ಮುಝಫ್ಫರ್ ನಗರದ ಮೂಲಕ ರೈತರು ನೀಡಿದ ಏಕತೆಯ ಸಂದೇಶ

Update: 2021-09-07 07:22 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದಿಲ್ಲಿ ಕೇಂದ್ರಿತವಾಗಿ ನಡೆಯುತ್ತಿದ್ದ ರೈತರ ಮಹಾ ಹೋರಾಟ, ಇದೀಗ ತನ್ನ ದಿಕ್ಕನ್ನು ಉತ್ತರ ಪ್ರದೇಶದ ಮುಝಫ್ಫರ್ ನಗರದೆಡೆಗೆ ತಿರುಗಿಸಿದೆ. ರವಿವಾರ ಇಲ್ಲಿ ನಡೆದ ರೈತ ಪಂಚಾಯತ್ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ನೆರೆದ ರೈತರು ಸರಕಾರವನ್ನು ಮಾತ್ರವಲ್ಲದೆ, ಸಂಘಪರಿವಾರದೊಳಗೂ ನಡುಕ ಹುಟ್ಟಿಸಿದ್ದಾರೆ. ಇಲ್ಲಿ ನಡೆದಿರುವುದು ಕೇವಲ ರೈತ ನೀತಿಗಳ ವಿರುದ್ಧದ ಒಗ್ಗೂಡುವಿಕೆ ಮಾತ್ರವಲ್ಲ, ರಾಜಕೀಯಕ್ಕಾಗಿ ಸಂಘಪರಿವಾರ ನಡೆಸುತ್ತಾ ಬಂದಿರುವ ಒಡೆದು ಆಳುವ ತಂತ್ರದ ವಿರುದ್ಧವೂ ಜನರು ಒಂದಾಗಿದ್ದಾರೆ. ಹಿಂದೂ-ಮುಸ್ಲಿಮರ ನಡುವೆ ಒಡಕುಗಳನ್ನು ಹುಟ್ಟಿಸಿ ಚುನಾವಣೆಯನ್ನು ಗೆದ್ದು ಮುಖ್ಯಮಂತ್ರಿಯಾಗಿ ರಾಜ್ಯವನ್ನು ಆಳುತ್ತಿರುವ ಆದಿತ್ಯನಾಥ್‌ಗೆ ಈ ಮಹಾಪಂಚಾಯತ್ ಸ್ಪಷ್ಟ ಎಚ್ಚರಿಕೆಯನ್ನು ನೀಡಿದೆ. ಹಾಗೆಯೇ, ಭಾವನಾತ್ಮಕ ರಾಜಕೀಯದ ಮೂಲಕ ಈ ದೇಶವನ್ನು ಬಹುಕಾಲ ವಂಚಿಸುವುದಕ್ಕೆ ಸಾಧ್ಯವಿಲ್ಲ ಎನ್ನುವ ಸಂದೇಶವನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ರೈತರು ರವಾನಿಸಿದ್ದಾರೆ.

 ಮುಝ್ಫಫರ್ ನಗರದಲ್ಲಿ ನಡೆದ ರೈತರ ಮಹಾ ಪಂಚಾಯತ್ ಹಲವು ಕಾರಣಗಳಿಂದ ಮಹತ್ವವನ್ನು ಪಡೆದುಕೊಂಡಿದೆ. ಈಗಾಗಲೇ ದಿಲ್ಲಿಯ ಗಡಿಯಲ್ಲಿ ಧರಣಿ ಕುಳಿತು ಹಲವು ತಿಂಗಳುಗಳಿಂದ ಕೇಂದ್ರ ಸರಕಾರಕ್ಕೆ ಸವಾಲು ಎಸೆಯುತ್ತಿರುವ ರೈತರು, ಇದೀಗ ಪಂಚಾಯತ್‌ನ್ನು ಉತ್ತರ ಪ್ರದೇಶಕ್ಕೆ ವಿಸ್ತರಿಸಿದ್ದಾರೆ. ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನಾ ಸ್ಥಳದಿಂದ ಕದಲದೇ ಇರುವ ಶಪಥವನ್ನೂ ಮಾಡಿದ್ದಾರೆ. ಶೀಘ್ರದಲ್ಲೇ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಘೋಷಣೆಯಾಗಲಿರುವುದರಿಂದ, ರೈತರ ಈ ಶಪಥ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಲಿದೆ. ಹಾಗೆ ನೋಡಿದರೆ ರೈತ ಹೋರಾಟದ ತಾಯಿ ಬೇರು ಹರಡಿಕೊಂಡಿರುವುದೇ ಉತ್ತರ ಪ್ರದೇಶದಲ್ಲಿ. ಇದೇ ಮುಝಫ್ಫರ್ ನಗರದಲ್ಲಿ ಒಂದು ಕಾಲದಲ್ಲಿ ಜಾಟ್ ಮುಖಂಡರನ್ನು ಬಳಸಿಕೊಂಡು ಅಮಾಯಕ ಮುಸ್ಲಿಮರ ಮೇಲೆ ಸಂಘಪರಿವಾರ ದಾಳಿಗಳನ್ನು ಸಂಘಟಿಸಿತ್ತು. ಇಂದು ರೈತ ಸಮಾವೇಶದ ನೇತೃತ್ವ ವಹಿಸಿದ್ದ ಹಲವು ನಾಯಕರು ಆ ಕೋಮುಗಲಭೆಯ ಮುಂಚೂಣಿಯಲ್ಲಿದ್ದರು. ಬಿಜೆಪಿ ಮತ್ತು ಸಂಘಪರಿವಾರದ ಮಾತುಗಳಿಗೆ ಬಲಿಯಾಗಿ, ಅವರು ಮುಝಫ್ಫರ್ ನಗರಕ್ಕೆ ಬೆಂಕಿ ಹಚ್ಚಿದ್ದರು. ಹೀಗೆ ಭಾವನಾತ್ಮಕವಾಗಿ ಜನರನ್ನು ಇಬ್ಭಾಗವಾಗಿಸುವ ಮೂಲಕ ಬಿಜೆಪಿ ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಹಿಡಿಯಿತು.

ಬಿಜೆಪಿ ಮತ್ತು ಸಂಘಪರಿವಾರ ದ್ವೇಷ ಬಿತ್ತಿ, ಅಧಿಕಾರದ ಫಸಲನ್ನು ಕೊಯ್ಯಿತು. ಆದರೆ ದ್ವೇಷ ರಾಜಕಾರಣಕ್ಕೆ ಯಾರನ್ನು ಬಳಸಿಕೊಂಡಿತೋ ಅವರನ್ನು ಕೈ ಬಿಟ್ಟಿತು. ರೈತರ ಹಿತಾಸಕ್ತಿಯ ಪ್ರಶ್ನೆ ಬಂದಾಗ, ಸರಕಾರ ಕಾರ್ಪೊರೇಟ್ ದನಿಗಳ ಕಡೆಗೆ ವಾಲಿತು. ತನ್ನ ಕೃಷಿ ನೀತಿಯಿಂದಾಗಿ ಸರ್ವನಾಶ ವಾಗುತ್ತಿರುವ ರೈತರಲ್ಲಿ ಬಹುತೇಕರು ಹಿಂದೂ ಧರ್ಮಕ್ಕೆ ಸೇರಿದವರು ಎನ್ನುವುದು ಸಂಘಪರಿವಾರಕ್ಕೆ ಅಥವಾ ಕೇಂದ್ರ ಸರಕಾರಕ್ಕೆ ತಿಳಿಯದ್ದೇನಲ್ಲ. ಉತ್ತರ ಪ್ರದೇಶದ ಜಾಟ್ ನಾಯಕರಿಗೆ, ಬಿಜೆಪಿ ಸರಕಾರದ ನಿಜ ಬಣ್ಣ ನಿಧಾನಕ್ಕೆ ಅರ್ಥವಾಯಿತು. ಒಂದು ಕಾಲದಲ್ಲಿ ಮುಸ್ಲಿಮರನ್ನು ದೇಶದ್ರೋಹಿಗಳೆಂದು ಕರೆದು ಅವರ ಮೇಲೆ ಜಾಟ್ ಸಮುದಾಯವನ್ನು ಬಳಸಿ ದಾಳಿ ನಡೆಸಿದ್ದ ಸಂಘ ಪರಿವಾರ, ಇಂದು ಅದೇ ಜಾಟ್ ರೈತರನ್ನು ಉಗ್ರ ಗಾಮಿಗಳು ಎಂದು ಕರೆಯುತ್ತಿದೆ.

ಮುಝಫ್ಫರ್ ನಗರದಲ್ಲಿ ನಡೆದ ಕೋಮುಗಲಭೆಗಳಿಗೆ ಸಂಬಂಧಿಸಿದಂತೆ ರೈತ ಹೋರಾಟದ ನೇತೃತ್ವ ವಹಿಸಿರುವ ಮುಖಂಡರು ಈಗಾಗಲೇ ಪಶ್ಚಾತ್ತಾಪ ಪಟ್ಟಿದ್ದಾರೆ. ಉತ್ತರ ಪ್ರದೇಶದ ಮುಸ್ಲಿಮರ ಕ್ಷಮೆ ಯಾಚಿಸಿದ್ದಾರೆ ಮತ್ತು ಆ ಕೋಮುಗಲಭೆ ನಡೆದ ನಗರದಲ್ಲೇ ಹಿಂದೂ-ಮುಸ್ಲಿಮರನ್ನು ಜೊತೆ ಸೇರಿಸಿ ಬೃಹತ್ ಸಮಾವೇಶ ನಡೆಸಿದ್ದಾರೆ. ರೈತರಿಗೆ ಧರ್ಮವಿಲ್ಲ ಎನ್ನುವುದನ್ನು ಈ ಮೂಲಕ ದೇಶಕ್ಕೆ ತಿಳಿಸಿದ್ದಾರೆ. ವಿಶೇಷವೆಂದರೆ, ಸಮಾವೇಶದಲ್ಲಿ ರೈತ ಮುಖಂಡರು ‘ಅಲ್ಲಾಹು ಅಕ್ಬರ್-ಹರ ಹರ ಮಹಾದೇವ್’ ಎನ್ನುವ ಎರಡೂ ಘೋಷಣೆಗಳನ್ನು ಮೊಳಗಿಸಿದ್ದಾರೆ. ಉತ್ತರ ಪ್ರದೇಶ ಮಾತ್ರವಲ್ಲ, ಇಡೀ ದೇಶದ ಪಾಲಿಗೆ ಇದೊಂದು ಮಹತ್ವದ ಸಂದೇಶವಾಗಿದೆ. ಈ ದೇಶದ ಜನಸಾಮಾನ್ಯರ ನಿಜವಾದ ಅಗತ್ಯ ಕೋಮುಗಲಭೆಗಳಲ್ಲ ಎನ್ನುವುದನ್ನು ರೈತ ಮಹಾ ಪಂಚಾಯತ್ ದೇಶಕ್ಕೆ ತಿಳಿಸಿದೆ. ಮುಝಫ್ಫರ್ ಗಲಭೆಯಲ್ಲಿ ಭಾಗವಹಿಸಿದವರ ಪಶ್ಚಾತ್ತಾಪ ಉಳಿದವರಿಗೂ ಪಾಠವಾಗಬೇಕಾಗಿದೆ. ಜನಸಾಮಾನ್ಯರನ್ನು ಹಿಂದೂ ಮುಸ್ಲಿಮ್ ಎಂದು ಜಗಳಕ್ಕೆ ಹಚ್ಚಿ, ಹೇಗೆ ರಾಜಕಾರಣಿಗಳು ಈ ದೇಶವನ್ನು ಕಾರ್ಪೊರೇಟ್ ದಣಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವುದನ್ನು ಜನರು ಅರ್ಥಮಾಡಿಕೊಳ್ಳುವ ಸಮಯ ಬಂದಿದೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಎದುರಾಳಿ ಯಾರು ಎನ್ನುವುದು ಈಗಾಗಲೇ ರೈತ ಪಂಚಾಯತ್ ಘೋಷಿಸಿ ಬಿಟ್ಟಿದೆ. ಉತ್ತರ ಪ್ರದೇಶದ ರೈತಾಪಿ ವರ್ಗವನ್ನು ಏಮಾರಿಸಿ ಅಧಿಕಾರ ಹಿಡಿದ ಬಿಜೆಪಿ, ಇದೀಗ ಅದೇ ರೈತಾಪಿ ಜನರಿಂದಲೇ ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿದೆ. ಇತ್ತ ಚಂಡಿಗಡದ ಕರ್ನಾಲ್‌ನಲ್ಲಿಯೂ ರೈತರು ಒಂದಾಗುತ್ತಿದ್ದಾರೆ. ಆ. 28ರಂದು ಪ್ರತಿಭಟನಾ ನಿರತ ರೈತರ ಮೇಲೆ ನಡೆದ ದೌರ್ಜನ್ಯ ವಿರೋಧಿಸಿ ಮತ್ತೆ ಸಂಘಟಿತರಾಗಿದ್ದಾರೆ. ಮಂಗಳವಾರ ಅಲ್ಲಿನ ಮಿನಿ ಸಚಿವಾಲಯದ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಸರಕಾರ ಎಷ್ಟರಮಟ್ಟಿಗೆ ಹೆದರಿದೆ ಎಂದರೆ, ಈಗಾಗಲೇ ಜಿಲ್ಲೆಯಲ್ಲಿ ಸೆಕ್ಷನ್ ವಿಧಿಸಿದೆ. ಜೊತೆಗೆ ಇಂಟರ್ನೆಟ್‌ನ್ನು ಸ್ಥಗಿತಗೊಳಿಸಿದೆ. ಅತ್ತ ರೈತರಿಂದ ದಿಲ್ಲಿಯ ಸಿಂಘು ಗಡಿ ನಿರ್ಬಂಧ ತೆರವಿಗೆ ಆಗ್ರಹಿಸಿ ಸುಪ್ರೀಂಕೋರ್ಟಿಗೆ ಹೋದವರಿಗೂ ಮುಖಭಂಗವಾಗಿದೆ.

