ಜಮ್ಮು-ಕಾಶ್ಮೀರದ ವಾಸಸ್ಥಳ ಪ್ರಮಾಣಪತ್ರಕ್ಕೆ ಕೆಲವೇ ಜನರಿಂದ ಬೇಡಿಕೆ, ಗಡುವು ವಿಸ್ತರಿಸಿದ ಸರಕಾರ

Update: 2021-09-15 08:15 GMT
Photo: Indianexpress

ಜಮ್ಮು, ಸೆ.14: ವರ್ಷಗಳ ಹಿಂದೆ ಆಗಿನ ಜಮ್ಮು-ಕಾಶ್ಮೀರ ರಾಜ್ಯವನ್ನು ತೊರೆದಿದ್ದ ಮಾಜಿ ನಿವಾಸಿಗಳು ಅಥವಾ ಅವರ ಪೀಳಿಗೆ ಜಮ್ಮುವಿನಲ್ಲಿರುವ ಪರಿಹಾರ ಮತ್ತು ಪುನರ್ವಸತಿ ಆಯುಕ್ತರ (ವಲಸಿಗರು) ಕಚೇರಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡರೆ ವಾಸಸ್ಥಳ ಪ್ರಮಾಣಪತ್ರವನ್ನು ವಿತರಿಸುವ ಕೊಡುಗೆಯನ್ನು ಈಗಿನ ಕೇಂದ್ರಾಡಳಿತ ಪ್ರದೇಶದ ಆಡಳಿತವು ಮುಂದಿರಿಸಿದೆಯಾದರೂ ಈ ಸೌಲಭ್ಯವನ್ನು ಕೆಲವೇ ಜನರು ಪಡೆದುಕೊಂಡಿದ್ದಾರೆ ಎಂದು indianexpress ವರದಿ ಮಾಡಿದೆ. 

2020, ಮೇ 16ರಂದು ಪ್ರಕಟಿಸಲಾಗಿದ್ದ ಈ ಯೋಜನೆಯ ಗಡುವನ್ನು ಆಡಳಿತವೀಗ 2022, ಮೇ 15ರವರೆಗೆ ವಿಸ್ತರಿಸಿದೆ. ಈ ಗಡುವನ್ನು ಇನ್ನಷ್ಟು ವಿಸ್ತರಿಸುವುದಿಲ್ಲ ಎಂದು ಆಡಳಿತವು ಸ್ಪಷ್ಟಪಡಿಸಿದೆ. ಪರಿಹಾರ ಮತ್ತು ಪುನರ್ವಸತಿ ಆಯುಕ್ತರ ಕಚೇರಿಯು ಇಂತಹ ಕನಿಷ್ಠ 50 ಕುಟುಂಬಗಳು ವಾಸವಾಗಿರುವ ಸ್ಥಳಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಲು ವಿಶೇಷ ಶಿಬಿರಗಳನ್ನು ತೆರೆಯಲೂ ನಿರ್ಧರಿಸಿದೆ. ಇಂತಹ ಒಂದು ಶಿಬಿರವನ್ನು ದಿಲ್ಲಿಯಲ್ಲಿ 15 ದಿನಗಳ ಹಿಂದೆ ಆಯೋಜಿಸಲಾಗಿತ್ತು.

1980ರ ದಶಕದ ಕೊನೆಯ ಭಾಗದಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರವಾದವು ತಲೆಯೆತ್ತಿದ್ದಾಗ ಭಾರೀ ಪ್ರಮಾಣದಲ್ಲಿ ಕಾಶ್ಮೀರಿ ಪಂಡಿತರು ಮತ್ತು ಸಿಕ್ಖರು ಮನೆಮಠಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗಿದ್ದರು. ವಾಸಸ್ಥಳ ಪ್ರಮಾಣಪತ್ರವು ಇಂತಹ ಜನರು ಜಮ್ಮು-ಕಾಶ್ಮೀರದಲ್ಲಿ ಸ್ವಂತ ಭೂಮಿಯನ್ನು ಹೊಂದಲು ಹಾಗೂ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಉದ್ಯೋಗ ಮತ್ತು ಶಿಕ್ಷಣದ ಅವಕಾಶಗಳನ್ನು ಪಡೆಯಲು ನೆರವಾಗುತ್ತದೆ. ಹೀಗಾಗಿ ಅವರು ಈ ಸೌಲಭ್ಯದ ಲಾಭವನ್ನು ಪಡೆದುಕೊಳ್ಳುತ್ತಾರೆ ಎಂದು ಆಡಳಿತವು ಆಶಿಸಿತ್ತು.

