ಎರಡು ಡೋಸ್ ಲಸಿಕೆ ಪಡೆದವರಿಗೂ ಮಾಸ್ಕ್ ಕಡ್ಡಾಯ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

Update: 2021-09-02 18:46 GMT

ಬೆಂಗಳೂರು, ಸೆ.2: ಕೋವಿಡ್ ಮೂರನೇ ಅಲೆ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಎರಡು ಡೋಸ್ ಲಸಿಕೆ ಪಡೆದವರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಮನವಿ ಮಾಡಿದ್ದಾರೆ.

ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲಸಿಕೆ ಹಾಕಿಸಿಕೊಳ್ಳಲಾಗಿದೆ ಎಂದು ನಿರ್ಲಕ್ಷಿಸುವುದು ಸರಿಯಲ್ಲ. ಮಾಸ್ಕ್ ಹಾಕದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ

ನಗರ ವ್ಯಾಪ್ತಿಯಲ್ಲಿ ದಿನೇ ದಿನೇ ಲಸಿಕೆ ನೀಡುವಿಕೆ ಪ್ರಮಾಣ ಹೆಚ್ಚಳ ಮಾಡಲಾಗುತ್ತಿದೆ. ಸದ್ಯ ಕಳೆದ 24 ಗಂಟೆಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ 1.85 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಪ್ರತಿ ದಿನ 1 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದಿನದ 24 ಗಂಟೆಗಳ ಕಾಲವೂ ಲಸಿಕೆ ದೊರೆಯುವಂತೆ ಮಾಡಲು ಹಂತ ಹಂತವಾಗಿ ಹಲವು ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದರ ಭಾಗವಾಗಿ ಬೆಳಗ್ಗೆ 8ಗಂಟೆಯಿಂದ ಲಸಿಕೆ ಕೇಂದ್ರ ತೆರೆಯಲಿವೆ. ಕೆಲ ಕೇಂದ್ರಗಳು ಸಂಜೆ ಹೊತ್ತಿಗೂ ಕಾರ್ಯನಿರ್ವಹಿಸಲಿವೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನ ಪ್ರತಿಯೊಬ್ಬರು ಲಸಿಕೆ ಪಡೆದುಕೊಂಡರೆ ಮಾತ್ರ ನಾವು ಕೋವಿಡ್ ವಿರುದ್ಧ ಹೋರಾಡಲು ಸಾಧ್ಯ. ಈ ನಿಟ್ಟಿನಲ್ಲಿ ನಗರ ವ್ಯಾಪ್ತಿಯ ಕೊಳಗೇರಿ ಪ್ರದೇಶ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಅತಿ ಹೆಚ್ಚು ಲಸಿಕೆ ಪೂರೈಸಲು ಮುಂದಾಗಿದ್ದೇವೆ. ಜೊತೆಗೆ, ಮನೆ ಮನೆಗೂ ನಡೆಯುತ್ತಿರುವ ಸಮೀಕ್ಷೆಯಲ್ಲು ಲಸಿಕೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News