ತ್ವರಿತ ವಿಚಾರಣೆಗೆ ಪ್ರತ್ಯೇಕ ಕೋರ್ಟ್ ಅಗತ್ಯ: ವಿಶೇಷ ಅಭಿಯೋಜಕ ಎಸ್.ಬಾಲನ್

Update: 2021-09-05 06:21 GMT

►► ವಿಶೇಷ ಸಂದರ್ಶನ

ಬೆಂಗಳೂರು, ಸೆ.5: ‘ಪತ್ರಕರ್ತೆ, ಸಾಮಾಜಿಕ ಹೋರಾಟ ಗಾರ್ತಿ ಹಾಗೂ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಸಂಬಂಧ ರಾಜ್ಯ ಸರಕಾರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಕೋಕಾ)ಯಡಿ ಪ್ರತ್ಯೇಕ ವಿಶೇಷ ನ್ಯಾಯಾಲಯ ಸ್ಥಾಪಿಸುವ ಅಗತ್ಯವಿದೆ’ ಎಂದು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸರಕಾರದ ಪರ ವಿಶೇಷ ಅಭಿಯೋಜಕ ಹಾಗೂ ಹೈಕೋರ್ಟ್‌ನ ಹಿರಿಯ ವಕೀಲ ಎಸ್.ಬಾಲನ್ ಪ್ರತಿಪಾದಿಸಿದ್ದಾರೆ.

ಶನಿವಾರ ‘ವಾರ್ತಾಭಾರತಿ’ ಪತ್ರಿಕೆ ಹಾಗೂ ಯೂಟ್ಯೂಬ್ ಚಾನೆಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಗೌರಿ ಲಂಕೇಶ್, ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಗಳು ಹಾಗೂ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಅವರ ಮೇಲಿನ ಹತ್ಯೆ ಯತ್ನದ ಪ್ರಕರಣದ ವಿಚಾರಣೆಗೆ ರಾಜ್ಯ ಸರಕಾರ ಒಂದು ಪ್ರತ್ಯೇಕ ಕೋರ್ಟ್ ಸ್ಥಾಪಿಸುವ ಅಗತ್ಯವಿದೆ. ಇದರಿಂದ ಪ್ರಕರಣಗಳ ತ್ವರಿತ ವಿಲೇವಾರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

ವಾರ್ತಾಭಾರತಿ: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಈವರೆಗೆ ಆಗಿರುವ ಬೆಳವಣಿಗೆಗಳು ಏನು (ಬಂಧಿತರು ಎಷ್ಟು, ಅವರ ಹಿನ್ನೆಲೆ, ತಲೆಮರೆಸಿಕೊಂಡ ಆರೋಪಿಗಳ ವಿವರ ಇತ್ಯಾದಿ)?

ಎಸ್.ಬಾಲನ್:  ‘ಗೌರಿ ಲಂಕೇಶ್ ಹತ್ಯೆ ಪ್ರಕರಣ ದಲ್ಲಿ ಒಟ್ಟು 18 ಮಂದಿ ಆರೋಪಿಗಳಿದ್ದು, ಈಗಾ ಗಲೇ 16 ಮಂದಿಯನ್ನು ಎಸ್‌ಐಟಿ(ಸಿಟ್) ತಂಡ ಸಮಗ್ರ ಹಾಗೂ ಕೂಲಂಕಶವಾಗಿ ತನಿಖೆ ನಡೆಸಿ ಪ್ರಕರಣಕ್ಕೆ ಸಂಬಂಧಪಟ್ಟ ಎಫ್‌ಐಆರ್ ಆದ ಬಳಿಕ ಹತ್ತು ಸಾವಿರ ಪುಟಗಳ ಸುದೀರ್ಘವಾದ ದೋಷಾರೋಪ(ಚಾರ್ಜ್‌ಶೀಟ್) ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಇನ್ನೂ ಕೆಲವರು ತಲೆ ಮರೆಸಿಕೊಂಡಿದ್ದಾರೆ. ಅವರನ್ನು ಬಂಧಿಸಿದ ಬಳಿಕ ಮತ್ತೊಂದು ಚಾರ್ಜ್‌ಶೀಟ್ ಸಲ್ಲಿಕೆಯಾಗಲಿದೆ.

ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ 10 ಮಂದಿ ಆರೋಪಿಗಳು ಮಹಾರಾಷ್ಟ್ರ ರಾಜ್ಯದವರು. ಉಳಿದ ಎಂಟು ಮಂದಿ ಕರ್ನಾಟಕ ರಾಜ್ಯದ ಬೆಳಗಾವಿ ಮತ್ತು ಮಡಿಕೇರಿ ಮೂಲದವರು ಎಂದು ಗೊತ್ತಾಗಿದೆ. ಗೌರಿ ಲಂಕೇಶ್ ಅವರಿಗೆ ಗುಂಡಿಕ್ಕಿ ಹತ್ಯೆಗೈದಿರುವುದು ಪರುಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್ ಬೈಕ್ ಓಡಿಸುತ್ತಿದ್ದ ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಕೃತ್ಯದಲ್ಲಿ ಪ್ರತಿಯೊಬ್ಬರ ಪಾತ್ರದ ಬಗ್ಗೆಯೂ ‘ಸಿಟ್’ ಪರಾಮರ್ಶೆ ನಡೆಸಿದ್ದು, ದೋಷಾರೋಪ ಪಟ್ಟಿಯಲ್ಲಿ ಎಲ್ಲರ ಪಾತ್ರದ ಬಗ್ಗೆಯೂ ತಿಳಿಸಿದೆ’ ಎಂದು ಉಲ್ಲೇಖಿಸಿದರು.

