ಅಸ್ಸಾಂ, ತ್ರಿಪುರಾಗಳಲ್ಲಿ ಬಿಜೆಪಿಯನ್ನು ಎದುರಿಸಲು ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟ

Update: 2021-09-08 17:12 GMT

ಸಾಂದರ್ಭಿಕ ಚಿತ್ರ

ಗುವಾಹಟಿ,ಸೆ.8: ಬಿಜೆಪಿಯನ್ನು ಎದುರಿಸಲು ಮತ್ತು ಪ್ರದೇಶದಲ್ಲಿಯ ಮೂಲನಿವಾಸಿಗಳ ಹಕ್ಕುಗಳಿಗಾಗಿ ಹೋರಾಡಲು ಅಸ್ಸಾಂ ಮತ್ತು ತ್ರಿಪುರಾಗಳಲ್ಲಿಯ ಎರಡು ಪ್ರಾದೇಶಿಕ ಪಕ್ಷಗಳು ರಾಜಕೀಯ ಮೈತ್ರಿಯನ್ನು ಮಾಡಿಕೊಂಡಿವೆ. ಎಲ್ಲ ಎಂಟು ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಅಧಿಕಾರದಲ್ಲಿವೆ.

ಇಂಡಿಜಿನಿಯಸ್ ಪ್ರೊಗ್ರೆಸಿವ್ ರೀಜನಲ್ ಅಲಯನ್ಸ್ ಅಥವಾ ಟಿಪ್ರಾ ಮತ್ತು ಅಸ್ಸಾಂ ಜಾತೀಯ ಪರಿಷದ್ ನಡುವೆ ಮೈತ್ರಿಯನ್ನು ಪಕ್ಷ ನಾಯಕರು ಮಂಗಳವಾರ ಇಲ್ಲಿ ಪ್ರಕಟಿಸಿದರು.
 
ಟಿಪ್ರಾ ಅಧ್ಯಕ್ಷ ಹಾಗೂ ತ್ರಿಪುರಾ ರಾಜವಂಶಸ್ಥ ಕಿರೀಟ ಪ್ರದ್ಯೋತ ಮಾಣಿಕ್ಯದೇವ ಬರ್ಮನ್ ಅವರು ನೂತನ ಮೈತ್ರಿಕೂಟದ ನಾಯಕರಾಗಿದ್ದಾರೆ. ಅವರು 2019ರಲ್ಲಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಹೊಸ ಪಕ್ಷವನ್ನು ಹುಟ್ಟುಹಾಕಿದ್ದರು.
 
ಇಡೀ ಈಶಾನ್ಯ ಭಾರತವನ್ನು ಈಗ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಆಳುತ್ತಿವೆ,ಆದರೆ ಈ ಮಿತ್ರಪಕ್ಷಗಳು ಅಸಮಾಧಾನದಿಂದ ಕುದಿಯುತ್ತಿವೆ. ತ್ರಿಪುರಾ,ಅಸ್ಸಾಂ,ಮಿಝೋರಾಮ್ ಮತ್ತು ಮೇಘಾಲಯಗಳಲ್ಲಿಯ ಬಿಜೆಪಿಯ ಮಿತ್ರಪಕ್ಷಗಳು ನೂತನ ಮೈತ್ರಿಕೂಟದಲ್ಲಿ ಸೇರಲು ಮಾತುಕತೆಗಳನ್ನು ನಡೆಸುತ್ತಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಬರ್ಮನ್,ಬಿಜೆಪಿ ನೇತೃತ್ವದ ಈಶಾನ್ಯ ಭಾರತ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್ ಇಡಿಎ)ವು ಕೇವಲ ಚುನಾವಣೆಗಳನ್ನು ಗೆಲ್ಲುವ ಯಂತ್ರವಾಗಿದೆ ಎಂದರು.
 
ಪ್ರಾದೇಶಿಕ ಪಕ್ಷಗಳನ್ನು ಬಲಗೊಳಿಸುವುದು ನೂತನ ಮೈತ್ರಿಕೂಟ ರಚನೆಯ ಉದ್ದೇಶಗಳಲ್ಲೊಂದಾಗಿದೆ ಎಂದು ಹೇಳಿದ ಅಸ್ಸಾಂ ಜಾತೀಯ ಪರಿಷದ್ನ ಅಧ್ಯಕ್ಷ ಲುರಿಂಜ್ಯೋತಿ ಗೊಗೊಯಿ ಅವರು,ಬಿಜೆಪಿಯ ಆಕ್ರಮಣಕಾರಿ ಅಜೆಂಡಾಕ್ಕೆ ಈಶಾನ್ಯ ಭಾರತದ ಜನರು ಬೆಲೆಯನ್ನು ತೆರುತ್ತಿದ್ದಾರೆ. ಬಿಜೆಪಿಯು ಪ್ರೀತಿ ಮತ್ತು ಅನುಕಂಪ ಆಧಾರಿತ ಹಿಂದುವಾದದ ಹಳೆಯ ಸಂಪ್ರದಾಯಗಳಿಗಿಂತ ಭಿನ್ನವಾದ ಹಿಂದುತ್ವದ ತನ್ನ ಪರಿಕಲ್ಪನೆಯ ಜಾರಿಗೆ ಪ್ರಯತ್ನಿಸುತ್ತಿದೆ. ಪರಿಣಾಮವಾಗಿ ಹಲವಾರು ಜನಾಂಗೀಯ ಸಂಪ್ರದಾಯಗಳು ಮತ್ತು ಭಾಷೆಗಳು ಅಳಿವಿನ ಅಂಚಿನಲ್ಲಿವೆ ಎಂದರು.

ಸಿಎಎ ರದ್ದತಿ,ಎನ್ ಆರ್ ಸಿ ಪರಿಷ್ಕರಣೆ ಸೇರಿದಂತೆ ವಿವಿಧ ಪ್ರಾದೇಶಿಕ ವಿಷಯಗಳಿಗೆ ಆದ್ಯತೆ ನೀಡಲು ನೂತನ ಮೈತ್ರಿಕೂಟವು ಉದ್ದೇಶಿಸಿದೆ. ಬರ್ಮನ್ ಅವರ ಪಕ್ಷವು 2019ರಲ್ಲಿ ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿಯ ಮೂಲನಿವಾಸಿ ತ್ರಿಪುರಾ ಜನರಿಗಾಗಿ ಪ್ರತ್ಯೇಕ ಟಿಪ್ರಾಲ್ಯಾಂಡ್ ರಚನೆಗಾಗಿ ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News