ವಿಜ್ಞಾನ ಎಂಬ ಅಹಂಕಾರ

Update: 2021-09-08 18:18 GMT

ಇವತ್ತು ವಿಜ್ಞಾನ ತಂತ್ರಜ್ಞಾನಗಳ ಹೆಸರಿನಲ್ಲಿ ನಡೆಯುತ್ತಿರುವುದನ್ನು ಪರಾಮರ್ಷೆಗೆ ಒಡ್ಡುವವರಿಗೆ ವಿಜ್ಞಾನದ ವಿರೋಧಿಗಳು ಎಂದು ಹಣೆಪಟ್ಟಿ ಹಚ್ಚಲಾಗುತ್ತದೆ. ಇಂತಹವರನ್ನು ಅವಾಸ್ತವಿಕ ಕಲ್ಪನೆಗಳನ್ನಿಟ್ಟುಕೊಂಡು ಕಾಲವನ್ನು ಹಿಂದಿರುಗಿಸುವ ಭ್ರಮೆಯಲ್ಲಿ ಬದುಕುತ್ತಿರುವವರು ಎಂದು ಕಡೆಗಣಿಸಲಾಗುತ್ತದೆ. ದುರದೃಷ್ಟವೆಂದರೆ ಸಾಕಷ್ಟು ಚಿಂತಲಶೀಲ ವೈಜ್ಞಾನಿಕ ಮನೋಭಾವವಿರುವವರಲ್ಲಿಯೂ ಇಂತಹದೇ ಅಭಿಪ್ರಾಯಗಳಿವೆ. ಇದನ್ನು ಅರ್ಥಮಾಡಿಕೊಳ್ಳಲು ವಿಜ್ಞಾನ, ಯಾಂತ್ರೀಕರಣ, ಕಾರ್ಪೊರೇಟೀಕರಣ, ಜಾಗತೀಕರಣಗಳನ್ನು ಒಳಗೊಂಡಿರುವ ನವಿರಾದ ಬಲೆಯನ್ನು ಸರಿಸಿ ನೋಡಬೇಕಾಗುತ್ತದೆ. ವಿಜ್ಞಾನ ಯಾವಾಗ ಶುರುವಾಗಿರಬಹುದು ಎನ್ನುವುದಕ್ಕೆ ವಿವಿಧ ವಿವರಣೆಗಳು ಸಿಗಬಹುದು. ಕೆಲವರು ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಗ್ರೀಸ್‌ನಲ್ಲಿ ಬದುಕಿದ್ದ ಅರಿಸ್ಟಾಟಲ್ ಆಧುನಿಕ ವಿಜ್ಞಾನದ ಪಿತಾಮಹ ಎನ್ನುತ್ತಾರೆ. ಇನ್ನೂ ಕೆಲವು ಕಡೆ ವಿಜ್ಞಾನದ ಇತಿಹಾಸವನ್ನು