ತಾಲಿಬಾನಿ(ವಿದ್ಯಾರ್ಥಿ)ಗಳು ಪರೀಕ್ಷೆ ಬರೆದು ಪಾಸಾಗಲಿ

Update: 2021-08-25 05:16 GMT
Photo: (AP/PTI)

ಹಾದಿ ತಪ್ಪಿದವರು ಸರಿ ದಾರಿಯಲ್ಲಿ ಸಾಗಲಿ ಎಂದು ಹಾರೈಸುವುದು ತಪ್ಪಲ್ಲ. ಎಲ್ಲ ಸಂದರ್ಭಗಳಲ್ಲಿಯೂ ಹಳೆಯ ಗಾಯಗಳನ್ನೇ ಕೆರೆದು ಕೆರೆದು ಸುಧಾರಣೆ ಸಾಧ್ಯವೇ ಇಲ್ಲ ಎಂಬ ಸಿನಿಕತನದ ನಿರ್ಧಾರದಿಂದ ಕೈಕೊಡವಿ ಬಿಡುವುದು ತಪ್ಪು. ಸುಧಾರಣೆಯ ಪ್ರಯತ್ನ ಮತ್ತು ಹಾರೈಕೆ ನಿರಂತರವಾಗಿ ನಡೆಯುತ್ತಲೇ ಇರಬೇಕು. ಆದರೆ ಈ ರೀತಿಯ ಹರಕೆ-ಹಾರೈಕೆಗಳು ಪರೀಕ್ಷೆಯಲ್ಲಿ ಪಾಸಾಗುವ ಮೊದಲೇ ನೀಡುವ ಫಲಿತಾಂಶದ ಸರ್ಟಿಫಿಕೇಟ್‌ಗಳಾಗಬಾರದು. ಅಫ್ಘಾನಿಸ್ತಾನದ ಬೆಳವಣಿಗೆಯ ಹಿನ್ನೆಲೆಯಲ್ಲಿ ತಾಲಿಬಾನ್ (ವಿದ್ಯಾರ್ಥಿಗಳು) ಬಗ್ಗೆ ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಪಾದಕೀಯ ಮಾತ್ರ ಪರೀಕ್ಷೆ ಪೂರ್ವದ ರಿಸಲ್ಟ್ ಶೀಟ್‌ನಂತಿದೆ.

ಸಂಪಾದಕೀಯದ ಬಗೆಗಿನ ನನ್ನ ಕೆಲವು ಭಿನ್ನಾಭಿಪ್ರಾಯಗಳನ್ನು ದಾಖಲಿಸ ಬಯಸುತ್ತೇನೆ.

1. ವಿಶ್ವದ ಎರಡು ಸೂಪರ್ ಪವರ್‌ಗಳನ್ನು ತಾಲಿಬಾನಿಗಳು ಮಣ್ಣುಮುಕ್ಕಿಸಿದರೆಂದು ಬರೆದಿದ್ದೀರಿ. ಯುದ್ಧವನ್ನು ಎರಡು ಬಗೆಯಲ್ಲಿ ನೋಡಬಹುದು, ಮೊದಲನೆಯದು ಯುದ್ಧಮಾಡುವವನ ದೃಷ್ಟಿಯಿಂದ, ಇನ್ನೊಂದು ಯಾರಿಗಾಗಿ ಆತ ಯುದ್ಧ ಮಾಡುತ್ತಿದ್ದಾನೋ ಅವನ ದೃಷ್ಟಿಯಿಂದ. ನೀವು ನೋಡಿರುವುದು ಯುದ್ಧ ನಡೆಸಿದ ತಾಲಿಬಾನಿಗಳ ದೃಷ್ಟಿಯಿಂದ. ಇವರು ಯಾರಿಗಾಗಿ ಯುದ್ಧ ನಡೆಸಿದ್ದೇವೆ ಎಂದು ಹೇಳಿದ್ದಾರೋ ಆ ಅಫ್ಘಾನಿಸ್ತಾನದ ಜನತೆ ಗೆದ್ದಿದ್ದಾರೋ, ಸೋತಿದ್ದಾರೋ ನೀವೇ ಹೇಳಿ ಬಿಡಿ. ಬ್ರಿಟಿಷರಿಂದ ಹಿಡಿದು ಅಮೆರಿಕ, ಸೋವಿಯತ್ ಯೂನಿಯನ್‌ವರೆಗೆ ನಿರಂತರವಾಗಿ ಪಾಕಿಸ್ತಾನ, ಮುಂದಿನ ದಿನಗಳಲ್ಲಿ ಚೀನಾ?- ಈ ಎಲ್ಲ ದೇಶಗಳಿಗೂ ಅಫ್ಘಾನಿಸ್ತಾನ ಒಂದು ರಣರಂಗ ಅಷ್ಟೆ. ಸೋಲು-ಗೆಲುವುಗಳು ಯಾರದ್ದೇ ಆಗಲಿ ಪ್ರತಿಬಾರಿ ಸೋಲುವುದು ಮಾತ್ರ ಯುದ್ಧಪೀಡಿತ ನೆಲದ ಅಸಹಾಯಕ, ಅಮಾಯಕ ಜನ. ಇದನ್ನು ಗೆಲುವು ಎನ್ನಬಹುದೇ?

