×
Ad

ಬೆಂಗಳೂರು: 'ವ್ಯಾಕ್ಸಿನೇಟ್ ಇಂಡಿಯಾ' ಕಾರ್ಯಕ್ರಮಕ್ಕೆ ಉಪ ರಾಷ್ಟ್ರಪತಿ ಚಾಲನೆ

Update: 2021-08-24 11:52 IST

ಬೆಂಗಳೂರು, ಆ.24:  ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಸುಸ್ಥಿರ ಗುರಿಗಳ ಸಹಕಾರ ಕೇಂದ್ರ ಹಾಗೂ ಗಿವ್ ಇಂಡಿಯಾ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ‘ವ್ಯಾಕ್ಸಿನೇಟ್ ಇಂಡಿಯಾ’ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು  ಇಂದು ರಾಜಭವನದಲ್ಲಿ ಚಾಲನೆ ನೀಡಿದರು.

ಸಾಂಕೇತಿಕವಾಗಿ ಇಬ್ಬರು ಮಹಿಳೆಯರಿಗೆ ವ್ಯಾಕ್ಸಿನ್ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಪರಾಷ್ಟ್ರಪತಿ,   ಸಾರ್ವಜನಿಕರು ಮೈ ಮರೆಯಬಾರದು, ಕಡ್ಡಾಯವಾಗಿ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸುವುದು, ಕೈ ತೊಳೆಯುಯುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ. ಲಸಿಕೆಗೆ ಪರ್ಯಾಯ ಯಾವುದೂ ಇಲ್ಲ. ಸಾಧ್ಯವಾದಷ್ಟು ಜಂಕ್ ಫುಡ್ ಸೇವಿಸದೆ, ಭಾರತೀಯ ಸಾಂಪ್ರದಾಯಕ  ಆಹಾರ ಸೇವಿಸಬೇಕು  ಎಂದು ಸಲಹೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಡವರು, ಕೆಳ ಹಂತದ ವರ್ಗದವರಿಗೆ ಲಸಿಕೆ ನೀಡುವುದು ನಮ್ಮ ಗುರಿ ಎಂದು ತಿಳಿಸಿದರು.

ದಾನಿಗಳು ಹಾಗೂ ಖಾಸಗಿ ಸಂಸ್ಥೆಗಳು ಸಿ ಎಸ್ ಆರ್ ನಿಧಿ ಮೂಲಕ ಲಸಿಕೆ ನೀಡಲು ಮುಂದಾಗಬೇಕು ಎಂದ ಅವರು, ಸರ್ಕಾರ ಹಾಗೂ ಸಮಾಜ ಒಟ್ಟಾಗಿ ಕೋವಿಡ್ ವಿರುದ್ಧ ಹೋರಾಡಬೇಕಿದೆ ಎಂದರು.

ಸೆಪ್ಟಂಬರ್ ತಿಂಗಳಿನಿಂದ ಪ್ರತಿ ದಿನ 5 ಲಕ್ಷ ಜನರಿಗೆ ಲಸಿಕೆ ನೀಡುವ  ಉದ್ದೇಶವಿದ್ದು, ಪ್ರಸಕ್ತ 3.5 ರಿಂದ 4 ಲಕ್ಷ ಜನರಿಗೆ ಲಸಿಕೆ ನೀಡಲಾಗುತ್ತಿದೆ.  ಕೇಂದ್ರ ಸರ್ಕಾರದಿಂದ 1.5 ಕೋಟಿ ಲಸಿಕೆ ಪೂರೈಕೆಯಾಗುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಸಚಿವರಾದ ಡಾ.ಕೆ.ಸುಧಾಕರ, ಮುನಿರತ್ನ, ಸಂಸದ ಪಿ.ಸಿ ಮೋಹನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News