ಕ್ರಿಸ್ತಪೂರ್ವ 3000ನೇ ಇಸವಿಯಲ್ಲಿ ಈಜಿಪ್ಟ್ ಮತ್ತು ಮೆಸಪಟೋಮೀಯಾಗಳಲ್ಲಿ ಗುರುತಿಸಬಹುದು ಎಂದು ಅಭಿಪ್ರಾಯಪಡಲಾಗಿದೆ. ವಿಜ್ಞಾನವೆಂದರೆ ಸುತ್ತಲಿನ ಭೌತಿಕ ಜಗತ್ತಿನ ಆಗುಹೋಗುಗಳ ಬಗೆಗೆ ಹೆಚ್ಚು ನಿಖರವಾಗಿ ಹಾಗೂ ತಾರ್ಕಿಕವಾಗಿ ತಿಳಿಯುವುದು ಮತ್ತು ತಂತ್ರಜ್ಞಾನವೆಂದರೆ ಹೀಗೆ ದೊರೆತ ಜ್ಞಾನದಿಂದ ನಿತ್ಯ ಜೀವನವನ್ನು ಹೆಚ್ಚು ಸುರಕ್ಷಿತ ಮತ್ತು ಸಹನೀಯವಾಗಿಸಿಕೊಳ್ಳಲು ಬಳಸುವುದು- ಎನ್ನುವ ಸರಳ ವ್ಯಾಖ್ಯೆಗಳನ್ನಿಟ್ಟುಕೊಂಡರೆ ಮಾನವನ ಉಗಮವಾಗಿನಿಂದಲೇ ಇವುಗಳು ನಡೆಯುತ್ತಲೇ ಬಂದಿರಬೇಕಲ್ಲವೇ? ಕಾಡು ಬೆಟ್ಟಗುಡ್ಡಗಳಲ್ಲಿ ಅಸುರಕ್ಷಿತ ಪರಿಸ್ಥಿತಿಗಳಲ್ಲಿ ಬದುಕುತ್ತಿದ್ದ ಮಾನವ ತನ್ನ ತಳಿಯನ್ನು ಉಳಿಸಿ ಬೆಳೆಸಲು ಅನುವಾಗುವಂತೆ ಹೊಸದರ ಹುಡುಕಾಟಕ್ಕೆ ಪ್ರೇರಣೆಗಳನ್ನು ನೀಡುವಂತಹ ಮಿದುಳಿನ ರಚನೆಯನ್ನೂ ಕೂಡ ಪ್ರಕೃತಿಯೇ ಅವನಿಗೆ ನೀಡಿರಬೇಕು. ಹೀಗೆ ತನ್ನ ತಳಿಯನ್ನು ಉಳಿಸಿಕೊಂಡು ಮುಂದುವರಿಸುವ ಉದ್ದೇಶದಿಂದ ಪ್ರಾಕೃತಿಕ ಏರುಪೇರುಗಳನ್ನು ಹೊಂದಿಸಿಕೊಳ್ಳುವ ಪ್ರವೃತ್ತಿ ಎಲ್ಲಾ ಜೀವಿಗಳಲ್ಲಿ ವಿವಿಧ ರೂಪಗಳಲ್ಲಿ ಕಂಡುಬರುತ್ತದೆ.