ಆದಾಗ್ಯೂ ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಶಿಬಿರಕ್ಕೆ ಜನರ ಪ್ರತಿಕ್ರಿಯೆ ನೀರಸವಾಗಿತ್ತು. 1989ಕ್ಕೆ ಮೊದಲು ದಿಲ್ಲಿಯಲ್ಲಿ ನೆಲೆಸಿರುವ ಅಂದಾಜು 25,000 ಕಾಶ್ಮೀರಿ ಪಂಡಿತ ಕುಟುಂಬಗಳ ಪೈಕಿ ಕೇವಲ 3,000 ಕುಟುಂಬಗಳು ಅರ್ಜಿ ನಮೂನೆಗಳನ್ನು ಪಡೆದುಕೊಂಡಿದ್ದವು. ಈ ಪೈಕಿ 806 ಕುಟುಂಬಗಳು ಶಿಬಿರದಲ್ಲಿ ನೋಂದಾಯಿಸಿಕೊಂಡಿದ್ದು, ಅವರಿಗೆ ಸ್ಥಳದಲ್ಲಿಯೇ ವಾಸಸ್ಥಳ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದ ಪರಿಹಾರ ಆಯುಕ್ತ (ವಲಸಿಗರು) ಅಶೋಕ ಪಂಡಿತ ಅವರು, ಉಳಿದ 2,200 ಕುಟುಂಬಗಳ ಅರ್ಜಿಗಳನ್ನು ಪೂರಕ ದಾಖಲೆಗಳೊಂದಿಗೆ ಮುಂದಿನ ಕ್ರಮಕ್ಕಾಗಿ ಜಮ್ಮುವಿಗೆ ತರಲಾಗುತ್ತಿದೆ ಎಂದರು.

1947ರಲ್ಲಿ ಜಮ್ಮು-ಕಾಶ್ಮೀರದ ಭಾಗವನ್ನು ಪಾಕಿಸ್ತಾನವು ವಶಪಡಿಸಿಕೊಂಡ ಬಳಿಕ ಅಲ್ಲಿಯ ಪ್ರದೇಶಗಳಿಂದ ಭಾರತದ ಇತರ ಸ್ಥಳಗಳಿಗೆ ವಲಸೆ ಹೋಗಿ ನೆಲೆಸಿರುವ ಕುಟುಂಬಗಳ ಪೈಕಿ ಸುಮಾರು 3,300 ಕುಟುಂಬಗಳು ವಲಸಿಗರು ಎಂದು ನೋಂದಾಯಿಸಿಕೊಳ್ಳಲು ಅರ್ಜಿ ನಮೂನೆಗಳಿಗಾಗಿ ಆಯುಕ್ತರ ಕಚೇರಿಯನ್ನು ಸಂಪರ್ಕಿಸಿದ್ದವಾದರೂ,ಕೇವಲ 100 ಕುಟುಂಬಗಳು ಅರ್ಜಿಗಳನ್ನು ಸಲ್ಲಿಸಿವೆ ಎಂದು ವರದಿ ತಿಳಿಸಿದೆ.

