ಬೆಂಗಳೂರು: ಐಎಂಎ ಮಾದರಿ ಮತ್ತೊಂದು ವಂಚನೆ; ನಾಲ್ವರ ಬಂಧನ

Update: 2021-09-11 16:56 GMT

ಬೆಂಗಳೂರು, ಸೆ.11: ಐಎಂಎ ಬಹುಕೋಟಿ ವಂಚನೆ ಮಾದರಿಯಲ್ಲಿ ನಗರದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಇಲ್ಲಿನ ತಿಲಕ್ ನಗರ ಠಾಣಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ತಿಲಕ್ ನಗರದಲ್ಲಿ ಇಕ್ರಾ ವೆಲ್ತ್ ಮ್ಯಾನೇಜ್ಮೆಂಟ್ ಹೆಸರಿನಲ್ಲಿ ಕಂಪೆನಿ ತೆರೆದಿದ್ದ ಅಬ್ದುಲ್ ನಝೀಮ್, ಹಿದಾಯತ್ ವುಲ್ಲಾ, ನಜೀಮ್, ಅಲಿಂ ಎಂಬುವವರು ಬಂಧಿತರು ಎಂದು ತಿಳಿದುಬಂದಿದೆ.

ತಿಲಕ್ ನಗರದ ಸ್ವಾಗತ್ ರಸ್ತೆಯಲ್ಲಿ ಇಕ್ರಾ ವೆಲ್ತ್ ಮ್ಯಾನೇಜ್ಮೆಂಟ್ ಎಂಬ ಕಂಪೆನಿ ತೆರೆದಿದ್ದ ಆರೋಪಿಗಳು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣ ಹೂಡಿಕೆ ಮಾಡಿದರೆ ಶೇ.15 ರಿಂದ 30ರಷ್ಟು ಬಡ್ಡಿ ಕೊಡುವುದಾಗಿ ನಂಬಿಸಿದ್ದರು. ಜನರು ಹೂಡಿಕೆ ಮಾಡುವ ಹಣವನ್ನು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಮಾಡಿಕೊಡುವ ಆಸೆ ಹುಟ್ಟಿಸಿದ್ದರು ಎನ್ನಲಾಗಿದೆ.

ಇದನ್ನು ನಂಬಿದ್ದ ಜನರು ತಲಾ 5 ಲಕ್ಷ ರೂ.ದಿಂದ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿದ ಆರು ತಿಂಗಳ ಬಳಿಕ, ಒಂದು ವರ್ಷವಾದರೂ ಅಸಲು, ಬಡ್ಡಿಯನ್ನೂ ನೀಡಿಲ್ಲ ಎನ್ನಲಾಗಿದೆ.ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಗುಲಾಬ್ ಅವರು ನೀಡಿದ ದೂರಿನ ಮೇರೆಗೆ ತಿಲಕ್ ನಗರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ ಇಕ್ರಾ ಕಂಪೆನಿಯ ಅಬ್ದುಲ್ ನಾಝೀಮ್ ಸೇರಿ ನಾಲ್ವರ ವಿರುದ್ಧ ಬಡ್ಸ್ ಕಾಯ್ದೆ- 2019, ಸೆಕ್ಷನ್ 9 ಕೆಪಿಐಡಿ ಕಾಯ್ದೆ ಹಾಗೂ ಐಪಿಸಿ 506, 420 ಅಡಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

 ಸಂಪರ್ಕಿಸಲು ಸಂತ್ರಸ್ತರಿಗೆ ಮನವಿ

ವಂಚನೆಗೆ ಒಳಗಾಗಿರುವ ಸಂತ್ರಸ್ತರು ತಿಲಕ್ ನಗರ ಪೊಲೀಸ್ ಠಾಣೆಗೆ ಸಂಪರ್ಕಿಸಿ, ದಾಖಲೆ ಸಲ್ಲಿಸುವಂತೆ ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News