ಕೋವಿಡ್ ನಂತರ ಶಿಕ್ಷಣ: ಶಿಕ್ಷಕರ ಮುಂದಿವೆ ಸಾಲು ಸಾಲು ಸವಾಲುಗಳು

Update: 2021-09-04 19:30 GMT

ಒಂದು ಚಿಕ್ಕ ವೈರಾಣು ಇಡೀ ಜಗತ್ತನ್ನೇ ತಲ್ಲಣಗೊಳಿಸಿತು. ಆರ್ಥಿಕಾಭಿವೃದ್ಧಿಯ ಎಲ್ಲಾ ಕ್ಷೇತ್ರಗಳು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ಶಿಕ್ಷಣ ಕ್ಷೇತ್ರವು ಆರ್ಥಿಕಾಭಿವೃದ್ಧಿಯ ನೇರ ಭಾಗವಲ್ಲದಿದ್ದರೂ ಶಿಕ್ಷಣವಿಲ್ಲದೆ ಆರ್ಥಿಕಾಭಿವೃದ್ಧಿ ಸಾಧ್ಯವಿಲ್ಲ ಎಂದೇ ಹೇಳಬಹುದು. ಕಳೆದ ಹದಿನೆಂಟು ತಿಂಗಳಲ್ಲಿ ಬಹುತೇಕ ಭೌತಿಕ ತರಗತಿಗಳು ಸ್ಥಗಿತಗೊಂಡಿದ್ದವು. ಭೌತಿಕ ಕಲಿಕೆ ಇಲ್ಲದೆ ಆನ್‌ಲೈನ್ ತರಗತಿಯಲ್ಲಿ ವಿದ್ಯಾರ್ಥಿಗಳು ಎಷ್ಟರಮಟ್ಟಿಗೆ ಕಲಿತಿದ್ದಾರೆ, ಕಲಿತಿದ್ದನ್ನು ಎಷ್ಟು ಅನ್ವಯಗೊಳಿಸಿಕೊಂಡಿದ್ದಾರೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ. ಕಳೆದ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಅಂದರೆ ಜುಲೈ ಮಾಹೆಯಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕಲಿಕೆ ಪ್ರಾರಂಭವಾಯಿತು. ಶಿಕ್ಷಣ ಇಲಾಖೆಯು ‘ಸಂವೇದ’ ಹೆಸರಿನ ದೂರದರ್ಶನ ಪಾಠಗಳನ್ನು ಪ್ರಾರಂಭಿಸಿತು. ಇದರ ಜೊತೆಗೆ ಕೆಲವು ಶಾಲೆಗಳ ಶಿಕ್ಷಕರು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿ ಮಕ್ಕಳ ಕಲಿಕೆಯನ್ನು ಉತ್ತೇಜಿಸಲು ಪ್ರಯತ್ನಿಸಿದರು. ಆನ್‌ಲೈನ್ ಸೌಲಭ್ಯವಿಲ್ಲದ ಮಕ್ಕಳಿಗಾಗಿ ಇಲಾಖೆಯು ‘ವಿದ್ಯಾಗಮ’ ಹೆಸರಿನ ಹೊಸ ಕಲ್ಪನೆಯ ಶೈಕ್ಷಣಿಕ ಯೋಜನೆಯನ್ನು ಜಾರಿಗೆ ತಂದಿತ್ತು. ಇಲ್ಲಿ ಶಿಕ್ಷಕರು ಮಕ್ಕಳು ವಾಸವಿರುವ ಭೌತಿಕ ಪರಿಸರಕ್ಕೆ ತೆರಳಿ, ಅಲ್ಲಿನ ದೇವಸ್ಥಾನ, ಬಯಲು ಜಾಗ, ಕಟ್ಟೆ, ಸಮುದಾಯ ಭವನ, ಇತ್ಯಾದಿ ಸ್ಥಳಗಳಲ್ಲಿ ಕುಳಿತು ವಿದ್ಯಾರ್ಥಿಗಳಿಗೆ ಕನಿಷ್ಠ/ಮೂಲ ಕಲಿಕಾಂಶಗಳನ್ನು ಕಲಿಸುವ ಪ್ರಯತ್ನ ಮಾಡಿದ್ದರು. ಇದು ಒಂದು ರೀತಿಯಲ್ಲಿ ಮಕ್ಕಳ ಕಲಿಕೆಯನ್ನು ಜೀವಂತವಾಗಿಡುವ ಪ್ರಯತ್ನವಾಗಿತ್ತು.

