ಮೈಸೂರು ಅತ್ಯಾಚಾರ ಪ್ರಕರಣ : ತುರ್ತು ಗ್ರಹಿಸಬೇಕಾದ ವಿಚಾರಗಳು

Update: 2021-09-01 19:30 GMT

ಮೈಸೂರಿನಲ್ಲಿ ವಿದ್ಯಾರ್ಥಿನಿಯೊಬ್ಬರ ಮೇಲೆ ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಬಳಿ ಕೆಲವು ಮನುಷ್ಯ ರೂಪದ ದುಷ್ಟ ಜಂತುಗಳಿಂದ ಅತ್ಯಾಚಾರವಾಗಿ ಕೆಲವು ದಿನಗಳಾಗಿವೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಭಾರೀ ಆಘಾತಗಳಿಗೆ ಗುರಿಯಾಗಿರುವ ಆ ಸಂತ್ರಸ್ತ ಹೆಣ್ಣುಮಗಳು ಆಸ್ಪತ್ರೆಯಲ್ಲಿ ನಾಲ್ಕುದಿನಗಳ ಚಿಕಿತ್ಸೆ ಪಡೆದು ಈಗ ವಿಶ್ರಾಂತಿಯಲ್ಲಿದ್ದರೂ ತನ್ನ ಮೇಲಾದ ಹಿಂಸೆ ಹಾಗೂ ತನಗಾದ ತೀವ್ರ ಆಘಾತಗಳಿಂದ ಇನ್ನೂ ಹೊರಬರಲಾಗಿಲ್ಲ. ಆಕೆಯ ಗೆಳೆಯ ಕೂಡ ತೀವ್ರ ಹಲ್ಲೆಗಳಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಈ ಘಟನೆ ರಾಜ್ಯದ ಜನರಲ್ಲಿ ಅದರಲ್ಲೂ ಮಹಿಳೆಯರಲ್ಲಿ ತೀವ್ರ ಆತಂಕ ಆಕ್ರೋಶಗಳನ್ನು ಉಂಟುಮಾಡಿವೆ. ಹಲವಾರು ಕಡೆಗಳಲ್ಲಿ ಜನರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಈಗಾಗಲೇ ಒಬ್ಬ ಅಪ್ರಾಪ್ತ ವಯಸ್ಕನೂ ಸೇರಿ ತಮಿಳುನಾಡು ಮೂಲದ ಆರು ಮಂದಿ ಯುವಕರನ್ನು ಆರೋಪಿಗಳೆಂದು ಸೆರಹಿಡಿಯಲಾಗಿದೆ.


ಮೈಸೂರಿನ ಘಟನೆ ನಡೆದ ಸ್ಥಳ ಪ್ರವಾಸಿತಾಣವಾಗಿ ಬಹಳ ಪ್ರಚಲಿತದಲ್ಲಿರುವ ಸ್ಥಳ. ಸುತ್ತಮುತ್ತಲಿನ ಒಂದೆರಡು ಕಿ.ಮೀಟರುಗಳ ವ್ಯಾಪ್ತಿಯಲ್ಲಿ ಜನವಸತಿ ಇಲ್ಲದಿರುವ ಪ್ರದೇಶವಾಗಿದ್ದರೂ ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಸಾಕಷ್ಟು ಜನರು ಪ್ರತಿನಿತ್ಯ ಅಲ್ಲಿಗೆ ಹೋಗಿ ಸಮಯ ಕಳೆಯುವುದು ಹಾಗೂ ಕ್ರಿಕೆಟ್ ಇತ್ಯಾದಿ ಆಟವಾಡುವುದು ಮಾಮೂಲಿ ಸಂಗತಿಯಾಗಿದ್ದವು. ಸಂಜೆ ಆರರವರೆಗೂ ಸಾರ್ವಜನಿಕರಿಗೆ ಮುಕ್ತವಾಗಿದ್ದ ಆ ಪ್ರದೇಶದಲ್ಲಿ ಹಿಂದೆ ಪೊಲೀಸ್ ಗಸ್ತು ಕೂಡ ಇತ್ತು. ಹಿಂದಿನಿಂದಲೂ ಇದ್ದ ಪೊಲೀಸ್ ಗಸ್ತನ್ನು ಕೊರೋನ ಹೆಸರಿನಲ್ಲಿ ರದ್ದು ಗೊಳಿಸಲಾಗಿತ್ತು. ಕೊರೋನ ನಿರ್ಬಂಧ ಸಡಿಲವಾದ ಮೇಲೆಯಾದರೂ ಅಲ್ಲಿ ಪೊಲೀಸ್ ಗಸ್ತು ಏರ್ಪಡಿಸುವಲ್ಲಿ ಜಿಲ್ಲಾಡಳಿತ ಗಮನಕೊಡದೆ ಹೋಗಿದ್ದು ಅಲ್ಲಿನ ಈ ಹೇಯ ಘಟನೆಗೆ ಒಂದು ಮುಖ್ಯ ಕಾರಣವಾಗಿದೆ. ಈ ಘಟನೆಯ ಬಿಸಿ ಆರುವ ಮುನ್ನವೇ ದಲಿತ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ ಘಟನೆ ತುಮಕೂರಿನಿಂದ ವರದಿಯಾಗಿದೆ. ಅದಕ್ಕೂ ಕೆಲ ದಿನಗಳ ಮೊದಲು ವಿಜಯಪುರದಿಂದಲೂ ಒಂದು ಅತ್ಯಾಚಾರ ಪ್ರಕರಣ ವರದಿಯಾಗಿ ಆ ಪ್ರಕರಣದ ಆರೋಪಿ ಪೊಲೀಸ್ ವಶದಲ್ಲಿದ್ದಾಗಲೇ ಠಾಣೆಯಲ್ಲೇ ನೇಣು ಹಾಕಿಕೊಂಡು ಮೃತಪಟ್ಟ ಘಟನೆಯೂ ನಡೆದಿದೆ. ರಾಜ್ಯದಲ್ಲಿ ಪ್ರತಿ ದಿನವೂ ಒಂದಾದರೂ ಅತ್ಯಾಚಾರ ಪ್ರಕರಣ ದಾಖಲಾಗುತ್ತಿರುವ ವರದಿಯೂ ಇದೆ. ಇನ್ನು ಹಲವು ಕಾರಣಗಳಿಂದ ಬಯಲಿಗೇ ಬಾರದ ಅತ್ಯಾಚಾರ ಪ್ರಕರಣಗಳು ಎಷ್ಟಿವೆಯೋ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣಗಳಲ್ಲಿ ಆಳುವ ವ್ಯವಸ್ಥೆ ನಿಜವಾದ ಅಪರಾಧಿಗಳಿಗೆ ತಪ್ಪಿಸಿಕೊಳ್ಳಲು ನೆರವಾಗುತ್ತಾ ಯಾರ್ಯಾರನ್ನೋ ಆರೋಪಿಗಳನ್ನಾಗಿ ಹಿಡಿದು ಜೈಲಿಗೆ ತಳ್ಳಲಾಗಿದೆ ಎಂಬ ಸಾರ್ವಜನಿಕ ಅಭಿಪ್ರಾಯಗಳಿವೆ. ಅತ್ಯಾಚಾರದಂತಹ ಪ್ರಕರಣಗಳಲ್ಲೂ ಜಾತಿ, ಧರ್ಮ, ವರ್ಗಗಳ ಆಧಾರದಲ್ಲಿಯೇ ಸರಕಾರಿ ಯಂತ್ರಾಂಗಗಳು ಪ್ರವರ್ತಿಸುತ್ತಿರುವುದು ಕೂಡ ಅಷ್ಟೇ ಸತ್ಯ.


