ಸೆ.6ರಿಂದ ಆರರಿಂದ 8ನೇ ತರಗತಿ ಆರಂಭಕ್ಕೆ ರಾಜ್ಯ ಸರಕಾರದಿಂದ ಅನುಮತಿ

Update: 2021-08-30 14:33 GMT

ಬೆಂಗಳೂರು, ಆ. 30: `ಕೋವಿಡ್ ಪಾಸಿಟಿವಿಟಿ ದರ ಶೇಕಡ 2ಕ್ಕಿಂತ ಕಡಿಮೆ ಇರುವ ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ಆರನೆ ತರಗತಿಯಿಂದ ಎಂಟನೆ ತರಗತಿಯ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 6ರಿಂದ ಭೌತಿಕ ತರಗತಿಗಳನ್ನು ಆರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಹಿರಿಯ ಸಚಿವರು ಹಾಗೂ ತಜ್ಞರ ಉನ್ನತ ಮಟ್ಟದ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, `ಒಟ್ಟಾರೆ ತರಗತಿ ವಿದ್ಯಾರ್ಥಿಗಳ ಪೈಕಿ ಶೇ.50ರಷ್ಟು ವಿದ್ಯಾರ್ಥಿಗಳಿಗೆ (ಬ್ಯಾಚ್ ರೂಪದಲ್ಲಿ) ದಿನ ಬಿಟ್ಟು ದಿನ ತರಗತಿಗಳನ್ನು ನಡೆಸಲಾಗುವುದು. ವಾರದ ಐದು ದಿನ, ಸೋಮವಾರದಿಂದ ಶುಕ್ರವಾರದ ವರೆಗೆ ಮಾತ್ರ ತರಗತಿಗಳು ನಡೆಸಲಿದ್ದು, ಶನಿವಾರ ಮತ್ತು ರವಿವಾರ ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗುವುದು' ಎಂದು ಮಾಹಿತಿ ನೀಡಿದರು.

`ಈಗಾಗಲೇ 9, 10ನೆ ತರಗತಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ ಭೌತಿಕ ತರಗತಿಗಳನ್ನು ಆರಂಭಿಸಲಾಗಿದ್ದು, ಆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರಕಾರಿ ಶಾಲೆ-ಕಾಲೇಜುಗಳಲ್ಲಿ ಹಾಜರಾತಿ ಹೆಚ್ಚಿನ ಪ್ರಮಾಣದಲ್ಲಿದೆ. ಆದರೆ, ಖಾಸಗಿ ಶಾಲೆ-ಕಾಲೇಜುಗಳಲ್ಲಿ ಹಾಜರಾತಿ ಕಡಿಮೆ ಇದ್ದು, ಮುಂದಿನ ದಿನಗಳಲ್ಲು ಸುಧಾರಿಸಲಿದೆ. ಶಾಲೆಗಳಿಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಪ್ರಮಾಣಗಳ ಬಹಳ ವಿರಳ ಎಂದು ಆರ್.ಅಶೋಕ್ ವಿವರಿಸಿದರು.

`ರಾಜ್ಯದ ಒಟ್ಟು 2,912 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಕುಸಿದಿದ್ದು, ಶಾಲೆಗೆ ಹಾಜರಾದ ಒಟ್ಟು 6,472 ವಿದ್ಯಾರ್ಥಿಗಳ ಮೂಗು ಮತ್ತು ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದ್ದು, ಆ ಪೈಕಿ ಕೇವಲ 14 ವಿದ್ಯಾರ್ಥಿಗಳಲ್ಲಿ ಮಾತ್ರ ಕೋವಿಡ್ ಸೋಂಕು ಪಾಸಿಟಿವ್ ಇರುವುದು ಕಂಡುಬಂದಿದೆ. ಹೀಗಾಗಿ ಆತಂಕಗೊಳ್ಳುವ ಅಗತ್ಯವಿಲ್ಲ' ಎಂದು ಅಶೋಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News