ಅಂದರೆ ವಿಜ್ಞಾನ ತಂತ್ರಜ್ಞಾನಗಳು ಕೇವಲ ಮಾನವನಿಗೆ ಸೀಮಿತ ಎನ್ನುವ ತಿಳುವಳಿಕೆಯಲ್ಲಿಯೇ ಅನಗತ್ಯ ಹೆಚ್ಚುಗಾರಿಕೆಯಿದೆ. ಇಲ್ಲಿಂದಲೇ ವಿಜ್ಞಾನದ ಅಹಂಕಾರ ಪ್ರಾರಂಭವಾಗುತ್ತದೆ. ಅನಾದಿ ಕಾಲದಿಂದಲೇ ಮಾನವರು ತಮ್ಮ ಬದುಕಿನ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳುವ ಸಾಧನಗಳನ್ನು ಅಭಿವೃದ್ಧಿಪಡಿಸುತ್ತಲೇ ಬಂದಿದ್ದಾರೆ. ಇಂತಹ ಸಾಧನಗಳನ್ನು ಆಯಾ ಪ್ರದೇಶದ ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ತಮ್ಮ ಸುತ್ತಮುತ್ತಲೂ ದೊರೆಯುತ್ತಿದ್ದ ಸಂಪನ್ಮೂಲಗಳಿಂದಲೇ ಮಾಡಿಕೊಳ್ಳುತ್ತಿದ್ದರು. ಬಳಸುವವರೇ ತಯಾರಿಸಿಕೊಳ್ಳುವ ಸಾಧನಗಳಾದ್ದರಿಂದ ಅನುಕೂಲಗಳು ಹೆಚ್ಚಾಗಿದ್ದವು ಮತ್ತು ತಯಾರಿಕಾ ವೆಚ್ಚವೂ ಕಡಿಮೆಯಾಗಿರುತ್ತಿತ್ತು. ಸಮಯ ಶ್ರಮಗಳೇ ಪ್ರಮುಖ ಸಂಪನ್ಮೂಲಗಳಾಗಿದ್ದವು. ಪ್ರಕೃತಿಯಲ್ಲಿ ಸಹಜವಾಗಿ ದೊರೆಯುವ ವಸ್ತುಗಳಿಂದಲೇ ತಯಾರಾಗುತ್ತಿದ್ದ ಇಂತಹ ಸಾಧನಗಳು ನಿರುಪಯುಕ್ತವಾದಾಗ ಸಹಜವಾಗಿ ಪ್ರಕೃತಿಯಲ್ಲಿ ವಿಲೀನವಾಗುತ್ತಿದ್ದವು. ಇಂತಹ ಸಾಧನಗಳನ್ನು ಕಲ್ಲು ಮರಗಳಿಂದ ತಯಾರಿಸುತ್ತಿದ್ದ ಶಿಲಾಯುಗದಿಂದ ಲೋಹಯುಗಕ್ಕೆ ಸರಿದಂತೆ ಮೇಲಿನ ವ್ಯವಸ್ಥೆಯಲ್ಲಿ ಅಲ್ಪಸ್ವಲ್ಪಬದಲಾವಣೆಗಳಾದವು. ಹಾಗೆಯೇ ಹೆಚ್ಚಿನ ದೂರವನ್ನು ಕ್ರಮಿಸಲು ಪ್ರಾಣಿಗಳ ಬಳಕೆಯಾಗತೊಡಗಿದ ಮೇಲೆ ದೂರದೂರದಲ್ಲಿ ಬದುಕುವ ಜನರು ಹತ್ತಿರವಾಗತೊಡಗಿದರು. ಅಲೆಮಾರಿ ಬದುಕಿನಿಂದ ಒಂದೇ ಸ್ಥಳದಲ್ಲಿ ಸ್ಥಿರವಾಗಿ ನೆಲೆಸುವ ಸಾಧ್ಯತೆಗಳು ಕಂಡುಬಂದವು. ಊಟ ಉಡುಗೆ ತೊಡುಗೆ ಮನೋರಂಜನೆಗಳಲ್ಲಿ ಬದಲಾವಣೆಗಳಾಗುತ್ತಾ ಹೊಸಹೊಸ ಸಾಮಾಜಿಕ, ಆರ್ಥಿಕ, ರಾಜಕೀಯ ವ್ಯವಸ್ಥೆಗಳು ರೂಪುಗೊಳ್ಳತೊಡಗಿದವು. ಇಲ್ಲಿ ಗಮನಿಸಲೇಬೇಕಾಗಿರುವುದು ಇಂತಹ ಎಲ್ಲಾ ಬದಲಾವಣೆಗಳು ನಿಧಾನವಾಗಿ ಹಂತಹಂತವಾಗಿ ಜನರ ನಡುವೆಯೇ ನಡೆಯುತ್ತಿತ್ತು. ಹಾಗಾಗಿ ಜನರ ಅಗತ್ಯಗಳು ಮಾತ್ರ ಇವುಗಳ ಕೇಂದ್ರವಾಗಿರುತ್ತಿದ್ದವು. ಜನಸಮುದಾಯಕ್ಕೆ ಮಾನಸಿಕವಾಗಿ ಹೊಂದಿಕೊಳ್ಳಲು ಸಾಕಷ್ಟು ಸಮಯಾವಕಾಶವಿರುತ್ತಿತ್ತು.

