ಅರಸು ಎಂಬ ಅಪರೂಪದ ಮುತ್ಸದ್ದಿ

Update: 2021-08-20 07:02 GMT
ದೇವರಾಜ ಅರಸು

ಬಹುತೇಕ ಹೋರಾಟಗಳಿಂದಲೇ ಸ್ವಾತಂತ್ರ್ಯ ಮತ್ತು ಸಂವಿಧಾನಾತ್ಮಕ ಪ್ರಜಾಪ್ರಭುತ್ವವನ್ನು ಸಾಧ್ಯವಾಗಿಸಿಕೊಂಡ ನಂತರ ರೂಪುಗೊಂಡ ಭಾರತೀಯ ರಾಜಕಾರಣದ ಇತಿಹಾಸವನ್ನು ಹೃದಯವಂತಿಕೆಯಿಂದ ನೋಡುವ ಎಲ್ಲ ಸೂಕ್ಷ್ಮ ಮನಸ್ಸುಗಳೂ ಕೂಡಾ ಅರಸು ಎಂಬ ನಾಯಕನ ಹೆಸರು, ಅವರ ಬದ್ಧತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅವರು ಪಟ್ಟ ಶ್ರಮದ ಪರಿಚಯ  ಒಂದಿಷ್ಟಾದರೂ ಇರುತ್ತದೆ.

'ಗರೀಬೀ ಹಟಾವೋ' ಎಂಬ ಘೋಷಣೆಯಡಿ ಹಲವು ಯೋಜನೆಗಳ ಮೂಲಕ ಇಂದಿರಾ ಗಾಂಧಿಯವರು ದೇಶದಾದ್ಯಂತ ಇದ್ದ ಬಡವರ ಬದುಕಿನಲ್ಲಿ ಉಂಟು ಮಾಡಿದ ಪರಿಣಾಮವನ್ನೇ ಕರ್ನಾಟಕದಲ್ಲಿ ತಮ್ಮ ಹಲವು ಕ್ರಾಂತಿಕಾರಿ ನಿರ್ಧಾರಗಳ ಮೂಲಕ ಅರಸು ಅವರು ಉಂಟು ಮಾಡಿದರು ಎಂದು ಹೇಳುವುದು ಹೆಚ್ಚು ನ್ಯಾಯಯುತ ಮತ್ತು ಅಷ್ಟೇ ಕೃತಜ್ಞತಾಪೂರ್ವಕ ಎನಿಸಿಕೊಳ್ಳುತ್ತದೆ.

ಮಹಾಡ್ ಕೆರೆಯ ಸತ್ಯಾಗ್ರಹದ ವೇಳೆ ಬಾಬಾ ಸಾಹೇಬರು "ಹೋರಾಟ" ಮತ್ತು "ನ್ಯಾಯ"ದ ಕಲ್ಪನೆಯನ್ನು ಅಳವಡಿಸಿಕೊಂಡಿದ್ದರು.

ಮಹಾಡ್ ಕೆರೆಯ ಪ್ರವೇಶಕ್ಕಾಗಿ ಹೋರಾಟವನ್ನು ಸಂಘಟಿಸಿದ ಅವರು ನಂತರ ಮಹಾಡ್ ಕೆರೆಯ ಪ್ರವೇಶಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದ ಸವರ್ಣೀಯರ ಪ್ರಯತ್ನಗಳನ್ನು ತಮ್ಮ ನ್ಯಾಯ ಮಂಡನೆಯ ಮೂಲಕ ವಿಫಲಗೊಳಿಸಿ, ತಡೆಯಾಜ್ಞೆಯನ್ನು ರದ್ದುಗೊಳಿಸುವ ಬಾಬಾ ಸಾಹೇಬರ ಜ್ಞಾನ ಮತ್ತು ಧೈರ್ಯವು ಅರಸು ಅವರ ಜನಪರ ರಾಜಕಾರಣದಲ್ಲೂ ಕಾಣಬಹುದು

ಉದಾಹರಣೆಗೆ ಅರಸು ಅವರು ಭೂ ಸುಧಾರಣಾ ಕಾಯ್ದೆಯನ್ನು ಜಾರಿ ಮಾಡಿ "ಉಳುವವನೇ ಹೊಲದೊಡೆಯ" ಎಂಬ ಘೋಷವಾಕ್ಯದಡಿ ಬಡ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಭೂಮಿಯನ್ನು ನೀಡಲು ಹೊರಟಾಗ ನಮ್ಮಲ್ಲಿದ್ದ ಜಮೀನ್ದಾರರು ಮತ್ತು ಹುಟ್ಟಾ ಫ್ಯೂಡಲ್ ಗಳು ಒಡ್ಡಿದ ಪ್ರತಿರೋಧ ಅಷ್ಟಿಷ್ಟಲ್ಲ.