ಈ ಮಧ್ಯೆ ಕೋವಿಡ್ ಪ್ರಸರಣ ವೇಗ ಕಡಿಮೆಯಾದ್ದರಿಂದ ಜನವರಿ 2021ರಿಂದ ಪ್ರೌಢಶಾಲೆಯ 9 ಮತ್ತು 10ನೇ ತರಗತಿಗಳಿಗೆ ಕೋವಿಡ್ ಮಾರ್ಗಸೂಚಿ ಆಧಾರದ ಮೇಲೆ ಭೌತಿಕ ತರಗತಿಗಳು ಪ್ರಾರಂಭವಾದವು. ಶಿಕ್ಷಕರು ಭೌತಿಕ ತರಗತಿ ಬೋಧನೆಯ ವೇಗ ಹೆಚ್ಚಿಸಿಕೊಳ್ಳುವ ವೇಳೆಗೆ ಕೋವಿಡ್ ಪ್ರಸರಣ ವೇಗ ಹೆಚ್ಚಾಗತೊಡಗಿತು. ಪುನಃ ಭೌತಿಕ ತರಗತಿಗೆ ಬೀಗ ಹಾಕಲಾಯಿತು. ಸಂವೇದ ತರಗತಿ, ಆನ್‌ಲೈನ್ ತರಗತಿ, ಭೌತಿಕ ತರಗತಿಗಳಲ್ಲಿ ನೀಡಿದ ಕಲಿಕಾ ಚಟುವಟಿಕೆಗಳಿಗೆ ಮಕ್ಕಳ ಪ್ರತಿಕ್ರಿಯೆ ಆಧರಿಸಿ ಮೌಲ್ಯಮಾಪನ ಕಾರ್ಯ ಮಾಡಲಾಯಿತು. ಈ ಮೌಲ್ಯಮಾಪನದ ಆಧಾರದ ಮೇಲೆ ಪರೀಕ್ಷೆಗಳು ಇಲ್ಲದೆ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಉತ್ತೀರ್ಣಗೊಳಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದ ಪರಿಸ್ಥಿತಿ ಹೀಗಿರುವಾಗ, ಈ ವರ್ಷದ ಶೈಕ್ಷಣಿಕತೆ ಇನ್ನಷ್ಟು ಭಿನ್ನವಾಗಿದೆ.

ಶಿಕ್ಷಕರ ಮುಂದೆ ಸಾಲು ಸಾಲು ಸವಾಲುಗಳಿವೆ. ಅವುಗಳನ್ನು ಎದುರಿಸಲು ಶಿಕ್ಷಕರು ಮಾನಸಿಕ ಸಿದ್ಧತೆ ಮಾಡಿಕೊಂಡಿದ್ದರೂ ಪರಿಸ್ಥಿತಿ ಹೇಗೆ ಬದಲಾಗುವುದೋ ತಿಳಿಯದು. ಪ್ರತಿವರ್ಷದಂತೆ ಈ ವರ್ಷವೂ ಜೂನ್‌ನಲ್ಲಿ ಶಾಲೆಗಳು ಪುನರಾರಂಭಗೊಳ್ಳಲಿಲ್ಲ. ಕೋವಿಡ್ ಮೂರನೇ ಅಲೆ ಅಪ್ಪಳಿಸಲಿದೆ ಎಂಬ ಆತಂಕದಲ್ಲೇ ಕಾಲ ತಳ್ಳುವಂತಾಗಿತ್ತು. ಆದರೆ ಇತ್ತೀಚಿನ ಕೆಲ ಬೆಳವಣಿಗೆಗಳು ಶಿಕ್ಷಕರಲ್ಲಿ ಮತ್ತು ಮಕ್ಕಳಲ್ಲಿ ಆಶಾಭಾವನೆ ಮೂಡಿಸಿವೆ. ಇಲಾಖೆಯು ಹಂತ ಹಂತವಾಗಿ ಶಾಲೆಗಳನ್ನು ಪ್ರಾರಂಭಿಸುತ್ತಿದೆ. ಈಗಾಗಲೇ 9 ರಿಂದ 12ನೇ ತರಗತಿಗಳು ಪ್ರಾರಂಭವಾಗಿದ್ದು, ನಾಳೆಯಿಂದ 6 ರಿಂದ 8ನೇ ತರಗತಿಗಳು ಪ್ರಾರಂಭಗೊಳ್ಳಲಿವೆ. ಶಿಕ್ಷಕರಿಗೆ ಶಾಲೆಗಳು ಪ್ರಾರಂಭವಾಗುತ್ತಿರುವ ಖುಷಿ ಒಂದೆಡೆಯಾದರೆ ಶಾಲೆಗೆ ಬಂದ ಮಕ್ಕಳಿಗೆ ಏನನ್ನು ಕಲಿಸಬೇಕು? ಎಷ್ಟು ಕಲಿಸಬೇಕು ಎಂಬ ಚಿಂತೆ ಕಾಡಲಿದೆ.

ಶಿಕ್ಷಕರ ಈ ಚಿಂತನೆಗೆ ಕಾರಣ ಸ್ಪಷ್ಟವಾಗಿದೆ. ಕಳೆದ ವರ್ಷದ ಶೈಕ್ಷಣಿಕ ಕಲಿಕೆ ನಿರ್ದಿಷ್ಟವಾಗಿ ಮತ್ತು ಸಂಪೂರ್ಣವಾಗಿ ಆಗದಿರುವುದು. ಕಳೆದ ವರ್ಷ ಕಡಿಮೆ ಅವಧಿಗೆಂದು ಶೇಕಡಾ 30ರಷ್ಟು ಕಲಿಕಾಂಶಗಳನ್ನು ಕಡಿತಗೊಳಿಸಲಾಗಿತ್ತು. ಪ್ರತಿ ಕಲಿಕಾಂಶಗಳು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ತೀರಾ ಅಗತ್ಯ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಕಡಿತಗೊಂಡ ಕಲಿಕಾಂಶಗಳ ಕಲಿಕಾ ಕೊರತೆ ಈ ವರ್ಷ ಆ ಮಕ್ಕಳನ್ನು ಬಾಧಿಸುತ್ತಿದೆ. ಮಕ್ಕಳಿಗೆ ಹಳೆಯ ಕಲಿಕಾಂಶಗಳ ಕಲಿಸುವುದರ ಜೊತೆಗೆ ಹೊಸ ಕಲಿಕಾಂಶಗಳನ್ನೂ ಮೂಡಿಬೇಕಾಗಿದೆ. ಕಳೆದ ವರ್ಷದಲ್ಲಿ ಶಿಕ್ಷಕರು ಬಹುತೇಕವಾಗಿ ಆನ್‌ಲೈನ್ ಮೂಲಕ ಪಠ್ಯಾಂಶ ಪೂರ್ಣಗೊಳಿಸಿದ್ದರು. ಆದರೆ ಕೆಲ ಮಕ್ಕಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾದರು. ವಂಚಿತರಾದ ಎಲ್ಲಾ ಮಕ್ಕಳು ನಿರ್ದಿಷ್ಟಪಡಿಸಿದ ಕಲಿಕಾಂಶಗಳನ್ನು ಕಲಿಯಲು ವಿಫಲರಾದರು. ಕಲಿಕಾಂಶದಿಂದ ವಂಚಿತವಾದ ಎಲ್ಲಾ ಮಕ್ಕಳಿಗೆ ಈ ವರ್ಷ ಹಳೆಯ ಕಲಿಕಾಂಶದ ಜೊತೆಗೆ ಹೊಸ ಕಲಿಕಾಂಶವನ್ನು ಕಲಿಸಬೇಕಾಗಿದೆ. ಇದು ಬಹು ದೊಡ್ಡ ಸವಾಲು.