ರಾಜಕೀಯ ಪರಿಣಾಮ 

ಜಮ್ಮು-ಕಾಶ್ಮೀರದಲ್ಲಿ ಈಗ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ನಡೆಯುತ್ತಿದ್ದು,ವಲಸೆ ಹೋದವರನ್ನು ಇಲ್ಲಿಯ ನಿವಾಸಿಗಳೆಂದು ಮರುಸೇರ್ಪಡೆ ಮಾಡಿಕೊಂಡರೆ ಅದು ಈ ಕೇಂದ್ರಾಡಳಿತ ಪ್ರದೇಶದಲ್ಲಿ ರಾಜಕೀಯ ಪರಿಣಾಮಗಳನ್ನು ಬೀರುತ್ತದೆ. ಅಧಿಕೃತ ಅಂದಾಜುಗಳಂತೆ ಉಗ್ರವಾದವು ತಲೆಯೆತ್ತಿದ ಬಳಿಕ ಸುಮಾರು 45,000 ಕಾಶ್ಮೀರಿ ಪಂಡಿತ ಕುಟುಂಬಗಳು ಕಣಿವೆಯನ್ನು ತೊರೆದಿರುವುದು ಆಯಕ್ತರ ಕಚೇರಿಯ ದಾಖಲೆಗಳಲ್ಲಿ ನಮೂದಾಗಿದ್ದು,ಅವರನ್ನು ಈಗಾಗಲೇ ಕೇಂದ್ರಾಡಳಿತ ಪ್ರದೇಶದ ಕಾಯಂ ನಿವಾಸಿಗಳೆಂದು ಪರಿಗಣಿಸಲಾಗಿದೆ. ಅದಕ್ಕೂ ಬಳ ಹಿಂದೆಯೇ ವಲಸೆ ತೆರಳಿದ್ದ ಸರಿಸುಮಾರು ಅಷ್ಟೇ ಸಂಖ್ಯೆಯ ಕುಟುಂಬಗಳ ಉಲ್ಲೇಖ ದಾಖಲೆಗಳಲ್ಲಿಲ್ಲ.

ಇದೇ ರೀತಿ ಪಾಕ್ ಆಕ್ರಮಿತ ಕಾಶ್ಮೀರದಿಂದ 41,119 ಹಿಂದು ಮತ್ತು ಸಿಖ್ ಕುಟುಂಬಗಳು ವಲಸೆ ಹೋಗಿವೆ ಎಂದು ಹೇಳಲಾಗಿದ್ದು,ಈ ಪೈಕಿ 31,619 ಕುಟುಂಬಗಳು ಪ್ರಾಂತೀಯ ಪುನರ್ವಸತಿ ಅಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಲ್ಪಟ್ಟಿವೆ ಮತ್ತು 26,319 ಕುಟುಂಬಗಳನ್ನು ಈಗಾಗಲೇ ಜಮ್ಮು-ಕಾಶ್ಮೀರದ ಕಾಯಂ ನಿವಾಸಿಗಳೆಂದು ಪರಿಗಣಿಸಲಾಗಿದೆ. 1950ರ ದಶಕದ ಕೊನೆಯಲ್ಲಿ ಆಗಿನ ಸರಕಾರವು ವಿವಿಧ ಕಾರಣಗಳಿಂದ ಸುಮಾರು 9,500 ಕುಟುಂಬಗಳಿಗೆ ನೋಂದಣಿಯನ್ನು ನಿರಾಕರಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂತಹ ವಲಸಿಗರು ಮತ್ತು ಸ್ಥಳಾಂತರಗೊಂಡವರ ಒಟ್ಟು ಸಂಖ್ಯೆ ಈಗ 50,000 ಕುಟುಂಬಗಳಿಗೂ ಅಧಿಕವಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಎಲ್ಲಿಯೋ ಕಾಯಂ ಆಗಿ ನೆಲೆಯೂರಿರುವ ಈ ಕುಟುಂಬಗಳು ಮರಳಲು ಬಯಸದಿರಬಹುದು ಎಂದು ಆಡಳಿತವು ಭಾವಿಸಿದೆ,ಹೀಗಾಗಿ ಕೇವಲ ವಾಸಸ್ಥಳ ಉದ್ದೇಶಕ್ಕಾಗಿ ಅವು ನೋಂದಾಯಿಸಿಕೊಳ್ಳಬೇಕು ಎಂದು ಬಯಸಿದೆ.