ಆದರೆ ಫ್ಯೂಡಲ್ ಗಳ ಪ್ರತಿರೋಧಕ್ಕೆ ಇದ್ದ ಅಮಾನವೀಯ ಕಾರಣವನ್ನು ಅರಿತಿದ್ದ  ಅರಸು ಅವರಿಗೆ ಜನ ಸಾಮಾನ್ಯರ ಹಿತವೇ ಮುಖ್ಯವಾಗಿದ್ದ ಕಾರಣ ಅವರು ತಡ ಮಾಡದೇ ಭೂ ಸುಧಾರಣಾ ಕಾಯ್ದೆಗೆ ಅಂಕಿತ ಹಾಕಿದರು. ಇದು ನಿಜಕ್ಕೂ ಧೈರ್ಯಶಾಲಿಯೊಬ್ಬರಿಗೆ ಸಾಧ್ಯವಾಗುವ ಕೆಲಸ ಅನಿಸುತ್ತದೆ.

ಇನ್ನು ಇದೇ ವೇಳೆ ಮಲ ಹೊರುವ ಪದ್ಧತಿಗೆ ಅಂತ್ಯ ಹಾಡಿ, ಶ್ರಮಿಕರಿಗೆ ಮತ್ತು ಬಡವರಿಗೆ ಭೂಮಿಯನ್ನು ಒದಗಿಸಲು ಶ್ರಮಿಸಿದ ಬಸವಲಿಂಗಪ್ಪನವರ ಸೇವೆ ಮತ್ತು ಬದ್ಧತೆಯನ್ನೂ ಸಹ ನಾವು ಮರೆಯಬಾರದು.

ಎಲ್ಲಕ್ಕಿಂತ ಮುಖ್ಯವಾಗಿ ಜಾತಿ ಬೆಂಬಲವಿಲ್ಲದ ಅರಸು ಅವರು ಜಾತಿರೋಗದ ಮನಸ್ಥಿತಿಗಳ ಎದುರು ಸುದೀರ್ಘವಾಗಿ ಆಡಳಿತ ನಡೆಸಿ ನೊಂದ ಜನರ ಪರವಾಗಿ ಗಟ್ಟಿ ದನಿಯಾಗಿ ನಿಂತು ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಅನೇಕ ಬದಲಾವಣೆಯನ್ನು ಜಾರಿ ಮಾಡಿದರು. ಉಳುವವನೇ ಭೂಮಿಯ ಒಡೆಯ, " ಜೀತ ಪದ್ದತಿಯ ನಿರ್ಮೂಲನೆ ಮತ್ತು ಜೀತದಾಳುಗಳಿಗೆ ಪುನರ್ವಸತಿ ಸೌಲಭ್ಯ" "ಋಣ ಮುಕ್ತ ಕಾಯ್ದೆ" ಹಾಗೂ ಅನೇಕ ಜನಪರ ಕಾಯ್ದೆಯನ್ನು ಜಾರಿಗೆ ತಂದರು.

ಜಾತಿ ಬೆಂಬಲವೇ ಇಲ್ಲದೇ ಅರಸು ಅವರು ಮಾಡುತ್ತಿದ್ದ ಜನಪರ ಕೆಲಸಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅವರು ದುಡಿಯುತ್ತಿದ್ದ ರೀತಿಗೆ ಅಕ್ಷರಶಃ ಪ್ರಭಾವಿತನಾಗಿದ್ದ ನಾನು 1980 ರಲ್ಲಿ ಕ್ರಾಂತಿ ರಂಗವನ್ನು ಸೇರಿದೆ.

