×
Ad

ಗುತ್ತಿಗೆ ಪೌರಕಾರ್ಮಿಕರ ವರ್ಗಾವಣೆ ಕ್ರಮ ಹಿಂಪಡೆಯಿರಿ: ಆಯೋಗದ ಅಧ್ಯಕ್ಷ ಶಿವಣ್ಣ

Update: 2021-08-22 21:52 IST

ಬೆಂಗಳೂರು, ಆ.22: `ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಪೌರಕಾರ್ಮಿಕರನ್ನು ವರ್ಗಾವಣೆ ಮಾಡುವ ಕ್ರಮವನ್ನು ಕೂಡಲೇ ಹಿಂಪಡೆಯಬೇಕು' ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಶಿವಣ್ಣ ಮನವಿ ಮಾಡಿದ್ದಾರೆ. 

ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‍ಗುಪ್ತಗೆ ಪತ್ರ ಬರೆದಿರುವ ಅವರು, ಪೌರಕಾರ್ಮಿಕರು ಬೆಳಗ್ಗೆ 5ಗಂಟೆಗೆಲ್ಲ ಕೆಲಸಕ್ಕೆ ಹಾಜರಾಗಬೇಕಾಗುತ್ತದೆ. ಹೀಗಾಗಿ ಅವರು ಈಗ ಕೆಲಸ ಮಾಡುತ್ತಿರುವ ಸಮೀಪದಲ್ಲಿಯೇ ಮನೆ ಮಾಡಿಕೊಂಡಿರುತ್ತಾರೆ. ಅವರನ್ನು ಏಕಾಏಕಿ ಬೇರೆ ಕಡೆ ವರ್ಗಾವಣೆ ಮಾಡಿದರೆ ಸಮಸ್ಯೆಗೆ ಸಿಲುಕುತ್ತಾರೆಂದು ತಿಳಿಸಿದ್ದಾರೆ. 

ಪೌರಕಾರ್ಮಿಕರಿಗೆ ಸಿಗುವ ಸಂಬಳ ಕಡಿಮೆ ಹಾಗೂ ಅವರಿಗೆ ಎಲ್ಲ ಕಡೆಯಲ್ಲೂ ಬಾಡಿಗೆ ಮನೆಗಳು ಸಿಗುವುದು ಕಷ್ಟ. ಕಷ್ಟಪಟ್ಟು ಮನೆಯನ್ನು ಹುಡುಕಿಕೊಂಡು ಜೀವನ ನಿರ್ವಹಿಸುತ್ತಿರುತ್ತಾರೆ. ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಿದರೆ ಬಾಡಿಗೆ ಮನೆ ಹುಡುಕುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. 

ಪೌರಕಾರ್ಮಿಕರ ವರ್ಗಾವಣೆಯನ್ನು ವಿರೋಧಿಸಿ ಪೌರಕಾರ್ಮಿಕ ಪರಿವರ್ತನಾ ವೇದಿಕೆಯ ಆನಂದ್ ಈಗಾಗಲೇ ಪತ್ರಿಕಾ ಹೇಳಿಕೆ ನೀಡಿ, ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅಧಿಕಾರಿಗಳು ಪೌರಕಾರ್ಮಿಕರ ಹಿತಕ್ಕೆ ಪೂರಕವಾದ ಕ್ರಮಗಳನ್ನು ಜಾರಿ ಮಾಡಬೇಕೆ ವಿನಃ ಅವರಿಗೆ ಮತ್ತಷ್ಟು ಸಂಕಷ್ಟಕ್ಕೆ ದೂಡುವಂತಹದ್ದಲ್ಲ. ಕೂಡಲೇ ವರ್ಗಾವಣೆ ಕ್ರಮವನ್ನು ಹಿಂಪಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News