ಉ.ಪ್ರ.: ಪ್ರಾಂಶುಪಾಲರಿಗೆ ರಿವಾಲ್ವರ್ ತೋರಿಸಿ ಬೆದರಿಕೆ
ಹೊಸದಿಲ್ಲಿ,ಆ.25: 17 ವರ್ಷ ವಯಸ್ಸಿನ ಬಾಲಕನೊಬ್ಬ ಶಾಲಾ ಪ್ರಾಂಶುಪಾಲರ ಹಣೆಗೆ ರಿವಾಲ್ವರ್ ಇರಿಸಿ, ಬೆದರಿಕೆ ಹಾಕಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಬಿಜನೋರ್ ಜಿಲ್ಲೆಯಲ್ಲಿ ವರದಿಯಾಗಿದೆ.
ಭಾಗುವಾಲಾ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ.
ಆಸೆಂಬ್ಲಿ ನಡೆಯುತ್ತಿದ್ದಾಗ, ನೀಳವಾದ ಕೂದಲು ಬಿಟ್ಟಿದ್ದ,ಬೆರಳುಗಳಲ್ಲಿ ಉಂಗುರಗಳನ್ನು ಹಾಕಿಕೊಂಡಿದ್ದ ಮತ್ತು ಸಮವಸ್ತ್ರವಿಲ್ಲದೆ ಹದಿಹರೆಯದ ತರುಣನಿದ್ದುದನ್ನು ಗಮನಿಸಿದ ಪ್ರಾಂಶುಪಾಲರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದರು.
ಅಸೆಂಬ್ಲಿ ಮುಕ್ತಾಯವಾಗಿ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳಉ ತರಗತಿಗಳಿಗೆ ತೆರಳಿದ್ದಾಗ, ಆ ತರುಣ ಪ್ರಾಂಶುಪಾಲರ ಕೊಠಡಿಗೆ ಧಾವಿಸಿ ಬಂದು ಅವರ ಹಣೆಗೆ ರಿವಾಲ್ವರ್ ಗುರಿಯಿರಿಸಿ ನಿಂದಿಸಿದನೆನ್ನಲಾಗಿದೆ. ಇದನ್ನು ಕಂಡ ಕೆಲವು ಶಿಕ್ಷಕರು ಕೂಡಲೇ ಶಿಕ್ಷಕರ ಕೊಠಡಿಗೆ ಧಾವಿಸಿದಾಗ ಆತ ಸ್ಥಳದಿಂದ ಪರಾರಿಯಾದನೆಂದು ಪೊಲೀಸರು ತಿಳಿಸಿದ್ದಾರೆ.
ರಿವಾಲ್ವರ್ ತೋರಿಸಿ ಬೆದರಿಸಿದ ಬಾಲಕನು ಹೊರಗಿನವನಾಗಿದ್ದು ಆತ ವಿದ್ಯಾರ್ಥಿಯಲ್ಲವೆಂದು ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಮಂಡವಾಲಿ ಪೊಲೀಸ್ ಠಾಣೆಯಲ್ಲಿ ಬಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಆತ ಸಮೀಪದ ಕರೌಲಿ ಗ್ರಾಮದ ವಿದ್ಯಾರ್ಥಿಯೆನ್ನಲಾಗಿದೆ. ಆದರೆ ಆತ ಯಾಕೆ ವಿದ್ಯಾಲಯದ ಬೆಳಗ್ಗಿನ ಅಸೆಂಬ್ಲಿಯಲ್ಲಿ ಪಾಲ್ಗೊಂಡಿದ್ದನೆಂಬ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಆರೋಪಿಯನ್ನು ಕೂಡಲೇ ವಶಕ್ಕೆ ತೆಗೆದುಕೊಳ್ಳಲಾಗುವುದೆಂದು ಪೊಲೀಸರು ತಿಳಿಸಿದರು.