ಜಯನಗರ ಕೆಎಸ್ಸಾರ್ಟಿಸಿ ಆಸ್ಪತ್ರೆಯ 48 ಹಾಸಿಗೆಗಳ ನೂತನ ಆರೋಗ್ಯ ಘಟಕ ಲೋಕಾರ್ಪಣೆ

Update: 2021-09-12 16:18 GMT

ಬೆಂಗಳೂರು, ಸೆ. 12: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಡಿಯಲ್ಲಿ ಪುನಶ್ಚೇತನಗೊಂಡಿರುವ ಜಯನಗರದ ಕೆಎಸ್ಸಾರ್ಟಿಸಿ ಆಸ್ಪತ್ರೆಯ 48 ಹಾಸಿಗೆಗಳ ಸಾಮಥ್ರ್ಯದ ಆರೋಗ್ಯ ಘಟಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು, ಸಂಸದ ತೇಜಸ್ವಿ ಸೂರ್ಯ ಸಮ್ಮುಖದಲ್ಲಿ ರವಿವಾರ ಲೋಕಾರ್ಪಣೆಗೊಳಿಸಲಾಯಿತು.

ಕೋವಿಡ್-19 ಸಾಂಕ್ರಾಮಿಕದ ಪರಿಣಾಮಕಾರಿ ನಿರ್ವಹಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ 10 ಎಚ್‍ಡಿಯು ಮತ್ತು 38 ಜನರಲ್ ಬೆಡ್ ಸೌಲಭ್ಯವುಳ್ಳ ಆರೋಗ್ಯ ಘಟಕವನ್ನು ಬೆಂಗಳೂರು ದಕ್ಷಿಣ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಡಿಯಲ್ಲಿ ಹಾಗೂ ಎಂಬೆಸಿ(ಖಇIಖಿ), ಪೇಟಿಎಂ, ರೌಂಡ್ ಟೇಬಲ್ ಇಂಡಿಯಾ, ಎಸ್.ವಿ.ಜಿ.ಬ್ಯಾಂಕ್, ಯಾಹೂ ಎಂಪ್ಲಾಯೀಸ್ ಫೌಂಡೇಶನ್ ಸಂಸ್ಥೆಗಳ ಸಿ.ಎಸ್.ಆರ್ ನಿಧಿಯ ಸಹಯೋಗದಲ್ಲಿ ಆರಂಭಿಸಲಾಗಿದ್ದು, ಇದರೊಂದಿಗೆ ಮಹೀಂದ್ರಾ ಸಂಸ್ಥೆಯು ಉನ್ನತ ದರ್ಜೆಯ ಸೌಲಭ್ಯಗಳನ್ನು ಹೊಂದಿರುವ 3 ಆಂಬ್ಯುಲೆನ್ಸ್ ಒದಗಿಸಿರುವುದು ಶ್ಲಾಘನೀಯ.

48 ಹಾಸಿಗೆ ಸಾಮಥ್ರ್ಯದ ಆರೋಗ್ಯ ಘಟಕವನ್ನು ಲೋಕಾರ್ಪಣೆಗೊಳಿಸಿದ ನಂತರ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ರಾಜ್ಯ ಸರಕಾರವು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಒದಗಿಸಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಿದ್ದು, ಕೋವಿಡ್ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯಲ್ಲಿ 2 ಕೇಂದ್ರಗಳಲ್ಲಿ (ಜಯನಗರ ಜನರಲ್ ಆಸ್ಪತ್ರೆ ಐ.ಸಿ.ಯು ಸೌಲಭ್ಯ ಹಾಗೂ ಕೆಎಸ್ಸಾರ್ಟಿಸಿ ಆಸ್ಪತ್ರೆಯಲ್ಲಿನ 48 ಹಾಸಿಗೆಗಳ ನೂತನ ಘಟಕಗಳು) ಪ್ರಾರಂಭಿಸಿರುವುದು ಗಮನಾರ್ಹ ಎಂದರು.

