ಎನ್‌ಇಪಿ-2020: ಯಾಕಿಷ್ಟು ತುರ್ತು?

Update: 2021-08-24 09:05 GMT

ಕೇಂದ್ರ ಸರಕಾರ ಜಾರಿಗೆ ತಂದಿರುವ 2020ರ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯನ್ನು ಕರ್ನಾಟಕ ಸರಕಾರ ಅತ್ಯಂತ ಉತ್ಸುಕತೆಯಿಂದ ಜಾರಿಗೆ ತಂದಿದೆ. ಈ ಸಂಬಂಧ ಈಗಾಗಲೇ ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವತ್ಥ ನಾರಾಯಣರವರು 2021-2022ನೇ ಸಾಲಿನ ಈ ವರ್ಷದಲ್ಲೇ ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಲಾಗುತ್ತದೆ ಎಂದು ಕೆಲವು ಸಮಯದಿಂದ ಹೇಳುತ್ತಿದ್ದರು. ಇದರ ಜೊತೆಗೆ ರಾಜ್ಯ ಸರಕಾರ ಉನ್ನತ ಶಿಕ್ಷಣ ಇಲಾಖೆಯಡಿಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ವಿಶ್ವವಿದ್ಯಾನಿಲಯ ಮತ್ತು ಪದವಿ ಕಾಲೇಜುಗಳು) ಈ ವರ್ಷದಿಂದಲೇ ಮೂರು ಮತ್ತು ನಾಲ್ಕುವರ್ಷಗಳ ಪದವಿ ತರಗತಿಗಳನ್ನು ಪ್ರಾರಂಭಿಸಲು ಆದೇಶ ಹೊರಡಿಸಿದೆ. 2020ರ ಹೊಸ ಶಿಕ್ಷಣ ನೀತಿ ಅನೇಕ ವಿಷಯಗಳಲ್ಲಿ ಕ್ರಾಂತಿಕಾರಿ ಎಂದು ಬಿಂಬಿಸಲಾಗಿದ್ದರೂ ಇದರ ಯಾವ ಸಾಧಕ ಬಾಧಕಗಳನ್ನು ಪರಿಶೀಲಿಸದೆ ಮಾನ್ಯ ಉನ್ನತ ಶಿಕ್ಷಣ ಸಚಿವರು ರಾಜ್ಯದಲ್ಲಿ ಇಷ್ಟು ತರಾತುರಿಯಲ್ಲಿ ಅನುಷ್ಠಾನ ಮಾಡುತ್ತಿರುವುದು ಏಕೆ ಎಂದು ತಿಳಿಯದಾಗಿದೆ. ಕಳೆದ ಸರಿಸುಮಾರು ಒಂದುವರೆ ವರ್ಷಕ್ಕೂ ಹೆಚ್ಚು ಕಾಲ ಕೋವಿಡ್‌ನಿಂದಾಗಿ ಶೈಕ್ಷಣಿಕ ವೇಳಾಪಟ್ಟಿ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಈಗಲೂ ಅನಿಶ್ಚಿತ ಸ್ಥಿತಿಯಲ್ಲಿಯೇ ಮುಂದುವರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಮಹತ್ವದ ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಿರುವುದು ಸೂಕ್ತ ನಿರ್ಧಾರವಲ್ಲ.