ಬಹುತೇಕ ಮಕ್ಕಳು ಆನ್‌ಲೈನ್ ತರಗತಿಗೆ ಒಗ್ಗಿಕೊಂಡಿದ್ದರು. ಮನೆಯಲ್ಲಿ ಆರಾಮವಾಗಿ ಕುಳಿತು, ಓಡಾಡಿಕೊಂಡು, ಮಲಗಿಕೊಂಡು, ಒರಗಿಕೊಂಡು ತರಗತಿ ಕಲಿಕೆಯಲ್ಲಿ ತೊಡಗಿಕೊಂಡಿದ್ದರು. ಈಗ ಭೌತಿಕ ತರಗತಿಗಳು ಪ್ರಾರಂಭವಾಗಿವೆ. ಆದರೆ ಬಹುತೇಕ ಮಕ್ಕಳು ಆನ್‌ಲೈನ್ ತರಗತಿಯಲ್ಲಿನ ವರ್ತನೆಗಳನ್ನು ಭೌತಿಕ ತರಗತಿಗಳಲ್ಲಿ ಪ್ರದರ್ಶಿಸುತ್ತಿದ್ದಾರೆ. ಇದನ್ನು ನಿವಾರಿಸುವುದು ಶಿಕ್ಷಕರ ಸವಾಲಾಗಿದೆ. ಆನ್‌ಲೈನ್ ತರಗತಿಯಲ್ಲಿ ಬಹುತೇಕವಾಗಿ ಶಿಕ್ಷಕರಿಂದ ಒಮ್ಮುಖ ಬೋಧನೆ ನಡೆಯುತ್ತಿತ್ತು. ಆದರೆ ಈಗ ಭೌತಿಕ ತರಗತಿಗಳಲ್ಲಿ ವಿದ್ಯಾರ್ಥಿಗಳು ಪರಸ್ಪರ ಸಂವಹನದ ಕೊರತೆಯಿಂದ ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ. ಆನ್‌ಲೈನ್ ತರಗತಿಗೆ ಒಗ್ಗಿಕೊಂಡಿದ್ದ ವಿದ್ಯಾರ್ಥಿಗಳನ್ನು ಭೌತಿಕ ತರಗತಿಗೆ ಒಗ್ಗಿಕೊಳ್ಳುವಂತೆ ಮಾಡುವುದು ಶಿಕ್ಷಕರಿಗೆ ಸವಾಲಾಗಿದೆ.

ಇದುವರೆಗೂ ಶಿಕ್ಷಕರು ಆನ್‌ಲೈನ್‌ನಲ್ಲಿ ಮನೆಕೆಲಸ, ಅಭ್ಯಾಸ ಹಾಳೆಗಳು, ಕಲಿಕಾ ಹಾಳೆಗಳು, ಕಲಿಕಾ ಚಟುವಟಿಕೆಗಳನ್ನು ನೀಡುತ್ತಿದ್ದರು. ಅವುಗಳನ್ನು ಆನ್‌ಲೈನ್‌ನಲ್ಲೇ ಮೌಲ್ಯಮಾಪನ ಮಾಡಲಾಗುತ್ತಿತ್ತು. ಈಗ ಭೌತಿಕ ತರಗತಿಗಳಲ್ಲಿ ನೀಡಿದ ಅಭ್ಯಾಸ ಹಾಳೆ, ಕಲಿಕಾ ಹಾಳೆ, ಕಲಿಕಾ ಚಟುವಟಿಕೆಗಳ ನಿರ್ವಹಣೆ, ಸೇತುಬಂಧ ದಾಖಲಾತಿಗಳು, ಪರ್ಯಾಯ ಕಲಿಕಾ ಚಟುವಟಿಕೆಗಳು, ವಿಷಯವಾರು ಸಂಪನ್ಮೂಲ ವ್ಯಕ್ತಿಗಳು ನೀಡುತ್ತಿರುವ ಕಲಿಕಾ ಚಟುವಟಿಕೆಗಳು ಹೀಗೆ ಇವುಗಳಲ್ಲಿ ಯಾವುದನ್ನು ಹೇಗೆ ನಿರ್ವಹಿಸಬೇಕು? ಯಾವ ದಾಖಲೆಗಳನ್ನು ಹೇಗೆ ಇಡಬೇಕೆಂಬ ಗೊಂದಲ ಎದುರಾಗಿದೆ.

