ವಿಶ್ವಸಂಸ್ಥೆಯ ಮಹಾಧಿವೇಶನ ಸೂಪರ್ ಸ್ಪ್ರೆಡರ್?: ಅಮೆರಿಕ ಭೀತಿ

Update: 2021-08-22 18:31 GMT

 ವಿಶ್ವಸಂಸ್ಥೆ ,ಆ.22: ಮುಂದಿನ ತಿಂಗಳು ನಡೆಯಲಿರುವ ವಿಶ್ವಸಂಸ್ಥೆಯ ವಾರ್ಷಿಕ ಮಹಾಧಿವೇಶನವು ಮಾರಣಾಂತಿಕ ಡೆಲ್ಟಾ ಪ್ರಭೇದದ ಕೋವಿಡ್19 ಸೋಂಕು ಹರಡುವ ಕಾರ್ಯಕ್ರಮವಾಗದಂತೆ ನೋಡಿಕೊಳ್ಳಲು ವಿಶ್ವನಾಯಕರು ನ್ಯೂಯಾರ್ಕ್‌ಗೆ ಆಗಮಿಸದೆ ವಿಡಿಯೋದಲ್ಲಿ ಭಾಷಣಗಳನ್ನು ಮಾಡಬೇಕೆಂದು ಅಮೆರಿಕವು ಬಹಿರಂಗ ಮನವಿ ಮಾಡಿದೆ.

ವಿಶ್ವಸಂಸ್ಥೆಯ ಮಹಾಧಿವೇಶನವು ಸೆಪ್ಟೆಂಬರ್ 21ರಂದು ಆರಂಭಗೊಂಡು, ಸೆಪ್ಟೆಂಬರ್ 27ರವರೆಗೆ ನಡೆಯಲಿದೆ. ವಿಶ್ವಸಂಸ್ಥೆಯು ಬಿಡುಗಡೆಗೊಳಿಸಿರುವ 76ನೇ ಮಹಾಧಿವೇಶನದಲ್ಲಿ ಭಾಷಣ ಮಾಡಲಿರುವವರ ಸಂಭಾವ್ಯ ಪಟ್ಟಿಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 25ರಂದು ವಿಶ್ವಸಂಸ್ಥೆಯನ್ನುದ್ದೇಶಿಸಿ ಭಾಷಣ ಮಾಡಲಿರುವರು.
  
ವಿಶ್ವಸಂಸ್ಥೆಯಲ್ಲಿನ ಅಮೆರಿಕ ರಾಯಭಾರಿ ಥಾಮಸ್ ಗ್ರೀನ್‌ಫೀಲ್ಡ್ ಅವರು ಈ ಬಗ್ಗೆ 193 ಸದಸ್ಯರಾಷ್ಟ್ರಗಳಿಗೆ ಪತ್ರವೊಂದನ್ನು ಬರೆದಿದ್ದು, ವಿಶ್ವಸಂಸ್ಥೆಯ ಮುಖ್ಯ ಕಾರ್ಯಾಲಯವು ಅಮೆರಿಕದಲ್ಲಿರುವುದರಿಂದ ಮಹಾಧಿವೇಶನದಲ್ಲಿ ಭಾಗವಹಿಸುವವರ ಹಾಗೂ ನ್ಯೂಯಾರ್ಕ್‌ನ ನಿವಾಸಿಗಳ ಸುರಕ್ಷತೆಯನ್ನು ಖಾತರಿಪಡಿಸುವಂತಹ ಗುರುತರವಾದ ಜವಾಬ್ದಾರಿ ತನ್ನ ದೇಶಕ್ಕಿದೆ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯ 76ನೇ ಮಹಾಧಿವೇಶನ ನಡೆಯುವಂತಹ ಮಹತ್ವದ ವಾರವು ಡೆಲ್ಟಾ ವೈರಸ್‌ನ್ನು ಹರಡುವಂತಹ ಸೂಪರ್ ಸ್ಪ್ರೆಡರ್ ಆಗದಂತೆ ನೋಡಿಕೊಳ್ಳಲು ನೆರವಾಗಬೇಕೆಂದು ಅವರು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಹಾಗೂ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

ಡೆಲ್ಟಾ ವೈರಸ್ ಲಸಿಕೆ ಪಡೆದಿರುವ ಅಥವಾ ಲಸಿಕೆಯನ್ನು ಪಡೆಯದ ವ್ಯಕ್ತಿಗಳಿಗೂ ಹರಡುತ್ತಿರುವುದರಿಂದ ಕೋವಿಡ್19 ಸಾಂಕ್ರಾಮಿಕವು ಜಗತ್ತಿನಾದ್ಯಂತ ಆರೋಗ್ಯಕ್ಕೆ ಅಪಾಯಕಾರಿಯಾಗಿಯೇ ಮುಂದುವರಿದಿದೆ ಎಂದು ಥಾಮಸ್ ಗ್ರೀನ್‌ಫೀಲ್ಡ್ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಹಾಗೂ ನ್ಯೂಯಾರ್ಕ್ ನಗರದ ಎಲ್ಲಾ ಪ್ರದೇಶಗಳಲ್ಲಿ ಡೆಲ್ಟಾ ಸೋಂಕಿನ ಪ್ರಕರಣಗಳಲ್ಲಿ ಗಣನೀಯವಾದ ಹೆಚ್ಚಳವಾಗಿದೆ ಮತ್ತು ನ್ಯೂಯಾರ್ಕ್ ನಗರದಲ್ಲಿ ಸೋಂಕು ಸಾಮುದಾಯಿಕವಾಗಿ ಹರಡುತ್ತಿರುವುದಾಗಿಯೂ ಗ್ರೀನ್‌ಫೀಲ್ಡ್ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News