ಅರಸು ಅವರಿಗೆ ಜಾತಿ ಬೆಂಬಲ ಇಲ್ಲದಿದ್ದರೂ ಕೂಡಾ ಅವರು ಮಾಡುತ್ತಿದ್ದ ಜನಪರ ಕೆಲಸಗಳಿಗೆ ಜನ ಬೆಂಬಲವಿತ್ತು. ಅರಸು ಅವರ ಎಲ್ಲಾ ಜನಪರ ನಿರ್ಧಾರಗಳು ಮತ್ತು  ಕಾರ್ಯಕ್ರಮಗಳನ್ನು ಒಪ್ಪಿಕೊಂಡು ಜನರು ಅರಸು ಪರವಾಗಿ ನಿಂತರು. ಹೀಗೆ ಜನರು ತನ್ನ ಕೆಲಸಗಳನ್ನು ಗೌರವಿಸಿ ಅವರು ನನ್ನೊಟ್ಟಿಗಿದ್ದಾರೆ ಎಂದು ಅರಿತ ನಂತರವೇ ಅರಸು ಅವರು ಕ್ರಾಂತಿರಂಗ ಎಂಬ ಪಕ್ಷವನ್ನು ಹುಟ್ಟು ಹಾಕಿದರು.

ಇನ್ನು ಸಂವಿಧಾನದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇದ್ದರೂ ಕೂಡಾ ನಿರ್ದಿಷ್ಟ ಜಾತಿವಾರು ಮೀಸಲಾತಿ ಕಲ್ಪನೆಯನ್ನು ಜಾರಿಗೊಳಿಸಿ 1974 ರಲ್ಲಿ ಎಲ್. ಜಿ ಹಾವನೂರು ಆಯೋಗ ಮೂಲಕ "ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯವನ್ನು" ಕಲ್ಪಿಸಿದರು.

ನಂತರ ಚಿಲ್ಲರೆ ವ್ಯಾಪಾರಕ್ಕೆ ಸಾಲ ಸೌಲಭ್ಯ ನೀಡಿ, ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳು ಏಳಿಗೆ ಕಾಣಬೇಕೆಂಬ ಉದ್ದೇಶಕ್ಕೆ ಹಾಸ್ಟೆಲ್ ಸೌಲಭ್ಯಗಳನ್ನು ಒದಗಿಸಿದ್ದೂ ಕೂಡಾ ಗಮನಾರ್ಹ ಸಂಗತಿ. ಹೀಗೆ ಅರಸು ಅವರು ತಮ್ಮ ಬದ್ಧತೆ ಮತ್ತು ಜನಪರತೆಯ ಕಾರಣಕ್ಕಾಗಿಯೇ ಯೋಗ್ಯತೆ ಮತ್ತು ಜ್ಞಾನವಿರುವ ಯಾವುದೇ ವ್ಯಕ್ತಿ ಮುಖ್ಯಮಂತ್ರಿಯಾಗಬಹುದು ಎಂಬುದನ್ನು ನಿರೂಪಿಸಿದರು.

ಜೊತೆಗೆ ಕರ್ನಾಟಕದಾದ್ಯಂತ ಇರುವ ನಗರಪಾಲಿಕೆಗಳಿಗೆ ಒಂದು ಏಕರೂಪದ ಕಾಯ್ದೆ (ಕರ್ನಾಟಕ ನಗರ ಪಾಲಿಕೆಗಳ ಕಾಯ್ದೆ 1975) ಜಾರಿಯಾದದ್ದು ಅರಸು ಕಾಲದಲ್ಲಿ. ಅಲ್ಲಿಯವರೆಗೆ ರಾಜ್ಯದ ಬೇರೆ ಬೇರೆ ನಗರ ಪಾಲಿಕೆಗಳು ಬೇರೆ ಬೇರೆ ಕಾಯ್ದೆಯಡಿ ಕೆಲಸ ಮಾಡುತ್ತಿದ್ದವು. ಇಷ್ಟು ಮಾತ್ರವಲ್ಲ. ಈ ಕಾಯ್ದೆಯಲ್ಲಿ ನಗರಾಡಳಿತಕ್ಕೆ ಸಂಬಂಧಿಸದ ಹಲವಾರು ಆರೋಗ್ಯಕರ ಅಂಶಗಳಿವೆ. ಆದುದರಿಂದಲೇ ಈ ಕಾಯ್ದೆ 1993ರಲ್ಲಿ ಸಂವಿಧಾನಕ್ಕೆ 74ನೇ ತಿದ್ದುಪಡಿಯಾದ ನಂತರವೂ ವಿಶೇಷ ಬದಲಾವಣೆ ಇಲ್ಲದೆ ಇಂದಿಗೂ ಉಳಿದುಕೊಂಡಿದೆ ಎನ್ನುವುದನ್ನು ಗುರುತಿಸಬೇಕು.

ಹಾಗೆಯೇ ಕರ್ನಾಟಕಾದ್ಯಂತ ಇರುವ ವಿಶ್ವವಿದ್ಯಾನಿಲಯಗಳಿಗೆ ಒಂದು ಏಕೀಕೃತ ಕಾಯ್ದೆ ತಂದದ್ದು ಕೂಡ ಅರಸು ಆಡಳಿತ. ಇಲ್ಲಿ ದಾಖಲಿಸಬೇಕಾದ ಇನ್ನೊಂದು ಮುಖ್ಯ ಉದಾಹರಣೆ ಎಂದರೆ, ಎಂಬತ್ತರ ದಶಕದ ಕೊನೆಯ ಭಾಗದಿಂದ ಆರಂಭಿಸಿ ಇಲ್ಲಿಯವರೆಗೆ ಕರ್ನಾಟಕ ದೇಶದ ಗಮನವನ್ನು ಸೆಳೆಯಲು ಸಾಧ್ಯವಾದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ. ಈ ವಿಷಯಕ್ಕೆ ಬಂದಾಗ ಇದು ಅರಸು ನಂತರದ ಕಾಲದಲ್ಲಿ ಕರ್ನಾಟಕ ಕಂಡ ಬೆಳವಣಿಗೆ ಎಂದೇ ಎಲ್ಲರೂ ಭಾವಿಸುತ್ತಾರೆ. ಇದನ್ನು ಪ್ರಾರಂಭಿಸಿದ ಖ್ಯಾತಿ ಯಾರಿಗೆ ಸಲ್ಲಬೇಕು ಎಂಬ ಚರ್ಚೆಯಲ್ಲಿ ಅರಸು ಅವರ ಹೆಸರು ಕೇಳಿಸುವುದಿಲ್ಲ. ಆದರೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಾದ ಎಲ್ಲಾ ಬೆಳವಣಿಗೆಗಳಿಗೆ ತಳಹದಿ ಎನ್ನಬಹುದಾದ ಬೆಂಗಳೂರಿನ ‘ಎಲೆಕ್ಟ್ರಾನಿಕ್ಸ್ ಸಿಟಿ’ಯ ನಿರ್ಮಾಣವಾದದ್ದು ಅರಸು ಅವರ ಕಾಲದಲ್ಲಿ.

ಇಷ್ಟೆಲ್ಲಾ ಕೆಲಸಗಳ ನಡುವೆಯೂ ನಮ್ಮ ಸಮಾಜದೊಳಗಿನ ಜಾತಿ ಶ್ರೇಷ್ಠತೆಯ ವಿಷದ ಬೀಜಗಳು ಹೆಚ್ಚು ಮೊಳಕೆ ಹೊಡೆದ ಪರಿಣಾಮ ಅರಸು ಅಂತಹವರೂ ಕೂಡಾ ಅಧಿಕಾರವನ್ನು ಕಳೆದುಕೊಳ್ಳುವಂತಾಯಿತು.

ಇನ್ನೂ ತಮಾಷೆಯೆಂದರೆ ಅರಸು ಅವರನ್ನು ಭ್ರಷ್ಟನೆಂದು ಸಾಧಿಸಲು ಹೊರಟಿದ್ದ ಕೆಲವರು ಅರಸು ಅವರ ಮರಣದ ನಂತರ ಅವರ ಪರಿಸ್ಥಿತಿಯನ್ನು ನೋಡಿ ತಾವೇ ಮರುಗಿದರು.

ಅರಸು ಬೇರೆಯಲ್ಲ ಸಿದ್ದರಾಮಯ್ಯ ಬೇರೆಯಲ್ಲ

ನನ್ನ ಪ್ರಕಾರ ಜನಪರವಾಗಿ ಚಿಂತಿಸಿದ್ದ ಅರಸು ಅವರಂತಹ ಆಡಳಿತವನ್ನೇ  ಸಿದ್ದರಾಮಯ್ಯನವರೂ ನೀಡಿದ್ದು ಅರಸು ಅವರು ಎದುರಿಸಿದ ಕೆಟ್ಟ ಪರಿಸ್ಥಿತಿಯನ್ನೇ ಅವರೂ ಕೂಡಾ ಎದುರಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ , ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಹಾಗೂ ಅಲೆಮಾರಿಗಳ ಏಳಿಗೆಗಾಗಿ ಸಿದ್ದರಾಮಯ್ಯನವರು ಜಾರಿಗೊಳಿಸಿದ ಕಾರ್ಯಕ್ರಮಗಳು ಬಹಳಷ್ಟು. ಜೊತೆಗೆ ಸಮಾಜದ ಎಲ್ಲಾ ವರ್ಗಗಳ ಏಳಿಗೆಗಾಗಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಜಾರಿಗೊಳಿಸಿದ ಕಾರ್ಯಕ್ರಮಗಳೂ ಕೂಡಾ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.