ಭೌತಿಕ ತರಗತಿಗಳು ಪ್ರಾರಂಭವಾಗಿದ್ದರೂ ಕೆಲವು ವಿದ್ಯಾರ್ಥಿಗಳು ಇನ್ನೂ ಶಾಲೆಯತ್ತ ಬರುತ್ತಲೇ ಇಲ್ಲ. ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳು ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಹಾಜರಾತಿ ಕಡ್ಡಾಯವಲ್ಲ ಎಂಬುದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ. ಅಲ್ಲದೆ ಬಹುತೇಕ ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಮಾನಸಿಕವಾಗಿ ಶಾಲೆಗೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಎಷ್ಟೇ ಬಾರಿ ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರಯತ್ನ ವಿಫಲವಾಗುತ್ತಿದೆ. ಕೆಲ ಬಾರಿ ವಿದ್ಯಾರ್ಥಿ/ಪಾಲಕರು ಸಂಪರ್ಕಕ್ಕೆ ಸಿಗುತ್ತಿಲ್ಲ. ಸಿಕ್ಕರೂ ಸಬೂಬು ಹೇಳಿ ನುಣುಚಿಕೊಳ್ಳುತ್ತಾರೆ. ‘‘ನಾಳೆ ಕಳಿಸುತ್ತೇವೆ’’ ಎಂಬ ಸಿದ್ಧ ಉತ್ತರ ನೀಡುತ್ತಾರೆ. ಶಾಲೆಯಿಂದ ದೂರ ಉಳಿದ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವುದು ಶಿಕ್ಷಕರಿಗೆ ಭಾರೀ ಸವಾಲಾಗಿದೆ.

ತರಗತಿಯೆಂದರೆ ಅದೊಂದು ಪುಟ್ಟ ಪ್ರಪಂಚವಿದ್ದಂತೆ. ಅಲ್ಲಿರುವ ಪ್ರತೀ ಮಗುವೂ ವಿಭಿನ್ನವಾಗಿರುತ್ತದೆ. ಪ್ರತೀ ಮಗುವಿನ ಸಾಮಾಜಿಕ, ಆರ್ಥಿಕ, ಮಾನಸಿಕ ಹಿನ್ನೆಲೆಗಳನ್ನು ತರಗತಿ ಶಿಕ್ಷಕರು ಅರ್ಥೈಸಿಕೊಂಡಿರಬೇಕು. ವಿಭಿನ್ನ ಹಿನ್ನೆಲೆಯಿಂದ ಬಂದ ಮಕ್ಕಳಿಗೆ ಏಕರೂಪದ ಪಾಠ ಬೋಧನೆ ರುಚಿಸುವುದಿಲ್ಲ. ಪ್ರತಿ ಮಗುವಿನ ಆಸಕ್ತಿಗನುಗುಣವಾಗಿ ಬೋಧನೆ ಮಾಡುವುದು ನಿಜಕ್ಕೂ ಸವಾಲೇ ಸರಿ. ಬಹುತೇಕ ಶಿಕ್ಷಕರು ಕೆಲವು ಸಿದ್ಧ ಸೂತ್ರಗಳನ್ನು ಅನುಸರಿಸಿ ಎಲ್ಲಾ ಮಕ್ಕಳಿಗೂ ರುಚಿಸುವಂತೆ ಬೋಧಿಸುವ ಕಲೆಯನ್ನು ಕರಗತ ಮಾಡಿಕೊಂಡಿರುತ್ತಾರೆ. ಆದರೆ ಕೆಲ ಶಿಕ್ಷಕರಿಗೆ ಇದು ಸಾಧ್ಯವಾಗದು. ಹೀಗಾದಾಗ ತರಗತಿ ನಿರ್ವಹಣೆ ಎಂಬುದು ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಪಾಲಕರು ಕಾಲಕಾಲಕ್ಕೆ ಕೇಳುವ ದಾಖಲೆ ಹಾಗೂ ಮಾಹಿತಿಗಳ ನಿರ್ವಹಣೆಯೂ ಸವಾಲಾಗಿದೆ.