2. ಅಮೆರಿಕ ನಿಜವಾಗಿ ಸೋತು ಹಿಂದಿರುಗಿ ನೋಡದೆಯೇ ಪಲಾಯನಮಾಡಿದೆ ಎಂದು ಹೇಳಬಹುದೇ? ಈಗಲೂ ಅಲ್ಲಿನ ವಿಮಾನನಿಲ್ದಾಣಗಳು ಮತ್ತು ಸೇನಾ ನೆಲೆಗಳು ಸೇರಿದಂತೆ ಅರ್ಧ ಅಫ್ಘಾನಿಸ್ತಾನ ಅಮೆರಿಕದ ಸೇನೆಯ ಕೈಯಲ್ಲಿದೆ. ‘‘ನಮ್ಮವರ ಬೆನ್ನಿಗೆ ಗುಂಡು ಹಾರಿಸಬೇಡಿ, ಬೇರೆ ಏನನ್ನಾದರೂ ಮಾಡಿಕೊಳ್ಳಿ’’ ಎಂದಷ್ಟೇ ಆಗಿರುವ ಒಪ್ಪಂದ. ಅದನ್ನೇ ತಾಲಿಬಾನಿಗಳು ಮಾಡುತ್ತಿದ್ದಾರೆ. ಅಮೆರಿಕ ಅಲ್ಲಿದ್ದ ಸೇನೆಗಾಗಿ ಮತ್ತು ಅಫ್ಘಾನಿಸ್ತಾನದ ಸೇನೆಯ ತರಬೇತಿಗಾಗಿ ಒಂದು ಲಕ್ಷ ಕೋಟಿ ಖರ್ಚು ಮಾಡಿ ಹಣಕಳೆದುಕೊಂಡು ಕಷ್ಟದಲ್ಲಿದೆ ಎಂದು ತಿಳಿದುಕೊಂಡಿದ್ದರೆ ನಾವು ಮೂರ್ಖರು. ಆ ಖರ್ಚು ವೆಚ್ಚಕ್ಕಾಗಿ ಅದು ಅಫ್ಘಾನಿಸ್ತಾನದ ಬೊಕ್ಕಸವನ್ನು ದೋಚಿದೆ, ಪ್ರಾಕೃತಿಕ ಸಂಪದ್ಭರಿತ ನೆಲವನ್ನು ಬರಿದುಮಾಡಿದೆ. ಲಾಭದ ಲೆಕ್ಕವನ್ನು ಅವರೆಂದೂ ಕೊಡುವುದಿಲ್ಲ. ಅಮೆರಿಕ ಎನ್‌ಜಿಒ ಅಲ್ಲ, ಅದು ಅಲ್ಲಿಗೆ ಹೋಗಿರುವುದು ಸಮಾಜ ಸೇವೆ ಮಾಡಲಿಕ್ಕಲ್ಲ, ವ್ಯಾಪಾರ ಮಾಡಲಿಕ್ಕೆ.

