ಭಾರತದ ಭದ್ರತಾ ಸವಾಲುಗಳು ಹೆಚ್ಚು ಸಂಕೀರ್ಣಗೊಳ್ಳುತ್ತಿವೆ: ರಾಜನಾಥ ಸಿಂಗ್

Update: 2021-08-19 15:14 GMT

ಹೊಸದಿಲ್ಲಿ,ಆ.19: ಜಾಗತಿಕವಾಗಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸವಾಲುಗಳು ಹೆಚ್ಚುತ್ತಿವೆ ಮತ್ತು ಸಂಕೀರ್ಣಗೊಳ್ಳುತ್ತಿವೆ ಎಂದು ಗುರುವಾರ ಇಲ್ಲಿ ಹೇಳಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು,ದೇಶದಲ್ಲಿ ಪ್ರಬಲ,ಸಮರ್ಥ ಮತ್ತು ಸಂಪೂರ್ಣವಾಗಿ ಸ್ವಾವಲಂಬಿ ರಕ್ಷಣಾ ಉದ್ಯಮದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದರು.

ಅಫ್ಘಾನಿಸ್ಥಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಮತ್ತು ವಿಶ್ವಾದ್ಯಂತ ಹೆಚ್ಚುತ್ತಿರುವ ಕಳವಳಗಳ ನಡುವೆಯೇ ಸಿಂಗ್ ಅವರ ಈ ಹೇಳಿಕೆ ಹೊರಬಿದ್ದಿದೆ.

‘ಇಂದು ಇಡೀ ಜಗತ್ತಿನಲ್ಲಿ ಭದ್ರತಾ ಸನ್ನಿವೇಶವು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಇದರಿಂದಾಗಿ ನಮ್ಮ ರಾಷ್ಟ್ರೀಯ ಭದ್ರತೆಗೆ ಸವಾಲುಗಳೂ ಹೆಚ್ಚುತ್ತಿವೆ ಮತ್ತು ಸಂಕೀರ್ಣಗೊಳ್ಳುತ್ತಿವೆ. ಜಾಗತಿಕ ಮಟ್ಟದಲ್ಲಿ ಭೌಗೋಳಿಕ ರಾಜಕೀಯ ಸ್ಥಿತಿಯಲ್ಲಿ ನಿರಂತರ ಬದಲಾವಣೆಗಳಾಗುತ್ತಿವೆ ’ ಎಂದು ಸಿಂಗ್ ಯಾವುದೇ ನಿರ್ದಿಷ್ಟ ದೇಶವನ್ನು ಪ್ರಸ್ತಾಪಿಸದೆ ಹೇಳಿದರು.

ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನ ಅಭಿವೃದ್ಧಿಯನ್ನು ಉತ್ತೇಜಿಸುವ ಇನ್ನೋವೇಶನ್ಸ್ ಫಾರ್ ಡಿಫೆನ್ಸ್ ಎಕ್ಸ್‌ಲೆನ್ಸ್ (ಐಡಿಇಎಕ್ಸ್)ನಡಿ ‘ಡಿಫೆನ್ಸ್ ಇಂಡಿಯಾ ಸ್ಟಾರ್ಟ್‌ಪ್ ಚಾಲೆಂಜ್ 5.0’ ಉಪಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಸಿಂಗ್,ವೇಗವಾಗಿ ಬದಲಾಗುತ್ತಿರುವ ಭದ್ರತಾ ಸವಾಲುಗಳನ್ನು ಪರಿಗಣಿಸಿ ಸಶಸ್ತ್ರ ಪಡೆಗಳ ಅಗತ್ಯಗಳನ್ನು ಪೂರೈಸಲು ಪ್ರಬಲ,ಸಮರ್ಥ ಮತ್ತು ಸ್ವಾವಲಂಬಿ ರಕ್ಷಣಾ ಉದ್ಯಮವನ್ನು ಹೊಂದುವ ಬಗ್ಗೆ ಭಾರತವು ಗಮನ ಹರಿಸಬೇಕಿದೆ. ಪ್ರಬಲ,ಆಧುನಿಕ ಮತ್ತು ಸುಸಜ್ಜಿತ ಪಡೆಗಳನ್ನು ಸೃಷ್ಟಿಸುವುದು ಮಾತ್ರವಲ್ಲ,ಅಷ್ಟೇ ಪ್ರಬಲ,ಸಮರ್ಥ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸಂಪೂರ್ಣ ಸ್ವಾವಲಂಬಿ ರಕ್ಷಣಾ ಉದ್ಯಮವನ್ನು ಅಭಿವೃದ್ಧಿಗೊಳಿಸುವುದೂ ಅಗತ್ಯವಾಗಿದೆ ಎಂದರು.

ರಕ್ಷಣಾ ಉತ್ಪಾದನೆ ಕ್ಷೇತ್ರವನ್ನು ಬಲಪಡಿಸಲು ಖಾಸಗಿ ವಲಯವು ತನ್ನ ಕೊಡುಗೆಯನ್ನು ಸಲ್ಲಿಸಬೇಕು ಎಂದು ಕರೆ ನೀಡಿದ ಅವರು, ಸರಕಾರದಿಂದ ಸಾಧ್ಯವಿರುವ ಎಲ್ಲ ಸಹಕಾರದ ಭರವಸೆಯನ್ನೂ ನೀಡಿದರು.

ದೇಶದಲ್ಲಿ ಪ್ರತಿಭೆಗಳಿಗಾಗಲೀ ಪ್ರತಿಭೆಗಳಿಗೆ ಬೇಡಿಕೆಗಳಿಗಾಗಲಿ ಕೊರತೆಯಿಲ್ಲ. ಆದರೆ ಸಾಮಾನ್ಯ ವೇದಿಕೆಯೊಂದರ ಅನುಪಸ್ಥಿತಿಯಲ್ಲಿ ಇವೆರಡೂ ತಾಳೆಯಾಗಲು ಸಾಧ್ಯವಾಗುತ್ತಿಲ್ಲ. ಈ ಅಂತರವನ್ನು ತಗ್ಗಿಸುವಲ್ಲಿ ಐಡಿಇಎಕ್ಸ್ ಗಣನೀಯವಾಗಿ ಯಶಸ್ವಿಯಾಗಿದೆ ಎಂದು ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News