ಬಹುತೇಕ ಪ್ರಾಥಮಿಕ ಹಾಗೂ ಕೆಲ ಪ್ರೌಢ ಶಾಲೆಗಳಲ್ಲಿ ಲಿಪಿಕ ನೌಕರರು ಇಲ್ಲದೆ ಅವರ ಕೆಲಸವನ್ನು ಶಾಲೆಯ ಶಿಕ್ಷಕರೇ ನಿರ್ವಹಿಸಬೇಕಾಗಿದೆ. ಬೋಧನೆಗೆ ಮೀಸಲಾಗಿದ್ದ ಸಮಯದಲ್ಲಿ ಪಾಲಕರು/ಹಳೆ ವಿದ್ಯಾರ್ಥಿಗಳು ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಧ್ಯಮ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ, ಶಾಲಾ ದೃಢೀಕರಣ ಇತ್ಯಾದಿಗಳಿಗಾಗಿ ಶಾಲೆಗೆ ಬರುತ್ತಾರೆ. ಬಂದವರು ಅವಸರ ಹೊತ್ತುಕೊಂಡೇ ಬರುತ್ತಾರೆ. ‘‘ಸರ್ ತುಂಬಾ ಅರ್ಜೆಂಟ್ ಇದೆ. ಕೂಡಲೇ ಭರ್ತಿ ಮಾಡಿಕೊಡಿ’’ ಎಂದು ಬರುತ್ತಾರೆ. ಸ್ವಲ್ಪ ಸಮಯ ಕಾಯಿರಿ ಎಂದರೂ ಕೇಳುವುದೇ ಇಲ್ಲ. ಕಲಿಕಾ ಚಟುವಟಿಕೆಯನ್ನು ಮೊಟಕುಗೊಳಿಸಿ ಅವರು ಕೇಳಿದ ದಾಖಲೆ ನೀಡಿ ತರಗತಿಗೆ ಮರಳುವ ವೇಳೆಗೆ ಶಿಕ್ಷಕರ ಬೋಧನಾ ಮನೋಸ್ಥಿತಿ ಹಾಳಾಗಿರುತ್ತದೆ. ಹೀಗಾಗಿ ಶಿಕ್ಷಕರಿಗೆ ದಾಖಲೆ ನಿರ್ವಹಣೆ ಬಹುದೊಡ್ಡ ಸವಾಲಾಗುತ್ತಿದೆ.