ಒಟ್ಟಿನಲ್ಲಿ ಹೆಣ್ಣು ಮಕ್ಕಳಿಗೆ ಕೌಟುಂಬಿಕ ಹಾಗೆಯೇ ಸಾರ್ವಜನಿಕ ಭದ್ರತೆ ಇಲ್ಲದಂತಹ ಪರಿಸ್ಥಿತಿಯನ್ನು ನಿರ್ಮಿಸಿಡಲಾಗಿದೆ. ಆ ಮೂಲಕ ಜನಸಂಖ್ಯೆಯ ಅರ್ಧ ಭಾಗವನ್ನು ಮಾನಸಿಕವಾಗಿ, ಶಾರೀರಿಕವಾಗಿ, ಆರ್ಥಿಕವಾಗಿ ದಮನಿಸುತ್ತಾ ಬರಲಾಗುತ್ತಿದೆ. ಈ ಪರಿಸ್ಥಿತಿ ನಮ್ಮ ಸಾಮಾಜಿಕ ಹಾಗೂ ಆಡಳಿತಾತ್ಮಕ ರಚನೆಯ ಭಾಗವಾಗಿಯೇ ಮುಂದುವರಿದುಕೊಂಡು ಬಂದಿರುವಂತಹವು. ಈಗ ಅದು ಹಲವಾರು ಕಾರಣಗಳಿಂದ ಹೆಚ್ಚು ಹೆಚ್ಚು ವಿಕೃತವೂ, ಹೆಚ್ಚು ಹೆಚ್ಚು ಕ್ರೂರವೂ ಆಗುತ್ತಾ ಅತ್ಯಾಚಾರದ ನಂತರ ಕಗ್ಗೊಲೆ ಮಾಡುವ, ಸುಟ್ಟುಹಾಕುವ ಮಟ್ಟಕ್ಕೆ ಬಂದಿದೆ. ನಮ್ಮ ಸಾಮಾಜಿಕ ರಚನೆ ಅದರಲ್ಲೂ ಹೆಣ್ಣುಮಕ್ಕಳ ವಿಚಾರದಲ್ಲಿ ಮನುವಾದಿ ಇಲ್ಲವೇ ಪುರೋಹಿತಶಾಹಿ ಸಾಮಾಜಿಕ ರಚನೆ ಹಾಗೂ ಚಿಂತನೆಗಳ ಹಿಡಿತಗಳಲ್ಲೇ ಮುಂದುವರಿದಿದೆ. ಅಲ್ಪಸ್ವಲ್ಪ ಶಿಕ್ಷಣ ಉದ್ಯೋಗಾವಕಾಶಗಳು ಮಹಿಳೆಯರಿಗೆ ಸಿಕ್ಕಿದ್ದರೂ ಮೂಲಭೂತವಾಗಿ ಬದಲಾವಣೆಗಳು ಯಾವುದೂ ಇನ್ನೂ ಆಗಿಲ್ಲ ಎನ್ನುವುದನ್ನು ಗಮನಿಸಬೇಕು. ಅದು ಜಾತಿ, ವರ್ಗ ಹಾಗೂ ಲಿಂಗ ಅಸಮಾನತೆಗಳ ಹಲವು ರೂಪಗಳಲ್ಲಿ ಮಹಿಳೆಯರನ್ನು ಸಿಲುಕಿಸಿ ಜನಸಂಖ್ಯೆಯ ಅರ್ಧ ಭಾಗವನ್ನು ಹೊಸಕಿ ಹಾಕುತ್ತಲೇ ಇದೆ. ಅದರಲ್ಲೂ ಮೇಲ್ಜಾತಿ ಮೇಲ್ವರ್ಗದ ಮಹಿಳೆಯರಿಗಿಂತಲೂ ದಲಿತ, ಆದಿವಾಸಿ, ಇನ್ನಿತರ ದಮನಿತ ಜನಸಮೂಹದ ಮಹಿಳೆಯರ ಮೇಲೆ ಹಲವು ಪಟ್ಟು ಬ್ರಾಹ್ಮಣ್ಯ ಇಲ್ಲವೇ ಪುರೋಹಿತಶಾಹಿಯ, ಲೈಂಗಿಕ, ಆರ್ಥಿಕ, ಲಿಂಗ ಶೋಷಣೆಗಳು ಜಾರಿಯಲ್ಲಿವೆ. ಕಾನೂನು, ಸಂವಿಧಾನಗಳ ಆಧಾರದಲ್ಲಿ ಒಂದಷ್ಟು ಹಕ್ಕುಗಳು, ರಕ್ಷಣೆಗಳು ನೀಡಲಾಗಿದ್ದರೂ ಅದು ಈ ಸಾಮಾಜಿಕ ರಚನೆಯ ಕೆನೆಪದರದ ಕೆಲವರಿಗಷ್ಟೇ ಸೀಮಿತವಾಗಿವೆ. ಅದರಲ್ಲೂ ಮೇಲ್ಜಾತಿ, ಮೇಲ್ವರ್ಗದ ಹಾಗೂ ಒಂದಷ್ಟು ಮಧ್ಯಮವರ್ಗದವರಿಗೆ ಸೀಮಿತವಾಗಿದ್ದಿದ್ದು ಬಿಟ್ಟರೆ ತಳಪಾಯದ ದಲಿತ, ಆದಿವಾಸಿ, ಇನ್ನಿತರ ದಮನಿತ ಜನಸಮೂಹದ ಬಹುತೇಕ ಮಹಿಳೆಯರಿಗೆ ಅವುಗಳು ಮರೀಚಿಕೆಯಾಗಿದೆ. ಹಿಂದಿನಿಂದ ಇಲ್ಲಿಯವರೆಗೂ ಆಡಳಿತ ನಡೆಸಿಕೊಂಡು ಬರುತ್ತಿರುವ ಯಾವ ಸರಕಾರಗಳೂ ಕೂಡ ಮೂಲಭೂತವಾಗಿ ಮನುವಾದಿ ಚಿಂತನೆಗಳಿಂದ ಹೊರತಾಗಿರಲಿಲ್ಲ ಎನ್ನುವುದನ್ನು ಮುಖ್ಯವಾಗಿ ಗಮನಿಸದೆ ಹೋದರೆ ಇಂತಹವುಗಳ ಬಗ್ಗೆ ಸರಿಯಾದ ಗ್ರಹಿಕೆಯನ್ನು ಹೊಂದಲಾಗದು. ಇದಕ್ಕೆ ಮಣಿಪುರದಲ್ಲಿ ಸೇನೆಯ ವಿರುದ್ಧ ನಗ್ನವಾಗಿ ನಿಂತು ಪ್ರತಿಭಟನೆ ತೋರಬೇಕಾಗಿ ಬಂದ ಮಹಿಳೆಯರು, ದೇಶದ ಈಶಾನ್ಯ ಭಾಗ ಹಾಗೂ ಕಾಶ್ಮೀರ ಹಾಗೂ ಮಧ್ಯ ಇಂಡಿಯಾದಲ್ಲಿ ಸರಕಾರಿ ಪಡೆಗಳು ನಡೆಸುತ್ತಾ ಬಂದಿರುವ ಅತ್ಯಾಚಾರ ಹಾಗೂ ಕಗ್ಗೊಲೆಗಳು, ಜಾತಿ ಹಾಗೂ ಕೋಮುಗಲಭೆಗಳ ನೆಪಗಳಲ್ಲಿ ನಡೆಯುವ ಅತ್ಯಾಚಾರ ಕಗ್ಗೊಲೆಗಳು, ಮಧ್ಯಪ್ರದೇಶದ ಪೂಲನ್ ದೇವಿ, ರಾಜಸ್ಥಾನದ ಬನ್ವಾರಿ ದೇವಿ, ಮೊದಲಾದ ಪ್ರಕರಣಗಳು.. ಹೀಗೆ ಉದ್ದದ ಪಟ್ಟಿ ಮಾಡಬಹುದು.