ವಾರ್ತಾಭಾರತಿ: ಪ್ರಕರಣದ ವಿಚಾರಣೆ, ಸಾಕ್ಷ್ಯ ಸಂಗ್ರಹ, ದೋಷಾರೋಪ ಪಟ್ಟಿ ಸಲ್ಲಿಕೆ, ಎಷ್ಟು ಪರಿಣಾಮಕಾರಿಯಾಗಿ ನಡೆದಿದೆ?

ಎಸ್.ಬಾಲನ್: ಗೌರಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳೆಲ್ಲರೂ ಒಟ್ಟಿಗೆ ಸೇರಿ ಒಳಸಂಚು ರೂಪಿಸಿ ಕೃತ್ಯ ನಡೆಸಿದ್ದಾರೆಂಬುದು ಎಸ್‌ಐಟಿ ತನಿಖೆಯಿಂದ ಸ್ಪಷ್ಟವಾಗಿದೆ. ವಿಶೇಷ ತನಿಖಾ ತಂಡ ಹತ್ಯೆ ನಡೆದ ಸ್ಥಳದಲ್ಲಿ ದೊರೆತ ಪ್ರತಿಯೊಂದು ಸಾಕ್ಷ್ಯಾಧಾರಗಳನ್ನು ಕೂಲಂಕಷ ವಿಶ್ಲೇಷಣೆ ನಡೆಸಿದ್ದು, ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆ ನಡೆಸಿದೆ. ಜೊತೆಗೆ ಆರೋಪಿಗಳ ಮೊಬೈಲ್ ಕರೆಗಳ ಸಂಭಾಷಣೆಯನ್ನು ಪರಿಶೀಲಿಸಿದೆ. ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಕೋಕಾ)ಯ ಕಲಂ 164ರ ಅನ್ವಯ ನ್ಯಾಯಾಧೀಶರ ಸಮ್ಮುಖದಲ್ಲಿ ಹೇಳಿಕೆಯನ್ನು ದಾಖಲಿಸಲಾಗಿದೆ.

ವಾರ್ತಾಭಾರತಿ: ವಿಚಾರವಾದಿಗಳಾದ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಡಾ.ಎಂ.ಎಂ.ಕಲಬುರ್ಗಿ ಹತ್ಯೆಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ಇರುವ ಸಂಬಂಧದ ಬಗ್ಗೆ ಏನಾದರೂ ಮಾಹಿತಿ ಇದೆಯೇ?

ಎಸ್.ಬಾಲನ್: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತ ರಾಗಿರುವ ಕೆಲವರು ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ ದಲ್ಲಿಯೂ ಆರೋಪಿಗಳಾಗಿದ್ದಾರೆ. ಇನ್ನು ಮಹಾರಾಷ್ಟ್ರ ರಾಜ್ಯದ ದಾಬೋಲ್ಕರ್, ಪನ್ಸಾರೆ ಹತ್ಯೆ ಪ್ರಕರಣಗಳಲ್ಲಿಯೂ ಇವರ ಪಾತ್ರವಿರುವುದು ಗೊತ್ತಾಗಿದೆ. ಇವರೆಲ್ಲರೂ ಒಂದೇ ಗುಂಪಿಗೆ ಸೇರಿದವರು. ಸಂಘಟಿತರಾಗಿಯೇ ಕೃತ್ಯಗಳನ್ನು ನಡೆಸಿದ್ದಾರೆಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಆದರೆ, ಇವರೆಲ್ಲರೂ ಬೇರೆ ಬೇರೆ ರೂಪದಲ್ಲಿ ಅದಲು-ಬದಲಾಗಿ ಕೃತ್ಯಗಳನ್ನು ನಡೆಸಿದ್ದಾರೆಂಬುದನ್ನು ಪೊಲೀಸರು ತನಿಖೆ ನಡೆಸಿ ಗುರುತಿಸಿದ್ದಾರೆ.

ವಾರ್ತಾಭಾರತಿ: ನ್ಯಾಯಾಲಯದಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ ಈಗ ಯಾವ ಹಂತದಲ್ಲಿದೆ?