ಬಹುಷ: ಪ್ರಕೃತಿ ಮನುಷ್ಯನ ಮಿದುಳು ದೇಹಗಳ ರಚನೆಯಲ್ಲಿಯೂ ಸೂಕ್ತವಾದ ಬದಲಾವಣೆಗಳನ್ನು ನಿಧಾನವಾಗಿ ಮಾಡುತ್ತಾ ಹೋಗಿರಬಹುದು. ಆದರೆ ಸುಮಾರು 18ನೇ ಶತಮಾನದಿಂದ ಬದಲಾವಣೆಗಳ ವೇಗ ಗಮನೀಯವಾಗಿ ಹೆಚ್ಚತೊಡಗಿತು. ಯರೋಪ್ ಮತ್ತು ಅಮೆರಿಕದ ದೇಶಗಳಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿ ಇವುಗಳಿಗೆ ವೇಗವರ್ಧಕವಾಯಿತು. ಯಂತ್ರಗಳು ಆವಿಷ್ಕಾರವಾಗುತ್ತಾ ಹೋದಂತೆ ವೇಗವಾಗಿ ದೊಡ್ಡ ಸಂಖ್ಯೆಯಲ್ಲಿ ವಸ್ತುಗಳ ಉತ್ಪಾದನೆಯಾಗತೊಡಗಿತು. ನೆಲದಾಳದಿಂದ ತೆಗೆದ ತೈಲದಿಂದ ವೇಗವಾಗಿ ಚಲಿಸಬಲ್ಲ ಸಂಚಾರ ಸಾಧನೆಗಳು ಬಂದವು. ಹೀಗೆ ಪ್ರಾದೇಶಿಕವಾಗಿ ನಿಧಾನವಾಗಿ ಆಗುತ್ತಿದ್ದ ಬದಲಾವಣೆಗಳು ಜಾಗತಿಕವಾಗುತ್ತಾ ಹೋಗಿದ್ದಲ್ಲದೆ ಅವುಗಳ ವೇಗ ಊಹಿಸಲಾಗದಷ್ಟು ಹೆಚ್ಚಿತು. ಇಲ್ಲಿಂದ ದುರಂತಗಳ ಸರಮಾಲೆಯೇ ಪ್ರಾರಂಭವಾಯಿತು. ಯಂತ್ರಗಳನ್ನು ಹೂಡಲು, ದೊಡ್ಡ ಸಂಖ್ಯೆಯಲ್ಲಿ ವಸ್ತುಗಳನ್ನು ಉತ್ಪಾದಿಸಲು ಮತ್ತು ಅಂತಹ ಉತ್ಪಾದನೆಗಳನ್ನು ಭೂಮಿಯ ಮೂಲೆಮೂಲೆಗಳಿಗೆ ತಲುಪಿಸಲು ಅಪಾರವಾದ ಹಣಬಲದ ಅಗತ್ಯವಾಗಿತ್ತು. ಇದನ್ನು ಸರಿದೂಗಿಸಲು ಕಾರ್ಪೊರೇಟ್‌ಗಳ ಉಗಮವಾಯಿತು. ಇಂತಹ ಕಾರ್ಪೊರೇಟ್‌ಉದ್ದಿಮೆದಾರರು ಸ್ವಂತಗಳಿಕೆಯ ಹಣವನ್ನೇನೂ ಹೆಚ್ಚಾಗಿ ಹೂಡದಿದ್ದರೂ ವಿವಿಧ ಮೂಲಗಳಿಂದ ಸಂಗ್ರಹಿಸುವ ಚಾಕಚಕ್ಯತೆ ಬೆಳೆಸಿಕೊಂಡಿದ್ದರು.