ಇನ್ನು ದಲಿತ ದಮನಿತ ಜನಸಮೂಹದ ಮಹಿಳೆಯರ ಮೇಲೆ ದೇಶದ ಗ್ರಾಮಾಂತರ ಪ್ರದೇಶಗಳಲ್ಲಿ ಮೇಲ್ಜಾತಿ ಜನರು, ಭಾರೀ ಆಸ್ತಿವಂತರು ಹಾಗೂ ಇನ್ನಿತರ ವರ್ಗಗಳಿಂದ ಕ್ಷಣಕ್ಷಣವೂ ನಡೆಯುತ್ತಿರುವ ಅತ್ಯಾಚಾರ ಹಾಗೂ ಪೀಡನೆಗಳ ಬಗ್ಗೆ ಹೇಳಲೇ ಸಾಧ್ಯವಿಲ್ಲ. ಉತ್ತರ ಕರ್ನಾಟಕ ಭಾಗದ ಬಹುತೇಕ ಭಾಗಗಳಲ್ಲಿ ಮಹಿಳೆಯರು ಒಂಟಿಯಾಗಿ ಬಹಿರ್ದೆಸೆಗೆ ಹೋಗಬೇಕಾದರೆ ಯಾವ ಕ್ಷಣದಲ್ಲಾದರೂ ಅತ್ಯಾಚಾರಗಳಿಗೆ ಒಳಗಾಗಲು ಸಿದ್ಧರಿರಬೇಕು ಎಂಬಂತಹ ವಾತಾವರಣವಿದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ದಾಖಲಾಗುವ ಶೇಕಡಾ 90ಕ್ಕೂ ಹೆಚ್ಚು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಕುಟುಂಬದ ಸದಸ್ಯರು ಹಾಗೂ ಪರಿಚಿತರಿಂದಲೇ ಆಗಿರುತ್ತವೆ. ದೇಶದಲ್ಲಿ ಪ್ರತಿ ಹದಿನೈದು ನಿಮಿಷಕ್ಕೆ ಒಬ್ಬ ಹೆಣ್ಣುಮಗಳ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂದು 2018ರಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಇಟ್ಟುಕೊಂಡು ಬ್ಯೂರೋ ವರದಿ ಮಾಡಿತ್ತು. ಅದರ ಪ್ರಕಾರ ಒಟ್ಟು ದೇಶದಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯಗಳ ಪ್ರಮಾಣವು 2018ರ ವೇಳೆಗೆ ಶೇಕಡಾ 58.8ರಷ್ಟು ಹೆಚ್ಚಾಗಿದೆ. ಬ್ಯೂರೋ ಅಂಕಿ ಅಂಶಗಳ ಪ್ರಕಾರ ಅತ್ಯಾಚಾರದ ನಂತರ ಮಾಡುವ ಕಗ್ಗೊಲೆಗಳ ಪ್ರಮಾಣದಲ್ಲಿ ಭಾರೀ ಪ್ರಮಾಣದ ಏರಿಕೆ ಕಾಣುತ್ತಿದೆ. ನಿರ್ಭಯಾ ಪ್ರಕರಣದ ನಂತರ ಮಾಡಿದ ಕಾನೂನುಗಳು ಕೂಡ ಅತ್ಯಾಚಾರಗಳ ಪ್ರಮಾಣಗಳನ್ನು ತಗ್ಗಿಸಲಿಲ್ಲ. ಬದಲಿಗೆ ಏರಿಕೆಯಲ್ಲೇ ಸಾಗುತ್ತಿದೆ. ಜೊತೆಗೆ ಅತ್ಯಾಚಾರದ ನಂತರ ಸಾಕ್ಷಿ ಉಳಿಸಬಾರದೆಂದು ಕೊಲೆ ಮಾಡುವ ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣತೊಡಗಿದೆ. ಕೇವಲ ಕಾನೂನುಗಳ ಮೂಲಕ ಅತ್ಯಾಚಾರ ಕೊಲೆಗಳನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದನ್ನು ಇದು ಹೇಳುತ್ತಿದೆ.

