ಮುಸ್ಲಿಮರಿಗೆ ಯಾವುದೇ ಆಶಾವಾದ ಉಳಿದಿಲ್ಲ ಎಂದು ಶರ್ಜೀಲ್ ಭಾಷಣ ಸೂಚಿಸಿತ್ತು: ನ್ಯಾಯಾಲಯಕ್ಕೆ ಹೇಳಿದ ಪ್ರಾಸಿಕ್ಯೂಟರ್

Update: 2021-09-02 11:59 GMT

ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾತ್ಮಕ ಘಟನೆಗಳಿಗೆ ಸಂಬಂಧಿಸಿದಂತೆ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆಯಡಿ ಪ್ರಕರಣ ಎದುರಿಸುತ್ತಿರುವ ಜೆಎನ್‍ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ ವಿರುದ್ಧದ ಆರೋಪಗಳ ಸಮರ್ಥನೆಯಲ್ಲಿ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದ ವಿಶೇಷ ಸಾರ್ವಜನಿಕ ಅಭಿಯೋಜಕ ಅಮಿತ್  ಪ್ರಸಾದ್,  ಮುಸ್ಲಿಮರಿಗೆ ಆಶಾವಾದವಿಲ್ಲ ಎಂಬ ಸ್ಪಷ್ಟ ಸೂಚನೆಯನ್ನು ಶರ್ಜೀಲ್ ಭಾಷಣ ನೀಡಿತ್ತು ಹಾಗೂ  ದಿಗ್ಬಂಧನ ಕೇಂದ್ರಗಳಿಗೆ ಬೆಂಕಿ ಹಚ್ಚಬೇಕೆಂಬ ಅವರ ಕರೆ ಶಾಂತಿಯುತ ಹೇಗಾಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಶರ್ಜೀಲ್ ಅವರು ತಮ್ಮ ಭಾಷಣವನ್ನು ಅಸ್ಸಲಾಮು-ಅಲೈಕುಂ ಎಂದು ಆರಂಭಿಸಿದ್ದರಿಂದ ಅವರು ಮುಸ್ಲಿಂ ಸಮುದಾಯವನ್ನೇ ಉದ್ದೇಶಿಸಿ ಮಾತನಾಡಿದ್ದರೆಂಬುದು ಸ್ಪಷ್ಟ ಹಾಗೂ ಅವರು  ತಮ್ಮ ಭಾಷಣದ ಮೂಲಕ ಅರಾಜಕತೆ ಸೃಷ್ಟಿಸಲು ಯತ್ನಿಸಿದ್ದರು ಎಂದು ವಿಶೇಷ ಅಭಿಯೋಜಕರು  ನ್ಯಾಯಾಲಯಕ್ಕೆ ಹೇಳಿದ್ದಾರೆ.

ಗುರುವಾರ ವಿಚಾರಣೆ ವೇಳೆ ಪ್ರಸಾದ್ ಅವರು ಶರ್ಜೀಲ್ ಅವರು ಅಸನ್ಸೋಲ್ ಎಂಬಲ್ಲಿ ಜನವರಿ 22ರಂದು ನೀಡಿದ ಭಾಷಣವನ್ನು ಓದಿ ಹೇಳಿದರಲ್ಲದೆ "ಸಿಎಎ ಅಥವಾ ಎನ್‍ಆರ್‍ಸಿ ಸಮಸ್ಯೆಯಲ್ಲ, ನಿಜವಾದ ಸಮಸ್ಯೆ ತ್ರಿವಳಿ ತಲಾಖ್, ಕಾಶ್ಮೀರ ವಿಚಾರಗಳಾಗಿತ್ತು ಎಂದು ಅವರ ಭಾಷಣ ಸೂಚಿಸುತ್ತಿತ್ತು, ಎಲ್ಲವೂ ಮುಗಿದು ಹೋಗಿದೆ, ನಿಮಗೆ ಯಾವುದೇ ಭರವಸೆಯಿಲ್ಲ ಎಂದೂ ಅವರು ಸೂಚಿಸಿದ್ದರು," ಎಂದು ನ್ಯಾಯಾಲಯಕ್ಕೆ ಹೇಳಿದರು.

ಶರ್ಜೀಲ್ ತಮ್ಮ ಭಾಷಣದ ಮೂಲಕ ದೇಶದ ಸಾರ್ವಭೌಮತ್ವಕ್ಕೆ ಸವಾಲೆಸೆದಿದ್ದಾರೆ ಎಂದೂ ಅವರು ಹೇಳಿದರು. ಅವರು ದಿಗ್ಬಂಧನ ಕೇಂದ್ರಗಳಿಗೆ ಬೆಂಕಿ ಹಚ್ಚಬೇಕೆಂದು ಹೇಳಿದ್ದಾರೆನ್ನಲಾದ ಭಾಷಣದ ಭಾಗವನ್ನು ಓದಿದ ಪ್ರಸಾದ್, "ಇದು ಹಿಂಸೆಗೆ ಪ್ರೇರೇಪಣೆಯಲ್ಲದೆ ಮತ್ತಿನ್ನೇನು? ಇದು ಶಾಂತಿಯುತ ಎಂದು ಯಾರಾದರೂ ಹೇಗೆ ಹೇಳಬಹುದು?' ಎಂದು ಪ್ರಶ್ನಿಸಿದರು.

ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಸೆಪ್ಟೆಂಬರ್ 4ಕ್ಕೆ ನಿಗದಿಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News