ಆದರೆ ಜಾತಿ ಶ್ರೇಷ್ಠತೆಯ ಕಾರಣಕ್ಕಾಗಿಯೇ ಅರಸು ಅವರಿಗೆ ಯಾವ ಪರಿಸ್ಥಿತಿ ಉಂಟಾಯಿತೋ ಸಿದ್ದರಾಮಯ್ಯನವರಿಗೂ ಅದೇ ಪರಿಸ್ಥಿತಿ ಉಂಟಾಯಿತು.

ಆದರೆ ಈ ದಿನ ಜನ ಸಾಮಾನ್ಯರು ಒಂದು ಸರಳ ಬದುಕನ್ನೂ ಕೂಡಾ ನಡೆಸಲಾರದೇ ವಿಲ ವಿಲ ಒದ್ದಾಡುವಂತೆ ಮಾಡಿರುವ ಕೋಮುವಾದಿ ಸರ್ಕಾರಗಳ ಆಡಳಿತದ ನಡುವೆ ಜನರು ಅರಸು ಅವರ ಆಡಳಿತವನ್ನೂ ನೆನೆಯುತ್ತಿದ್ದಾರೆ ಮತ್ತು ಸಿದ್ದರಾಮಯ್ಯನವರ ಆಡಳಿತವನ್ನೂ ಕೂಡಾ ನೆನೆಯುತ್ತಿದ್ದಾರೆ ಎಂಬುದು ಜನರ ಪ್ರತಿಕ್ರಿಯೆಯಲ್ಲೇ ವ್ಯಕ್ತವಾಗುತ್ತಿದೆ.

ಜನರ ಮೇಲಿದೆ ಬಹುದೊಡ್ಡ ಜವಾಬ್ದಾರಿ

ಈ ದಿನ ಧರ್ಮ ಮತ್ತು ಜಾತಿ ಆಧಾರಿತವಾಗಿ ಜನರ ಅಭಿಪ್ರಾಯಗಳನ್ನು ಕೊಂಡುಕೊಳ್ಳುವಂತಹ ರಾಜಕಾರಣವು ಆರಂಭವಾಗಿದೆ.

ರಾಜಕೀಯ ಪ್ರವೃತ್ತಿಗಳು ಬರೀ ವ್ಯಾಪಾರಿಗಳು, ಫ್ಯೂಡಲ್ ಗಳು ಮತ್ತು ಭೂಗಳ್ಳರಿಂದಲೇ ತುಂಬಿ ಹೋಗಿದ್ದು ಜನಪರತೆ ಎಂಬುದನ್ನು ನಾಶ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಈಗಲೂ ಕೂಡಾ ಜನರು ಇಂತವರನ್ನು ನಿಯಂತ್ರಿಸದೇ ಹೋದರೆ ಇವರೆಲ್ಲರೂ ಕೂಡಾ ಪ್ರಜಾಪ್ರಭುತ್ವವನ್ನು ತಮ್ಮ ಕಾಲಡಿ ಇಟ್ಟುಕೊಂಡು ಹೊಸಕಿ ಹಾಕಲಿದ್ದಾರೆ.

ಹಣಬಲ ಇದ್ದವರ ಕೈಗೆ ಪ್ರಜಾಪ್ರಭುತ್ವವು ಹೋದರೆ ಪ್ರಜಾಪ್ರಭುತ್ವದ ಗತಿ ಅಧೋಗತಿಯಾಗಲಿದೆ. ಇಲ್ಲಿರುವ ವ್ಯಾಪಾರಿ ಮನಸ್ಥಿತಿಯ ಆಡಳಿತಗಾರರು ಈಗ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 105 ರೂಪಾಯಿಗೆ ಏರಿಸಿದಂತೆ ಮುಂದೆ 200 ರೂಪಾಯಿಗೂ ಏರಿಸುತ್ತಾರೆ. ಹೀಗೆ ಏರಿಸುವಾಗ ಅವರಿಗೆ ಏನನ್ನೂ ಅನ್ನಿಸುವುದಿಲ್ಲ. ಕಾರಣ ಅವರ ಬಂದಿರುವುದೇ ಜನ ಸಾಮಾನ್ಯರನ್ನು ಬಳಸಿಕೊಂಡು ವ್ಯಾಪಾರ ಮಾಡಲು ಎಂಬುದನ್ನು ಜನ ಸಾಮಾನ್ಯರು ಮರೆಯಬಾರದು.