ಜಯನಗರದ ಕೆಎಸ್ಸಾರ್ಟಿಸಿ ಆಸ್ಪತ್ರೆಯು ಸಂಸದರ ನಿಧಿ (35 ಲಕ್ಷ ರೂ.) ಸಿಎಸ್‍ಆರ್ ನಿಧಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ವಿಭಾಗ ಒದಗಿಸಿರುವ 64 ಲಕ್ಷ ರೂ.ಗಳ ಅನುದಾನ ಬಳಸಿಕೊಂಡು ಅಭಿವೃದ್ಧಿ ಪಡಿಸಲಾಗಿದ್ದು, ಯಾಹೂ ಎಂಪ್ಲಾಯೀಸ್ ಫೌಂಡೇಶನ್ ವತಿಯಿಂದ 63 ಲಕ್ಷ ರೂ.ಗಳ ಸಿ.ಎಸ್.ಆರ್ ನಿಧಿಯ ಅಡಿಯಲ್ಲಿ. ಒದಗಿಸಲಾಗಿರುವ ಪೇಶಂಟ್ ಮಾನಿಟರ್, ಎಚ್.ಎಫ್.ಎನ್.ಸಿ ಮಶೀನ್ ಗಳು  ಹಾಗೂ ಇತರ ವೈದ್ಯಕೀಯ ಸಲಕರಣೆಗಳನ್ನು ಒದಗಿಸಿದೆ ಎಂದು ಅವರು ಹೇಳಿದರು.

ಪೇಟಿಎಂ ಫೌಂಡೇಶನ್ ವತಿಯಿಂದ 50 ಲಕ್ಷ ರೂ.ಗಳ ವೆಚ್ಚದಲ್ಲಿ 500 ಲೀಟರ್/ಪ್ರತೀ ನಿಮಿಷ ಸಾಮಥ್ರ್ಯದ ಆಕ್ಸಿಜನ್ ಘಟಕ ಸ್ಥಾಪಿಸಲಾಗಿದೆ. ಇದರೊಂದಿಗೆ ಎಸ್.ವಿ.ಸಿ ಬ್ಯಾಂಕ್ ವತಿಯಿಂದ 28 ಲಕ್ಷ ರೂ.ಗಳ ಅನುದಾನದಲ್ಲಿ ಪಿ.ಪಿ.ಇ ಕಿಟ್ ಗಳು, ಮಾಸ್ಕ್ ಗಳು ಹಾಗೂ ಇತರ ಸಂರಕ್ಷಣಾ ಸಾಧನಗಳನ್ನು ಕೆಎಸ್ರ್ಸಾಟಿಸಿ ಆಸ್ಪತ್ರೆ ಸಿಬ್ಬಂದಿ ಹಾಗೂ ಬೆಂಗಳೂರು ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಒದಗಿಸಿದ್ದಾರೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.

ಮಹೀಂದ್ರಾ ಸಂಸ್ಥೆಯು 3 ಸುಸಜ್ಜಿತ ಆಂಬ್ಯುಲೆನ್ಸ್ ಗಳನ್ನು ವೈದ್ಯಕೀಯ ಸೇವೆಗೆ ಬಳಸಿಕೊಳ್ಳಲು ನೀಡಿದ್ದು, ತಲಾ 10 ಲೀಟರ್ ಸಾಮಥ್ರ್ಯವುಳ್ಳ 4 ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು  ಒದಗಿಸಿರುವುದು ಅನುಕರಣೀಯ. ಈ 48 ಬೆಡ್ ಸಾಮಥ್ರ್ಯವುಳ್ಳ ಘಟಕದ ಸೇವೆಯನ್ನು ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, ಸರಕಾರದೊಂದಿಗೆ ಕಾರ್ಪೊರೇಟ್ ಸಂಸ್ಥೆಗಳು ಸಹ ಸಾರ್ವಜನಿಕರ ಸೇವೆಗೆ ಜೊತೆಗೂಡಿರುವುದು ಶ್ಲಾಘನೀಯ ಎಂದು ಅವರು ವಿವರಿಸಿದರು. ಈ ಸಂದರ್ಭದಲ್ಲಿ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News