ತಳವರ್ಗದವರಿಗೆ ಮೀಸಲಾತಿಯ ಪ್ರಯೋಜನ ತಲುಪಲಿ

Update: 2021-09-07 19:30 GMT

ಮೀಸಲಾತಿ ಸಿಗಬೇಕಾದರೆ, ಸರಕಾರಿ ಹುದ್ದೆಗಳು ಸಿಗಬೇಕಾದರೆ ಕನಿಷ್ಠ ಹಂತದ ಶಿಕ್ಷಣ ಪಡೆಯುವುದು ಕಡ್ಡಾಯ. ಆದರೆ ಅಲೆಮಾರಿ ಜನಗಳಂತಹ ಸಮುದಾಯಗಳಲ್ಲಿ ಹುಡುಕಿದರೂ ಕನಿಷ್ಠ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿದವರ ಸಂಖ್ಯೆ ಕೆಲವೇ ಮಂದಿ ಮಾತ್ರ. ಆಗಲೂ ಇವರಲ್ಲಿ ಬಲಾಢ್ಯರು ಮಾತ್ರ ಮೀಸಲಾತಿಯ ಫಲವನ್ನು ಪಡೆಯುತ್ತಾರೆ. ಸಾಮಾಜಿಕ ನ್ಯಾಯ ಇಂದು ಕೇವಲ ದಾಖಲೆಗಳಲ್ಲಿ ಮತ್ತು ಕಾನೂನಿನ ಪುಟಗಳಲ್ಲಿ ಮಾತ್ರ ಕಾಣಿಸುತ್ತಿದೆ.


ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಶುಭಸಂದರ್ಭದಲ್ಲಿ ನಾವೆಲ್ಲರೂ ಒಪ್ಪಿಕೊಳ್ಳಬೇಕಾದ ಒಂದು ಕಹಿ ಸುದ್ದಿ ಎಂದರೆ ಅದು ಇನ್ನೂ ದೇಶದಲ್ಲಿ ಮೀಸಲಾತಿಯ ಪ್ರಯೋಜನ ನಿಜವಾಗಿಯೂ ಬೇಕಾದವರಿಗೆ ತಲುಪದೇ ಇರುವುದು. ಸಂವಿಧಾನದ ಆಶಯದಂತೆ ಸಮಾಜದ ತಳ ವರ್ಗದವರಿಗೆ ಮೀಸಲಾತಿಯ ಪ್ರಯೋಜನ ತಲುಪಲು 75 ವರ್ಷ ಆದರೂ ಸಾಧ್ಯವಾಗದಿರುವ ಕುರಿತಾಗಿ ಸರಕಾರಗಳು ಮತ್ತು ನ್ಯಾಯಾಲಯಗಳು ಗಂಭೀರವಾಗಿ ಯೋಚಿಸಬೇಕಾಗುತ್ತದೆ. ಸಾಮಾಜಿಕ ನ್ಯಾಯದ ಕುರಿತಾಗಿ ಈ ದೇಶದಲ್ಲಿ ಪ್ರತಿಯೊಬ್ಬರೂ ಮಾತನಾಡುತ್ತಾರೆ. ಆದರೆ ಅದರ ಜಾರಿಗೆ ತರುವ ವಿಚಾರದಲ್ಲಿ ಯಾರೊಬ್ಬರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಇಂದು ಸಾಮಾಜಿಕ ನ್ಯಾಯ ಎನ್ನುವುದು ಕೇವಲ ಬಲಿಷ್ಠ ಜಾತಿಗಳ ಜನ್ಮಸಿದ್ಧ ಹಕ್ಕು ಆಗಿ ಪರಿವರ್ತನೆ ಹೊಂದಿದೆ. ಸೂಕ್ಷ್ಮ್ಮ, ಅತಿಸೂಕ್ಷ್ಮ ಜಾತಿಗಳು ಹೇಳಹೆಸರಿಲ್ಲದಂತೆ ಸಮಾಜದ ದೃಷ್ಟಿಯಿಂದ ಸಂಪೂರ್ಣ ಮರೆಯಾಗುವ ಹಂತಕ್ಕೆ ಬಂದು ನಿಂತಿವೆ.

