ಗೌರಿ ಲಂಕೇಶ್ ಹತ್ಯೆ ಪ್ರಕರಣ : ನಾಲ್ಕು ವರ್ಷ ಸಂದರೂ ಇನ್ನೂ ಆರಂಭಗೊಳ್ಳದ ವಿಚಾರಣೆ

Update: 2021-09-04 17:44 GMT

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ನಡೆದು ನಾಲ್ಕು ವರ್ಷಗಳೇ ಸಂದರೂ, ಹಿಂದುತ್ವ ಸಂಘಟನೆಗೆ ಸೇರಿದವರೆನ್ನಲಾದ ಪ್ರಕರಣದ 17 ಆರೋಪಿಗಳ ವಿಚಾರಣೆ ಇನ್ನಷ್ಟೇ ಆರಂಭಗೊಳ್ಳಬೇಕಿದೆ.

ನಕಲಿ ಗುರುತು ಪತ್ರಗಳನ್ನು ಹಾಗೂ ತಮ್ಮ ಗುರುತುಪರಿಚಯದವರ ಮೂಲಕ ಆರೋಪಿಗಳು ಸಿಮ್ ಕಾರ್ಡ್‍ಗಳನ್ನು ಪಡೆದಿರುವುದಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ವಾರಗಳಲ್ಲಿ ಹೊಸ ಚಾರ್ಜ್ ಶೀಟ್‍ಗಳನ್ನು ಸಲ್ಲಿಸಲಾಗಿದೆ.

ಕಳೆದ ತಿಂಗಳು ಮಣಿಪಾಲದಲ್ಲಿ ಪ್ರಮುಖ ಆರೋಪಿ ಅಮೋಲ್ ಕಾಳೆ ವಿರುದ್ಧ ಅಕ್ರಮವಾಗಿ ಸಿಮ್ ಕಾರ್ಡ್ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಕೊಲೆಗೆ ಪೂರ್ವತಯಾರಿ ಉದ್ದೇಶದಿಂದ ಈ ಸಿಮ್ ಪಡೆದುಕೊಳ್ಳಲಾಗಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳಾದ ಮೋಹನ್ ನಾಯಕ್ ಹಾಗೂ ಸುಜೀತ್ ಕುಮಾರ್ ಎಂಬವರನ್ನು ಕುಶಾಲನಗರದ ಪೊಲೀಸರು ವಿಚಾರಣೆ ನಡೆಸಿದ್ದರು.

ಕುಶಾಲನಗರದ ಮಾಜಿ ಬಿಎಸ್ಸೆನ್ನೆಲ್ ಅಧಿಕಾರಿಯೊಬ್ಬರು ಹಿಂದುತ್ವ ಸಂಘಟನೆ ಸನಾತನ ಸಂಸ್ಥೆಯ ಸದಸ್ಯರಿಗೆ  ಸೂಕ್ತ ನಿಯಮಾವಳಿ ಪಾಲಿಸದೆ ಸಿಮ್ ಕಾರ್ಡ್‍ಗಳನ್ನು ಒದಗಿಸಿದ್ದರು ಎಂದು ತನಿಖೆಯಿಂದ ತಿಳಿದು ಬಂದಿತ್ತು. ಈ ಕುರಿತಂತೆ ಪೊಲೀಸರು ಮಾಜಿ ಬಿಎಸ್ಸೆನ್ನೆಲ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿದ್ದರೂ ಸಣ್ಣ ದಂಡ ಮೊತ್ತವನ್ನು ಲೋಕ್ ಅದಾಲತ್ ನ್ಯಾಯಾಲಯದ ಮೂಲಕ ಸಲ್ಲಿಸುವುದರೊಂದಿಗೆ ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ.

