ಅರಿವು ಶೈಕ್ಷಣಿಕ ಸಾಲ ನವೀಕರಣ ನಿಲ್ಲಿಸಿದ ಕೆಎಂಡಿಸಿ: ಸಂಕಷ್ಟದಲ್ಲಿ ವಿದ್ಯಾರ್ಥಿಗಳು

Update: 2021-09-13 18:07 GMT
ದೀ ಹಿಂದೂ ಪತ್ರಿಕೆಯ ಮುಖಪುಟ ವರದಿ

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC) ಅರಿವು ಯೋಜನೆಯಡಿ ವಿದ್ಯಾರ್ಥಿ ಸಾಲ ನವೀಕರಣಗಳನ್ನು ಹಠಾತ್ತನೆ ನಿಲ್ಲಿಸಿದೆ. ಇದರಿಂದ ರಾಜ್ಯದಾದ್ಯಂತ ಅಲ್ಪಸಂಖ್ಯಾತ ಸಮುದಾಯಗಳ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಿಂದ ಹೊರಗುಳಿಯುವಂತಾಗಿದೆ. ಈ ಬಗ್ಗೆ ದೀ ಹಿಂದೂ ಪತ್ರಿಕೆ ಸೋಮವಾರ ರಿಷಿಕೇಶ್ ಬಹದ್ದೂರ್ ದೇಸಾಯಿ ಅವರ ಮುಖಪುಟ ವರದಿ ಪ್ರಕಟಿಸಿದೆ. 

ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದ ಅನುದಾನ ಕಡಿಮೆಯಾಗಿರುವುದು ಇದಕ್ಕೆ ಕಾರಣ ಎಂದು ನಿಗಮ  ಹೇಳಿದೆ ಎಂದು ವರದಿ ತಿಳಿಸಿದೆ.

ರಾಜ್ಯಾದ್ಯಂತ ಹಲವಾರು ವಿದ್ಯಾರ್ಥಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಪತ್ರ ಬರೆದು ಈ ಯೋಜನೆಯನ್ನು ಸ್ಥಗಿತಗೊಳಿಸುವ ಸರ್ಕಾರಿ ನಿಗಮದ ನಿರ್ಧಾರದ ವಿರುದ್ಧ ದೂರು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಟ್ಯಾಗ್ ಮಾಡುವ ಮೂಲಕ ಕೆಲವು ವಿದ್ಯಾರ್ಥಿಗಳು ಆನ್‌ಲೈನ್ ಅಭಿಯಾನವನ್ನು ಆರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ.

 'ವಾರ್ತಾಭಾರತಿʼ ಈ ವರ್ಷ ಜನವರಿ ತಿಂಗಳಿನಲ್ಲೇ ಈ ಕುರಿತಾದಂತೆ ವಿಸ್ತೃತವಾದ ವರದಿಯನ್ನು ಪ್ರಕಟಿಸಿತ್ತು ( ಅದರ ಪ್ರತಿ ಇಲ್ಲಿದೆ).

ಉಡುಪಿಯ ಕಾಲೇಜಿನಲ್ಲಿ ವೈದ್ಯಕೀಯ ಕೋರ್ಸ್ ಓದುತ್ತಿರುವ ಬೆಳಗಾವಿಯ ವಿದ್ಯಾರ್ಥಿ ಮುಹಮ್ಮದ್ ಮುಸ್ತಫಾ, "ನಾನು ಶುಲ್ಕ ಪಾವತಿಸಲು ಸಾಧ್ಯವಾಗದ ಕಾರಣ, ಎಂಬಿಬಿಎಸ್ ಕೋರ್ಸ್‌ನಿಂದ ಹೊರಗುಳಿಯುವಂತೆ ಒತ್ತಡ ಹಾಕಲಾಗುತ್ತಿದೆ. ಕೆಎಂಡಿಸಿಯಿಂದ ನೆರವು ಬಂದ ನಂತರ ನಾನು ಕೋರ್ಸ್‌ಗೆ ಸೇರಿಕೊಂಡೆ. ಇದು ಎಂಬಿಬಿಎಸ್ ನ ಮೊದಲ ವರ್ಷದಲ್ಲಿ ನನ್ನ ಶುಲ್ಕವನ್ನು ಪಾವತಿಸಲು ಸಹಾಯ ಮಾಡಿತು. ಆದರೆ ಕೆಎಂಡಿಸಿ ಎರಡು ಸೆಮಿಸ್ಟರ್‌ಗಳ ಹಿಂದೆ ಸಾಲದ ಕಂತುಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿತು. ಈಗ ನಾನು ಕಾಲೇಜು ಬಿಡುವ ಬಗ್ಗೆ ಯೋಚಿಸುತ್ತಿದ್ದೇನೆ" ಎಂದು ಅವರು ಹೇಳಿದರು.

