2030ರ ವೇಳೆಗೆ 78 ಮಿಲಿಯನ್ ಜನತೆಗೆ ಬುದ್ಧಿಮಾಂಧ್ಯತೆಯ ಅಪಾಯ: ವಿಶ್ವ ಆರೋಗ್ಯ ಸಂಸ್ಥೆ‌

Update: 2021-09-02 16:41 GMT

ಜಿನೇವಾ, ಸೆ.2: ವಿಶ್ವದಾದ್ಯಂತ 55 ಮಿಲಿಯನ್ಗೂ ಅಧಿಕ ಜನತೆ ಬುದ್ಧಿಮಾಂದ್ಯತೆ ಹೊಂದಿದ್ದು, 2030ರ ವೇಳೆಗೆ ಈ ಪ್ರಮಾಣ 78 ಮಿಲಿಯನ್ ಗೆ ತಲುಪಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಹೇಳಿದೆ.

ಜ್ಞಾಪಕ ಶಕ್ತಿ, ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳುವ ಈ ನರವೈಜ್ಞಾನಿಕ ಅಸ್ವಸ್ಥತೆಯಿಂದ ಜಾಗತಿಕವಾಗಿ ವರ್ಷಕ್ಕೆ 1.3 ಲಕ್ಷ ಕೋಟಿ ಡಾಲರ್ ನಷ್ಟವಾಗುತ್ತದೆ. ಹೃದಯಾಘಾತ, ಮೆದುಳಿನ ಗಾಯ ಅಥವಾ ಅಲ್ಝೀಮರ್ಸ್ ಕಾಯಿಲೆಯಿಂದ ಬುದ್ಧಿಮಾಂದ್ಯತೆ ಉಂಟಾಗಬಹುದು. ವಿಶ್ವದಲ್ಲಿ ಈಗ ಸುಮಾರು 55 ಮಿಲಿಯನ್ ಜನ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಪ್ರಮಾಣ 2030ರ ವೇಳೆಗೆ 78 ಮಿಲಿಯನ್ ಗೆ, 2050ರ ವೇಳೆಗೆ 139 ಮಿಲಿಯನ್ ಗೆ ತಲುಪಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ.

ಬುದ್ಧಿಮಾಂದ್ಯ ರೋಗಿಗಳು ಹಾಗೂ ಅವರ ಕುಟುಂಬದವರಿಗೆ ನೆರವಾಗುವ ಯೋಜನೆಯನ್ನು 4ರಲ್ಲಿ ಒಂದು ದೇಶ ಮಾತ್ರ ಹೊಂದಿದೆ. ಈ ರೋಗದಿಂದ ವ್ಯಕ್ತಿಗಳು ತಮ್ಮ ಜ್ಞಾಪಕ ಶಕ್ತಿ ಮಾತ್ರವಲ್ಲ, ಘನತೆ, ಸ್ವಾತಂತ್ರ್ಯವನ್ನೂ ಕಳೆದುಕೊಳ್ಳುತ್ತಾರೆ. ಜನರನ್ನು ಪ್ರೀತಿಪಾತ್ರರಿಂದ ದೂರ ಮಾಡುವ ರೋಗ ಇದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಢ್ನಾಮ್ ಘೆಬ್ರೆಯೆಸುಸ್ ಹೇಳಿದ್ದಾರೆ.

ಇದು ವಿಶ್ವದಲ್ಲಿ ಆತಂಕ ಮೂಡಿಸಿದ ಅಸ್ವಸ್ಥತೆಯಾಗಿದ್ದು ಅಧಿಕ ಆದಾಯದ ದೇಶಕ್ಕೆ ಮಾತ್ರ ಇದು ಸೀಮಿತವಾಗಿಲ್ಲ. ಬುದ್ಧಿಮಾಂಧ್ಯತೆ ಕಾಯಿಲೆಯ 60% ಪ್ರಕರಣ ಕೆಳ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವರದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾನಸಿಕ ಆರೋಗ್ಯ ವಿಭಾಗದ ತಜ್ಞೆ ಕ್ಯಾತ್ರಿನ್ ಸೀಹೆರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News