100 ಕ್ಷೇತ್ರಗಳಲ್ಲಿ ಸ್ಪರ್ಧೆ: ಅಯೋಧ್ಯೆಯಲ್ಲಿ ಉವೈಸಿ ಘೋಷಣೆ

Update: 2021-09-08 06:30 GMT
ಫೋಟೊ : PTI

ಲಕ್ನೋ: ಸಮಾಜವಾದಿ ಪಕ್ಷದ ಮಾಜಿ ಸಂಸದ ಅತೀಕ್ ಅಹ್ಮದ್ ಹಾಗೂ ಅವರ ಪತ್ನಿ ಶಾಹಿಸ್ತ ಪರ್ವೀನ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಬೆನ್ನಲ್ಲೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ತಮ್ಮ ಪಕ್ಷ ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 100 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಅಯೋಧ್ಯೆಯ ರುದೌಲಿಯಲ್ಲಿ ಮಂಗಳವಾರ ಘೋಷಿಸಿದರು.

ಉವೈಸಿ ಸಮ್ಮುಖದಲ್ಲಿ ಶಾಹಿಸ್ತ ಪರ್ವೀನ್ ಎಐಎಂಐಎಂ ಸದಸ್ಯತ್ವ ಪಡೆದರು. ಅವರ ಪತಿ ಹಾಗೂ ಸಮಾಜವಾದಿ ಪಕ್ಷದ ಮಾಜಿ ಸಂಸದ ಅತೀಕ್ ಅಹ್ಮದ್ ಸದ್ಯ ಜೈಲಿನಲ್ಲಿದ್ದು, ಅನುಪಸ್ಥಿತಿಯಲ್ಲೇ ಪಕ್ಷ ಸೇರಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉವೈಸಿ, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಮುಸ್ಲಿಮರನ್ನು ಗುಲಾಮರನ್ನಾಗಿ ಬಳಸಿಕೊಂಡು, ಚುನಾವಣೆಯಲ್ಲಿ ಗೆದ್ದ ಬಳಿಕ ಅಧಿಕಾರ ನೀಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಅತೀಕ್ ಅಹ್ಮದ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಕ್ರಮವನ್ನು ಸಮರ್ಥಿಸಿಕೊಂಡ ಅವರು, ಹಲವು ಮಂದಿ ಬಿಜೆಪಿ ಮುಖಂಡರೂ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಉತ್ತರ ಪ್ರದೇಶದಲ್ಲಿ 37% ಬಿಜಪಿ ಶಾಸಕರು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. 116 ಮಂದಿ ಬಿಜೆಪಿ ಸಂಸದರ ವಿರುದ್ಧ ಗಂಭೀರ ಪ್ರಕರಣಗಳು ದಾಖಲಾಗಿವೆ. ಆ ಪೈಕಿ ಬಹುತೇಕ ಪ್ರಕರಣಗಳು ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದವು ಎಂದು ಉವೈಸಿ ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ 100 ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸಲಿದ್ದು, ಪಕ್ಷ ಬೂತ್ ಹಂತದವರೆಗೂ ಸಂಘಟನೆಯನ್ನು ಬೆಳೆಸಿದೆ ಎಂದು ಹೇಳಿಕೊಂಡರು.

"ಮುಸ್ಲಿಮರನ್ನು ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ತಮ್ಮ ಸರ್ಕಾರದ ಪರ ಘೋಷಣೆಗಳನ್ನು ಕೂಗಲು ಗುಲಾಮರನ್ನಾಗಿ ಬಳಸಿಕೊಂಡವು. ಆದರೆ ಅವರಿಗೆ ಅಧಿಕಾರದಲ್ಲಿ ಪಾಲು ನೀಡಲು ಮರೆತರು" ಎಂದು ಉವೈಸಿ ವಾಗ್ದಾಳಿ ನಡೆಸಿದರು. ಇದುವರೆಗೆ ಮುಸ್ಲಿಮರು ಬೇರೆಯವರನ್ನು ಗೆಲ್ಲಿಸುತ್ತಿದ್ದರು. ಆದರೆ ಇದೀಗ ತಾವೇ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವಿಗಾಗಿ ಹೋರಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News