ಈ ಮೀಸಲಾತಿಯ ವಿಚಾರದಲ್ಲಿ ನಾವು ಯೋಚಿಸಬೇಕಾದ ಇನ್ನೊಂದು ವಿಚಾರವೆಂದರೆ ಇತ್ತೀಚೆಗೆ ಆರ್ಥಿಕ ಸಬಲತೆ ಇಲ್ಲದ ವರ್ಗವೂ ಸೇರಿದಂತೆ ಇಂದು ದೇಶದಲ್ಲಿ ಜನರು ಒಂದಲ್ಲ ಒಂದು ರೀತಿಯ ಮೀಸಲಾತಿ ವ್ಯಾಪ್ತಿಗೆ ಬರುತ್ತಾರೆ. ದೇಶದ ಸಾಕಷ್ಟು ಮಂದಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಆರ್ಥಿಕ ಸಬಲತೆ ಇಲ್ಲದವರು, ಇತ್ಯಾದಿ, ಇತ್ಯಾದಿ ಗುಂಪಿಗೆ ಸೇರಿಕೊಳ್ಳುತ್ತಾರೆ. ಹಾಗೆ ನೋಡಿದರೆ ದೇಶದ ಒಂದಿಷ್ಟು ಮಂದಿ ಮಾತ್ರ ಮೀಸಲಾತಿ ವ್ಯಾಪ್ತಿಯಿಂದ ತಾಂತ್ರಿಕವಾಗಿ ಹೊರಗಿದ್ದಾರೆ ಅಷ್ಟೇ. ಆದರೆ ಮೀಸಲಾತಿ ಗುಂಪಿನಲ್ಲಿ ನಿಜವಾಗಿಯೂ ಸಣ್ಣಪುಟ್ಟ ಮತ್ತು ಸೂಕ್ಷ್ಮಜಾತಿಗಳಿಗೆ ಮೀಸಲಾತಿ ಸೌಲಭ್ಯ ತಲುಪಿದೆ ಎನ್ನುವುದಕ್ಕೆ ನಮ್ಮ ಬಳಿ ಯಾವುದೇ ಕಾರ್ಯಗತ ಸಾಕ್ಷಿಗಳು ಇಲ್ಲ.
   