3. ಕಳೆದ ಇಪ್ಪತ್ತು ವರ್ಷಗಳಲ್ಲಿ ಮಾತ್ರ ಅಫ್ಘಾನಿಸ್ತಾನ ಅಮೆರಿಕದ ನಿಯಂತ್ರಣದಲ್ಲಿರಲಿಲ್ಲ. ಅದರ ಹಿಂದಿನ 20 ವರ್ಷ ಕೂಡಾ ಪರೋಕ್ಷವಾಗಿ ಅದು ಅಮೆರಿಕದ ನಿಯಂತ್ರಣದಲ್ಲಿರಲಿಲ್ಲವೇ? ಸೋವಿಯತ್ ಸೇನೆ ವಿರುದ್ಧ ಕಾದಾಡಲು ಮುಜಾಹಿದ್‌ಗಳಿಗೆ ಶಸ್ತ್ರಾಸ್ತ್ರ, ತರಬೇತಿ, ದುಡ್ಡು, ಆಶ್ರಯ ನೀಡಿದ್ದು ಯಾರು?

ಈಗ ಮತ್ತೆ ಅದು ಪರೋಕ್ಷ ನಿಯಂತ್ರಣದ ಹಳೆಯ ವರಸೆಗೆ ಮರಳಲಿದೆ. ಅಧಿಕೃತವಾಗಿ ಸೇನೆ ವಾಪಸು ಪಡೆಯಲಿರುವ ಅಮೆರಿಕ ಆ ಕಡೆ ತಿರುಗಿ ತಲೆಹಾಕೊಲ್ಲ ಎಂದು ತಿಳಿದುಕೊಂಡರೆ ನಾವು ಮೂರ್ಖರು. ಹೊಣೆಗಾರಿಕೆಯನ್ನು ಹೊರಿಸಲಾಗದ ಈ ಪರೋಕ್ಷ ನಿಯಂತ್ರಣ ಪ್ರತ್ಯಕ್ಷ ನಿಯಂತ್ರಣಕ್ಕಿಂತಲೂ ಅಪಾಯಕಾರಿ.

4. ಈ ಪರೋಕ್ಷ ನಿಯಂತ್ರಣದ ಒಂದು ಚಿತ್ರ ಕಳೆದೆರಡು ದಿನಗಳಲ್ಲಿ ನಮಗೆ ನೋಡಲು ಸಿಕ್ಕಿದೆ. ತಾಲಿಬಾನಿ ಆಡಳಿತ ಅಲ್ಲಿನ ಜನಸಂಖ್ಯೆಯಲ್ಲಿ ಶೇಕಡಾ 27ರಷ್ಟಿರುವ ಪಶ್ತೂನ್ ಸರಕಾರ ಆಗಬಾರದು, ಆಂತರಿಕ ಕಲಹದಿಂದ ಮುಕ್ತಿ ಪಡೆಯಬೇಕು ಎಂದು ಬರೆದಿದ್ದೀರಿ. ಈಗಾಗಲೇ ಶೇಕಡಾ 25ರಷ್ಟಿರುವ ತಾಜಿಕಿ ಮತ್ತು ಶೇಕಡಾ 19ರಷ್ಟಿರುವ ಹಝಾರ ಜನಾಂಗದ ಪ್ರತಿರೋಧ ಮತ್ತು ಅವರ ಮೇಲಿನ ದೌರ್ಜನ್ಯ ಶುರುವಾಗಿದೆ.

ಈ ಜನಾಂಗೀಯ ಘರ್ಷಣೆ ತಾಲಿಬಾನ್ ಒಳಗೆ ಕೂಡಾ ಇದೆ, ಯಾಕೆಂದರೆ ತಾಲಿಬಾನಿಗಳು ಮಾತ್ರವಲ್ಲ ಕರ್ಝಾಯಿವರೆಗಿನ ಬಹುತೇಕ ನಾಯಕರು ಪಶ್ತೂನಿಗಳೇ ಆಗಿದ್ದಾರೆ. ತಾಲಿಬಾನಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಈ ಆಂತರಿಕ ಬೇಗುದಿಗೆ ತುಪ್ಪ ಸುರಿಯಲು ಪಾಕಿಸ್ತಾನ, ಅಮೆರಿಕ, ಚೀನಾ ಎಲ್ಲ ದೇಶಗಳು ರಣತಂತ್ರ ಸಿದ್ಧ ಮಾಡಿಟ್ಟು ಕೂತಿವೆ. ಎಲ್ಲಿಯ ಶಾಂತಿ ಸ್ಥಾಪನೆ? ಬ್ರಿಟಿಷರು ನಮ್ಮನ್ನು ಬಿಟ್ಟುಹೋದಾಗ ಸಂಭ್ರಮಪಟ್ಟಿಲ್ಲವೇ ಹಾಗೆ? ಆದರೆ ಅವರು ನಮಗೆ ಮದ್ದು ಅರೆದುಹೋಗಿದ್ದರು. ಅವರ ಚಿತಾವಣೆಯಿಂದಾಗಿ ನಡೆದುಹೋದ ದೇಶವಿಭಜನೆಯ ಗಾಯ ಇನ್ನೂ ಮಾಸಿಲ್ಲ, ಆಗಾಗ ಅದು ಕೆದರಿ ರಕ್ತಸುರಿಸುತ್ತಿದೆ.