ಕಳೆದ ಏಳೆಂಟು ವರ್ಷಗಳಿಂದ ಪ್ರತಿ ವಿದ್ಯಾರ್ಥಿಯ ಮಾಹಿತಿಯನ್ನು ಡಿಜಿಟಲೀಕರಣಗೊಳಿಸುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ(SATS) ತಂತ್ರಾಂಶ ಜಾರಿಯಲ್ಲಿದೆ. ಬಹುತೇಕ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೇ ಇದನ್ನು ನಿರ್ವಹಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಈ ತಂತ್ರಾಂಶ ನಿರ್ವಹಣೆ ತುಂಬಾ ತ್ರಾಸದಾಯಕವಾಗಿದೆ. ಇದನ್ನು ನಿರ್ವಹಿಸಲು ನೆಟ್‌ವರ್ಕ್ ಸಮಸ್ಯೆ ಎದುರಾಗುತ್ತಿದೆ. ಕೆಲ ವೇಳೆ ದಿನವಿಡೀ ಇದರ ಮುಂದೆ ಕುಳಿತು ನಿರ್ವಹಿಸಬೇಕಾಗುತ್ತದೆ. ಅಲ್ಲದೆ ಬಹುತೇಕ ಪ್ರಾಥಮಿಕ ಶಾಲೆಗಳಲ್ಲಿ ಕಂಪ್ಯೂಟರ್ ವ್ಯವಸ್ಥೆ ಇಲ್ಲ. ಶಿಕ್ಷಕರು ಮೊಬೈಲ್‌ನಲ್ಲೇ ಈ ತಂತ್ರಾಂಶವನ್ನು ನಿರ್ವಹಿಸುತ್ತಾರೆ. ಮೊಬೈಲ್‌ನ ಹೆಚ್ಚು ಬಳಕೆಯಿಂದ ಶಿಕ್ಷಕರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಏರುಪೇರುಗಳಾಗುತ್ತಿವೆ. ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ ತಂತ್ರಾಂಶದ ನಿರ್ವಹಣೆಯೂ ಸವಾಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿವೇತನವನ್ನು ಆನ್‌ಲೈನ್ ಮೂಲಕ ವ್ಯವಸ್ಥೆಗೊಳಿಸಲಾಗಿದೆ. ಇದಕ್ಕೆ ಶಾಲಾ ಲಾಗಿನ್ ಮೂಲಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು. ಇಲ್ಲಿಯೂ ಶಿಕ್ಷಕರೇ ಹೊಣೆಗಾರರು. ವಿದ್ಯಾರ್ಥಿಗಳ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಪುಸ್ತಕ ಎಲ್ಲವನ್ನು ಶಿಕ್ಷಕರೇ ನಿರ್ವಹಿಸಬೇಕು. ಕೆಲವು ವಿದ್ಯಾರ್ಥಿಗಳ ಆಧಾರ್ ಹಾಗೂ ಬ್ಯಾಂಕ್ ಖಾತೆ ಮಾಹಿತಿಯು ಶಾಲಾ ದಾಖಲಾತಿಯಂತೆ ಇರುವುದಿಲ್ಲ. ಹೀಗಿದ್ದಾಗ ವಿದ್ಯಾರ್ಥಿ ವೇತನ ಮಂಜೂರಾತಿಯಲ್ಲಿ ತೊಂದರೆಯಾಗುತ್ತದೆ. ಪಾಲಕರು ಇದಕ್ಕೆ ಶಿಕ್ಷಕರನ್ನೇ ಹೊಣೆಗಾರರನ್ನಾಗಿಸುತ್ತಾರೆ. ಇದನ್ನು ನಿಭಾಯಿಸುವುದು ಶಿಕ್ಷಕರಿಗೆ ಸವಾಲಾಗಿದೆ. ಇಂದಿನ ವಿದ್ಯಾರ್ಥಿಗಳನ್ನು ಜಾಗತಿಕ ಸ್ಪರ್ಧೆಗೆ ಅಣಿಗೊಳಿಸಬೇಕಾದ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ವಿದ್ಯಾರ್ಥಿಗಳ ಕಲಿಕಾ ವೇಗಕ್ಕೆ ತಕ್ಕಂತೆ ಶಿಕ್ಷಕರು ಬೋಧನಾ ಸಾಮರ್ಥ್ಯವನ್ನು ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ಕೆಲ ಶಿಕ್ಷಕರ ವಯೋಸಹಜತೆ ಮತ್ತು ಆರೋಗ್ಯ ಅಡ್ಡಿಯಾಗುತ್ತದೆ.