ಹೊರಗುಳಿಯುವಿಕೆ, ಶಿಕ್ಷಣದ ಕೊರತೆ, ಜಾತಿ ತಾರತಮ್ಯ ಇವುಗಳಿಂದ ಸಮಾಜದ ಒಂದು ವರ್ಗದ ಜನರು ಅತಿಯಾದ ಶೋಷಣೆಗೊಳಗಾಗುತ್ತಿದ್ದಾರೆ. ಇಲ್ಲಿ ನಾವು ಗಮನಿಸಬೇಕಾದ ಇನ್ನೊಂದು ಬಹುಮುಖ್ಯ ಅಂಶವೆಂದರೆ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯೊಂದಿಗೆ ಆರೋಗ್ಯ, ವಸತಿ, ಸಂಪನ್ಮೂಲಗಳ ಹಂಚಿಕೆ, ಖಾಸಗಿ ರಂಗದಲ್ಲಿ ಉದ್ಯೋಗ ವಿಚಾರದಲ್ಲಿ ಕೂಡಾ ಸಾಮಾಜಿಕ ನ್ಯಾಯವನ್ನು ಪಾಲಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಜಾತಿಗಳನ್ನು ವರ್ಗೀಕರಿಸುವ ವಿಚಾರಗಳು ಬಂದಾಗ ಹಿಂದುಳಿದ ವರ್ಗ ಎನ್ನುವ ಪದವನ್ನು ಸೂಚಿಸಲಾಯಿತು. ಈ ಸಂದರ್ಭದಲ್ಲಿ ಚರ್ಚೆಗೆ ಬಂದ ಬಹುಮುಖ್ಯ ಸಂವಿಧಾನದ ವಿಧಿ ಎಂದರೆ ಅದು 15(4) ಮತ್ತು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ರಕ್ಷಣೆಗೋಸ್ಕರ ಸಂವಿಧಾನದ ವಿಧಿ 340. ಹಿಂದುಳಿದ ವರ್ಗಗಳ ಹಿತರಕ್ಷಣೆಯ ವಿಚಾರದಲ್ಲಿ ಈ ಎರಡು ವಿಧಿಗಳನ್ನು ಒಟ್ಟಿಗೆ ಸೇರಿಸಿ ಓದಬೇಕಾಗುತ್ತದೆ. ಆದರೆ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಎಂದರೆ ಹಿಂದುಳಿದ ಜಾತಿ-ಜನಾಂಗಗಳಲ್ಲಿ ಸ್ವಲ್ಪಶಿಕ್ಷಣ ಮತ್ತು ಆರ್ಥಿಕ ಸಬಲತೆ ಪಡೆದಿರುವ ಮಂದಿ ಬಲಾಢ್ಯ ಮತ್ತು ಮೇಲ್ಜಾತಿಯ ವರ್ಗದವರ ಜೊತೆ ಸೇರಿಕೊಂಡು ತಮ್ಮದೇ ಹಿಂದುಳಿದ ಜಾತಿಗಳನ್ನು ಕ್ರಮಬದ್ಧವಾಗಿ ತುಳಿಯಲು ಹೊರಟು ನಿಂತಿದ್ದಾರೆ.! ಮೀಸಲಾತಿಯ ಪ್ರಯೋಜನ ಸಿಗದ ಅರ್ಹರಿಗೆ ಸಿಗುವಂತೆ ಮಾಡಲು ಜಾತಿಗಣತಿ ಆಧಾರದ ಮೇಲೆ ಒಳಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರುವ ಯೋಜನೆಯ ಕುರಿತು ಬಹಳಷ್ಟು ವರ್ಷಗಳಿಂದ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಒಂದು ವರ್ಗ ಇದನ್ನು ಬೆಂಬಲಿಸಿದರೆ, ಇನ್ನೊಂದು ವರ್ಗ ಅಷ್ಟೇ ತೀವ್ರವಾಗಿ ವಿರೋಧಿಸುತ್ತಿದೆ. ನಿಜವಾಗಿಯೂ ಮೀಸಲಾತಿ ಅವಶ್ಯಕತೆ ಇರುವಂತಹ ಸಣ್ಣಪುಟ್ಟ ಸೂಕ್ಷ್ಮಜಾತಿಗಳು ಮೀಸಲಾತಿಯ ವ್ಯಾಪ್ತಿಯಿಂದ ಹೊರಗಡೆ ಇದ್ದು ಮೀಸಲಾತಿಗೋಸ್ಕರ ತಲೆಮಾರುಗಳಿಂದ ಕಾಯುತ್ತಿದ್ದಾರೆ. ಈ ಸಂಬಂಧ ಹಿಂದುಳಿದ ವರ್ಗದ ಆಯೋಗ ಮೀಸಲಾತಿ ವ್ಯಾಪ್ತಿಯಿಂದ ಹೊರಗಡೆ ಇರುವ ಸಮುದಾಯಗಳು ಸೇರಿದಂತೆ ಸೂಕ್ಷ್ಮಅತಿಸೂಕ್ಷ್ಮ ಜಾತಿಗಳನ್ನು ವೈಜ್ಞಾನಿಕವಾಗಿ ವರ್ಗೀಕರಿಸಿ ಸರಕಾರಕ್ಕೆ ನೀಡಿದರೂ ಅದನ್ನು ಯಥಾವತ್ತಾಗಿ ಜಾರಿಗೊಳಿಸಲು ಸರಕಾರದೊಳಗೆ ಕಾಣದ ಕೈಗಳು ಬಹಳ ವರ್ಷಗಳಿಂದ ತಡೆದು ನಿಲ್ಲಿಸಿವೆ. ಚೆನ್ನಪ್ಪರೆಡ್ಡಿ ಆಯೋಗದ ವರದಿಯಂತೆ ಹಿಂದುಳಿದ ಜಾತಿಗಳ ವರ್ಗೀಕರಣ ಮಾಡಿ 2ಅ/3ಆ ಅಂತಹ ವಿವಿಧ ವರ್ಗಗಳನ್ನು ಸೃಷ್ಟಿಸಿದರೂ ಅದರ ಪ್ರಯೋಜನ ಕೆಲವರಿಗೆ ಮಾತ್ರ ಸಿಕ್ಕಿದೆ. ನಿಜವಾಗಿ ಹಿಂದುಳಿದ ಜಾತಿಗಳಿಗೆ ಖಂಡಿತವಾಗಿಯೂ ಇದರ ಪ್ರಯೋಜನ ಸಿಕ್ಕಿಲ್ಲ.

