ಆನೆಗಳ ಮೇಲೆ ದೌರ್ಜನ್ಯ: ಮನುಷ್ಯನಿಗೆ ಬೇಕಿದೆ ಅಂಕುಶ

Update: 2021-08-23 05:36 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಧಾರ್ಮಿಕವಾಗಿ ಆನೆಗಳನ್ನು ಬಳಸಿಕೊಳ್ಳುವುದು ಕ್ರೌರ್ಯವಾಗಿದ್ದು ಅವುಗಳು ಕಾಡಿನಲ್ಲಿರಬೇಕೇ ಹೊರತು ದೇವಸ್ಥಾನದಲ್ಲಿ ಅಲ್ಲ’ ಎಂದು ಇತ್ತೀಚೆಗೆ ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯ ಪಟ್ಟಿದೆ. ಪೂಜಾ ವಿಧಿವಿಧಾನಗಳನ್ನು ನಡೆಸಲು ತಂದ ಆನೆಯನ್ನು ದೇವಸ್ಥಾನದಲ್ಲಿಯೇ ಇರಿಸಬೇಕು ಎಂಬ ಮನವಿಯನ್ನು ಉಲ್ಲೇಖಿಸಿ ವೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾಯಾಲಯ, ‘ಆನೆಗಳು ಕಾಡಿನಲ್ಲಿರಬೇಕೇ ಹೊರತು ದೇವಸ್ಥಾನದಲ್ಲಿ ಅಲ್ಲ. ಕಾಡಿನಲ್ಲಿರಬೇಕಾದ ಪ್ರಾಣಿಯನ್ನು ದೇವಸ್ಥಾನದಲಿರಿಸುವುದು ಕಾನೂನು ಪ್ರಕಾರವೂ ತಪ್ಪು. ಕಾಡಿನಲ್ಲಿ ಇತರ ಆನೆಗಳೊಂದಿಗೆ ಜೀವಿಸಲು ಅವಕಾಶ ನೀಡದೆ, ಆನೆಯನ್ನು ದೇವಸ್ಥಾನದಲ್ಲಿರಿಸಿ ಪೂಜಾ ಕಾರ್ಯಕ್ಕೆ ಬಳಸುವುದು ಸರಿಯಲ್ಲ’ ಎಂದು ಹೈಕೋರ್ಟ್ ಹೇಳಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾತ್ರವಲ್ಲ, ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲ್ಲಿ ಆನೆಗಳನ್ನು ಬಳಸುವುದು ಎಷ್ಟರಮಟ್ಟಿಗೆ ಸರಿ ಎನ್ನುವ ಚರ್ಚೆ ಇಂದು ನಿನ್ನೆಯದಲ್ಲ.

ಕರಡಿ ಆಡಿಸುವವರು, ಕೋತಿ ಆಡಿಸುವವರ ಮೇಲೆ ವನ್ಯಜೀವಿ ಕಾಯ್ದೆಯನ್ನು ಹೇರಿ ಕಿರುಕುಳ ನೀಡುವ ಅರಣ್ಯ ಇಲಾಖೆ, ಆನೆಗಳ ಮೇಲೆ ಮನುಷ್ಯ ನಡೆಸುವ ದೌರ್ಜನ್ಯಗಳ ಕುರಿತಂತೆ ಕಣ್ಣಿದ್ದು ಕುರುಡಾಗಿದೆ. ದಕ್ಷಿಣ ಭಾರತದಲ್ಲಿ, ಜಾತ್ರೆ, ಉತ್ಸವ ಹಾಗೂ ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಆನೆಗಳ ಮೇಲೆ ಎಸಗುತ್ತಿರುವ ಬರ್ಬರ ಕ್ರೌರ್ಯಗಳ ಕುರಿತಂತೆ ಈಗಾಗಲೇ ಹಲವು ಸಾಕ್ಷ ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿವೆ. ಇದೇ ಸಂದರ್ಭದಲ್ಲಿ ಈ ರೀತಿ ಸಾಕಿದ ಆನೆಗಳು ಸಾರ್ವಜನಿಕವಾಗಿ ನಡೆಸಿದ ದಾಂಧಲೆಗಳು, ಪ್ರಾಣಹಾನಿಗಳು ಪದೇ ಪದೇ ಮಾಧ್ಯಮಗಳ ಮುಖಪುಟಗಳಲ್ಲಿ ಪ್ರಕಟವಾಗುತ್ತಿದ್ದರೂ ನಮ್ಮ ಕಾನೂನು ವ್ಯವಸ್ಥೆ ಈ ಬಗ್ಗೆ ವೌನವಾಗಿದೆ. ಇದೇ ಸಂದರ್ಭದಲ್ಲಿ, ಯಾವ ರೀತಿಯಲ್ಲೂ ವನ್ಯ ಜೀವಿ ಕಾಯ್ದೆಯ ವ್ಯಾಪ್ತಿಯೊಳಗೆ ಬರದ ಜಾನುವಾರುಗಳ ಬಗ್ಗೆ ಎಲ್ಲ ಇಲಾಖೆಗಳು ವಿಶೇಷ ಆಸಕ್ತಿ ವಹಿಸುತ್ತಿವೆ. ಹೈನೋದ್ಯಮದ ಭಾಗವಾಗಿರುವ, ಈ ದೇಶದ ಬಹುಸಂಖ್ಯಾತರ ಆಹಾರವಾಗಿರುವ ಗೋಮಾಂಸ ಸೇವನೆಯನ್ನು ಹಿಂಸೆಯೆಂದು ಅದರ ವಿರುದ್ಧ ಕಾನೂನುಗಳನ್ನು ಜಾರಿಗೊಳಿಸಿದೆ. ಆದರೆ ಜನರ ಮೂಲಭೂತ ಅಗತ್ಯವಲ್ಲದೆ ಇದ್ದರೂ, ಆನೆಗಳನ್ನು ತಂದು ಸಾಕಿ ಅವುಗಳ ಮೇಲೆ ಎಸಗುವ ದೌರ್ಜನ್ಯಗಳನ್ನು ಕಾನೂನು ಸಹಿಸಿಕೊಳ್ಳುತ್ತಾ ಬಂದಿದೆ.

ಭಾರತದ ಸಾಂಸ್ಕೃತಿಕ ಅಸ್ಮಿತೆಯಾಗಿ ವಿಶ್ವ ಆನೆಗಳನ್ನು ಗುರುತಿಸಿದೆ. ಧಾರ್ಮಿಕವಾಗಿಯೂ ಭಾರತೀಯರು ಆನೆಯ ಮೂಲಕ ಹಲವು ಆಚರಣೆಗಳನ್ನು ರೂಢಿಸಿಕೊಂಡಿದ್ದಾರೆ. ಗಣೇಶನ ಆರಾಧನೆ ಮತ್ತು ಆನೆಗೆ ನೇರ ಸಂಬಂಧವಿದೆ. ಇದೇ ಸಂದರ್ಭದಲ್ಲಿ ಆನೆಗಳ ಸಂತತಿ ಅಪಾಯದಲ್ಲಿರುವ ಕಾರಣದಿಂದ ಅವುಗಳ ಬಗ್ಗೆ ಸರಕಾರ ವಿಶೇಷ ಮುತುವರ್ಜಿಯನ್ನು ವಹಿಸುತ್ತಲೂ ಬಂದಿದೆ. ದಂತ ಚೋರರಿಂದ ಆನೆಯನ್ನು ರಕ್ಷಿಸುವುದೇ ಒಂದು ಸಮಸ್ಯೆಯಾಗಿದೆ. ಹೀಗಿರುವಾಗ ಆನೆಯನ್ನು ಧಾರ್ಮಿಕ ಹಿನ್ನೆಲೆಯಲ್ಲಿ ಗೌರವಿಸುವ ವ್ಯವಸ್ಥೆಯೇ ಅದರ ಮೇಲಿನ ಶೋಷಣೆಗೆ ಕಾರಣವಾಗಿರುವುದು ವಿಷಾದನೀಯವಾಗಿದೆ. ಇದೊಂದು ರೀತಿಯಲ್ಲಿ, ಗಂಗೆಯನ್ನು ತಾಯಿಯೆಂದು ಗೌರವಿಸುತ್ತಲೇ ಆಕೆಯ ಮಾಲಿನ್ಯಕ್ಕೆ ಕಾರಣವಾದಂತೆೆ. ದೇವತೆಯಾದದ್ದೇ ಗಂಗೆಗೆ ಮುಳುವಾಯಿತೇ? ಎಂಬ ಪ್ರಶ್ನೆಯನ್ನು ಕೊರೋನ ಅವಧಿಯಲ್ಲಿ ಈ ದೇಶ ಮತ್ತೊಮ್ಮೆ ತನಗೆ ತಾನೇ ಕೇಳಿಕೊಂಡಿತು. ಆನೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಪ್ರಸಿದ್ಧ ಕ್ಷೇತ್ರಗಳು ಆನೆಗಳನ್ನು ಹೊಂದುವುದು ಒಂದು ಘನತೆಯ ಪ್ರಶ್ನೆಯಾಗಿದೆ. ಕೇರಳ, ತಮಿಳುನಾಡುಗಳಲ್ಲಿ ಆನೆಗಳಿಲ್ಲದೆ ಉತ್ಸವಗಳೇ ಇಲ್ಲ. ‘ಜಲ್ಲಿಕಟ್ಟು’ ಕ್ರೀಡೆಯಿಂದ ಗೂಳಿಗಳ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ಆರೋಪಿಸುವವರು ಈ ಆನೆಗಳನ್ನು ಸಂಕಲೆಗಳಲ್ಲಿ ಬಂಧಿಸಿ ನೀಡುವ ದೌರ್ಜನ್ಯಗಳ ಬಗ್ಗೆ ಮಾತೆತ್ತುವುದಿಲ್ಲ. ಆನೆಗಳನ್ನು ಸಾಕುವುದು, ಅದಕ್ಕೆ ಮನುಷ್ಯರ ಜೊತೆಗೆ ಬದುಕುವ ಬುದ್ಧಿ ಕಲಿಸುವುದು ಎಂದರೆ ಪರೋಕ್ಷವಾಗಿ ಅದರ ಮೇಲೆ ದೌರ್ಜನ್ಯಗಳನ್ನೆಸಗುವುದು ಎಂದೇ ಅರ್ಥ.