ರೈತರ ವಿರುದ್ಧ ನ್ಯಾಯಾಲಯಕ್ಕೆ ತೆರಳಿ ಈಗಾಗಲೇ ಹಿನ್ನಡೆ ಅನುಭವಿಸಿರುವ ಕೇಂದ್ರ ಸರಕಾರ, ನಾಗರಿಕರ ಮೂಲಕ ರೈತರ ವಿರುದ್ಧ ದೂರುಗಳನ್ನು ಸಲ್ಲಿಸುತ್ತಿದೆ. ಆದರೆ ಸುಪ್ರೀಂಕೋರ್ಟ್ ಪ್ರತಿಭಟನೆಯನ್ನು ತಡೆಯಲು ಸಂಪೂರ್ಣವಾಗಿ ನಿರಾಕರಿಸಿದೆ. ನ್ಯಾಯಾಲಯದ ತೀರ್ಪುಗಳನ್ನು ತನ್ನ ಮೂಗಿನ ನೇರಕ್ಕೆ ಹೊರಡಿಸುತ್ತಿದ್ದ ಕೇಂದ್ರ ಸರಕಾರ ಇಲ್ಲಿ ಮುಖಭಂಗ ಅನುಭವಿಸಿದೆ. ರೈತರ ನೈತಿಕ ಶಕ್ತಿಯ ವಿರುದ್ಧ ತೀರ್ಪು ನೀಡಿ, ಪ್ರಭುತ್ವವನ್ನು ಓಲೈಸುವ ಧೈರ್ಯ ನ್ಯಾಯಾಲಯಕ್ಕೂ ಇಲ್ಲವಾಗಿದೆ. ಒಟ್ಟಿನಲ್ಲಿ, ಹಂತ ಹಂತವಾಗಿ ರೈತ ಹೋರಾಟ ಪ್ರಬಲವಾಗುತ್ತಿದೆ. ಅದು ಸರಕಾರದ ಎಲ್ಲ ದಮನ ನೀತಿಗಳನ್ನು ಮೀರಿ, ದೇಶದ ಧ್ವನಿಯಾಗಿ ಹೊರ ಹೊಮ್ಮುತ್ತಿದೆ. ಸ್ವಾತಂತ್ರ ಪೂರ್ವದಲ್ಲಿ ಹೇಗೆ ಹಿಂದೂ-ಮುಸ್ಲಿಮರು ಜಾತಿ, ಧರ್ಮಗಳನ್ನು ಬದಿಗಿಟ್ಟು ಒಂದಾಗಿ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದರೋ, ಇಂದು ಪ್ರಭುತ್ವದ ಎಲ್ಲ ಒಡೆದು ಆಳುವ ನೀತಿಯನ್ನು ಪ್ರತಿರೋಧಿಸಿ ತಮ್ಮ ಹಕ್ಕಿಗಾಗಿ ರೈತರು ಒಂದಾಗುತ್ತಿದ್ದಾರೆ. ದೇಶದ ಪಾಲಿಗೆ ಇದೊಂದು ಶುಭ ಸೂಚನೆಯಾಗಿದೆ. ದೇಶವನ್ನು ಸಂಪೂರ್ಣವಾಗಿ ಖಾಸಗಿ ಉದ್ಯಮಿಗಳಿಗೆ ಮಾರಾಟ ಮಾಡಲು ಹೊರಡುತ್ತಿರುವ ಸರಕಾರವನ್ನು ತಡೆಯುವ ಶಕ್ತಿ ಖಂಡಿತವಾಗಿಯೂ ರೈತ ಹೋರಾಟಕ್ಕಿದೆ. ದೇಶದ ಮೇಲೆ ಪ್ರೀತಿಯಿರುವ ಎಲ್ಲರೂ ಒಂದಾಗಿ ರೈತ ವರ್ಗದ ಜೊತೆಗೆ ಕೈ ಜೋಡಿಸುವುದು ಇಂದಿನ ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News