ಅವರಿಗೆ ಅನುಕೂಲವಾಗುವಂತೆ ಕಾನೂನಿನ ಬೆಂಬಲ ಕೊಡಲು ‘ಲಿಮಿಟೆಡ್ ಕಂಪೆನಿಗಳ’ನ್ನು ಮಾನ್ಯಮಾಡಲಾಯಿತು. ಉತ್ಪಾದನೆ ಹಂಚಿಕೆಗಳ ಜೊತೆಗೆ ಜನರ ಮಧ್ಯೆ ಜನರಿಂದ ಜನರಿಗಾಗಿಯೇ ಹುಟ್ಟಿಕೊಳ್ಳುತ್ತಿದ್ದ ವಿಜ್ಞಾನ ಮತ್ತು ತಂತ್ರಜ್ಞಾನಗಳು ಕೂಡ ಕಾರ್ಪೊರೇಟ್‌ಗಳ ವಶವಾಯಿತು. ಜನಸಾಮಾನ್ಯರು ಕೇವಲ ಬಳಕೆದಾರರಾಗಿ ಮಾತ್ರ ಉಳಿದರು. ಕಾರ್ಪೊರೇಟ್‌ಗಳು ಹಣದ ರುಚಿ ಕಂಡಮೇಲೆ ವಿಜ್ಞಾನ ತಂತ್ರಜ್ಞಾನಗಳು ಜನಹಿತ ಮತ್ತು ಪರಿಸರದ ಕಾಳಜಿಗಳಿಗಿಂತ ಹೆಚ್ಚಿನ ಗಳಿಕೆಯ ಸಾಧ್ಯತೆಗಳಿರುವ ದಿಕ್ಕಿನಲ್ಲಿ ಬೆಳೆಯತೊಡಗಿತು. ಅಲ್ಲಿಂದ ನಿಜವಾದ ವಿಜ್ಞಾನವೂ ಅಳಿಸಿ ಮಾರುಕಟ್ಟೆ ಆಧಾರಿತ ವಿಜ್ಞಾನದ ಅವಿಷ್ಕಾರವಾಗತೊಡಗಿತು. ಜನರ ಅಗತ್ಯಗಳು, ಪರಿಸರದ ಮೇಲಿನ ದುಷ್ಪರಿಣಾಮಗಳು ಎಲ್ಲವೂ ನಗಣ್ಯವಾಗಿಹೋಯಿತು. ಪ್ರಕೃತಿಯ ಮೂಲನಿಯಮವಾದ ಪ್ರಾದೇಶಿಕ ಭಿನ್ನತೆಯನ್ನು ಅಲ್ಲಗಳೆದು ಜಾಗತೀಕರಣವೇ ಮಾನವ ಕಲ್ಯಾಣಕ್ಕೆ ಹೆದ್ದಾರಿ ಎನ್ನುವ ಭ್ರಮೆಯನ್ನು ಸೃಷ್ಟಿಸಲಾಯಿತು. ಆಯಾ ಪ್ರದೇಶಗಳ ಸಾಂಪ್ರದಾಯಿಕ ಜ್ಞಾನ ತಂತ್ರಜ್ಞಾನಗಳನ್ನೆಲ್ಲಾ ಮೂಲೆಗುಂಪಾಗಿಸಿ ಜನಸಮುದಾಯಕ್ಕೆ ಕಾರ್ಪೊರೇಟ್ ವಸ್ತುಗಳ ಅಮಲು ಹುಟ್ಟಿಸಲಾಯಿತು. ಆವಿಷ್ಕಾರಗಳು ಜನರಿಂದ ದೂರವಾಗಿ ಹವಾನಿಯಂತ್ರಿತ ಪ್ರಯೋಗಶಾಲೆಗಳಲ್ಲಿ ನಡೆದು ಜನರ ಮಧ್ಯೆ ಸ್ಥಾಪಿತಗೊಳ್ಳತೊಡಗಿತು. ಅಗತ್ಯಗಳು ಆವಿಷ್ಕಾರದ ಮೂಲ ಎನ್ನುವುದು ಬದಲಾಗಿ, ಜನರನ್ನು ಆಕರ್ಷಿಸಿ ಮಾರುಕಟ್ಟೆ ಸೃಷ್ಟಿಸಲು ಸಾಧ್ಯವಿರುವುದನ್ನು ಆವಿಷ್ಕರಿಸಿ ಅವುಗಳನ್ನೇ ಎಲ್ಲರ ಅಗತ್ಯ ಎಂದು ಬಿಂಬಿಸಲಾಯಿತು. ಕಂಪ್ಯೂಟರ್, ಅಂತರ್ಜಾಲಗಳಿಂದಾದ ಸಂಪರ್ಕ ಕ್ರಾಂತಿ ಈ ಬದಲಾವಣೆಗಳ ವೇಗವನ್ನು ಅಗಾಧವಾಗಿ ಹೆಚ್ಚಿಸಿತು. ಹೀಗೆ ಜನರಿಂದ ದೂರವಾಗಿ ಕಾರ್ಪೊರೇಟ್‌ಗಳ ಕೈಸೇರಿದ ವಿಜ್ಞಾನ ತಂತ್ರಜ್ಞಾನಗಳು ಇವತ್ತು ತಾನು ನಡೆದದ್ದೇ ದಾರಿ ಎನ್ನುವ ಅಹಂಕಾರವಾಗಿ ಮಾತ್ರ ಉಳಿದುಕೊಂಡಿದೆ.