ಸನಾತನ ಸಂಸ್ಥೆ ಮಾತ್ರ ತನಗೂ ಆರೋಪಿಗಳಿಗೂ ನಂಟು ಇರುವುದನ್ನು ನಿರಾಕರಿಸಿತ್ತು. ಮಣಿಪಾಲದಲ್ಲಿ ಸಲ್ಲಿಸಲಾಗಿರುವ ಚಾರ್ಜ್ ಶೀಟ್ ಪ್ರಕಾರ ಆರೋಪಿ ಕಾಳೆ ತನ್ನ ಹೆಸರು ವಿನೋದ್ ಆಲಿಯಾಸ್ ಸಮೀರ್ ಹಾಗೂ ಕುಶಾಲನಗರ ಸಮೀಪದ ಬೈಲಕುಪ್ಪೆಯ ಕೃಷಿ ಕಾರ್ಮಿಕ ಎಂದು ಸಿಮ್ ಕಾರ್ಡ್ ಪಡೆದಿದ್ದನೆಂದು ತಿಳಿದು ಬಂದಿದೆ. ಇದೇ ರೀತಿ ಹಲವಾರು ಕಡೆಗಳಿಂದ ಸಿಮ್ ಪಡೆದಿರುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದಲ್ಲಿ ಶಾಮೀಲಾಗಿದೆಯೆನ್ನಲಾದ ಹಿಂದುತ್ವ ಸಂಘಟನೆಯು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂವಹನ ನಡೆಸಲು ಪ್ರತ್ಯೇಕ ಮೊಬೈಲ್ ಫೋನ್ ಬಳಸಿತ್ತೆಂದು ತಿಳಿದು ಬಂದಿದೆ. ಕಾಳೆ,  ಹಾಗೂ ಕುಮಾರ್ ಬಂಧನದ ನಂತರ ಕಾಳೆ ಚೀಲದಲ್ಲಿ 20 ಮೊಬೈಲ್ ಫೋನ್ ಹಾಗೂ ಕುಮಾರ್ ಉಡುಪಿಯಲ್ಲಿ ವಾಸಿಸುತ್ತಿದ್ದ ಮನೆಯ ಅಡುಗೆ ಕೋಣೆ ಶೆಲ್ಫ್‍ನಲ್ಲಿ 22 ಮೊಬೈಲ್ ಫೋನ್‍ಗಳಿರುವುದು ಪತ್ತೆಯಾಗಿದ್ದವು.

ಪ್ರಮುಖ ಚಾರ್ಜ್‍ಶೀಟ್ ನವೆಂಬರ್ 23, 2018ರಂದು ಸಲ್ಲಿಸಲಾಗಿತ್ತು. ಆದರೆ ಆರೋಪಿಗಳು ಸಲ್ಲಿಸಿರುವ ಹಲವಾರು ಅರ್ಜಿಗಳು ಹಾಗೂ ಆರೋಪಿಗಳನ್ನು ವಿವಿಧ ಜೈಲುಗಳಲ್ಲಿರಿಸಿರುವುದು ಹಾಗೂ ಪ್ರಸಕ್ತ ಕೋವಿಡ್ ಸಾಂಕ್ರಾಮಿಕದಿಂದಾಗಿ ವಿಚಾರಣೆ ಆರಂಭದಲ್ಲಿ ವಿಳಂಬವಾಗಿದೆ.

ಆಗಸ್ಟ್ 9ರಂದು ಎರಡು ಆರೋಪಿಗಳ ಪರ ವಾದಿಸುತ್ತಿದ್ದ ವಕೀಲರಿಗೆ  ಜಾಮೀನಿಗೆ ಸಲ್ಲಿಸಿದ್ದ ಹೊಸ ಅರ್ಜಿಗೆ ಸಂಬಂಧಿಸಿದಂತೆ ವಾದ ಮಂಡನೆಗೆ ಸೆಷನ್ ಕೋರ್ಟ್ ಸೂಚಿಸಿದ್ದರೂ, ಸುಪ್ರೀಂ ಕೋರ್ಟ್‍ನಲ್ಲಿನ ಬಾಕಿ ಪ್ರಕರಣ ಉಲ್ಲೇಖಿಸಿ ಹೆಚ್ಚಿನ ಸಮಯಾವಕಾಶ ಕೋರಲಾಗಿತ್ತು. ಆಗಸ್ಟ್ 17ರಂದು ಮತ್ತೆ ಮುಂದೂಡಿಕೆಯನ್ನು ಮೇಲಿನ ಕಾರಣ ನೀಡಿಯೇ ಕೋರಲಾಗಿತ್ತು.

ಆಗಸ್ಟ್ 21ರಂದು ಪ್ರಕರಣ ಮತ್ತೆ ವಿಚಾರಣೆಗೆ ಬಂದಾಗ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಇನ್ನೂ ಹೆಚ್ಚಿನ ಸಮಯ ನೀಡಲು ಯಾವುದೇ ಆಧಾರವಿಲ್ಲ. ಈ ಪ್ರಕರಣದಲ್ಲಿ ಒಂದೊಂದರಂತೆ ಅರ್ಜಿಯನ್ನು ಸಲ್ಲಿಸಿದ ಕಾರಣ ವಿಚಾರಣೆಯಲ್ಲಿ ಯಾವ ಪ್ರಗತಿಯೂ ಆಗಿಲ್ಲ" ಎಂದು ಹೇಳಿದ ನ್ಯಾಯಾಲಯವು ಈ ವಿಷಯ ಕುರಿತಂತೆ ಮನವಿ ಸಲ್ಲಿಸಲು ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News