ಅಶ್ಲೀಲ ವೀಡಿಯೊ ಬಹಿರಂಗ ಪ್ರಕರಣ: ಅಣ್ಣಾಮಲೈ ವಿರುದ್ಧ ತಮಿಳುನಾಡಿನಲ್ಲಿ ಭುಗಿಲೆದ್ದ ಅಸಮಾಧಾನ

Update: 2021-08-28 06:12 GMT

ಚೆನ್ನೈ: ತಮಿಳುನಾಡು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ತಿಂಗಳುಗಳ ಒಳಗೆ ಕೆ. ಅಣ್ಣಾಮಲೈ ವಿವಾದಕ್ಕೀಡಾಗಿದ್ದಾರೆ. ಕೆಲ ದಿನಗಳ ಹಿಂದೆ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೆಟಿ ರಾಘವನ್‌ ಅವರದ್ದೆನ್ನಲದ ಅಶ್ಲೀಲ ವೀಡಿಯೋ ಕಾಲ್‌ ನ ಕ್ಲಿಪ್‌ ಒಂದನ್ನು ಬಿಜೆಪಿ ಕಾರ್ಯಕರ್ತ ರವಿಚಂದ್ರನ್‌ ಎಂಬವರು ತಮ್ಮ ಯೂಟ್ಯೂಬ್‌ ಚಾನೆಲ್‌ ನಲ್ಲಿ ಬಹಿರಂಗಪಡಿಸಿದ್ದರು. ಇದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿತ್ತು. ಈ ಕುರಿತು ಅಣ್ಣಾಮಲೈ ಮಾತನಾಡಿದ್ದಾರೆನ್ನಲಾದ ಆಡಿಯೊವೊಂದು ವಿವಾದಕ್ಕೆ ಗ್ರಾಸವಾಗಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ತಮಿಳುನಾಡು ಬಿಜೆಪಿಯಾದ್ಯಂತ ಅಣ್ಣಾಮಲೈ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ ಎಂದು ವರದಿಯಾಗಿದೆ. 

ವೀಡಿಯೋ ಬಿಡುಗಡೆ ಮಾಡುವುದಕ್ಕೆ ಅಣ್ಣಾಮಲೈ ಸ್ವತಃ ಸೂಚನೆ ನೀಡಿದ್ದರು ಎನ್ನುವುದನ್ನು ಆಡಿಯೊ ಬಹಿರಂಗಪಡಿಸುತ್ತಿದೆ. ಆಡಿಯೊದಲ್ಲಿ, "ನಿಮಗಿಷ್ಟ ಬಂದಂತೆ ಮಾಡಬಹುದು. ನೀವು ವೀಡಿಯೊ ಪ್ರಕಟಿಸಿದರೆ ನಾನು ಅವರೆಲ್ಲರನ್ನೂ ಪಕ್ಷದಿಂದ ಉಚ್ಛಾಟಿಸುತ್ತೇನೆ. ನನಗಿದು ಕೇವಲ ಒಂದೆರಡು ಗಂಟೆಗಳ ಕೆಲಸ. ನೀವದನ್ನು ಪ್ರಕಟಿಸದಿದ್ದರೆ ಅದು ನನಗೆ ತಲೆನೋವು. ನನಗಿದನ್ನು ಎಲ್ಲರಿಗೂ ತೋರಿಸಬೇಕಾಗಿದೆ. ತಿಂಗಳಿಗಿಬ್ಬರಂತೆ ಉಚ್ಛಾಟನೆ ಮಾಡಲು ನನಗೆ ಹಲವರನ್ನು ಒಪ್ಪಿಸಬೇಕಾಗಿದೆ. ನಿನಗಿದು ಅರ್ಥವಾಗುತ್ತದೆ ಅಂದುಕೊಂಡಿದ್ದೇನೆ" ಎಂದು ಹೇಳುವ ಆಡಿಯೊ ವೈರಲ್‌ ಆಗಿತ್ತು.

ಪಕ್ಷದ ಕಾರ್ಯಕರ್ತೆಯೊಂದಿಗಿನ ವೀಡಿಯೊ ಕಾಲ್‌ ಕ್ಲಿಪ್‌ ವೈರಲ್‌ ಆದ ಬೆನ್ನಲ್ಲೇ ಆರೆಸ್ಸೆಸ್‌ ಕಾರ್ಯಕರ್ತ ಹಾಗೂ ಬಿಜೆಪಿ ನಾಯಕ ಕೆ.ಟಿ ರಾಘವನ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆರೋಪವನ್ನು ತಳ್ಳಿ ಹಾಕಿದ್ದ ಅವರು, ಇದು ಪಕ್ಷವನ್ನು ಮತ್ತು ನನ್ನನ್ನು ಅಪಮಾನಿಸಲು ನಡೆಸಿದ ಕುತಂತ್ರವಾಗಿದೆ ಎಂದು ಹೇಳಿಕೆ ನೀಡಿದ್ದರು.

ವೀಡಿಯೊ ಬಿಡುಗಡೆ ಮಾಡಿದ ಮದನ್‌ ರವಿಚಂದ್ರನ್‌ ರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಆದರೆ ಇದು ಪಕ್ಷದ ಅಧ್ಯಕ್ಷ ಅಣ್ಣಾಮಲೈ ಸೂಚನೆ ನೀಡಿದ ಬಳಿಕವೇ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿಕೆ ನೀಡಿದ್ದರು. ಸದ್ಯ ಈ ವಿಚಾರದ ಕುರಿತಾದಂತೆ ತಮಿಳುನಾಡು ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳು ಪ್ರಾರಂಭವಾಗಿದ್ದು, ಅಣ್ಣಾಮಲೈ ನಡೆಯ ಕುರಿತು ನಾಯಕರು ಮತ್ತು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News