ಅವುಗಳನ್ನು ಕಟ್ಟಿ ಹಾಕಲೇ ಬೇಕು. ಸರಪಳಿಗಳಲ್ಲಿ ಕಟ್ಟಿ ಹಾಕಿದ ಪರಿಣಾಮವಾಗಿ ಅವುಗಳ ಕಾಲುಗಳು ಗಾಯಗೊಂಡು ರಕ್ತ ಸೋರುವ ದೃಶ್ಯಗಳನ್ನು ನಾವು ಸಹಜವಾಗಿ ಎಂಬಂತೆ ಸ್ವೀಕರಿಸಿಕೊಂಡು ಬಂದಿದ್ದೇವೆ. ಆನೆ ಬಲಿಷ್ಠ ಪ್ರಾಣಿಯಾಗಿರುವುದರಿಂದ ಅವುಗಳನ್ನು ಜನೋಪಯೋಗಿ ಕಾರ್ಯಗಳಿಗೆ ತಲೆತಲಾಂತರಗಳಿಂದ ಮನುಷ್ಯ ಬಳಸುತ್ತಾ ಬಂದಿದ್ದಾನೆ. ಈಗಲೂ ಬಳಸುತ್ತಿದ್ದಾನೆ. ಆದರೆ ಕನಿಷ್ಠ ಜನೋಪಯೋಗಿಯಲ್ಲದ ಕೇವಲ ಮನರಂಜನೆ ಮತ್ತು ನಂಬಿಕೆಗಾಗಿ ಆನೆಯಂತಹ ಕಾಡು ಪ್ರಾಣಿಯನ್ನು ದುರ್ಬಳಕೆ ಮಾಡುವುದು ತಪ್ಪು. ಉತ್ಸವಗಳಲ್ಲಿ ಆಕರ್ಷಣೆಗಾಗಿ ಆನೆಯನ್ನು ಬಳಸುವುದು ಸರಿ ಎಂದಾದರೆ, ಹೊಟ್ಟೆಪಾಡಿಗಾಗಿ ಕರಡಿ ಆಡಿಸುವವರ ಮೇಲೆ ಸರಕಾರ ಯಾಕೆ ಕ್ರಮ ತೆಗೆದುಕೊಳ್ಳಬೇಕು? ಜಂಬೂ ಸವಾರಿ ಇಲ್ಲದೇ ಇದ್ದರೆ ಮೈಸೂರು ದಸರಾವೇ ಇಲ್ಲ ಎನ್ನುವಂತಹ ಮಾತಿದೆ. ಜಂಬೂಸವಾರಿಯನ್ನು ಎರಡು ಕಾರಣಕ್ಕಾಗಿ ವಿರೋಧಿಸಬೇಕಾಗಿದೆ. ಒಂದು ಅದು ರಾಜಪ್ರಭುತ್ವವನ್ನು ವೈಭವೀಕರಿಸುತ್ತದೆ. ಪ್ರಜೆಗಳೇ ಪ್ರಭುಗಳಾಗಿರುವ ಈ ಕಾಲದಲ್ಲಿ, ಜಂಬೂ ಸವಾರಿ ಮೆರವಣಿಗೆ ಮಾನಸಿಕ ಗುಲಾಮತನ. ಇನ್ನೊಂದು, ಈ ಜಂಬೂಸವಾರಿಗಾಗಿ ಆನೆಗಳನ್ನು ಹಲವು ವರ್ಷಗಳಿಂದ ತರಬೇತುಗೊಳಿಸಲಾಗುತ್ತದೆ. ತರಬೇತಿಗಳೆಂದರೆ ಆನೆಗಳನ್ನು ದೈಹಿಕ ಹಿಂಸೆ ನೀಡಿ ಪಳಗಿಸುವುದು. ಹೀಗೆ ಪಳಗಿಸಿದ ಆನೆಗಳನ್ನು ಲಕ್ಷಾಂತರ ಜನರು ಸೇರಿರುವ ದಸರಾದಂತಹ ಉತ್ಸವಗಳಲ್ಲಿ ಬಳಸಲಾಗುತ್ತದೆ. ಒಂದು ವೇಳೆ ಆನೆಗಳೇನಾದರೂ ಮದವೇರಿ ರಾದ್ಧಾಂತ ಮಾಡಿದರೆ, ಅಲ್ಲಿ ನಡೆಯಬಹುದಾದ ದುರಂತಗಳನ್ನು ಊಹಿಸುವುದಕ್ಕೂ ಅಸಾಧ್ಯ. ಆದುದರಿಂದ ಯಾವುದೇ ಉತ್ಸವಗಳಲ್ಲಿ ಆನೆಗಳ ಬಳಕೆಯನ್ನು ಸರಕಾರ ಸಂಪೂರ್ಣವಾಗಿ ನಿಷೇಧಿಸಬೇಕಾಗಿದೆ.