ಇನ್ನು ಎಲ್ಲಾ ಅಭಿವೃದ್ಧಿ ಮಾಡಿಯೂ ಕೂಡಾ ಮತ್ತೆ ಮತ್ತೆ ಜನಾಭಿಪ್ರಾಯವು ಜನಪರವಲ್ಲದ ಕೋಮು ಶಕ್ತಿಗಳು ಜಾತಿ ಶಕ್ತಿಗಳು ಮತ್ತು ವ್ಯಾಪಾರಿಗಳ ಕೈಗೆ ಮತ್ತು ಹಗಲು ವೇಳೆಯಲ್ಲೇ ಸುಳ್ಳು ಹೇಳುತ್ತಿರುವ ನರೇಂದ್ರ ಮೋದಿ ಅಂತವರ ಕೈಗೆ ಅಧಿಕಾರ ದೊರೆಯುತ್ತಿರುವುದನ್ನು ನೋಡಿದರೆ ಪ್ರಜ್ಞಾವಂತ ಮತದಾರರನ್ನು ಹೊಂದಿರವ ಪ್ರಜಾಪ್ರಭುತ್ವವೇ ಸೋಲುತ್ತಿದೆಯೇನೋ ಎಂಬ ಅನುಮಾನ ನನ್ನಲ್ಲಿ ಮೂಡುತ್ತಿದೆ.

ಈ ನಿಟ್ಟಿನಲ್ಲಿ ಹೇಳುವುದಾದರೆ ಮೂಲತಃ ಸೂಕ್ಷ್ಮಗ್ರಾಹಿಗಳಾದ ಭಾರತದ ಮತ್ತು ಕರ್ನಾಟಕದ ಮತದಾರರು ಪೊಳ್ಳು ಭರವಸೆಗಳಿಂದ ಬದುಕನ್ನು ನಾಶ ಮಾಡಲು ಬರುವಂತಹ ಕೋಮುವಾದಿ ಸುಳ್ಳುಕೋರರನ್ನು ಪತ್ತೆ ಹಚ್ಚುವ ಮತ್ತು ಅಂತವರಿಗೆ ಅಧಿಕಾರ ನೀಡದೇ ಪ್ರಜ್ಞಾವಂತಿಕೆಯನ್ನು ಮೆರೆಯುವ ಮೂಲಕ ತಮ್ಮ ಬದುಕಿನ ಜೊತೆಗೆ ರಾಜ್ಯ ಮತ್ತು ದೇಶ ಜನ ಬದುಕನ್ನೂ ಸಹ ಕಾಪಾಡುವುದು ಈ ಹೊತ್ತಿನ ಅತಿ ದೊಡ್ಡ ಜವಾಬ್ದಾರಿಯಾಗಿದೆ, ಮತ್ತು ಈ ರೀತಿಯಾಗಿ ಎಚ್ಚೆತ್ತುಕೊಂಡ ಜನ ಸಾಮಾನ್ಯರ ಪ್ರಜಾಪ್ರಭುತ್ವದ ಪ್ರಜ್ಞೆಯಲ್ಲೇ ಅರಸು ಅಂತಹ ಮಹನೀಯರ ಬದುಕಿನ ಸಾರ್ಥಕತೆ ಅಡಗಿದ್ದು , ಇದೇ ನಾವು ಅರಸು ಅವರಿಗೆ ನೀಡಬಹುದಾದ ಕೊಡುಗೆಯಾಗಿದೆ.

ಲೇಖಕರು ಮಾಜಿ ಸಚಿವ, ಕರ್ನಾಟಕ ಸರಕಾರ

Writer - ಡಾ.ಹೆಚ್.ಸಿ.ಮಹದೇವಪ್ಪ

contributor

Editor - ಡಾ.ಹೆಚ್.ಸಿ.ಮಹದೇವಪ್ಪ

contributor

Similar News