ಇದರ ಮಧ್ಯೆ ಅಲೆಮಾರಿ ಸಮುದಾಯಗಳ ಸಮಸ್ಯೆ ನಿಜಕ್ಕೂ ಕರುಣಾಜನಕ. ಬುಡಕಟ್ಟು ಜನಾಂಗದ ರಾಷ್ಟ್ರೀಯ ಆಯೋಗದ ಪ್ರಕಾರ 1,500 ಅಲೆಮಾರಿ/ಅರೆ-ಅಲೆಮಾರಿ ಬುಡಕಟ್ಟು ಜನಾಂಗದವರು ಮತ್ತು ಸುಮಾರು 150 ಡಿನೋಟಿಫೈಡ್ ಬುಡಕಟ್ಟು ಇದ್ದು ಇದು ಭಾರತದ ಜನಸಂಖ್ಯೆಯ ಸುಮಾರು 11 ಕೋಟಿ ಎನ್ನಲಾಗಿದೆ. ಇವರೆಲ್ಲ ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ವಂಚಿತರಾಗಿದ್ದಾರೆ. ಇವರಿಗೆ ಅಂಟಿಕೊಂಡಿರುವ ‘ಅಪರಾಧ ಹಿನ್ನೆಲೆ ಇದ್ದವರು’ ಎನ್ನುವ ಪದ ಇವರನ್ನು ಅವಕಾಶ ವಂಚಿತರನ್ನಾಗಿ ಮಾಡಿದೆ. ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳು ಜೀವನೋಪಾಯದ ಹುಡುಕಾಟದಲ್ಲಿ ಸ್ಥಳದಿಂದ ಸ್ಥಳಕ್ಕೆ ನಿರಂತರವಾಗಿ ವಲಸೆ ಹೋಗುತ್ತಿರುತ್ತಾರೆ. ಸುಧಾರಣಾ ಕ್ರಮಗಳು ಅಲೆಮಾರಿ ಸಮುದಾಯಗಳನ್ನು ತಲುಪುವುದು ಕಷ್ಟ ಸಾಧ್ಯ. ಹೆಚ್ಚಿನ ಡಿನೋಟಿಫೈಡ್‌ಗಳನ್ನು ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗಗಳಲ್ಲಿ ಸರಕಾರವು ವಿಂಗಡಣೆ ಮಾಡಿದೆ. ಇದರಿಂದ ಇವರಿಗೆ ಯಾವ ರೀತಿಯ ಪ್ರಯೋಜನವೂ ಆಗುತ್ತಿಲ್ಲ. ಸರಕಾರಿ ಹುದ್ದೆಗಳಲ್ಲಿ ನೂರು ಬಾರಿ ಹುಡುಕಿದರೂ ಇವರ ಪ್ರಾತಿನಿಧ್ಯವಿಲ್ಲ.! ಇವರಿಗೂ ಮೀಸಲಾತಿಯ ಪ್ರಯೋಜನ ದಕ್ಕಬೇಕಾದರೆ ಮೀಸಲಾತಿಯ ಒಟ್ಟು ಪ್ರಮಾಣವನ್ನು ಅನಿವಾರ್ಯವಾಗಿ ಹೆಚ್ಚಿಸಲು ಚಿಂತಿಸಬೇಕಾಗುತ್ತದೆ.
      
ಈಗಾಗಲೇ ತಮಿಳುನಾಡಿನ ವಿಚಾರ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಅಲೆಯುತ್ತಿದ್ದು, ಶೇ.70ರಷ್ಟು ಮೀಸಲಾತಿ ತರುವ ಕರ್ನಾಟಕದ ಪ್ರಯತ್ನಕ್ಕೆ ಖಂಡಿತವಾಗಿಯೂ ಫಲ ಸಿಗುವುದೇ?. ನಾಳೆ ಇದು ನ್ಯಾಯಾಲಯದ ವಿಮರ್ಶೆಗೆ ಒಳಪಟ್ಟಾಗ ಅದನ್ನು ಸಮರ್ಥಿಸಿಕೊಳ್ಳಲು ಸರಕಾರದ ಬಳಿ ಯಾವುದೇ ದಾಖಲೆಗಳಿಲ್ಲ. ಜಾತಿ ಜನಗಣತಿ ವರದಿ ಎಲ್ಲಿದೆಯೋ ಗೊತ್ತಿಲ್ಲ. ನಿಜ ಹೇಳಬೇಕೆಂದರೆ ಹಿಂದುಳಿದ ವರ್ಗಗಳ ಒಳ ವರ್ಗೀಕರಣಕ್ಕೆ ನ್ಯಾಯಾಲಯದ ಪರೋಕ್ಷ ಸಮ್ಮತಿ ಇದೆ ಎನ್ನಬಹುದು. ಭಾರತದ ಸುಪ್ರೀಂ ಕೋರ್ಟ್ 1992ರ ನವೆಂಬರ್‌ನಲ್ಲಿ ನೀಡಿದ ತೀರ್ಪಿನ ಅನ್ವಯ (ಇಂದಿರಾ ಪ್ರಕರಣದಲ್ಲಿ) ‘‘ರಾಜ್ಯ ಸರಕಾರಗಳು ಅವಶ್ಯಕತೆಯಿದ್ದರೆ ಒಳ ವರ್ಗೀಕರಣ ಮಾಡಬಹುದು’’ ಎನ್ನುವ ಒಂದು ವಾಕ್ಯವು 140 ಪುಟಗಳ ತೀರ್ಪಿನಲ್ಲಿ ಪ್ರಮುಖವಾಗಿ ಅಡಕವಾಗಿದೆ. 1972ರಲ್ಲೂ ಬಲರಾಮ್ ಪ್ರಕರಣದಲ್ಲಿ ಕೋರ್ಟ್ ಇದೇ ತೀರ್ಪು ನೀಡಿದೆ.