2020ರ ಶಿಕ್ಷಣ ನೀತಿ ದೇಶದ ಶಿಕ್ಷಣ ವ್ಯವಸ್ಥೆಯ ಮಹತ್ತರವಾದ ಬದಲಾವಣೆಯಾಗಿದ್ದು, ಇದನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವ ಮೊದಲು ಪ್ರಯೋಗಿಕವಾಗಿ ಒಂದೆರಡು ವಿಶ್ವವಿದ್ಯಾನಿಲಯ ಮತ್ತು ಪದವಿ ಕಾಲೇಜುಗಳಲ್ಲಿ ಜಾರಿಗೊಳಿಸಿ ಅದರ ಸಾಧಕ ಬಾಧಕಗಳನ್ನು ವಿಶ್ಲೇಷಿಸಿ ರಾಜ್ಯದಲ್ಲಿ ಜಾರಿಗೆ ತರುವುದು ಸೂಕ್ತವಾಗುತ್ತಿತ್ತು. ಜೊತೆಗೆ ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಪದವಿ ಕಾಲೇಜುಗಳಲ್ಲಿ ಬೋಧಿಸುವ ಅಧ್ಯಾಪಕರಿಗೆ ಯಾವುದೇ ಪೂರ್ವ ತಯಾರಿಗೆ ಅವಕಾಶ ಕೊಡದೆ, ಪಠ್ಯಕ್ರಮ ರಚಿಸದೆ, ಅಗತ್ಯ ಪಠ್ಯಪುಸ್ತಕಗಳು ಕೂಡ ವಿದ್ಯಾರ್ಥಿಗಳಿಗೆ ದೊರೆಯದೇ ಕಲಿಕೆ ನಡೆಯುವುದು ಹೇಗೆ? ಮಾನ್ಯ ಉನ್ನತ ಶಿಕ್ಷಣ ಸಚಿವರು ಇತ್ತೀಚೆಗೆ ರಾಜ್ಯದ ಐದು ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡ ಭಾಷೆಯಲ್ಲಿ ಈ ವರ್ಷದಿಂದ ಇಂಜಿನಿಯರಿಂಗ್ ಪದವಿ ನೀಡಲಾಗುವುದು ಎಂದು ಘೋಷಿಸಿದ್ದರು. ಬೆಂಗಳೂರಿನಲ್ಲಿ ಇವತ್ತು ಒಂದು ಸೆಕ್ಯೂರಿಟಿ ಕೆಲಸ ಪಡೆಯಲು ಇಂಗ್ಲಿಷ್ ಅನಿವಾರ್ಯ ಎನ್ನುವ ಪರಿಸ್ಥಿತಿ ಇರುವಾಗ ಕನ್ನಡದಲ್ಲಿ ಇಂಜಿನಿಯರಿಂಗ್ ಪದವಿ ಪಡೆಯಲು ಯಾರು ಮುಂದೆ ಬರುತ್ತಾರೆ? ಬಂದರೆ ಅವರಿಗೆ ಉದ್ಯೋಗದ ಅವಕಾಶಗಳನ್ನು ನೀಡುವವರು ಯಾರು? ಇಂಜಿನಿಯರಿಂಗ್ ಪದವಿಗೆ ಬೇಕಾಗಿರುವ ಅಗತ್ಯ ಪಠ್ಯಪುಸ್ತಕಗಳು ಕನ್ನಡದಲ್ಲಿ ತಯಾರಾಗಿದೆಯೇ? ಹಿಂದೆ ಹಂಪಿ ವಿಶ್ವವಿದ್ಯಾನಿಲಯ ಒಂದಷ್ಟು ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದ ಪಠ್ಯಪುಸ್ತಕಗಳನ್ನು ಪ್ರಕಟಿಸುವ ಪ್ರಯತ್ನ ಹೊರತುಪಡಿಸಿ ಅಂತಹ ದೊಡ್ಡ ಪ್ರಯತ್ನಗಳು ಇತ್ತೀಚೆಗೆ ನಡೆದಿಲ್ಲ.