5. ಈಗಿನದ್ದು ರಕ್ತಪಾತವಿಲ್ಲದೆ ಪಡೆದ ಗೆಲುವು ಎಂದು ಹೇಳಿದ್ದೀರಿ. ನಾನು ಕಳೆದ 30 ವರ್ಷಗಳಿಂದ ನಡೆದ ರಕ್ತಪಾತವನ್ನು ಉಲ್ಲೇಖಿಸುವುದಿಲ್ಲ. ನಿಮ್ಮ ಸಂಪಾದಕೀಯ ಪ್ರಕಟವಾದ 24 ಗಂಟೆಯ ಅವಧಿಯಲ್ಲಿ ಅಫ್ಘಾನಿಸ್ತಾನದ ಬೀದಿಗಳಲ್ಲಿ ರಕ್ತ ಹರಿದಿದೆ. ನೀವೇ ಭರವಸೆ ಇಟ್ಟಿರುವ ‘ವಿದ್ಯಾರ್ಥಿಗಳು’ ನಿಮ್ಮ ನಿರೀಕ್ಷೆಯ ಪರೀಕ್ಷೆಯಲ್ಲಿ ಹೇಗೆ ಫೇಲ್ ಆಗಿದ್ದಾರೆ ಎನ್ನುವುದನ್ನು ಪುರಾವೆ ಸಮೇತ ಹೇಳುವುದಿಲ್ಲವೇ?

6. ತಾಲಿಬಾನಿಗಳು ಬದಲಾಗಬೇಕು, ಅನ್ಯದೇಶಗಳ ಕೈಗೊಂಬೆಯಾಗಬಾರದು, ಲಿಂಗ ಪಕ್ಷಪಾತ ಮಾಡಬಾರದು, ಆಧುನಿಕ ಶಿಕ್ಷಣ ಒದಗಿಸಬೇಕು, ಸಂವಿಧಾನ ಬದ್ಧ ಆಡಳಿತ ನಡೆಸಬೇಕು, ಮಾನವಹಕ್ಕುಗಳನ್ನು ಗೌರವಿಸಬೇಕು ಎಂಬ ನಿಮ್ಮ ಸಲಹೆಗಳು ಸ್ವಾಗತಾರ್ಹ. ಆದರೆ ಇದು ಸಾಧ್ಯವೇ?

7. ತಾಲಿಬಾನಿಗಳು ಪ್ರಜ್ಞಾಪೂರ್ವಕವಾಗಿ ಪರಿವರ್ತನೆಗೊಳಗಾಗುತ್ತೇವೆ ಎಂದು ಹೇಳಿದರೂ ಅವರಿಗೂ ಇದು ಸುಲಭದ ಕೆಲಸ ಅಲ್ಲ. ಕಳೆದ 20 ವರ್ಷಗಳಲ್ಲಿ ಅಫ್ಘಾನಿಸ್ತಾನ ಬದಲಾಗಿದೆ, ರಾಜಕೀಯವಾಗಿ ಮಾತ್ರವಲ್ಲ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿಯೂ ಬದಲಾಗಿದೆ. ಜನರ ತಲಾವಾರು ಆದಾಯ ಹೆಚ್ಚಿದೆ, ಸಾಕ್ಷರತೆ ಹೆಚ್ಚಿದೆ, ವಿದ್ಯಾವಂತ ಮತ್ತು ಉದ್ಯೋಗಸ್ಥ ಹೆಣ್ಣು ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಇಂಟರ್‌ನೆಟ್ ಬಂದಿದೆ, ಮನೆಮನೆ ಪ್ರವೇಶಿಸಿರುವ ಸೋಷಿಯಲ್ ಮೀಡಿಯಾ ಮೂಲಕ ಹೊರಗಿನ ಪ್ರಪಂಚದ ಜೊತೆ ಸಂವಹನ ಸುಲಭವಾಗಿದೆ, ಈ ಬದಲಾವಣೆ ತಾಲಿಬಾನಿಗಳು ಬಯಸಿದಂತೆ ಆಗಿರುವ ಬದಲಾವಣೆ ಅಲ್ಲ.