ಈ ಹಿನ್ನೆಲೆಯಲ್ಲಿ ನಾವು ನೆನಪಿಡಬೇಕಾದ ಇನ್ನೊಂದು ವಿಚಾರವೆಂದರೆ ಮಂಡಲ್ ಆಯೋಗದ ವರದಿಯಲ್ಲಿ ‘‘ಅವಶ್ಯವಿದ್ದರೆ ಭವಿಷ್ಯದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ಭಾಗ-1, ಭಾಗ-2 ಆಗಿ ವಿಂಗಡಿಸಿ ಭಾಗ-1ರಲ್ಲಿ ಅತ್ಯಂತ ಹಿಂದುಳಿದ ವರ್ಗ ಮತ್ತು ಭಾಗ-2ರಲ್ಲಿ ಸಾಧಾರಣವಾಗಿ ಹಿಂದುಳಿದ ವರ್ಗ ಜಾತಿಗಳನ್ನು ಸೇರಿಸಬೇಕು’’ ಎಂಬ ಸಲಹೆ ನೀಡಿದೆ. ‘‘ಹಿಂದುಳಿದ ಜಾತಿಗಳ ಹೊಸ ಪಟ್ಟಿಯನ್ನು ಮಾಡಲು ಅಥವಾ ಕೈಬಿಡಲು ರಾಜ್ಯ ಸರಕಾರಗಳು ಅಧಿಕಾರವನ್ನು ಪಡೆದಿವೆ’’ ಎಂದು ಅಂದು ಕೋರ್ಟ್ ಹೇಳಿತ್ತು. ಆದರೆ ಅದರ ನಂತರ ಕೇಂದ್ರ ಸರಕಾರವು ರಾಜ್ಯಗಳ ಈ ಅಧಿಕಾರವನ್ನು ಕಸಿದುಕೊಂಡಿತ್ತು. ಆದರೆ ಅದೇ ಅಧಿಕಾರ ಇತ್ತೀಚೆಗೆ ಮತ್ತೆ ರಾಜ್ಯಗಳಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರಗಳು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕಾಗಿದೆ. ಜನಗಣತಿ ವರದಿಯ ವಿಚಾರದಲ್ಲಿ ಸರಕಾರವು ಸಾಧ್ಯವಾದಷ್ಟು ಬೇಗ ಒಂದು ತೀರ್ಮಾನಕ್ಕೆ ಬರಬೇಕಾಗುತ್ತದೆ. ಇದರ ಮಧ್ಯೆ ರಾಜ್ಯ ಸರಕಾರಗಳು ಗುರುತಿಸಿರುವ ಹಿಂದುಳಿದ ವರ್ಗಗಳ ಪಟ್ಟಿಗೂ ಕೇಂದ್ರ ಸರಕಾರಗಳು ಗುರುತಿಸಿರುವ ಹಿಂದುಳಿದ ವರ್ಗಗಳ ಪಟ್ಟಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಹೆಚ್ಚು ಕಡಿಮೆ 130ಕ್ಕೂ ಹೆಚ್ಚಿನ ಕರ್ನಾಟಕದ ಜಾತಿ-ಜನಾಂಗಗಳು ಕೇಂದ್ರ ಸರಕಾರದ ಹಿಂದುಳಿದ ಪಟ್ಟಿಗೆ ಬರುವುದಿಲ್ಲ! ಕೆಲವು ಜಾತಿಗಳು ಕೇಂದ್ರ ಮತ್ತು ರಾಜ್ಯ ಎರಡು ಸರಕಾರಗಳ ಪಟ್ಟಿಗಳಲ್ಲಿ ಕಾಣಿಸಿಕೊಳ್ಳುವುದು ಸೋಜಿಗ. ಅದರಲ್ಲೂ ಬಲಾಢ್ಯ ಜಾತಿಗಳು ಹೆಚ್ಚಾಗಿ ಸೇರಿಕೊಂಡಿವೆ.