"ಈ ಯೋಜನೆಯ ನಿಯಮಗಳನ್ನು ಗಮನಿಸಿದರೆ ಇದಕ್ಕೆ ಆಯ್ಕೆಯಾದ ಪ್ರತಿಯೋರ್ವ ವಿದ್ಯಾರ್ಥಿಯೂ ಪ್ರತಿಭಾವಂತನೆಂಬುವುದು ಸ್ಪಷ್ಟವಾಗಿದೆ. ಅಂತ ವಿದ್ಯಾರ್ಥಿಗಳು ವೃತ್ತಿಪರ ಮತ್ತು ಇತರ ಕಾಲೇಜುಗಳ ದುಬಾರಿ ಕೋರ್ಸ್‌ ಗಳಿಗೆ ರಾಜ್ಯ ಸರಕಾರದ ನೆರವಿನಿಂದ ಮಾತ್ರ ಸೇರಬಹುದಾಗಿದೆ. ಆದರೆ ಈಗ ಹಠಾತ್ತನೆ ಹಣ ನೀಡುವುದನ್ನು ನಿಲ್ಲಿಸಿದ ಬಳಿಕ ಫಲಾನುಭವಿಗಳು ಬೀದಿಗೆ ಬಿದ್ದಂತಾಗಿದ್ದಾರೆ. ಹಲವರು ಈಗಾಗಲೇ ಕೋರ್ಸ್‌ ಗಳನ್ನು ಬಿಟ್ಟು ಸಿಕ್ಕ ಕೆಲಸಕ್ಕೆ ತೆರಳುತ್ತಿದ್ದಾರೆ" ಎಂದು ಮುಸ್ತಫಾ ಹೇಳಿದ್ದಾಗಿ ವರದಿ ತಿಳಿಸಿದೆ.

ಅರಿವು ಶಿಕ್ಷಣ ಸಾಲ ಯೋಜನೆಯಡಿ, ಈಗಾಗಲೇ ಸಲ್ಲಿಸಿದ ನವೀಕರಣ ಅರ್ಜಿಗಳನ್ನು ಮಾತ್ರ 2021-22ರ ಅವಧಿಯಲ್ಲಿ ಮಂಜೂರಿಗೆ ಪರಿಗಣಿಸಲಾಗುವುದು ಎಂದು ಕೆಎಂಡಿಸಿ ವೆಬ್‌ಸೈಟ್ ಹೇಳುತ್ತದೆ. ಏಕೆಂದರೆ ಕೋವಿಡ್ -19 ಪರಿಸ್ಥಿತಿಯಿಂದ ಅನುದಾನವನ್ನು ಕಡಿಮೆ ಮಾಡಲಾಗಿದೆ ಮತ್ತು ಹೊಸ ಅರ್ಜಿಗಳನ್ನು ಆಹ್ವಾನಿಸಲಾಗುವುದಿಲ್ಲ ಎಂದೂ ಅದು ತಿಳಿಸಿದೆ

"ನಾನು 2017ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಇನ್ನೂ ಮಂಜೂರು ಪ್ರಕ್ರಿಯೆಗೆ ತೆಗೆದುಕೊಂಡಿಲ್ಲ. ನಿಗಮವು ಹೊಸ ಅರ್ಜಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ, ಅಸಂಖ್ಯಾತ ಪ್ರತಿಭಾವಂತ ವಿದ್ಯಾರ್ಥಿಗಳ ಕನಸುಗಳನ್ನು ಭಗ್ನಗೊಳಿಸಿದೆ. ಇದು ಒಂದು ಕಲ್ಯಾಣ ರಾಜ್ಯದಲ್ಲಿ ಸ್ವೀಕಾರಾರ್ಹವಾದದ್ದಲ್ಲ ಎಂದು ಬೀದರ್‌ ನ ಇಂಜಿನಿಯರಿಂಗ್‌ ವಿದ್ಯಾರ್ಥಿ ಜೋಶುವಾ ಜಾನ್ಸನ್‌ ಹೇಳಿದ್ದಾರೆ.

ಸರಕಾರದ ಈ ನಿರ್ಧಾರದಿಂದಾಗಿ 30,000ದಿಂದ 50,000 ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿಗೆ ಕಳುಹಿಸಿ ಅವರು ಉನ್ನತ ವಿದ್ಯಾಭ್ಯಾಸವನ್ನು ಮುಂದುವರಿಸಲು ನೆರವಾಗಬೇಕು ಎಂದು ನಾನು ಕೆಎಂಡಿಸಿಯನ್ನು ವಿನಂತಿಸುತ್ತೇನೆ ಎಂದು ಅವರು ಹೇಳಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News