ಅಲ್ಲದೆ ಈಗಿನ ಕಾಲದ ವಿದ್ಯಾರ್ಥಿಗಳ ಮನೋಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವುದೂ ತೊಂದರೆಯಾಗುತ್ತಿದೆ. ಅದರಲ್ಲೂ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳ ಮನೋಸ್ಥಿತಿಗಳಲ್ಲಿ ಏರುಪೇರುಗಳು ಸಹಜ. ಇಂತಹ ಏರುಪೇರಿನ ಮನೋಸ್ಥಿತಿಯ ವಿದ್ಯಾರ್ಥಿಗಳನ್ನು ನಿಭಾಯಿಸಲು ಶಿಕ್ಷಕರು ಒಬ್ಬ ಮಾನಸಿಕ ತಜ್ಞರಾಗಿರಬೇಕಾಗುತ್ತದೆ. ಆದರೆ ಈ ಕೌಶಲ್ಯ ರೂಢಿಸಿಕೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲ. ಎಲ್ಲಾ ಸವಾಲುಗಳು ಗುಣಮಟ್ಟದ ಶಿಕ್ಷಣದ ಮೇಲೆ ಪ್ರಭಾವ ಬೀರುತ್ತವೆ. ಶಿಕ್ಷಕರು ಮೂಲತಃ ಮನುಷ್ಯರೇ ಆಗಿದ್ದು, ಇತರರಂತೆ ಅವರಿಗೂ ತಮ್ಮದೇ ಆದ ಇತಿಮಿತಿಗಳಿರುತ್ತವೆ. ಎಲ್ಲಾ ಇತಿಮಿತಿಗಳ ನಡುವೆ ವಿವಿಧ ಸವಾಲುಗಳನ್ನು ಎದುರಿಸುತ್ತಾ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಹಾತೊರೆಯುತ್ತಲೇ ಇದ್ದಾರೆ. ಗುಣಮಟ್ಟದ ಶಿಕ್ಷಣ ಅಥವಾ ಗುಣಮಟ್ಟದ ಕಲಿಕೆ ಎಂಬುದು ಕೇವಲ ನಿಗದಿತ ಪಠ್ಯವನ್ನು ಪೂರ್ಣಗೊಳಿಸುವುದಲ್ಲ. ಪಠ್ಯದಲ್ಲಿನ ಕಲಿಕಾಂಶಗಳು ಪ್ರತಿಯೊಬ್ಬ ಮಗುವಿನಲ್ಲೂ ಅಂತರ್ಗತವಾಗಬೇಕು. ಮಗು ಅದನ್ನು ನಿತ್ಯ ಜೀವನದಲ್ಲಿ ಬಳಸುವಂತಾಗಬೇಕು. ವಿವಿಧ ಒತ್ತಡಗಳ ಮಧ್ಯೆ ಶಿಕ್ಷಕರು ಜೀವನ ಪಾಠವನ್ನು ಹೇಳಿಕೊಡಲಾಗುತ್ತಿಲ್ಲ. ಇದು ಶಿಕ್ಷಕರ ಮನದಾಳದ ನೋವಿನ ಸಂಗತಿ. ಮಕ್ಕಳ ಬದುಕಿಗೆ ಬೇಕಾದ ಶಿಕ್ಷಣ ಕೊಡಲಾಗುತ್ತಿಲ್ಲ ಎಂಬ ಕೊರಗು ಬಹುತೇಕ ಶಿಕ್ಷಕರನ್ನು ಕಾಡುತ್ತಲೇ ಇದೆ. ವಿವಿಧ ಸವಾಲುಗಳ ನಡುವೆಯೂ ತಮ್ಮ ಶಾಲೆಯನ್ನು ವಿಭಿನ್ನವಾಗಿ ಸೃಜಿಸಿದ ಶಿಕ್ಷಕರ ಸಂಖ್ಯೆ ಕಡಿಮೆಯೇನಿಲ್ಲ. ಅವರೆಲ್ಲ ಇತರರಿಗೆ ಮಾದರಿಯಾಗುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News