ಈ ಕುರಿತು 1965ರಲ್ಲಿ ಬಿ.ಲಾಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸರಕಾರದ ಗಮನ ಸೆಳೆದಿದೆ. ಮೀಸಲಾತಿ ಫಲ ಎಲ್ಲರಿಗೂ ದೊರಕಬೇಕಾದರೆ ಹಿಂದುಳಿದ ವರ್ಗಗಳಲ್ಲಿ ಮತ್ತಷ್ಟು ವರ್ಗೀಕರಣ ಮಾಡಬೇಕಾದ ಅವಶ್ಯಕತೆ ಇದೆ ಎನ್ನುತ್ತಾರೆ ಕಾನೂನು ಪಂಡಿತರು. ಆದರೆ ದೇಶದಲ್ಲಿ ಸರಿಯಾದ ಜಾತಿಗಣತಿ ನಡೆದು 100 ವರ್ಷಗಳೇ ಕಳೆದು ಹೋಗಿರುವುದರಿಂದ ಒಳ ವರ್ಗೀಕರಣಕ್ಕೆ ಸರಿಯಾದ ವೈಜ್ಞಾನಿಕ ತಳಹದಿಯನ್ನು ರೂಪಿಸಬೇಕಾಗಿದೆ. ಒಳ ವರ್ಗೀಕರಣದಿಂದ ಮಾತ್ರ ಮೀಸಲಾತಿಯಿಂದ ದೂರವುಳಿದಿರುವ ಸಮುದಾಯಗಳನ್ನು ಒಂದು ಹಂತದವರೆಗೆ ಒಳ ತರಲು ಸಾಧ್ಯವಿದೆ. ಆಗಲೂ ಅತಿ ಹಿಂದುಳಿದ ಜನಾಂಗದವರಿಗೆ ಮೀಸಲಾತಿ ಫಲ ದೊರಕುತ್ತದೆ ಎಂದು ಹೇಳಲು ಯಾವುದೇ ಖಾತರಿ ಇಲ್ಲ. ಏಕೆಂದರೆ ಇವರನ್ನು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಬಲಿಷ್ಠಗೊಳಿಸಲು ಮೊದಲು ಸರಕಾರಗಳು ಯತ್ನಿಸಬೇಕು. ಮೀಸಲಾತಿ ಸಿಗಬೇಕಾದರೆ, ಸರಕಾರಿ ಹುದ್ದೆಗಳು ಸಿಗಬೇಕಾದರೆ ಕನಿಷ್ಠ ಹಂತದ ಶಿಕ್ಷಣ ಪಡೆಯುವುದು ಕಡ್ಡಾಯ. ಆದರೆ ಅಲೆಮಾರಿ ಜನಗಳಂತಹ ಸಮುದಾಯಗಳಲ್ಲಿ ಹುಡುಕಿದರೂ ಕನಿಷ್ಠ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿದವರ ಸಂಖ್ಯೆ ಕೆಲವೇ ಮಂದಿ ಮಾತ್ರ. ಆಗಲೂ ಇವರಲ್ಲಿ ಬಲಾಢ್ಯರು ಮಾತ್ರ ಮೀಸಲಾತಿಯ ಫಲವನ್ನು ಪಡೆಯುತ್ತಾರೆ. ಸಾಮಾಜಿಕ ನ್ಯಾಯ ಇಂದು ಕೇವಲ ದಾಖಲೆಗಳಲ್ಲಿ ಮತ್ತು ಕಾನೂನಿನ ಪುಟಗಳಲ್ಲಿ ಮಾತ್ರ ಕಾಣಿಸುತ್ತಿದೆ.

Writer - ಡಾ. ಡಿ.ಸಿ. ನಂಜುಂಡ

contributor

Editor - ಡಾ. ಡಿ.ಸಿ. ನಂಜುಂಡ

contributor

Similar News