×
Ad

ಬಿಬಿಎಂಪಿ ಶಾಲಾ ಮಕ್ಕಳ ಸ್ವೆಟರ್ ಹಗರಣ: ನಟ ಕೋಮಲ್ ವಿರುದ್ಧ ದಸಂಸ ಆಕ್ರೋಶ

Update: 2021-08-24 22:20 IST

ಬೆಂಗಳೂರು, ಆ.24: ಬಿಬಿಎಂಪಿ ಶಾಲಾ ಮಕ್ಕಳ ಸ್ವೆಟರ್ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ಇದರಲ್ಲಿ ನಟ ಕೋಮಲ್ ನೇರವಾಗಿ ಭಾಗಿಯಾಗಿದ್ದಾರೆಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ತಮಟೆ ಚಳುವಳಿ ನಡೆಸಿದರು.

ಮಂಗಳವಾರ ನಗರದ ಬಿಬಿಎಂಪಿ ಕಚೇರಿ ಮುಂಭಾಗ ಸಮಿತಿ ಅಧ್ಯಕ್ಷ ಡಾ.ಸಿ.ಎಸ್.ರಘು ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಸ್ವೆಟರ್‍ಗಳನ್ನು ಮಾರಾಟ ಮಾಡಿ ಆಕ್ರೋಶ ಹೊರಹಾಕಿದರು.

ಬಳಿಕ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿ.ಎಸ್.ರಘು, ಪಾಲಿಕೆ ಶಾಲಾ, ಕಾಲೇಜುಗಳಲ್ಲಿ ದಲಿತ, ಹಿಂದುಳಿದ ಮತ್ತು ಕಡು ಬಡವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ. 2020-21ನೆ ಸಾಲಿನಲ್ಲಿ ಪಾಲಿಕೆ ಮಕ್ಕಳಿಗೆ ಸ್ವೆಟರ್‍ಗಳನ್ನು ನೀಡಲು ಅನುದಾನ ಮೀಸಲು ಇಟ್ಟಿರುತ್ತಾರೆ. ಆದರೆ, ಪಾಲಿಕೆಯ ಕೆಲ ಅಧಿಕಾರಿಗಳು ಟೆಂಡರ್ ಕರೆಯದೇ 4ಜಿ ವಿನಾಯಿತಿ ಪಡೆದು ಕರ್ನಾಟಕ ಕೈಮಗ್ಗ ನಿಗಮಕ್ಕೆ ಸ್ವೆಟರ್‍ಗಳನ್ನು ಸರಬರಾಜು ಮಾಡಲು ಆದೇಶ ನೀಡಿದ್ದಾರೆ ಎಂದು ಆರೋಪಿಸಿದರು.

ಕಳೆದ ಸಾಲಿನಲ್ಲಿ ಕೊರೋನ ಸಾಂಕ್ರಮಿಕ ರೋಗದ ಕಾರಣದಿಂದ ಶಾಲಾ, ಕಾಲೇಜು ಬಂದ್ ಮಾಡಲಾಗಿತ್ತು. ಆದರೆ, ಸ್ವೆಟರ್‍ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು 1.76 ಕೋಟಿ ರೂ.ಹಣವನ್ನು ಪಾವತಿ ಮಾಡಲಾಗಿದೆ. ಅಂದಾಜು 16 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಸ್ವೆಟರ್‍ಗಳನ್ನು ವಿತರಣೆ ಮಾಡದೇ ಈ ಯೋಜನೆಯಲ್ಲಿ ಪಾಲಿಕೆ ಅಧಿಕಾರಿಗಳು ಹಣವನ್ನು ಲೂಟಿ ಮಾಡಿದ್ದಾರೆ ಎಂದು ದೂರಿದರು.
ಶ್ರೀಮಂತರ ಮಕ್ಕಳಂತೆ ನಮ್ಮ ಪಾಲಿಕೆ ಶಾಲಾ, ಕಾಲೇಜು ಮಕ್ಕಳು ಮಳೆ, ಚಳಿಯಿಂದ ರಕ್ಷಣೆ ಪಡೆಯಬೇಕು ಮತ್ತು ಶಿಸ್ತುನಿಂದ ಕಾಣಬೇಕು ಎಂದು ಸೈಟರ್‍ಗಳ ಯೋಜನೆ ಆದರೆ ಅಧಿಕಾರಿಗಳ ಧನದಾಹದಿಂದ ಯೋಜನೆ ಹಳ್ಳ ಹಿಡಿದಿದೆ.

ಇಂದು ಸ್ವೆಟರ್ ಖರೀದಿ ಯೋಜನೆಯಲ್ಲಿ ಭ್ರಷ್ಟಾಚಾರವೆಸಗಿದ ಅಧಿಕಾರಿಗಳನ್ನು ಅಮಾನತು ಮಾಡಲು ತಮಟೆ ಚಳುವಳಿ ಹಾಗೂ ಸ್ವೆಟರ್ ಖರೀದಿ ಅವ್ಯವಹಾರದ ಸೂಕ್ತ ತನಿಖೆ ಮಾಡಲುಸ್ವೆಟರ್‍ಗಳ ಮಾರಾಟ ಮಾಡಿ ಬಂದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಮರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೋರಾಟಗಾರ ಎ.ಜೆ.ಖಾನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News