರ ಮಕ್ಕಳ ಸಂಖ್ಯೆ ತೀರಾ ಕಡಿಮೆಯಿದೆ. ಈ ಸಂಬಂಧ ಈಗಾಗಲೇ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಮಾರ್ಗಸೂಚಿ ಹೊರಡಿಸಲಾಗಿದ್ದು, ಮಕ್ಕಳ ಮೇಲೆ ನಿಗಾವಹಿಸಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ಸಮಯದಲ್ಲಿ ಡಾ.ಜಗಜೀವನ್ ರಾಮ್ ಆಸ್ಪತ್ರೆಯಲ್ಲಿ ಫೀವರ್ ಕ್ಲೀನಿಕ್, ಟ್ರಯಾಜ್ ಸೆಂಟರ್ ಅನ್ನು ಪ್ರಾರಂಭಿಸಲಾಗಿತ್ತು. ಇದೀಗ 30 ಹಾಸಿಗೆ ಸಾಮಥ್ರ್ಯದ ಮಕ್ಕಳ ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅದರಲ್ಲಿ 2 ಐಸಿಯು ಹಾಸಿಗೆ, 8 ಎಚ್.ಡಿ.ಯು ಹಾಸಿಗೆ, 20 ಆಮ್ಲಜನಕಯುಕ್ತ ಹಾಸಿಗೆಗಳ ವ್ಯವಸ್ಥೆಯಿದ್ದು, ಸೌಮ್ಯ ಮತ್ತು ಮಧ್ಯಮ ಕೋವಿಡ್ ಸೋಂಕು ಲಕ್ಷಣಗಳಿರುವ ಮಕ್ಕಳಿಗೆ ಚಿಕಿತ್ಸೆ ನೀಡಲಾಗುವುದೆಂದು ಅವರು ಮಾಹಿತಿ ನೀಡಿದ್ದಾರೆ. 

ಮಕ್ಕಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಇಂದಿರಾ ಗಾಂಧಿ ಆಸ್ಪತ್ರೆಯ ಮಕ್ಕಳ ತಜ್ಞರಿಂದ ಪಾಲಿಕೆಯ ಮಕ್ಕಳ ವೈದ್ಯರು, ನರ್ಸಿಂಗ್ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಜಗಜೀವನ್ ರಾಮ್ ಆಸ್ಪತ್ರೆಯಲ್ಲಿ ಆದ್ಯತೆ ಮೇರೆಗೆ ಮಕ್ಕಳಿಗೆ ಚಿಕಿತ್ಸೆ ನೀಡಲಾಗುವುದು. ಗಂಭೀರ ಪರಿಣಾಮ ಬೀರಿದರೂ ಚಿಕಿತ್ಸೆ ನೀಡುವ ವ್ಯವಸ್ಥೆಯಿದ್ದು, ತುಂಬಾ ಗಂಭೀರವಾದಲ್ಲಿ ಉತ್ತಮ ಚಿಕಿತ್ಸೆ ವ್ಯವಸ್ಥೆಯಿರುವ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಶಿಲ್ಪ ಸಿಂಗ್ ಮತ್ತು ಪಾರಿಸಾಸಿಂಗ್ ಕೋವಿಡ್ ಚಿಕಿತ್ಸೆಗೆ ಅನುಕೂಲವಾಗುವ ದೃಷ್ಟಿಯಿಂದ ಡಾ.ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ 5 ಲಕ್ಷ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ನೀಡಿದ್ದಾರೆಂದು ಅವರು ಧನ್ಯವಾದ ಅರ್ಪಿಸಿದರು. ಈ ವೇಳೆ ಮುಖ್ಯ ಆರೋಗ್ಯಾಧಿಕಾರಿ(ಕ್ಲಿನಿಕಲ್) ಡಾ. ನಿರ್ಮಲಾ ಬುಗ್ಗಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News