ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಫ್ಲೈಓವರ್ ನಲ್ಲಿ ಅಪಘಾತ; ಇಬ್ಬರು ಮೃತ್ಯು

Update: 2021-09-15 04:22 GMT

ಆನೇಕಲ್, ಸೆ.14: ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಮೇಲೆ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಮಿಳುನಾಡು ಮೂಲದ ಟೆಕ್ಕಿಗಳಿಬ್ಬರು ಫ್ಲೈಓವರ್ ನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತಮಿಳುನಾಡಿನ ನಿವಾಸಿಗಳಾದ ಪ್ರೀತಮ್ (30) ಹಾಗೂ 28 ವರ್ಷದ ಯುವತಿಯೊಬ್ಬಳು ಮೃತಪಟ್ಟವರು. ಇವರಿಬ್ಬರೂ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.

ಆನೇಕಲ್ ತಿರುಪಾಳ್ಯದ  ನಿವಾಸಿ ನಿತೇಶ್ (23) ಎಂಬವರು ಚಲಾಯಿಸುತ್ತಿದ್ದ ಕಾರು ಪ್ರೀತಮ್ ಮತ್ತು ಯುವತಿ ಸಂಚರಿಸುತ್ತಿದ್ದ ಬೈಕಿಗೆ ಢಿಕ್ಕಿ ಹಿಂದಿನಿಂದ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ರಾತ್ರಿ 9:20ರ ಸುಮಾರಿಗೆ ನಿತೇಶ್  ತನ್ನ ಕಾರಿನಲ್ಲಿ ಸಿಲ್ಕ್ ಬೋರ್ಡ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಮಾರ್ಗವಾಗಿ ಸಂಚರಿಸುತ್ತಿದ್ದು, ಈ ವೇಳೆ ಎಲಿವೇಟೆಡ್ ಫ್ಲೈಓವರ್ ಮೇಲೆ ನಿಯಂತ್ರಣ ತಪ್ಪಿ ಎದುರಿನಲ್ಲಿ ಹೋಗುತ್ತಿದ್ದ ಪ್ರೀತಮ್ ರ ಬೈಕಿಗೆ ಢಿಕ್ಕಿಯಾಗಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಬೈಕಿನಲ್ಲಿದ್ದ ಪ್ರೀತಮ್ ಮತ್ತು ಯುವತಿ ಫ್ಲೈ ಓವರ್ ನಿಂದ ಕೆಳಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರು ಚಾಲಕ  ನಿತೇಶ್ ಗೂ  ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.

ಅತೀ ವೇಗ ಹಾಗೂ ನಿರ್ಲಕ್ಷ್ಯದ ಕಾರು ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಆರೋಪಿ ಕಾರು ಚಾಲಕ  ನಿತೇಶ್ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News