ಶಿಕ್ಷಣ ಮತ್ತು ಬಾಹ್ಯಪ್ರಪಂಚದ ಸಂಪರ್ಕದಿಂದಾಗಿ ಮಹಿಳೆಯರು ಹಿಂದಿಗಿಂತ ಇಂದು ಹೆಚ್ಚು ಸಶಕ್ತ, ಸ್ವತಂತ್ರ, ಸ್ವಾವಲಂಬಿಗಳಾಗಿದ್ದಾರೆ.ತಮ್ಮ ಮೇಲೆ ನಡೆಯುವ ದೌರ್ಜನ್ಯವನ್ನು ಅವರು ಮೌನವಾಗಿ ಸಹಿಸಿಕೊಂಡಿರಲಾರರು. ಇಂತಹವರನ್ನು ಮಾತುಕತೆ-ಸಂಧಾನದ ಮೂಲಕ ಒಲಿಸಿಕೊಳ್ಳಲು ತಾಲಿಬಾನಿಗಳಿಗೆ ಕೂಡಾ ಕಷ್ಟ. ಈ ಪರಿಸ್ಥಿತಿಯಲ್ಲಿ ತಾಲಿಬಾನಿಗಳು ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಬಲತ್ಕಾರದ ಪ್ರಯೋಗ ನಡೆಯಬಹುದು. ಇದು ಹೆಚ್ಚು ಕ್ರೂರವೂ, ಹಿಂಸಾತ್ಮಕವೂ ಆಗಲು ಸಾಧ್ಯವಿದೆ.

8. ಪಾಕಿಸ್ತಾನದ ಪಾತ್ರವನ್ನು ನಿರ್ಲಕ್ಷಿಸಲಾದೀತೇ? ತಾನೇ ಹುಟ್ಟುಹಾಕಿರುವ ತಾಲಿಬಾನಿಗಳನ್ನು ಅಷ್ಟೊಂದು ಸುಲಭದಲ್ಲಿ ಐಎಸ್‌ಐ ಬಿಟ್ಟುಕೊಟ್ಟೀತೇ? ತನ್ನಲ್ಲಿಯೇ ಇಲ್ಲದ ಪ್ರಜಾಪ್ರಭುತ್ವವನ್ನು ಅಫ್ಘಾನಿಸ್ತಾನದಲ್ಲಿ ಸ್ಥಾಪನೆಯಾಗಲು ಅದು ಅವಕಾಶ ನೀಡಬಹುದೇ?

ತಾಲಿಬಾನಿ (ವಿದ್ಯಾರ್ಥಿ)ಗಳು ಪರೀಕ್ಷೆ ಬರೆದು ಪಾಸಾಗಲಿ, ಪರೀಕ್ಷೆಗೆ ಮೊದಲು ಅಭಿನಂದನೆಯ ಅವಸರ ಬೇಡ ಎನ್ನುವುದಷ್ಟೇ ನನ್ನ ಅಭಿಪ್ರಾಯ. ಇದು ನಮ್ಮವರೇ ಆಗಿರುವ ಸಂಘ ಪರಿವಾರಕ್ಕೂ ಅನ್ವಯವಾಗುತ್ತದೆ. ತಾಲಿಬಾನಿಗಳು ಬದಲಾದರೆ ಸಂಘ ಪರಿವಾರವೂ ಬದಲಾಗಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳಬಹುದೇನೋ?

Writer - ದಿನೇಶ್ ಅಮೀನ್ ಮಟ್ಟು

contributor

Editor - ದಿನೇಶ್ ಅಮೀನ್ ಮಟ್ಟು

contributor

Similar News