ಭಾರತದಲ್ಲಿ ಮಾನವ ಕಳ್ಳ ಸಾಗಣೆಯು 20ರಿಂದ 65 ಕೋಟಿ ಜನರನ್ನು ಬಾಧಿಸುತ್ತಿದೆ ಎಂದು ‘ಡಯಾನೋವಾ’ ಎಂಬ ಜಾಗತಿಕ ಸರಕಾರೇತರ ಸಂಘಟನೆ 2019ರ ತನ್ನ ವರದಿಯಲ್ಲಿ ಹೇಳಿತ್ತು. 2013ರಲ್ಲಿ ಕರ್ನಾಟಕವು ದೇಶದ ಮೂರನೇ ಅತೀ ಹೆಚ್ಚಿನ ಮಾನವ ಕಳ್ಳಸಾಗಣೆ ನಡೆಯುವ ರಾಜ್ಯವಾಗಿ ಗುರುತಿಸಲ್ಪಟ್ಟಿತ್ತು. 2016ರಲ್ಲಿ ಅದು ನಾಲ್ಕನೇ ಸ್ಥಾನಕ್ಕೆ ತಲುಪಿತ್ತು. 2018ರಲ್ಲಿ ಭಾರತ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತವಾದ ದೇಶ ಎಂದೇ ಪರಿಗಣಿಸಲ್ಪಟ್ಟಿತ್ತು. ಭಾರೀ ಕಾರ್ಪೊರೇಟ್ ಮತ್ತಿತರ ಹಿತಾಸಕ್ತಿಗಳು ಲಾಭ ಗಳಿಸಬೇಕಾದರೆ ಹೆಣ್ಣುಮಕ್ಕಳು ಕೇವಲ ಭೋಗವಸ್ತು ಹಾಗೂ ಮಾರಾಟದ ಸರಕು ಎಂದಾಗಬೇಕು. ಅದಾಗಬೇಕಾದರೆ ಅಂತಹ ಮನೋಭಾವನೆಗಳನ್ನು ಸಮಾಜದಾದ್ಯಂತ ಹಬ್ಬಿ ಹರಡುತ್ತಿರಲೇಬೇಕು. ಅದಕ್ಕಾಗಿ ಕಲೆ, ಸಾಹಿತ್ಯ, ಧರ್ಮ, ಮಾಧ್ಯಮ, ಜಾಹೀರಾತು, ಕಲಿಕೆ ಹೀಗೆ ಎಲ್ಲವನ್ನೂ ಆ ನಿಟ್ಟಿನಲ್ಲಿ ತೊಡಗಿಸುತ್ತಿರಬೇಕಾಗುತ್ತದೆ. ಅದನ್ನೇ ನಮ್ಮ ಆಳುವ ಶಕ್ತಿಗಳು ಮಾಡುತ್ತಾ ಬಂದಿವೆ.

ಹೀಗಿರುವಾಗ ಸಮಾಜದ ಅದರಲ್ಲೂ ಗಂಡಸರಲ್ಲಿ, ಗಂಡು ಮಕ್ಕಳಲ್ಲಿ ಹೆಣ್ಣಿನ ಕುರಿತು ಸಮಾನ ನೆಲೆಗಟ್ಟಿನ ಇಲ್ಲವೇ ತನ್ನಂತೆಯೇ ವ್ಯಕ್ತಿತ್ವ, ಮನುಷ್ಯತುಡಿತ ಮತ್ತು ಸಂವೇದನೆಗಳಿರುವ ಸಹಜೀವಿ, ಈ ಪ್ರಪಂಚದಲ್ಲಿ ತನ್ನಷ್ಟೇ ಹಕ್ಕುದಾರಳು ಎಂಬ ಭಾವನೆಗಳು ಗಟ್ಟಿಯಾಗಿ ಹಾಗೂ ಆಳವಾಗಿ ಬೆಳೆದು ನೆಲೆಗೊಳ್ಳಲು ಸಾಧ್ಯವಾಗುತ್ತದೆಯೇ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ.