ಕನ್ನಡದಲ್ಲಿ ಎಲ್ಲಾ ರೀತಿಯ ಜ್ಞಾನ ಸಂಬಂಧಿ ಪುಸ್ತಕಗಳು ದೊರೆಯುವಂತೆ ಮಾಡದ ಹೊರತು ಮತ್ತು ಸಮಾನ ಶಿಕ್ಷಣ ವ್ಯವಸ್ಥೆ ಇಲ್ಲದ ನಮ್ಮ ದೇಶದಲ್ಲಿ ಇಂತಹ ಪ್ರಯೋಗಗಳಿಗೆ ಬಲಿಯಾಗುವುದು ಬಡವರ ಮತ್ತು ಅವಕಾಶ ವಂಚಿತ ಸಮುದಾಯಗಳ ಮಕ್ಕಳು. ಇತ್ತೀಚೆಗೆ ಕಾಂಚಾ ಐಲಯ್ಯ, ಶೆಫರ್ಡ್ ಮತ್ತು ಕಾರ್ತಿಕ್ ರಾಜಾ ಕುರುಪುಸ್ವಾಮಿ ಸಂಪಾದಿಸಿರುವ ‘ಶೂದ್ರಾಸ್: ವಿಷನ್ ಫಾರ್ ಎ ನ್ಯೂ ಫಾಥ್’ ಎನ್ನುವ ಪುಸ್ತಕದಲ್ಲಿ ಇಂಗ್ಲಿಷ್ ಭಾಷಾ ಕಲಿಕೆಯಲ್ಲಿ ಹಿಂದುಳಿದಿರುವಿಕೆ ಕೂಡ ಹಿಂದುಳಿದ ಸಮುದಾಯಗಳ ಶೈಕ್ಷಣಿಕ ಮತ್ತು ಅರ್ಥಿಕ ಬೆಳವಣಿಗೆಗೆ ತೊಡಕಾಗಿದೆ ಎನ್ನುವುದನ್ನು ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ನೀಡಲು ಹೊರಟಿರುವ ಪ್ರಯತ್ನ ನೋಡಿದರೆ ಇದು ಮತ್ತದೇ ಸಾಮಾಜಿಕ ಅಸಮಾನತೆಗೆ ದಾರಿ ಮಾಡಿಕೊಡುತ್ತದೆ.

ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ಶಿಕ್ಷಣ ನೀತಿ-2020ರ ಬಗ್ಗೆ ಸಮಗ್ರ ಸಂವಾದ ಮತ್ತು ಚರ್ಚೆಗಳು ನಡೆದಿರುವ ಬಗ್ಗೆ ಸಾಕಷ್ಟು ಮಾಹಿತಿಗಳಿಲ್ಲ, ಒಂದಷ್ಟು ವಿವಿಗಳಲ್ಲಿ ಈ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಹೊಸ ಶಿಕ್ಷಣ ನೀತಿಯ ಬಗ್ಗೆ ಸಂವಾದ ಚರ್ಚೆಗಳು ನಡೆದರೂ ಒಂದು ಸಮಗ್ರ ನೋಟವನ್ನು ನೀಡುವಲ್ಲಿ ವಿಫಲವಾಗಿವೆ. ಕೆಲ ಸಂಘಟನೆಗಳು ಮತ್ತು ಕ್ಲಬ್ ಹೌಸ್‌ನಲ್ಲಿ ಎನ್‌ಇಪಿ ಬಗ್ಗೆ ಉತ್ತಮ ಚರ್ಚೆಗಳು ನಡೆದರೂ ಸರಕಾರ ಇದನ್ನು ಗಮನಿಸಿರುವ ಸಾಧ್ಯತೆಗಳು ಕಡಿಮೆ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಹೊಸ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ರಾಜ್ಯ ಸರಕಾರ ಅನಿಷ್ಠಾನಗೊಳಿಸುತ್ತಿರುವುದನ್ನು ವಿರೋಧಿಸಿದ್ದಾರೆ. ಅದರೆ ಈ ಬಗ್ಗೆ ಸರಕಾರ ದಿವ್ಯಮೌನ ಪ್ರದರ್ಶಿಸುತ್ತಿದ್ದು ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿಯನ್ನು ಯಾವುದೇ ಸೂಕ್ತ ತಯಾರಿ ಇಲ್ಲದೆ ಅನುಷ್ಠಾನಗೊಳಿಸುತ್ತಿರುವುದು ಮುಂದಿನ ದಿನಗಳಲ್ಲಿ ಮತ್ತಷ್ಟು ಗೊಂದಲಗಳಿಗೆ ಕಾರಣವಾಗುವ ಸಾಧ್ಯತೆಯೇ ಹೆಚ್ಚು. ಇದನ್ನು ಪ್ರಶ್ನಿಸಬೇಕಾದ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಮತ್ತು ಅಧ್ಯಾಪಕರು ಮೌನವಾಗಿದ್ದಾರೆ.

Writer - ವಸಂತ ರಾಜು ಎನ್., ತಲಕಾಡು

contributor

Editor - ವಸಂತ ರಾಜು ಎನ್., ತಲಕಾಡು

contributor

Similar News