ಪುರಸಭಾ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆ: ಸಚಿವ ಎಂಟಿಬಿ ನಾಗರಾಜ್

Update: 2021-09-14 16:51 GMT

ಬೆಂಗಳೂರು, ಸೆ.14: ರಾಜ್ಯದ ಪುರಸಭಾ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ ಅನುಕೂಲವಾಗಲು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಕಾಲ ಕಾಲಕ್ಕೆ ಸರಕಾರ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜು ಹೇಳಿದ್ದಾರೆ. 

ವಿಧಾನ ಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಆರ್.ಧರ್ಮಸೇನ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪುರಸಭೆಗಳಿಗೆ ಎಸ್‍ಎಂಸಿ ಮುಕ್ತ ನಿಧಿ ಅನುದಾನ, ಕುಡಿಯುವ ನೀರಿನ ಅನುದಾನ, ವಿಶೇಷ ಅನುದಾನ, ಸ್ವಚ್ಛ ಭಾರತ ಯೋಜನೆ, 14-15ನೆ ಹಣಕಾಸು ಯೋಜನೆ ಅನುದಾನ ಹಾಗೂ ನಗರೋತ್ಥಾನ 3ನೆ ಹಂತದ ಯೋಜನೆಯಡಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.

ಈ ಅನುದಾನಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಿಶೇಷ ಅನುದಾನ ನೀಡುತ್ತಿಲ್ಲ. ನಗರೋತ್ಥಾನ 3ನೆ ಹಂತದ ಅನುದಾನ ಮುಕ್ತಾಯವಾಗಿದ್ದು, ಹಲವು ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಿರುವ ಹಿನ್ನೆಲೆಯಲ್ಲಿ ಅವುಗಳಿಗೆ ತಕ್ಕಂತೆ ಅನುದಾನ ಬಿಡುಗಡೆ ಮಾಡಲು 4ನೆ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಹಣಕಾಸು ಇಲಾಖೆಯೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು. 

2020-21ನೆ ಸಾಲಿನಲ್ಲಿ 15ನೆ ಹಣಕಾಸು ಆಯೋಗದ ಅಡಿ 238.64 ಕೋಟಿ ಹಂಚಿಕೆ ಮಾಡಿ ಬಿಡುಗಡೆ ಮಾಡಲಾಗಿದೆ. 2021-22ನೆ ಸಾಲಿನಲ್ಲಿ 178.33 ಕೋಟಿ ಹಂಚಿಕೆ ಮಾಡಿ, ಅದರಲ್ಲಿ ಮೊದಲ ಕಂತಿನ ಅನುದಾನವಾಗಿ 35.66 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು. ನಗರೋತ್ಥಾನ 3ನೆ ಹಂತದ ಯೋಜನೆಯಡಿ ರಾಜ್ಯದ 15 ಪುರಸಭೆಗಳಿಗೆ ಮೂಲ ಸೌಲಭ್ಯ ಕಲ್ಪಿಸಲು 2016-17 ರಿಂದ 629.87 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News