ಬಿಎಂಟಿಸಿಯಲ್ಲಿ ಟಿಕೆಟ್‍ರಹಿತ ಪ್ರಯಾಣ: 1,704 ಪ್ರಯಾಣಿಕರಿಂದ 2.67 ಲಕ್ಷ ರೂ. ದಂಡ

Update: 2021-08-25 13:10 GMT

ಬೆಂಗಳೂರು, ಆ.25: ಬಿಎಂಟಿಸಿ ಬಸ್‍ಗಳಲ್ಲಿ ಟಿಕೇಟನ್ನು ಪಡೆಯದೆ ಅನಧಿಕೃತವಾಗಿ ಪ್ರಯಾಣ ಮಾಡಿದ 1,704 ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ ಒಟ್ಟು 2.67 ಲಕ್ಷ ರೂ. ದಂಡವಸೂಲಿ ಮಾಡಲಾಗಿದೆ.

ಬಿಎಂಟಿಸಿ ಸಂಸ್ಥೆಯ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನಗರದಾದ್ಯಂತ ಸಂಚರಿಸುವ ವಾಹನಗಳನ್ನು ನಮ್ಮ ಸಂಸ್ಥೆಯ ತನಿಖಾತಂಡಗಳು ಜುಲೈನಲ್ಲಿ ಒಟ್ಟು 17,799 ಟ್ರಿಪ್‍ಗಳಲ್ಲಿ ತಪಾಸಣೆ ನಡೆಸಿ,1704 ಟಿಕೇಟ್‍ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಒಟ್ಟು ರೂ.2,67,950 ರೂ.ದಂಡ ವಸೂಲಿ ಮಾಡಲಾಗಿದೆ. ಹಾಗೂ ಸಂಸ್ಧೆಯ ನಿರ್ವಾಹಕರುಗಳ ವಿರುದ್ಧ 1,188  ಪ್ರಕರಣಗಳನ್ನು ದಾಖಲಿಸಲಾಗಿದೆ.

ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 4 ಪುರುಷ ಪ್ರಯಾಣಿಕರಿಂದ 400ರೂ. ಗಳನ್ನು ಮೋಟಾರು ವಾಹನ ಕಾಯ್ದೆ 1988 ಕಲಂ 177 ಮತ್ತು 94ರ ಪ್ರಕಾರ ದಂಡ ವಿಧಿಸಲಾಗಿರುತ್ತದೆ.

ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಧೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೇಟ್, ದಿನದ ಪಾಸು, ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸಬೇಕು. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದಾಗಿದೆ ಹಾಗೂ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ ಎಂದು ಬಿಎಂಟಿಸಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News