ಬಿಬಿಎಂಪಿ ವ್ಯಾಪ್ತಿಯಲ್ಲಿ 86 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ: ಬಿಬಿಎಂಪಿ ಮುಖ್ಯಆಯುಕ್ತ ಗೌರವ್‍ಗುಪ್ತಾ
ಬೆಂಗಳೂರು, ಆ.25: ಬಿಬಿಎಂಪಿ ವ್ಯಾಪ್ತಿಯಲ್ಲಿ 86 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ. ಉಳಿದವರಿಗೂ ಶೀಘ್ರವಾಗಿ ಲಸಿಕೆ ನೀಡಲಾಗುವುದೆಂದು ಬಿಬಿಎಂಪಿ ಮುಖ್ಯಆಯುಕ್ತ ಗೌರವ್‍ಗುಪ್ತ ತಿಳಿಸಿದ್ದಾರೆ.
ಬುಧವಾರ ಪುರಭವನ ಸಭಾಂಗಣದಲ್ಲಿ ಬಿಬಿಎಂಪಿ ಹಮ್ಮಿಕೊಂಡಿದ್ದ ನಗರದ ಸ್ವಚ್ಛತೆಗಾಗಿ ನಾಗರಿಕರ ಸಹಭಾಗಿತ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ಕೋವಿಡ್ ಲಸಿಕೆ ವಿತರಣೆ ಪ್ರಮಾಣವು 1 ಲಕ್ಷದ ಸನಿಹಕ್ಕೆ ತಲುಪಿದೆ. ರಾಜ್ಯ ಸರಕಾರವು ಬಿಬಿಎಂಪಿಗೆ ಪೂರೈಕೆ ಮಾಡುವ ಲಸಿಕೆ ಪ್ರಮಾಣವನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.
ಪಾಲಿಕೆಯು ಕೋವಿಡ್ ಲಸಿಕೆ ವಿತರಣೆಯ ಸಂಖ್ಯೆಯನ್ನೂ ಹೆಚ್ಚಿಸಿದೆ. ಕಳೆದ ಶನಿವಾರ 89,075 ಮಂದಿಗೆ, ರವಿವಾರ 56,953 ಮಂದಿಗೆ ಲಸಿಕೆ ನೀಡಲಾಗಿತ್ತು. ಲಸಿಕೆಯ ಎರಡನೇ ಡೋಸ್ ಪಡೆಯುವವರ ಸಂಖ್ಯೆ ಹೆಚ್ಚಿದೆ. ಒಟ್ಟಾರೆ ಬೆಂಗಳೂರಿನಲ್ಲಿ ಸುಮಾರು 86 ಲಕ್ಷಕ್ಕಿಂತ ಹೆಚ್ಚು ಜನರು ಲಸಿಕೆ ಪಡೆದಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಕೊರೋನ ಮೂರನೇ ಅಲೆ ತಡೆಗಟ್ಟಲು ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ನಗರದ ಶೇ.73ರಷ್ಟು ಮಂದಿಗೆ ಮೊದಲನೇ ಡೋಸ್ ನೀಡಲಾಗಿದೆ. ಇನ್ನು, ವಾರ್ಡ್ ವ್ಯಾಪ್ತಿಯಲ್ಲಿ ಕೇಂದ್ರವೊಂದನ್ನು ಸ್ಥಾಪಿಸಿ, ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ಶಾಲಾ ಮಕ್ಕಳ ಸ್ವೆಟರ್ ಅವ್ಯವಹಾರ ಆರೋಪ ಪ್ರಕರಣ ಸಂಬಂಧ ವರದಿ ನೀಡುವಂತೆ ಈಗಾಗಲೇ ಸೂಚನೆ ನೀಡಿದ್ದು, ತಪ್ಪು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.