ಬೆಂಗಳೂರು: ಸರಕಾರದ ಸೂಕ್ತ ಭರವಸೆ; ಪ್ರತಿಭಟನೆ ಹಿಂಪಡೆದ ರೈತರು

Update: 2021-09-13 15:38 GMT

ಬೆಂಗಳೂರು, ಸೆ.13: ವಿವಾದಿತ ಕೃಷಿ ಕಾಯ್ದೆಗಳನ್ನು ಅನುಷ್ಠಾನಗೊಳಿಸದೆ ರಾಜ್ಯ ಸರಕಾರ ಹಿಂಪಡೆಯಬೇಕೆಂದು ಆಗ್ರಹಿಸಿ ಕೈಗೊಂಡಿದ್ದ ಬೃಹತ್ ಪ್ರತಿಭಟನೆಯನ್ನು ರೈತರು ಸೋಮವಾರ ಹಿಂಪಡೆದರು.

ಕೇಂದ್ರ ಸರಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಬಾರದೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಇಲ್ಲಿನ ಸಿಟಿ ರೈಲ್ವೇ ನಿಲ್ದಾಣದಿಂದ ಬೃಹತ್ ರ್ಯಾಲಿ ಮೂಲಕ ವಿಧಾನಸೌಧ ಮುತ್ತಿಗೆ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಪ್ರತಿಭಟನಾಕಾರರನ್ನು ಭೇಟಿಯಾದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ತಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದೆಂದು ವಿಶ್ವಾಸ ವ್ಯಕ್ತಪಡಿಸಿದರು. ತದನಂತರ, ಕೋಡಿಹಳ್ಳಿ ಚಂದ್ರಶೇಖರ್, ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಪ್ರಕಟಿಸಿದರು.

ಇದಕ್ಕೂ ಮುನ್ನ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಕೇಂದ್ರ ಸರಕಾರವು ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿರುವ ಪರಿಣಾಮ ಬಿಜೆಪಿ ಆಡಳಿತದಲ್ಲಿರುವ 16 ರಾಜ್ಯಗಳ ಪೈಕಿ ಕರ್ನಾಟಕ ಬಿಜೆಪಿ ಸರಕಾರವು, ಕೇಂದ್ರದ ಕಾಯ್ದೆಗಳನ್ನು ಅನುಷ್ಠಾನಗೊಳಿಸಲು ಜಾರಿಗೆ ತಂದ ಸುಗ್ರಿವಾಜ್ಞೆಯನ್ನು ವಿಧಾನಸಭೆಯಲ್ಲಿ ಅಂಗೀಕಾರ ಮಾಡಿ ಕಾನೂನು ಮಾಡುವಲ್ಲಿ ಮುಂದಾಗಿರುವ ಕ್ರಮ ಸರಿಯಲ್ಲ ಎಂದರು.

ಅಲ್ಲದೆ, ಇದೇ ಬೇಡಿಕೆ ಇಟ್ಟುಕೊಂಡು ಸೆ.27ಕ್ಕೆ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಚಳುವಳಿಗೆ ರಾಜ್ಯದ ರೈತ, ಕಾರ್ಮಿಕ, ಮಹಿಳಾ ಸಂಘಟನೆಗಳೂ ಕೈ ಜೋಡಿಸಲಿದ್ದಾರೆ ಎಂದು ಅವರು ಹೇಳಿದರು.

