ಸ್ವಯಂ ಚಾಲಿತ ಬಸ್ ತೊಳೆಯುವ ಯಂತ್ರ ಉದ್ಘಾಟನೆ

Update: 2021-08-30 15:49 GMT

ಬೆಂಗಳೂರು, ಆ. 30: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಸ್ವಯಂಚಾಲಿತ ನೂತನ ಸುಧಾರಿತ ವಾಹನ ತೊಳೆಯುವ ಯಂತ್ರವನ್ನು ಎಟಿಎಸ್ ಇಎಲ್‍ಜಿಐ ಕಂಪೆನಿ ಸಹಯೋಗದಲ್ಲಿ ಬೆಂಗಳೂರು ಕೇಂದ್ರಿಯ ಘಟಕದಲ್ಲಿ ಸ್ಥಾಪಿಸಿದ್ದು, ನಿಗಮದ ವ್ಯವಸ್ಥಾಪಕ ನಿದೇರ್ಶಕ ಶಿವಯೋಗಿ ಸಿ.ಕಳಸದ ಅವರು ಸೋಮವಾರ ಉದ್ಘಾಟಿಸಿದರು.

ಕಂಪೆನಿಯು 17ಲಕ್ಷ ರೂ.ವೆಚ್ಚದ ಯಂತ್ರವನ್ನು ಉಚಿತವಾಗಿ ಕೆಎಸ್ಸಾರ್ಟಿಸಿಯಲ್ಲಿ ಪ್ರಾಯೋಗಿಕವಾಗಿ ಸ್ಥಾಪಿಸಿದ್ದು, ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುತ್ತದೆ. ಸದರಿ ಮೆಷಿನ್‍ನಲ್ಲಿ ಎಲ್ಲ ಬಸ್ಸಿಗೆ ತಕ್ಕಂತೆ ಆಟೋಮೆಟಿಕ್ ಆಗಿ ವಾಷ್ ಮಾಡಲು, ಬ್ರಷ್‍ಗಳ ಚಲನೆಗಳನ್ನು ಸೆನ್ಸಾರ್ ಹಾಗೂ ಪ್ರೋಗ್ರಾಮ್ ಮೂಲಕ ನಿಯಂತ್ರಿಸಬಹುದಾಗಿರುತ್ತದೆ. ವಾಹನವನ್ನು ನಿಗದಿತ ಸ್ಥಳದಲ್ಲಿ ನಿಲ್ಲಿಸಿಕೊಂಡು ಯಂತ್ರದ ಬ್ರಷ್‍ಗಳನ್ನು ಚಲಿಸಿ ವಾಷಿಂಗ್ ಮಾಡುವ ಸೌಲಭ್ಯವನ್ನು ಯಂತ್ರವು ಹೊಂದಿರುತ್ತದೆ.

ಸದರಿ ಯಂತ್ರವು 3 ಪಾಲಿಥಿನ್ ಬ್ರಷ್‍ಗಳನ್ನು ಹೊಂದಿದ್ದು, ವಾಹನದ ಹೊರ ಭಾಗದ ಕವಚ, ಮುಂಭಾಗದ ಕವಚ, ದೊಡ್ಡ ಗಾಳಿತಡೆ ಗಾಜು, ಸೈಡ್ ಮಿರರ್ ಕೊಂಬುಗಳು, ಹಿಂಭಾಗದ ಕವಚ ಮತ್ತು ರೂಫ್ ಎ.ಸಿ. ಯುನಿಟ್‍ಗಳನ್ನು ವಾಷ್ ಮಾಡಬಹುದಾಗಿರುತ್ತದೆ. ನಳಿಕೆಗಳಿಂದ ನಿಖರವಾಗಿ ಶ್ಯಾಂಪೂ ಸ್ಪ್ರೇ ಮಾಡಲು ನಿಗದಿತ ಡೋಸಿಂಗ್ ಪಂಪ್ ಅಳವಡಿಸಲಾಗಿದ್ದು ಪ್ರತ್ಯೇಕವಾದ ಶ್ಯಾಂಪೂ ವಾಷಿಂಗ್ ಸೈಕಲ್ ವ್ಯವಸ್ಥೆ ಇರುತ್ತದೆ.

ಒಂದು ಬಸ್‍ನ್ನು ತೊಳೆಯಲು 5 ನಿಮಿಷ ಸಮಯ ತೆಗೆದುಕೊಳ್ಳಲಿದ್ದು, 250 ಲೀಟರ್‍ನಷ್ಟು ನೀರಿನ ಪ್ರಮಾಣ ಹಾಗೂ 30 ಗ್ರಾಂ ಡಿಟಜೆರ್ಂಟ್ ಬೇಕಾಗಿರುತ್ತದೆ. ಸದರಿ ಯಂತ್ರದಿಂದ ಸಂಪೂರ್ಣವಾಗಿ ಮಾನವ ಶಕ್ತಿ ಉಳಿತಾಯವಾಗಲಿದ್ದು, ಶೇ.50ರಷ್ಟು ವಿದ್ಯುತ್ ಶಕ್ತಿ ಹಾಗೂ ನೀರಿನ ಬಳಕೆ ಕಡಿಮೆಯಾಗುತ್ತದೆ. ಸದರಿ ಯಂತ್ರದ ಕವಚವು ಸ್ಟೈನ್‍ಲೆಸ್ ಸ್ಟೀಲ್‍ನಿಂದ ನಿರ್ಮಾಣವಾಗಿದ್ದು ಇದರಿಂದ ತುಕ್ಕು ಹಿಡಿಯುವುದಿಲ್ಲ ಎಂದು ಕೆಎಸ್ಸಾರ್ಟಿಸಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News