ಪಾಕ್ ಆಕ್ರಮಿತ ಕಾಶ್ಮೀರದಿಂದ ವಲಸೆ ಹೋದವರ ವಿಷಯದಲ್ಲಿ ಸಮಸ್ಯೆ ಹೆಚ್ಚು ಜಟಿಲವಾಗಿದೆ. ಆನ್ಲೈನ್ ನೋಂದಣಿ ಸಂದರ್ಭದಲ್ಲಿ ಅದು ಅವರ ಮೂಲ ವಾಸಸ್ಥಳವನ್ನು ಕೇಳುತ್ತದೆ. ಮಿರ್ಪುರ,ರಾವಲಕೋಟ್,ಮುಝಫ್ಫರಾಬಾದ್ನಂತಹ ಪಿಒಕೆಯಲ್ಲಿನ ತಮ್ಮ ಮೂಲಸ್ಥಳಗಳ ಹೆಸರುಗಳನ್ನು ಅವರು ಉಲ್ಲೇಖಿಸಿದರೆ ಕಂಪ್ಯೂಟರ್ಗಳು ಅವನ್ನು ಸ್ವೀಕರಿಸುತ್ತಿಲ್ಲ. ತನ್ನ ಕಚೇರಿಯು ಈ ವಿಷಯವನ್ನು ಗೃಹ ಇಲಾಖೆಯ ಗಮನಕ್ಕೆ ತಂದಿದೆ ಎಂದು ಪಂಡಿತ ತಿಳಿಸಿದರು.

ಈಗ ಬಿಜೆಪಿ ನಾಯಕರನ್ನೊಳಗೊಂಡ ‘ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರ ವಿಸ್ಥಾಪಿತ ಸೇವಾ ಸಮಿತಿ’ಯು ರಂಗಪ್ರವೇಶ ಮಾಡಿದ್ದು,ವಾಸಸ್ಥಳ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುವಂತೆ ಹಿಂದೆ ಪಿಒಕೆಯಲ್ಲಿ ವಾಸವಿದ್ದ ಕುಟುಂಬಗಳನ್ನು ಓಲೈಸಲು ಅವು ಈಗ ನೆಲೆಸಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿಯೋಗಗಳನ್ನು ಕಳುಹಿಸುತ್ತಿದೆ.

 ಜಮ್ಮು-ಕಾಶ್ಮೀರದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಪ್ರತಿಕ್ರಿಯೆ ನಡೆಯುತ್ತಿರುವ ಮತ್ತು ಮತದಾರರ ಪಟ್ಟಿಗಳು ಸಿದ್ಧಗೊಳ್ಳುತ್ತಿರುವ ಈ ಸಂದರ್ಭದಲ್ಲಿ ವಲಸಿಗರ ಪುನರ್ವಸತಿಯು ಮತದಾರರ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಈ ವಿಷಯವು ರಾಜಕೀಯ ಪರಿಣಾಮಗಳನ್ನು ಬೀರಬಹುದು. ಹಿಂದುಗಳ ಪ್ರಾಬಲ್ಯವಿರುವ ಜಮ್ಮುವಿನಲ್ಲಿ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಲು ಪುನರ್ವಸತಿ ಕ್ರಮಕ್ಕೆ ಆಡಳಿತವು ಮುಂದಾಗಿದೆ ಎಂಬ ಆತಂಕವನ್ನು ಕಾಶ್ಮೀರದಲ್ಲಿಯ ರಾಜಕೀಯ ಪಕ್ಷಗಳು ವ್ಯಕ್ತಪಡಿಸಿವೆ.

‘ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶಗಳಿಗಾಗಿ 24 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಅಲ್ಲಿಯ ಮೂರನೇ ಒಂದರಷ್ಟು ಜನಸಂಖ್ಯೆಯು ಈಗ ಇಲ್ಲಿ ವಾಸವಿರುವುದರಿಂದ ಅಷ್ಟು ಪ್ರಮಾಣದಲ್ಲಿ ಸ್ಥಾನಗಳನ್ನು ಮೀಸಲು ಮುಕ್ತಗೊಳಿಸುವಂತೆ ನಾವು ಸರಕಾರವನ್ನು ಕೋರಬಹುದು ’ಎಂದು ಜಮ್ಮು-ಕಾಶ್ಮೀರ ಬಿಜೆಪಿಯ ನಿರಾಶ್ರಿತರ ಘಟಕದ ಸಂಚಾಲಕ ಅಶೋಕ ಖಜುರಿಯಾ ಹೇಳಿದರು.

ಕೃಪೆ: indianexpress

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News