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಗಡಿ ಭಾಗಗಳಲ್ಲಿ ಕೇಂದ್ರದ ಸುಗ್ರೀವಾಜ್ಞೆ ವಿರೋಧಿಸಿ 9 ತಿಂಗಳಾದರೂ ಸತ್ಯಾಗ್ರಹ ಮುಂದುವರೆದಿದ್ದು, ಕೇಂದ್ರ ಸರಕಾರ ಸುಗ್ರೀವಾಜ್ಞೆ ವಾಪಾಸ್ಸು ಪಡೆಯಬೇಕೆಂದು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸರಕಾರ ಕೇವಲ ನೋಡುತ್ತಾ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲದೆ, ಸುಪ್ರೀಂಕೋರ್ಟ್ ಸಹ ಮಧ್ಯಪ್ರವೇಶಿಸಿ ರೈತರ ಜೊತೆ ಮುಕ್ತವಾಗಿ ಮಾತನಾಡಲು ತಿಳಿಸಿದೆ. ಒಂದೂವರೆ ತಿಂಗಳ ಕಾಲ ಎಲ್ಲ ತಟಸ್ಥಗೊಳಿಸಲು ಸುಪ್ರೀಂ ಕೋರ್ಟ್ ತಿಳಿಸಿತು. ನಂತರ ಸಮಿತಿ ನೇಮಕ ಮಾಡಿತು. ಆದರೆ, ಈ ಸಮಿತಿಯಲ್ಲಿ ರೈತರಿಲ್ಲ. ಹೀಗಾಗಿ, ಇದನ್ನು ನಾವು ಒಪ್ಪುವುದಿಲ್ಲ ಎಂದು ಅವರು ಹೇಳಿದರು.

ಈಗಾಗಲೇ ಮಾರುಕಟ್ಟೆಯೊಳಗೆ 80ರಷ್ಟು ವ್ಯಾಪಾರ-ವಹಿವಾಟುಗಳು ನಡೆಯುತ್ತಿಲ್ಲ. ಮಾರುಕಟ್ಟೆಯ ಹೊರಗೆ ವಹಿವಾಟು ನಡೆಯುತ್ತಿದೆ. ಇದರಿಂದ ಸರಕಾರಕ್ಕೆ ತೆರಿಗೆಯೂ ಬರುವುದಿಲ್ಲ ಎಂದ ಅವರು, ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ಈಗಾಗಲೇ ಭೂಮಿ ಖರೀದಿ ಪ್ರಕ್ರಿಯೆ ಪ್ರಾರಂಭ ಆಗಿ, ರೈತರ ಭೂಮಿಗೆ ಗಂಡಾಂತರ ಎದುರಾಗಿದೆ ಎಂದು ಕೋಡಿಹಳ್ಳಿ ಆರೋಪಿಸಿದರು.

ರೈತರೊಂದಿಗೆ ಸಿಎಂ ಮುಕ್ತ ಚರ್ಚೆ: ಸೋಮಶೇಖರ್

ಕೃಷಿ ಸಂಬಂಧ ಸಮಸ್ಯೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಲಿದ್ದು, ಈ ಬಗ್ಗೆ ರೈತರೊಂದಿಗೆ ಮುಕ್ತ ಚರ್ಚೆ ನಡೆಸಲಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಪ್ರತಿಭಟನೆ ನಿರತ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಮುಖ್ಯಮಂತ್ರಿ ಆಗಮಿಸುವುದು ತಡವಾಗಲಿದೆ. ಗುಜರಾತ್‍ನಿಂದ ಬಂದ ತಕ್ಷಣ ರೈತರನ್ನು ಸಂಪರ್ಕಿಸುತ್ತೇನೆ ಎಂದಿದ್ದಾರೆ. ಸ್ವತಃ ನಾನೇ ಚರ್ಚೆಗೆ ಸಮಯ ನಿಗದಿಪಡಿಸುತ್ತೇನೆ ಎಂದು ತಿಳಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಇಂದಿನ ಚಳವಳಿಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ. ಆದರೆ ಕೃಷಿಕಾಯ್ದೆ ವಾಪಾಸು ಆಗುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಗಿ ಬಂದೋಬಸ್ತ್

ರೈತರ ಪ್ರತಿಭಟನೆ ಹಿನ್ನೆಲೆ ಇಲ್ಲಿನ ಫ್ರೀಡಂಪಾರ್ಕ್, ವಿಧಾನಸೌಧ ಸುತ್ತಲೂ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News