ಎಸ್.ಬಾಲನ್: ಗೌರಿ ಹತ್ಯೆ ಪ್ರಕರಣ 2017ರ ಸೆಪ್ಟಂಬರ್ 5ಕ್ಕೆ ನಡೆದಿದ್ದು, ಸೆ.5ಕ್ಕೆ ನಾಲ್ಕು ವರ್ಷಗಳು ಪೂರ್ಣಗೊಳ್ಳಲಿವೆ. ವಿಶೇಷ ತನಿಖಾ ತಂಡ ಪ್ರಕರಣದ ವಿಚಾರಣೆ ನಡೆಸಿ 180 ದಿನ ಅಂದರೆ ಕನಿಷ್ಠ ಆರು ತಿಂಗಳ ಒಳಗೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಬೇಕು. ಆ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಆದರೆ, ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಆರೋಪಿಗಳಿಗೆ ಒಂದು ನ್ಯಾಯಾಲಯದಿಂದ ಮತ್ತೊಂದು ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು, ವಿಚಾರಣೆಯ ಹಂತದಲ್ಲಿದೆ. ಬಂಧಿತ ಎಲ್ಲ ಆರೋಪಿಗಳು ಪ್ರತ್ಯೇಕವಾಗಿ ವಕೀಲರನ್ನು ನೇಮಕ ಮಾಡಿಕೊಂಡಿದ್ದು, ಆ ವಕೀಲರೆಲ್ಲರೂ ವಿವಿಧ ರೀತಿಯಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅದು ಅವರ ಹಕ್ಕು. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಪ್ರಕರಣ ತ್ವರಿತ ವಿಲೇವಾರಿ ಆಗಬೇಕು.

ವಾರ್ತಾಭಾರತಿ: ಹತ್ಯೆ ಪ್ರಕರಣದ ವಿಚಾರಣೆ ಯಾವಾಗ ಮುಗಿಯುವ ನಿರೀಕ್ಷೆ ಇದೆ?

ಎಸ್.ಬಾಲನ್: ಕೋರ್ಟ್ ಮತ್ತು ಕಾನೂನು ಚೌಕಟ್ಟಿನಲ್ಲಿ ಹೀಗೆ ಆಗಬೇಕು ಎಂದು ಊಹೆ ಮಾಡಲು ಸಾಧ್ಯವಿಲ್ಲ. ರಾಜ್ಯ ಸರಕಾರ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಗೌರಿ ಲಂಕೇಶ್, ಕಲಬುರ್ಗಿ ಪ್ರಕರಣದ ಬಗ್ಗೆ ವಿಚಾರಣೆಗೆ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯವನ್ನು ಸ್ಥಾಪಿಸಬೇಕು. ಆ ಮೂಲಕ ಈ ಪ್ರಕರಣಗಳ ತ್ವರಿತ ವಿಚಾರಣೆ ನಡೆಸಿ ತಪ್ಪಿತಸ್ಥರೆಂದು ಕಂಡು ಬಂದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಆರೋಪಿಗಳು ನಾಲ್ಕು ವರ್ಷಗಳಿಂದ ಕಾರಾಗೃಹದಲ್ಲಿದ್ದು, ವಿಳಂಬ ನೀತಿ ಸರಿಯಲ್ಲ.

ವಾರ್ತಾಭಾರತಿ: ಪ್ರಕರಣದ ವಿಚಾರಣೆ ಮುಗಿದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಇನ್ನು ಏನೇನು ಆಗಬೇಕು? ನಿಮ್ಮ ಬೇಡಿಕೆ ಏನು?

ಎಸ್.ಬಾಲನ್: ನಾನು ಈಗಾಗಲೇ ತಿಳಿಸಿದಂತೆ ಪ್ರಕರಣದ ತ್ವರಿತ ವಿಚಾರಣೆ ಪೂರ್ಣಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಆ ದೃಷ್ಟಿಯಿಂದ ಸರಕಾರ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಿದರೆ ಒಳ್ಳೆಯದು. ಈ ಪ್ರಕರಣ ಕೊನೆಗಾಣಬೇಕು. ಪತ್ರಕರ್ತೆ ಗೌರಿ ಹತ್ಯೆ ಕತ್ತಲೆಯಲ್ಲಿ ನಡೆದಂತೆ ಪ್ರಕರಣದ ವಿಚಾರಣೆಯಲ್ಲಿಯೂ ಕತ್ತಲೆ ಆವರಿಸಿದ್ದು ಬೆಳಕು ಕಾಣಿಸುತ್ತಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ಆ ಬಗ್ಗೆ ನಾನು ಏನೂ ಹೇಳುವುದಿಲ್ಲ. ಆದರೆ, ನರಹತ್ಯೆ ಕ್ರೂರ ಮತ್ತು ಕೌರ್ಯ. ಹೀಗಾಗಿ ಪ್ರಕರಣದ ತ್ವರಿತ ವಿಚಾರಣೆ ಆಗಬೇಕು. ಅಂತಿಮವಾಗಿ ಕೋರ್ಟ್ ಎಲ್ಲವನ್ನು ತೀರ್ಮಾನ ಮಾಡಲಿದೆ. ಆದರೆ, ಯಾವ ಶಿಕ್ಷೆ ವಿಧಿಸಬೇಕು ಎಂಬುದನ್ನು ಕೋರ್ಟ್ ನಿರ್ಧರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News