ಮೇಲಿನ ಬದಲಾವಣೆಗಳು ಕೇವಲ ಗ್ರಾಹಕ ವಸ್ತುಗಳನ್ನು ಉತ್ಪಾದಿಸುವ ಕ್ಷೇತ್ರಗಳಿಗಷ್ಟೇ ಸೀಮಿತವಾಗಿಲ್ಲ. ಕೃಷಿ, ವೈದ್ಯಕೀಯ, ಮನೋರಂಜನೆ, ಕ್ರೀಡೆ, ಸಾರ್ವಜನಿಕ ಆಡಳಿತ ಹೀಗೆ ಎಲ್ಲಾ ಕಡೆ ಕಾರ್ಪೊರೇಟ್ ವಿಜ್ಞಾನ ತನ್ನ ಕಬಂಧ ಬಾಹುಗಳನ್ನು ಚಾಚಿದೆ. ವಿದ್ಯೆ ಎನ್ನುವುದು ಕಾರ್ಪೊರೇಟ್ ಅಗತ್ಯಗಳನ್ನು ಪೂರೈಸುವ ಕಲಿಕೆಯಾಗಿದೆ. ತನ್ನಿಂದಲೇ ಸೃಷ್ಟಿಯಾದ ಅನಾಹುತಗಳಿಗೆ ಮತ್ತೆ ಹೊಸ ಕಾರ್ಪೊರೇಟ್ ತಂತ್ರಜ್ಞಾನದ ಪರಿಹಾರ ಸೂಚಿಸಲಾಗುತ್ತಿದೆ. ಇಂತಹ ಚಕ್ರವ್ಯೆಹದೊಳಕ್ಕೆ ಸಿಲುಕಿಕೊಂಡಿರುವ ಅರಿವು ಉಂಟಾಗಲು ಸಾಧ್ಯವಿರದಷ್ಟು ಕಾರ್ಪೊರೇಟ್ ತಂತ್ರಜ್ಞಾನದ ನಶೆಯನ್ನು ನಮಗೆಲ್ಲಾ ಕುಡಿಸಲಾಗಿದೆ. ಈ ದುರಂತ ನಾಟಕದ ಮುಂದುವರಿದ ಭಾಗವಾಗಿ ಶುದ್ಧ ಇಂಧನ, ಶುದ್ಧ ತಂತ್ರಜ್ಞಾನಗಳ ಹೆಸರಿನಲ್ಲಿ ಮತ್ತೆ ಅದೇ ಕಾರ್ಪೊರೇಟ್‌ಗಳು ಹೊಸಹೊಸ ಸಂಶೋಧನೆಗಳಿಗೆ ಹಣಹೂಡತೊಗಿವೆ. ಈ ಚಕ್ರವ್ಯೆಹದಿಂದ ಹೊರಬರಲು ಸಾಧ್ಯವೇ? ಪ್ರಪಂಚದ ಎಲ್ಲಾ ದೇಶಗಳ ರಾಜಕೀಯ ವ್ಯವಸ್ಥೆಗಳೂ ಕಾರ್ಪೊರೇಟ್‌ಗಳ ಹಿಡಿತದಲ್ಲಿರುವಾಗ ಸರಕಾರಗಳ ಬೆಂಬಲವನ್ನಂತೂ ನಿರೀಕ್ಷಿಸಲಾಗುವುದಿಲ್ಲ. ಹಾಗಾಗಿ ಜನಸಾಮಾನ್ಯರೇ ಜಾಗತೀಕರಣಗೊಂಡಿರುವ ಕಾರ್ಪೊರೇಟ್ ವಿಜ್ಞಾನ ತಂತ್ರಜ್ಞಾನಗಳನ್ನು ತಿರಸ್ಕರಿಸಬೇಕಾಗಿದೆ. ಸಂಶೋಧನೆಗಳು ಆಯಾಯ ಪ್ರದೇಶಗಳ ಅಗತ್ಯವನ್ನಾಧರಿಸಿ ಜನರ ಮಧ್ಯೆಯೇ ನಡೆಯಬೇಕಾಗಿದೆ. ಸಂಪನ್ಮೂಲಗಳನ್ನು ಕೂಡ ಪ್ರಾದೇಶಿಕವಾಗಿಯೇ ಹೊಂದಿಸಿಕೊಳ್ಳಬೇಕು. ಒಟ್ಟಾರೆಯಾಗಿ ಎಲ್ಲವೂ ವಿಕೇಂದ್ರೀಕರಣಗೊಂಡು ‘‘ಸಣ್ಣದು ಸುಂದರ’’ ಎನ್ನುವಂತಾಗಬೇಕು. ಶಿಲಾಯುಗದ ಮಾದರಿಯನ್ನು ಇವತ್ತಿನ ಅಗತ್ಯಗಳಿಗೆ ಅಳವಡಿಸಿಕೊಳ್ಳಬೇಕು 

Writer - ನಡಹಳ್ಳಿ ವಸಂತ್, ಶಿವಮೊಗ್ಗ

contributor

Editor - ನಡಹಳ್ಳಿ ವಸಂತ್, ಶಿವಮೊಗ್ಗ

contributor

Similar News