ಪ್ರಾಣಿ ಹಿಂಸೆ ರಹಿತವಾಗಿ ಬದುಕುವುದು ಮನುಷ್ಯನಿಗೆ ಅಸಾಧ್ಯ. ಯಾಕೆಂದರೆ ಆಹಾರಕ್ಕಾಗಿ ಮನುಷ್ಯ ಸಸ್ಯದ ಜೊತೆ ಜೊತೆಗೇ ಪ್ರಾಣಿ, ಪಕ್ಷಿಗಳನ್ನು ಅವಲಂಬಿಸಿದ್ದಾನೆ. ಆದುದರಿಂದಲೇ ‘ಕೊಂದ ಪಾಪ ತಿಂದು ಪರಿಹಾರ’ ಎನ್ನುವ ಗಾದೆ ನಮ್ಮ ನಡುವೆ ಅಸ್ತಿತ್ವದಲ್ಲಿದೆ. ಎರಡು ಅರ್ಥಗಳನ್ನು ಈ ಗಾದೆ ಧ್ವನಿಸುತ್ತದೆ. ಒಬ್ಬ ತಾನು ಗೈದ ಅನ್ಯಾಯದ ಫಲವನ್ನು ಉಂಡಾಗಲೇ ಆ ಅನ್ಯಾಯಕ್ಕೆ ಪರಿಹಾರ ಸಿಗುತ್ತದೆ. ಇನ್ನೊಂದು, ತಿನ್ನುವುದಕ್ಕಾಗಿ ಬಳಸುವುದಿದ್ದರೆ ಮಾತ್ರ ಒಂದು ಪ್ರಾಣಿ, ಪಕ್ಷಿಯನ್ನು ಪಾಪಪ್ರಜ್ಞೆಯೊಂದಿಗೆ ಕೊಲ್ಲುವ ಅಧಿಕಾರ ಮನುಷ್ಯನಿಗಿದೆ. ಧರ್ಮ ಮತ್ತು ನಂಬಿಕೆಯ ಹೆಸರಿನಲ್ಲಿ ಪ್ರಾಣಿಯನ್ನು ಕೊಂದು ಎಸೆಯುವುದು, ಹೂಳುವುದು ಅಥವಾ ಅವುಗಳಿಗೆ ದೌರ್ಜನ್ಯವೆಸಗುವುದು ಯಾವ ರೀತಿಯಲ್ಲೂ ಸಮರ್ಥನೀಯವಲ್ಲ. ತಿನ್ನುವುದಕ್ಕಾಗಿ ಪ್ರಾಣಿಯನ್ನು ಕೊಂದರೆ ಅದರ ಪಾಪ ಪರಿಹಾರವಾಗಬೇಕಾದರೆ ತಿಂದು ಮುಗಿಸಲೇಬೇಕು. ಆದರೆ ಆನೆಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಪಾಪ ತಿಂದು ಮುಗಿಯುವಂತಹದಲ್ಲ. ಆದುದರಿಂದ ಆನೆಗಳ ಮೇಲೆ ಎಸಗುವ ದೌರ್ಜನ್ಯಗಳಿಗಾಗಿ ಮನುಷ್ಯನಿಗೆ ಅಂಕುಶ ಹಾಕಲೇ ಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News