  
ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ಕುರಿತಾಗಿ ಕೀಳಾಗಿ, ಭೋಗವಸ್ತುವಾಗಿ, ಅಸಮಾನ ನೆಲೆಗಟ್ಟಿನಲ್ಲಿ, ಲೈಂಗಿಕ ವಸ್ತುವಾಗಿ ನೋಡುವ ಎಲ್ಲವನ್ನೂ ಅಪರಾಧವೆಂದು ಮಾಡಬೇಕು. ಅವೈಜ್ಞಾನಿಕ ಹಾಗೂ ವಿಕೃತವಾದ ಲೈಂಗಿಕ ಸಾಹಿತ್ಯ ಹಾಗೂ ವಿಕೃತ ಲೈಂಗಿಕ ಸಿನೆಮಾಗಳು ಹಾಗೂ ವೀಡಿಯೊಗಳ ಹಾವಳಿಗಳನ್ನು ತಡೆಗಟ್ಟಬೇಕು. ಹೆಣ್ಣು ಮಕ್ಕಳನ್ನು ಪ್ರದರ್ಶಕ ವಸ್ತುವನ್ನಾಗಿಸುವ ಧೋರಣೆಗಳನ್ನು ತಂದೆ ತಾಯಂದಿರು, ಪೋಷಕರು, ಶಿಕ್ಷಕರು ನಿಲ್ಲಿಸಬೇಕು. ಹೆಣ್ಣುಮಕ್ಕಳು ಹಾಗೂ ಮಹಿಳೆಯರ ಬಗ್ಗೆ ಸಮಾನ ನೆಲೆಗಟ್ಟಿನಲ್ಲಿ ನೋಡುವ ಶಾಲಾ ಪಠ್ಯಗಳು, ಸಾಹಿತ್ಯಗಳು, ಸಿನೆಮಾ, ಇನ್ನಿತರ ಕಲೆಗಳು, ಮಾಧ್ಯಮಗಳು, ವಾಣಿಜ್ಯ ಜಾಹೀರಾತುಗಳು ಮಾತ್ರ ಚಾಲ್ತಿಯಲ್ಲಿರುವಂತಹ ವಾತಾವರಣ ಸೃಷ್ಟಿಯಾಗಬೇಕು. ಲೈಂಗಿಕ ವಿಚಾರಗಳ ಬಗ್ಗೆ ಅಸಹ್ಯದ ಹಾಗೂ ಶೀಲ ಅಶ್ಲೀಲತೆಯ ಜಾಗದಲ್ಲಿ ಸಹಜತೆಯ ಮುಕ್ತ ವಾತಾವರಣ ನಿರ್ಮಾಣವಾಗಬೇಕು. ಲಿಂಗ ಸಮಾನತೆ, ಲಿಂಗಸಂವೇದನೆ ಹಾಗೂ ಲೈಂಗಿಕತೆಗಳ ಬಗ್ಗೆ ಆರೋಗ್ಯಕರವಾಗಿ ಮತ್ತು ವೈಜ್ಞಾನಿಕವಾಗಿ ಎಲ್ಲಾ ಮಕ್ಕಳಿಗೆ ಮನೆ ಹಾಗೂ ಶಾಲೆಗಳಲ್ಲಿ ಕಲಿಸುವಂತಿರಬೇಕು. ಆಗ ಮಾತ್ರ ಹೆಣ್ಣು ಜೀವಗಳ ಬಗ್ಗೆ ಸಮಾಜದ ಮನೋಭಾವ ಹಾಗೂ ಗಂಡಿನ ಮನೋಭಾವ ಬದಲಾಗುವತ್ತ ಸಾಗಲು ಸಾಧ್ಯವಾಗುತ್ತದೆ.

ಮಿಂಚಂಚೆ: nandakumarnandana67@gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News